ಇ-ಖಾತಾ ಅರ್ಜಿ ವಿಲೇವಾರಿ : ಸೂಕ್ತ ಕಾರ್ಯತಂತ್ರಕ್ಕೆ ಹೈಕೋರ್ಟ್‌ ಸೂಚನೆ

ಬೆಂಗಳೂರು

     ಇ-ಖಾತಾ ಅರ್ಜಿಗಳನ್ನು ಸಲ್ಲಿಸಿದ ಕೂಡಲೇ ಸಕಾಲದಲ್ಲಿ ಆ ಅರ್ಜಿಗಳನ್ನು ವಿಲೇವಾರಿ ಮಾಡಲು ಸೂಕ್ತ ಕಾರ್ಯತಂತ್ರ ರೂಪಿಸುವಂತೆ ಹೈಕೋರ್ಟ್‌ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೇ, ಹೊಸ ವಿಧಾನ ಜಾರಿ ಬಗ್ಗೆ ಏಪ್ರಿಲ್ 6ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.

     ಬೆಂಗಳೂರು ನಗರ ಜಿಲ್ಲೆಯ ದೊಡ್ಡಜಾಲ ಗ್ರಾಮ ಪಂಚಾಯಿತಿ ತಮ್ಮ ಇ-ಖಾತಾ ಅರ್ಜಿಯನ್ನು ಪರಿಗಣಿಸಿಲ್ಲವೆಂದು ರೇಣುಕಾ ಮನ್‌ಘನಾನಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಪೀಠ, ಅರ್ಜಿದಾರರು ಇ-ಖಾತಾ ಕೋರಿ ಸಲ್ಲಿಸಿರುವ ಮನವಿಯನ್ನು ಮೂರು ವಾರಗಳಲ್ಲಿ ಪರಿಗಣಿಸುವಂತೆ ಆದೇಶಿಸಿದೆ.
 
    ‘ಅರ್ಜಿದಾರರು 2019ರಲ್ಲಿ ಸಲ್ಲಿಸಿರುವ ಅರ್ಜಿಯನ್ನು ಇನ್ನೂ ಪರಿಗಣಿಸದೇ ಇರುವುದು ನಿಜಕ್ಕೂ ಅಚ್ಚರಿ ಮೂಡಿಸುವಂತಹುದು. ಅದಕ್ಕಾಗಿ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಬೇಕಾಗಿ ಬಂದಿರುವುದು ಸರಿಯಲ್ಲ’ ಎಂದು ನ್ಯಾಯ ಪೀಠ ಹೇಳಿದೆ.
    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಡಿ ಸಲ್ಲಿಕೆಯಾಗುವ ಇ-ಖಾತಾ ಅರ್ಜಿಗಳನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ, ಆರ್‌ಡಿಪಿಆರ್‌ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಆದೇಶ ನೀಡಿದೆ. ಆ ವೆಬ್‌ಸೈಟ್‌ನಲ್ಲಿಅರ್ಜಿದಾರರು ಹೆಸರು, ಆಸ್ತಿಯ ವಿವರಗಳು, ಇ-ಖಾತಾ ಅರ್ಜಿ ಸಲ್ಲಿಸಿದ ದಿನ ಮತ್ತು ಇ-ಖಾತಾ ವಿತರಿಸಿದ ದಿನಾಂಕಗಳನ್ನು ಉಲ್ಲೇಖಿಸಬೇಕು. ಇ-ಸುಗಮ ನಿಯಮದ ಪ್ರಕಾರ ಇ-ಖಾತೆಗೆ ಅರ್ಜಿ ಸಲ್ಲಿಸಿದರೆ ಅಂತಹ ಅರ್ಜಿಗಳನ್ನು 30 ದಿನಗಳೊಳಗೆ ಇತ್ಯರ್ಥಪಡಿಸಬೇಕು. ಒಂದು ವೇಳೆ 30 ದಿನಕ್ಕೂ ವಿಳಂಬವಾದರೆ ಏಕೆ ವಿಳಂಬವಾಗುತ್ತಿದೆ? ಎಂಬ ಅಂಶ ವೆಬ್‌ಸೈಟ್‌ನಲ್ಲಿಯೇ ಪ್ರತಿಫಲಿಸುವಂತಾಗಬೇಕು ಎಂದು ನ್ಯಾಯಾಲಯ ಆದೇಶದಲ್ಲಿಸೂಚಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap