ಮದ್ಯಸೇವನೆ ಪ್ರಕರಣ : ಪೊಲೀಸರ ಅಮಾನುತು ವಾಪಸ್ ಪಡೆಯಲು ಆಗ್ರಹ

ಕುಣಿಗಲ್ : 

      ಪೊಲೀಸರು ಮದ್ಯ ಸೇವಿಸಿ ಚುನಾವಣಾ ಕರ್ತವ್ಯದಲ್ಲಿ ನಿರ್ವಹಿಸಿದರೆಂದು ಆರೋಪಿಸುತ್ತಿದ್ದಂತೆ ಯಾವುದೇ ತನಿಖೆ ಮಾಡದೆ ಮೂರು ಜನ ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತ್ತು ಮಾಡಿ ಅದೇಶ ಹೊರಡಿಸಿರುವ ಕ್ರಮ ಖಂಡನೀಯ ಎಂದು ತಾಲ್ಲೂಕು ದಲಿತಪರ ಸಂಘಟನೆಗಳ ಮುಖಂಡರು ಕುಣಿಗಲ್ ಪೊಲೀಸ್ ಠಾಣೆಯ ಮುಂದೆ ಪ್ರತಿಭಟಿಸಿದರು.

      ಗುರುವಾರ ಪಟ್ಟಣದ ಪೊಲೀಸ್ ಠಾಣೆಯ ಮುಂದೆ ದಲಿತಪರ ಸಂಘಟನೆಗಳ ಮುಖಂಡರು ಜಮಾಯಿಸಿ ಚುನಾವಣೆಯ ಸಂದರ್ಭದಲ್ಲಿ ಯಾರೋ ಒಬ್ಬ ವ್ಯಕ್ತಿ ಪೊಲೀಸರ ಮುಂದೆ ನಿಂತು ಕುಡಿದಿದ್ದೀರಿ ಎಂದು ಹೇಳುತ್ತ ಓಡಾಡಿಸಿಕೊಂಡು ಮೊಬೈಲ್‍ನಲ್ಲಿ ವಿಡಿಯೋ ಮಾಡಿಬಿಟ್ಟಿರುವ ಕಾರಣವನ್ನೇ ಆಧಾರವಾಗಿಸಿಕೊಂಡು ಚಿಕ್ಕನಾಯಕನಹಳ್ಳಿಯಲ್ಲಿ ಕೆಲಸ ಮಾಡುತ್ತಿರುವ ಎ.ಎಸ್.ಐ. ಶ್ರೀನಿವಾಸ್, ತುರುವೇಕೆರೆ ಠಾಣೆಯ ಸಂತೋಷ್ ಮತ್ತು ಪರಮೇಶ್ ಎಂಬ ಮೂವರು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತ್ತುಪಡಿಸಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

      ಪೊಲೀಸರು ಜೀಪಿನಲ್ಲಿ ಕೂತು ಮದ್ಯ ಸೇವಿಸುತ್ತಿದ್ದ ವಿಡಿಯೋ ಅಲ್ಲ, ಕೇವಲ ಯಾವುದೋ ಸಂಘಟನೆಯ ಒಬ್ಬರು ದುರುದ್ದೇಶದಿಂದ ಪೊಲೀಸರನ್ನೇ ಗುರಿಯಾಗಿಸಿಕೊಂಡು ವಿಡಿಯೋ ಮಾಡಿ ಲೈವ್ ಬಿಟ್ಟಿದ್ದಾರೆ. ಆದ್ದರಿಂದ ಇಂತಹ ವಿಚಾರವನ್ನು ನಮ್ಮ ಸಂಘಟನೆ ಮುಖಂಡರು ಖಂಡಿಸುತ್ತಿದ್ದು ಕೂಡಲೇ ಅಮಾನತ್ತು ಆದೇಶವನ್ನು ವಾಪಸ್ ಪಡೆದು ನ್ಯಾಯ ನೀಡಬೇಕು. ಅಲ್ಲದೆ ಜಾಣಗೆರೆ ರಘು ಎಂಬುವರ ಸಂಬಂಧಿಯೊಬ್ಬರು ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಅವರ ಪರ ಇವರು ಮತಕೇಳುವಾಗ ಪೊಲೀಸರ ಮತ್ತು ಇವರ ನಡುವೆ ನಡೆದ ಸಣ್ಣ ಘಟನೆಯನ್ನು ಈ ತರಹ ದುರುದ್ದೇಶದಿಂದ ಪೊಲೀಸರ ಮೇಲೆ ಆರೋಪ ಮಾಡಿದ್ದಾರೆ. ಕೂಡಲೇ ಈ ಬಗ್ಗೆ ಸಂಪೂರ್ಣ ತನಿಖೆ ನಡೆಸುವ ಮೂಲಕ ನ್ಯಾಯ ನೀಡಬೇಕೆಂದು ಒತ್ತಾಯಿಸಿದರು. ಕರ್ತವ್ಯನಿರತ ಪೊಲೀಸರ ಮೇಲೆ ಗಲಾಟೆ ಮಾಡಿದವರ ಮೇಲೂ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದರು.

      ಈ ಸಂಬಂಧ ಪೊಲೀಸ್ ಅಧಿಕಾರಿಗಳಿಗೆ ಮನವಿ ನೀಡಿದರು. ನಂತರ ತಹಸೀಲ್ದಾರ್ ಅವರಿಗೂ ಮನವಿ ಪತ್ರ ನೀಡಿದರು. ಅಧಿಕಾರಿಗಳು ದಲಿತ ಮುಖಂಡರುಗಳ ಮನವಿ ಸ್ವೀಕರಿಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದಾಗ ಪ್ರತಿಭಟನೆ ಕೈಬಿಟ್ಟರು.

      ಪ್ರತಿಭಟನೆಯಲ್ಲಿ ಮುಖಂಡರುಗಳಾದ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಶಿವಶಂಕರ್, ದಲಿತ್ ನಾರಾಯಣ್, ಪುರಸಭಾ ಸದಸ್ಯ ಆನಂದ್, ಬಿ.ಡಿ.ಕುಮಾರ್, ರಂಗಸ್ವಾಮಿ, ಕೃಷ್ಣರಾಜು, ಸಿದ್ದರಾಜು, ಜಿ.ಕೆ.ನಾಗಣ್ಣ, ನರಸಿಂಹಪ್ರಸಾದ್ ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link