ಇಸ್ರೋದ ನಿವೃತ್ತ ಅಧಿಕಾರಿಗಳಿಂದ ಸಸಿ ನಾಟಿ

ತೋವಿನಕೆರೆ :

      ದೇಶದ ರೈತರ ಸಮಸ್ಯೆಗಳನ್ನು ಅಂತರಿಕ್ಷ ತಂತ್ರಜ್ಣಾನ ಮೂಲಕ ಪರಿಹರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಇಸ್ರೋದ ನಿವೃತ್ತ ಸಹ ನಿರ್ದೇಶಕ ಮತ್ತು ವಿಜ್ಣಾನ ಲೇಖನಗಳ ಬರಹಗಾರ ಡಾ.ಬಿ.ಆರ್. ಗುರುಪ್ರಸಾದ್ ತಿಳಿಸಿದರು.

ತೋವಿನಕೆರೆ ಸಮೀಪದ ಕುರಂಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜುಂಜರಾಮನಹಳ್ಳಿಯ ಉಪ್ಪಾರ ಪಾಳ್ಯದ ಶ್ರೀಕಂಠ ಪ್ರಸಾದ್ ಜಮೀನಿನಲ್ಲಿ ಭಾನುವಾರ ಹಣ್ಣಿನ ಗಿಡಗಳನ್ನು ನೆಟ್ಟು ಅವರು ಮಾತನಾಡಿದರು.

       ಭಾರತವು ಅಂತರಿಕ್ಷ ತಂತ್ರಜ್ಞಾನವನ್ನು ಹಲವಾರು ಕ್ಷೇತ್ರದಲ್ಲಿ ಉಪಯೋಗಿಸಿಕೊಂಡು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಒಂದಾಗಿದೆ. ಈ ತಂತ್ರಜ್ಞಾನವು ಸಾಮಾನ್ಯ ಜನರ ಸಮಸ್ಯೆಗಳ ಪರಿಹಾರಕ್ಕೆ ಪೂರಕವಾಗಿರಬೇಕು ಎಂದು ಸಂಸ್ಥೆ ಪ್ರಯತ್ನ ನಡೆಸುತ್ತಿದೆ. ರೈತರು ಸಮಗ್ರ ಮತ್ತು ಸುಸ್ಥಿರವಾದ ಕೃಷಿ ಚಟುವಟಿಕೆಯನ್ನು ಕೈಗೊಂಡಾಗ ಮಾತ್ರ ನೆಮ್ಮದಿಯಾದ ಜೀವನ ನಡೆಸಲು ಮತ್ತು ಆರ್ಥಿಕವಾಗಿ ಬಲಾಢ್ಯರಾಗ ಬಹುದು. ಇಸ್ರೋದಲ್ಲಿ ನಾಲ್ಕು ದಶಕಗಳ ಕಾಲ ಕಾರ್ಯನಿರ್ವಿಹಿಸಿರುವ ನಿವೃತ್ತ ವೈಜ್ಣಾನಿಕ ಕಾರ್ಯದರ್ಶಿ ಡಾ. ಪಿ.ಜಿ. ದಿವಾಕರ್ ತಿಳಿಸಿದಂತೆ ಕೃಷಿ ಚಟುವಟಿಕೆಯನ್ನು ಸರಳಗೊಳಿಸಿ ಬೆಳೆಗಳ ರೋಗಗಳ ಬಗ್ಗೆ ರೈತರುಗಳಿಗೆ ಉಪಗ್ರಹದ ಮೂಲಕ ಸರಿಯಾದ ಮಾಹಿತಿ ನೀಡುವುದು. ಬೆಳೆಯಿಂದ ಬರಬಹುದಾದ ಇಳುವರಿಯನ್ನು ಅಂದಾಜು ಮಾಡುವುದು, ವಾತಾವರಣದಲ್ಲಿನ ಬದಲಾವಣೆಗಳಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಮೊದಲೇ ಖಚಿತವಾದ ಮಾಹಿತಿಗಳನ್ನು ಜನರಿಗೆ ತಲುಪಿಸುವ ಕೆಲಸದ ಕಡೆ ಗಮನಹರಿಸಿದೆ ಎಂದು ತಿಳಿಸಿದರು.

      ಕೃಷಿಯ ಸೂಕ್ಷ್ಮ ವಿಷಯಗಳನ್ನು ಭೂ ವೀಕ್ಷಣದ ಉಪಗ್ರಹದ ಮೂಲಕ ಚಿತ್ರ ರೂಪದ ಮಾಹಿತಿಯನ್ನು ತರಿಸಿಕೊಳ್ಳಲಾಗುತ್ತಿದೆ. ಮಣ್ಣಿನ ಫಲವತ್ತತೆ ಮತ್ತು ಬಂಜರು ಭೂಮಿಯ ವರ್ಗೀಕರಣದಲ್ಲಿ ಉಪಗ್ರಹದ ಚಿತ್ರಗಳು ನೆರವಾಗುತ್ತಿವೆ. ಅಂತರ್ಜಲ ಶೋಧನೆಯಲ್ಲಿಯೂ ಉಪಗ್ರಹದಿಂದ ಬರುವ ಚಿತ್ರಗಳು ಖಚಿತ ಮಾಹಿತಿ ನೀಡುತ್ತಿವೆ. ಇದರಿಂದ ಸರ್ಕಾರಗಳು ಮುನ್ನೆಚ್ಚರಿಕೆ ವಹಿಸಿ ಅಗುವ ಅನಾಹುತಗಳನ್ನು ತಡೆಯಬಹುದು. ಸ್ಯಾಟ್‍ಲೈಟ್ ಟಿವಿಯ ಒಂದು ಅಡಿಯಷ್ಟು ಅಗಲದ ಪುಟ್ಟ ಆಂಟೆನಾಗಳು ವಹಿಸುತ್ತಿರುವ ಪಾತ್ರಗಳನ್ನು ನೋಡಿದರೆ ಸಾಕು, ಅಂತರಿಕ್ಷ ಉಪಗ್ರಹದ ಪ್ರಯೋಜನಗಳು ತಿಳಿಯುತ್ತವೆ. ತೆಂಗಿನ ತಾಜ (ತೆಂತಾ) ಎಣ್ಣೆ ತಯಾರಿಸುವ ಘಟಕ, ಎಮ್ಮೆ, ಹಸುಗಳನ್ನು ಸಾಕುವ ಕೊಟ್ಟಿಗೆ, ಸಾವಯವ ಗೊಬ್ಬರ ಸಂಗ್ರಹಣಾ ವಿಧಾನ, ಕೊಳವೆ ಬಾವಿಯ ನೀರು ಸಂಗ್ರಹಣಾ ತೊಟ್ಟಿ, ತೋಟದಲ್ಲಿ ಫಲ ಕೊಡುತ್ತಿರುವ ಮರ ಗಿಡಗಳ ಬಗ್ಗೆ, ಸಾಕುಪ್ರಾಣಿಗಳ ಬಗ್ಗೆ ಮಾಹಿತಿಗಳನ್ನು ವಿನಿಮಯ ಮಾಡಿಕೊಂಡರು. ಸಮಗ್ರ, ಸುಸ್ಥಿರ ಕೃಷಿಯನ್ನು ಅಳವಡಿಸಿಕೊಂಡಿರುವ ರೈತ ಜೆ.ಸಿ.ಸೋಮಶೇಖರ್‍ರಿಂದ ಮಾಹಿತಿ ಸಂಗ್ರಹಿಸಿ ಇನ್ನೂ ವ್ಯವಸ್ಥಿತವಾಗಿ ಮಾಡುವ ಬಗ್ಗೆ ಸಲಹೆಗಳನ್ನು ನೀಡಿದರು.

      ಹಾಜರಿದ್ದ ಎಲ್ಲರೂ ಹಣ್ಣಿನ ಸಸಿಗಳನ್ನು ನೆಡುವುದರ ಮೂಲಕ ವನಮಹೋತ್ಸವ ನಡೆಸಿದಷ್ಟು ಖುಷಿ ಪಟ್ಟರು.
ತೋಟದ ಮಾಲೀಕ ಕೆ.ಆರ್. ಶ್ರೀಕಂಠ ಪ್ರಸಾದ್, ಇಸ್ರೋ ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಹಿರಿಯಣ್ಣ, ಎಚ್.ಎನ್.ಶ್ರೀನಿವಾಸ ರಾಘವನ್ ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link