ರಿಯೊ ಡಿ ಜನೈರೊ
ಆಫ್ರಿಕಾ ಖಂಡದ ನೈಜೀರಿಯಾ ಭೇಟಿ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಿ20 ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ಭೇಟಿ ನೀಡಿದ್ದಾರೆ.ಮೋದಿಯವರು ಬ್ರೆಜಿಲ್ ತಲುಪುತ್ತಿದ್ದಂತೆಯೇ ಬ್ರೆಜಿಲ್‌ನಲ್ಲಿರುವ ಭಾರತೀಯ ರಾಯಭಾರಿ ಸುರೇಶ್ ರೆಡ್ಡಿ ನೇತೃತ್ವದ ಭಾರತೀಯ ಪ್ರತಿನಿಧಿಗಳು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು.
ಬ್ರೆಜಿಲ್ ಭೇಟಿ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿಯವರು, “G20 ಶೃಂಗಸಭೆಯಲ್ಲಿ ಭಾಗವಹಿಸಲು ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ಬಂದಿಳಿದಿದ್ದೇನೆ. ಶೃಂಗಸಭೆಯಲ್ಲಿ ಚರ್ಚೆಗಳು ಮತ್ತು ವಿವಿಧ ವಿಶ್ವ ನಾಯಕರೊಂದಿಗೆ ಫಲಪ್ರದ ಮಾತುಕತೆಗಳನ್ನು ಎದುರು ನೋಡುತ್ತಿದ್ದೇನೆಂದು ಹೇಳಿದ್ದಾರೆ.
ವಿಮಾನ ನಿಲ್ದಾಣದಲ್ಲಿ ತಮ್ಮ ಸ್ವಾಗತದ ಫೋಟೋಗಳನ್ನು ಮೋದಿಯವರು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಅನಿವಾಸಿ ಭಾರತೀಯರು ಪ್ರಧಾನಿ ಮೋದಿಯವರನ್ನು ಸಂಭ್ರಮದಿಂದ ಸ್ವಾಗತಿಸುತ್ತಿರುವುದು, ಭಾರತದ ತ್ರಿವರ್ಣ ಧ್ವಜ ಹಾಗೂ ಪ್ರಧಾನಿ ಮೋದಿಯವರ ಫೋಟೋಗಳನ್ನು ಹಿಡಿದಿರುವುದು ಕಂಡು ಬಂದಿದೆ.
ರಿಯೊ ಡಿ ಜನೈರೊದಲ್ಲಿ ಜಿ20 ನಾಯಕರ ಶೃಂಗಸಭೆ ನಡೆಯಲಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರೂ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಶೃಂಗಸಭೆಯಲ್ಲಿಹಲವು ಜಾಗತಿಕ ವಿಚಾರಗಳು, ವಿಶ್ವದ ದಕ್ಷಿಣ ರಾಷ್ಟ್ರಗಳು ಎದುರಿಸುತ್ತಿರುವ ಗಂಭೀರ ವಿಷಯಗಳ ಬಗ್ಗೆ ಮೋದಿ ಪ್ರಸ್ತಾಪ ಮಾಡಲಿದ್ದಾರೆ. ಶೃಂಗಸಭೆಯ ನೇಪಥ್ಯದಲ್ಲಿ ವಿಶ್ವದ ವಿವಿಧ ದೇಶಗಳ ಮುಖ್ಯಸ್ಥರನ್ನು ಭೇಟಿಯಾಗಲಿರುವ ಪ್ರಧಾನಿ ಮೋದಿ ಅವರು, ದ್ವಿಪಕ್ಷೀಯ ಸಂಬಂಧ ಬಲಪಡಿಸುವ ಕುರಿತು ಸಮಾಲೋಚನೆ ನಡೆಸಲಿದ್ದಾರೆ.ನಂತರ ಮೋದಿ ಅವರು ನವೆಂಬರ್ 19ರಿಂದ 21ರ ವರೆಗೆ ಗಯಾನ ಪ್ರವಾಸದಲ್ಲಿರಲಿದ್ದಾರೆ. ಇದರೊಂದಿಗೆ ಭಾರತದ ಪ್ರಧಾನಿಯೊಬ್ಬರು ಗಯಾನಕ್ಕೆ 50 ವರ್ಷಗಳ ಬಳಿಕ ಭೇಟಿ ನೀಡಿದಂತಾಗಲಿದೆ