ಪ್ರಯಾಣಿಕನಿಗೆ 60,000ರೂ ನೀಡಿದ ವಿಮಾನಯಾನ ಸಂಸ್ಥೆ : ಕಾರಣ ಗೊತ್ತೆ……?

ಬೆಂಗಳೂರು

   ವಿಮಾನಗಳಲ್ಲಿ ಪ್ರಯಾಣದ ವೇಳೆ ಪ್ರಯಾಣಿಕರು ಅನುಭವಿಸುತ್ತಿರುವ ಸಮಸ್ಯೆಗಳು ಒಂದೆರೆಡಲ್ಲ. ಸ್ವಚ್ಚತೆ ಕೊರತೆ, ವಿಮಾನದಲ್ಲಿ ತಾಂತ್ರಿಕ ದೋಷ, ಮದ್ಯಾಪಾನಿಗಳ ದುರ್ವರ್ತನೆ ಇಂತೆಲ್ಲಾ ಸಮಸ್ಯೆಗಳು ವಿಮಾನಗಳಲ್ಲಿ ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಈ ನಡುವೆ ವಿಮಾನದಲ್ಲಿ ನೀಡಲಾದ ಆಹಾರವನ್ನು ಸೇವಿಸಿ ಪ್ರಯಾಣಿಕರೊಬ್ಬರು ಅಸ್ವವ್ಯಸ್ಥಗೊಂಡ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಯಾಣಿಕ ದೂರು ನೀಡಿ ತಮಗಾದ ನಷ್ಟವನ್ನು ಹಿಂಪಡೆದಿದ್ದಾರೆ.

    ದಕ್ಷಿಣ ಬೆಂಗಳೂರಿನ ಶ್ರೀನಿವಾಸಮೂರ್ತಿ ಎನ್ ಅವರು ಜೂನ್ 20, 2023 ರಂದು ದುಬೈನಿಂದ ಮುಂಬೈಗೆ ಸ್ಪೈಸ್ ಜೆಟ್ ವಿಮಾನದಲ್ಲಿ ಪ್ರಯಾಣಿಸಿದರು. ಈ ಪ್ರಯಾಣದ ವೇಳೆ ಅವರು 80 ಮಿಲಿ ಮಿಲ್ಕ್‌ಶೇಕ್ ಪ್ಯಾಕೆಟ್ ಅನ್ನು ಆರ್ಡರ್ ಮಾಡಿ ಅದನ್ನು ಸೇವಿಸಿದರು. ನಂತರ ಅವರು ಮಿಲ್ಕ್‌ಶೇಕ್‌ನ ಪ್ಯಾಕೆಟ್‌ನಲ್ಲಿ ದಿನಾಂಕವನ್ನು ವೀಕ್ಷಿಸಿದ್ದಾರೆ. ಆದರೆ ಅದರ ಸೇವನೆಯ ಅವಧಿ ಜೂನ್ 18ಕ್ಕೆ ಮುಗಿದು ಹೋಗಿತ್ತು. ಅದನ್ನು ಅವರು ಗಮನಿಸಿ ವಿಮಾನ ಸಿಬ್ಬಂದಿಗಳಿಗೆ ಪ್ರಶ್ನೆ ಮಾಡಿದ್ದಾರೆ. ಆದರೆ ಶ್ರೀನಿವಾಸ್ ಅವರ ಪ್ರಶ್ನೆಗೆ ಸಿಬ್ಬಂದಿಯಿಂದ ಸರಿಯಾಗಿ ಉತ್ತರ ಸಿಗಲಿಲ್ಲ.

    ಅಲ್ಲದೆ ವಿಮಾನದಲ್ಲಿ ಅವಧಿ ಮುಗಿದ ಮಿಲ್ಕ್‌ಶೇಕ್ ಕುಡಿದ ಬೆಂಗಳೂರಿನ ಉದ್ಯಮಿ ಶ್ರೀನಿವಾಸ್ ಅಸ್ವಸ್ತಗೊಂಡಿದ್ದಾರೆ. ಬಳಿಕ ಅವರು ತಮ್ಮ ನಿಗಧಿತ ಸ್ಥಳಕ್ಕೆ ಹೋಗಲಾಗದೆ ಅಪಾರ ನಷ್ಟವನ್ನು ಅನುಭವಿಸಿದ್ದಾರೆ. ಅವರು ತಮ್ಮ ಆರೋಗ್ಯದಲ್ಲಿನ ಏರುಪೇರಿನಿಂದಾಗ ಆಮದು-ರಫ್ತು ವ್ಯವಹಾರದಲ್ಲಿ ನಷ್ಟ ಅನುಭವಿಸಿರುವುದಾಗಿ ನಗರದ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಈ ಬಗ್ಗೆ ವಿಚಾರಣೆ ಮಾಡಿದ ನ್ಯಾಯಾಲಯ ಕಳಪೆ ಆಹಾರ ಸೇವೆಗಾಗಿ ಅವರಿಗೆ ಒಟ್ಟು 60,000 ರೂ.ಗಳ ಪರಿಹಾರವನ್ನು ನೀಡುವಂತೆ ವಿಮಾನಯಾನ ಸಂಸ್ಥೆಗೆ ಆದೇಶಿಸಿದೆ.

    ಮಿಲ್ಕ್‌ಶೇಕ್ ಸೇವಿಸಿದ ನಂತರ ಶ್ರೀನಿವಾಸ್ ಅವರು ಅನಾರೋಗ್ಯ, ಅಸ್ವಸ್ಥತೆ, ಅಧಿಕ ವಾಂತಿ ಮತ್ತು ದೈಹಿಕ ದುರ್ಬಲತೆ ಸೇರಿದಂತೆ ತೀವ್ರ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದ್ದಾರೆ. ಇದರಿಂದಾಗಿ ಶ್ರೀನಿವಾಸ್ ಅವರು ಜೂನ್ 21 ರಿಂದ ಒಂದು ವಾರದವರೆಗೆ ಚಿಕಿತ್ಸೆ ಪಡೆದಿದ್ದಾರೆ. ಮಾತ್ರವಲ್ಲದೆ ಶ್ರೀನಿವಾಸಮೂರ್ತಿ ಅವರಿಗೆ ವಿಮಾನಯಾನ ಸೇವೆಯ ಕೊರತೆಯಿಂದಾಗಿ ಪ್ರಯಾಣಿಸಲು, ವ್ಯಾಪಾರ ಸಭೆಗಳಿಗೆ ಹಾಜರಾಗಲು ಮತ್ತು ವಹಿವಾಟು ನಡೆಸಲು ಸಾಧ್ಯವಾಗಿಲ್ಲ.

    ಇದರಿಂದಾಗಿ ಅವರು ತಮ್ಮ ಹಸಿರು ಮೆಣಸಿನಕಾಯಿ ವ್ಯಾಪಾರದಲ್ಲಿ 22.1 ಲಕ್ಷ ರೂಪಾಯಿ ಕಳೆದುಕೊಂಡಿರುವುದಾಗಿ ದೂರಿನಲ್ಲಿ ಹೇಳಿದ್ದಾರೆ. ಸ್ಪೈಸ್‌ಜೆಟ್‌ನ ಸೇವೆಯಲ್ಲಿನ ಕೊರತೆಯನ್ನು ಎತ್ತಿ ತೋರಿಸಲು ಅವರು ಶಾಂತಿನಗರದಲ್ಲಿರುವ 4 ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವನ್ನು ಸಂಪರ್ಕಿಸಿದರು.

   ಶ್ರೀನಿವಾಸಮೂರ್ತಿ ಅವರು ಏರ್‌ಲೈನ್ಸ್‌ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ನಾಲ್ವರು ನಿರ್ದೇಶಕರಿಗೆ ತಮ್ಮ ನಷ್ಟದ ಬಗ್ಗೆ ಮಾಹಿತಿ ನೀಡಲು ಮುಂದಾದರು. ಮಾನಸಿಕ ನಷ್ಟ 1 ಲಕ್ಷ, ವೈದ್ಯಕೀಯ ವೆಚ್ಚಕ್ಕಾಗಿ 9 ಲಕ್ಷ, ಹಸಿರು ಮೆಣಸಿನಕಾಯಿ ವ್ಯವಹಾರದಲ್ಲಿ 22.1 ಲಕ್ಷ ನಷ್ಟ ಅನುಭವಿಸಿರುವುದಾಗಿ ನ್ಯಾಯಾಲಯದಲ್ಲಿ ವಿವರಿಸಿದರು. ಆದರೆ ಈ ವೇಳೆ ಏರ್‌ಲೈನ್ ಅಧಿಕಾರಿಗಳು ಯಾರೂ ಕೂಡ ವಿಚಾರಣೆಯ ಸಮಯದಲ್ಲಿ ಹಾಜರಾಗಲಿಲ್ಲ.

    ಶ್ರೀನಿವಾಸಮೂರ್ತಿ ಅವರು ನಿರ್ಧಾರಿತ ಸಮಯದಲ್ಲಿ ತಮ್ಮ ವ್ಯಾಪಾರ ಒಪ್ಪಂದಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರ ಹಸಿರು ಮೆಣಸಿನಕಾಯಿ ದಾಸ್ತಾನು ಹಾಳಾಗಿದೆ ಎಂದು ನ್ಯಾಯಾಲಯ ಗುರುತಿಸಿದೆ. ಆದರೆ ಅನಾರೋಗ್ಯದಿಂದ ಬಳಲುತ್ತಿರುವ ಅವರ ಹೇಳಿಕೆಯನ್ನು ಬೆಂಬಲಿಸಲು ವೈದ್ಯಕೀಯ ಪುರಾವೆಗಳ ಕೊರತೆಯನ್ನು ನ್ಯಾಯಾಲಯವು ಗಮನಿಸಿದೆ. ಹೀಗಾಗಿ ಅವರು ಕ್ಲೈಮ್ ಮಾಡಿದ ಒಟ್ಟು ಪರಿಹಾರಕ್ಕೆ ಅರ್ಹರಲ್ಲ ಎಂದು ತೀರ್ಪು ನೀಡಿತು. ಹೀಗಾಗಿ ಜನವರಿ 22 ರ ಆದೇಶದಲ್ಲಿ ನ್ಯಾಯಾಲಯವು ದೂರುದಾರರಿಗೆ ಕೊರತೆಯ ಸೇವೆಗಾಗಿ 25,000 ರೂ., ಅವರು ಅನುಭವಿಸಿದ ಮಾನಸಿಕ ಸಂಕಟಕ್ಕೆ 25,000 ರೂ. ಮತ್ತು ವ್ಯಾಜ್ಯ ವೆಚ್ಚಕ್ಕಾಗಿ 10,000 ರೂಪಾಯಿಗಳ ಪರಿಹಾರವನ್ನು ನೀಡುವಂತೆ ವಿಮಾನಯಾನ ಸಂಸ್ಥೆಗೆ ಆದೇಶಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap