ತುಮಕೂರು : ಪಿತೃ ಪೂಜೆಗೂ ತಟ್ಟಿದ ಬೆಲೆಯೇರಿಕೆ ಬಿಸಿ..!

ತುಮಕೂರು :

      ಇಂದು ಮಹಾಲಯ ಅಮಾವ್ಯಾಸೆ. ಅಗಲಿದ ಪಿತೃಗಳು ಅರ್ಥಾತ್ ಹಿರಿಯರನ್ನು ಎಡೆಹಾಕಿ ಪೂಜಿಸುವ ಸ್ಮರಣೀಯ ದಿನ. ಆದರೆ ಬೆಲೆಯೇರಿಕೆ ಬಿಸಿ ಪಿತೃಪೂಜೆಗೆ ತಟ್ಟಿದ್ದು, ಗಗನಕ್ಕೇರಿದ ದುಬಾರಿ ಬೆಲೆಗಳಲ್ಲಿ ಪಿತೃಪೂಜೆಯನ್ನು ಸಾಂಕೇತಿಕವಾಗಿ ಆಚರಿಸುವ ದುಸ್ಥಿತಿ ಎದುರಾಗಿದೆ.

      ಹಿಂದೆಲ್ಲ ಪಿತೃಪಕ್ಷ, ಮಹಾಲಯ ಅಮಾವ್ಯಾಸೆ ಬಂತೆಂದರೆ ಸಾಕು. ಬಾಡೂಟದ್ದೇ ಘಮ. ಹಿರಿಯರಿಗೆ ಎಡೆ ಇಡುವ ನೆಪದಲ್ಲಿ ನೆಂಟರಿಷ್ಟರು, ಸ್ಮೇಹಿತರನ್ನೆಲ್ಲ ಮನೆಗೆ ಆಹ್ವಾನಿಸಿ ಕುರಿ, ಮೇಕೆ ಕೊಯ್ದು ಬಾಡೂಟ ಹಾಕಿ ಅಗಲಿದವರ ಆತ್ಮಕ್ಕೆ ಶ್ರದ್ಧಾಂಜಲಿ ಕೋರುವ ಆಚರಣೆ ಜಾತ್ರೆಯೆಂಬಂತೆ ಹಳ್ಳಿ, ಕೇರಿಗಳಲ್ಲಿ ನಡೆಯುತ್ತಿತ್ತು. ನಗರ-ಪಟ್ಟಣದಲ್ಲಿ ನೆಲೆಸಿದವರು ಹಿರಿಯರ ಸಮಾಧಿಗೆ ಪೂಜೆ ಸಲ್ಲಿಸಲು ಸ್ವಗ್ರಾಮಗಳಿಗೆ ತೆರಳಿ ಬಾಡೂಟ ಸವಿದು ಬರುತ್ತಿದ್ದರು. ಆದರೆ ಹೆಚ್ಚಾಗಿರುವ ಮಟನ್ ದರ, ಕೋವಿಡ್ ಭೀತಿ, ಇತರೆ ವಸ್ತುಗಳಿಗೆಲ್ಲ ಈ ಆಚರಣೆಗಳನ್ನೆಲ್ಲ ಸಾಂಕೇತಿಕವಾಗಿಸುತ್ತಿದ್ದು, ಊರಿಗೆ ತೆರಳುವುದೇಕೇ? ಇಲ್ಲೇ ಪಟ್ಟಣದ ಮನೆಯಲ್ಲಿ ಒಂದೋ ಎರಡೋ ಕೆಜಿ ಚಿಕನ್ ತಂದು ಅಡುಗೆ ಮಾಡಿ ಮನೆಯ ಸದಸ್ಯರಿಗಷ್ಟೇ ಸೀಮಿತವಾಗಿ ಪಿತೃಗಳ ಪೂಜಿಸೋಣ ಎನ್ನುವ ಮನಃಸ್ಥಿತಿಗೆ ಸಾರ್ವಜನಿಕರನ್ನು ತಂದು ನಿಲ್ಲಿಸಿದೆ.

      ಮನೆಯ ಹಿರಿಯ ಸಹೋದರರ ಮನೆಯಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಮಾಡುತ್ತಿದ್ದ ಪಿತೃ ಸಂಬಂಧಿ ಆಚರಣೆಗಳು ವಿಭಕ್ತ ಕುಟುಂಬಗಳು ಹೆಚ್ಚಾದಂತೆ ಅವರವರ ಮನೆಮಟ್ಟಿಗೆ ಎನ್ನುವ ಸ್ಥಿತಿಯನ್ನು ವಿಸ್ತರಿಸುತ್ತಿದೆ. ಕಳೆದೆರೆಡು ವರ್ಷಗಳಿಂದ ಕಾಡುತ್ತಿರುವ ಕೋವಿಡ್ ನಮ್ಮ ಮನೆಗೆ ಅವರು ಬರುವುದು ಬೇಡ, ನಾವು ಹೋಗುವುದು ಬೇಡ ಎನ್ನುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದು, ಮಟನ್ ಮಾರಾಟಗಾರರರಿಗೆ ವ್ಯಾಪಾರ ಕುಸಿಯುವಂತೆ ಮಾಡಿದೆ.

ಚಿಕನ್‍ಗಿರುವ ಬೇಡಿಕೆ, ಮಟನ್‍ಗಿಲ್ಲ:

      ಮಟನ್ ದರ ಪ್ರತೀ ಕೆಜಿಗೆ ಕ್ವಾಲಿಟಿ ಆಧಾರದಲ್ಲಿ 450 ರೂ.ಗಳಿಂದ 650ರೂ.ಗಳವರೆಗಿದ್ದು, ರೆಡಿ ಚಿಕನ್ ದರ 240 ರಿಂದ 260 ರೂ.ಗಳಿದೆ. ಕೋವಿಡ್ ಎಫೆಕ್ಟ್‍ನಿಂದ ಹೆಚ್ಚಿನ ದುಡಿಮೆಯಿಲ್ಲದೆ ಆದಾಯ ಕುಸಿತಕಂಡಿರುವ ಕಾರಣ, ಮಟನ್‍ಗಿಂತ ಅರ್ಧದಷ್ಟು ಕಡಿಮೆಯಿರುವ ಚಿಕನ್‍ಸಾಕು ಎಂಬ ಮನಸ್ಥಿತಿಗೆ ಬಡ-ಮಧ್ಯಮವರ್ಗದವರು ತಲುಪಿದ್ದು, ಕುರಿ-ಮೇಕೆ ಬದಲಾಗಿ ಕೋಳಿ ಕುಯ್ಯೋಣ ಸಾಕು ಎನ್ನುತ್ತಿದ್ದಾರೆ. ಶಾಖಾಹಾರಿಗಳ ಮನೆಯಲ್ಲಿ ಈ ಸ್ಥಿತಿಯಾದರೆ, ಸಸ್ಯಾಹಾರಿಗಳಿಗೆ ದುಬಾರಿಯಾದ ಅಡುಗೆ ಎಣ್ಣೆ, ಇತರೆ ಆಹಾರ ಪದಾರ್ಥಗಳು, ಹಣ್ಣು, ಹೂ ಬೆಲೆ ದರಗಳು ಪಿತೃ ಪೂಜೆಯನ್ನು ಸಂಕ್ಷಿಪ್ತಗೊಳಿಸಿದ್ದು, ಪಿತೃಪೂಜೆಯನ್ನು ಮಾಡಲು ಹಿಂದೆ-ಮುಂದೆ ನೋಡುವ ಸ್ಥಿತಿ ಎದುರಾಗಿರುವುದು ದುರಂತವೇ ಸರಿ.

ಕೋವಿಡ್ ಇನ್ನೂ ನಿರ್ಮೂಲನೆಯಾಗಿಲ್ಲ, ಎಚ್ಚರ ಅಗತ್ಯ:

     ಇಂದು ಮಹಾಲಯ ಅಮಾವ್ಯಾಸೆ, ನಾಳೆಯಿಂದ ನವರಾತ್ರಿ ಶುರುವಾಗಲಿದ್ದು, ಎಲ್ಲೆಡೆ ಜನಜಂಗುಳಿ ಸೇರುವುದು ಹೆಚ್ಚಾಗಲಿದೆ. ಕೋವಿಡ್ ತಗ್ಗಿದೆ ಎಂದು ಕೋವಿಡ್ ನಿಯಮಾವಳಿಗಳನ್ನು ಅನುಸರಿಸದೆ ಆರೋಗ್ಯಕ್ಕೆ ಅಪಾಯ ತಂದುಕೊಳ್ಳಬೇಡಿ ಎಂದು ತಜ್ಞ ವೈದ್ಯರು ಎಚ್ಚರಿಸಿದ್ದು, ಅ.4 7 ಮಂದಿಯಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಕೋವಿಡ್, ಅ.5 ಮಂಗಳವಾರ ಜಿಲ್ಲೆಯಲ್ಲಿ ಹೊಸದಾಗಿ 39 ಮಂದಿಗೆ ಕಾಣಿಸಿಕೊಂಡಿದ್ದು, ಎರಡು ದಿನ ತಲಾ ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಹಾಗಾಗಿ ಆಹಾರ ಸೇವನೆ, ಗುಂಪುಗೂಡುವಿಕೆ ಎಲ್ಲದರಲ್ಲೂ ನಿಯಮಪಾಲನೆ ಅತ್ಯಗತ್ಯ ಎಂದು ತಜ್ಞ ವೈದ್ಯ ಡಾ.ಟಿ.ಎನ್.ಶಶಿಧರ್ ತಿಳಿಹೇಳಿದ್ದಾರೆ.

ರೆಡಿ ಚಿಕನ್: 240 ರಿಂದ 260 ರೂ. ಕೆ.ಜಿ
ಬದುಕಿರುವ ಕೋಳಿ: ಕೆಜಿಗೆ 160 ರಿಂದ 180 ರೂ.
ರೆಡಿ ಮಟನ್ : ಕೆಜಿಗೆ 450 ರಿಂದ 600 ರೂ.
ಕುರಿ-ಮೇಕೆ: 5000 ದಿಂದ 30,000ರೂ.

      ದುಬಾರಿಯಾದ ಮಟನ್ ದರ, ಕೋವಿಡ್ ಎಫೆಕ್ಟ್‍ನಿಂದಾಗಿ ಜನರು ಒಟ್ಟಾಗಿಸೇರಿ ಯಾವುದೇ ಆಚರಣೆ ಮಾಡದ ಪರಿಸ್ಥಿತಿ ಹಾಗೂ ಕುಸಿದ ದುಡಿಮೆ ಪಿತೃಪಕ್ಷದ ಸಂದರ್ಭದಲ್ಲಿ 3 ವರ್ಷಗಳ ಹಿಂದೆ ಆಗುತ್ತಿದ್ದ ವ್ಯಾಪಾರ ಶೇ.50ರಷ್ಟು ಇಲ್ಲದಂತೆ ಮಾಡಿದೆ. ನಗರದಲ್ಲಿರುವ 80ಕ್ಕೂ ಅಧಿಕ ಮಟನ್ ಮಳಿಗೆಗಳಲ್ಲಿ ಸರಾಸರಿ 35ಸಾವಿರ ಆಗುತ್ತಿದ್ದ ದಿನವಹಿ ವ್ಯಾಪಾರ 15-20 ಸಾವಿರಕ್ಕೆ ಕುಸಿದಿದ್ದು, ಮಟನ್‍ನ ಅರ್ಧದಷ್ಟು ದರವಿರುವ ಚಿಕನ್‍ಗೆ ಬೇಡಿಕೆ ಇದೆ. ಕುಸಿದ ಮಟನ್ ಬೇಡಿಕೆ, ಕುರಿ-ಮೇಕೆ ಸಾಕಾಣಿಕೆದಾರ ರೈತರಿಗೂ ಸಂಕಷ್ಟ ತಂದೊಡ್ಡಿದೆ.

-ಇಲಾಹಿ ಪಾಷಾ, ಅಧ್ಯಕ್ಷ, ಮಟನ್ ಮರ್ಚೆಂಟ್ ಅಸೋಸಿಯೇಷನ್, ತುಮಕೂರು.

ಎಸ್.ಹರೀಶ್ ಆಚಾರ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap