ಶಾಲಾ ಜಮೀನು ರಕ್ಷಣೆಗೆ ಸಚಿವರಿಗೆ ಮನವಿ ….!

ಬೆಂಗಳೂರು:

    ಕೆಆರ್ ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಭಟ್ಟರಹಳ್ಳಿ ಸರ್ವೆ ನಂ.19ರಲ್ಲಿ ಸರ್ಕಾರಿ ಶಾಲೆಗೆ ಸೇರಿದ 6 ಎಕರೆ 17 ಗುಂಟೆ ಜಮೀನು ಒತ್ತುವರಿಯಾಗಿದ್ದು, ಸರ್ಕಾರ ಅದನ್ನು ರಕ್ಷಣೆ ಮಾಡಬೇಕು ಎಂದು ಆಮ್ ಆದ್ಮಿ ಪಾರ್ಟಿ ಮುಖಂಡರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಿಕೊಂಡಿದೆ.

    ಶಿಕ್ಷಣ ಸಚಿವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಎಎಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಅವರು, ಕಳೆದ 6 ತಿಂಗಳಿನಿಂದ ಒತ್ತುವರಿ ವಿರುದ್ಧ ಹೋರಾಟ ಮಾಡುತ್ತಿದ್ದೇವೆ, ಸಚಿವ ಭೈರತಿ ಬಸವರಾಜ್ ರವರ ಪಟಾಲಮ್ ಒತ್ತುವರಿ ಮಾಡಿಕೊಂಡು ಲೇಔಟ್ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಖುದ್ದಾಗಿ ನಾವೇ ತೆರಳಿ ಸ್ಥಳ ಪರಿಶೀಲನೆ ಮಾಡಿದ್ದೇವೆ, ಸ್ಥಳೀಯರನ್ನು ಮಾತನಾಡಿಸಿದಾಗ ಬೆಂಗಳೂರು-ಕೋಲಾರ ಹೆದ್ದಾರಿ ಪಕ್ಕದಲ್ಲೇ ಇರುವ ನೂರಾರು ಕೋಟಿ ಬೆಲೆ ಬಾಳುವ ಶಾಲೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿರುವುದು ಪತ್ತೆಯಾಗಿದೆ, 2020ರವರೆಗೂ ಪಹಣಿಯಲ್ಲಿ ಪ್ರಾಥಮಿಕ ಶಾಲೆಗೆ ಸೇರಿದ್ದು ಎಂದು ತೋರಿಸುತ್ತಿದೆ, 50 ವರ್ಷಗಳ ಹಿಂದೆ ಶಾಲೆಗಾಗಿ ಈ ಭೂಮಿಯನ್ನು ದಾನ ಮಾಡಲಾಗಿದೆ ಎಂದು ಹೇಳಿದರು.

   ಶಾಲೆಗಾಗಿ ಕೊಟ್ಟಿರುವ ಭೂಮಿಯನ್ನು ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಲೇಔಟ್ ಮಾಡಲು ಹೊರಟಿದ್ದಾರೆ. ಸಚಿವ ಮಧು ಬಂಗಾರಪ್ಪ ಅವರಿಗೆ ಸರ್ಕಾರಿ ಆಸ್ತಿ ರಕ್ಷಣೆ ಮಾಡುವಂತೆ ಮನವಿ ಮಾಡಿದ್ದೇವೆ, ಅವರು ಕೂಡಲೇ ಅಡ್ವೊಕೇಟ್ ಜನರಲ್ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಭೂಗಳ್ಳರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಸರ್ಕಾರಿ ಶಾಲೆಯ ಜಾಗ ವಾಪಸ್ ಪಡೆಯಬೇಕು, ಅಲ್ಲೊಂದು ಮಾದರಿ ಶಾಲೆ ನಿರ್ಮಾಣ ಆಗುವವರೆಗೂ ನಮ್ಮ ಆಮ್ ಆದ್ಮಿ ಪಕ್ಷ ಹೋರಾಟ ಮುಂದುವರೆಸುತ್ತದೆ ಎಂದು ತಿಳಿಸಿದರು.

   ಆಮ್ ಆದ್ಮಿ ಪಾರ್ಟಿ ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ಮಾತನಾಡಿ, ಬೆಂಗಳೂರಿನಲ್ಲಿ ಭೂಮಿಗೆ ಚಿನ್ನದ ಬೆಲೆ ಇರುವುದರಿಂದ, ಭೂಗಳ್ಳರ ಹಾವಳಿ ಮಿತಿ ಮೀರಿದೆ. ಬೆಂಗಳೂರು ನಗರ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು, ಕಂದಾಯ ಇಲಾಖೆ, ತಹಶೀಲ್ದಾರ್ ಸರ್ಕಾರಿ ಜಾಗಗಳ ರಕ್ಷಣೆ ಮಾಡಬೇಕು ಎಂದರು.

    50 ವರ್ಷಗಳ ಹಿಂದೆ ಶಾಲೆಗಾಗಿ ದಾನ ಮಾಡಿದ ಜಮೀನಿಗೆ ಈಗ ನಕಲಿ ದಾಖಲೆ ಸೃಷ್ಟಿಸಿ ಜಾಗ ಕಬಳಿಸುವ ಸಂಚು ಮಾಡಿದ್ದಾರೆ. ಸಚಿವರು ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಅಕ್ರಮವನ್ನು ಬಯಲುಮಾಡಲು ಹೊರಟ ಆಮ್ ಆದ್ಮಿ ಪಾರ್ಟಿ ಮುಖಂಡ ದಿಲೀಪ್ ಅವರಿಗೆ ಜೀವ ಬೆದರಿಕೆ ಹಾಕುವುದು, ಸುಳ್ಳು ಕೇಸ್ ಹಾಕಿದ್ದಾರೆ. ಇದಕ್ಕೆಲ್ಲಾ ನಾವು ಹೆದರುವುದಿಲ್ಲ, ಅನ್ಯಾಯದ ವಿರುದ್ಧ ಆಮ್ ಆದ್ಮಿ ಪಾರ್ಟಿ ಹೋರಾಟ ನಡೆಯಲಿದೆ ಎಂದರು.

Recent Articles

spot_img

Related Stories

Share via
Copy link
Powered by Social Snap