ಉತ್ತರಪ್ರದೇಶ:
ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಯುವಕನೊಬ್ಬ ಕೆನಡಾದಲ್ಲಿರುವ ಗರ್ಲ್‌ಫ್ರೆಂಡ್ ಸೇರಿದಂತೆ ಮೂವರು ಗೆಳತಿಯರಿಗೆ ದುಬಾರಿ ಉಡುಗೊರೆಗಳನ್ನು ಖರೀದಿಸಲು ಬ್ಯಾಂಕ್ ಅನ್ನು ಲೂಟಿ ಮಾಡಲು ಪ್ರಯತ್ನಿಸಿದ ಘಟನೆಯೊಂದು ನಡೆದಿದೆ. ಇದೀಗ ಯುವಕ ಪೊಲೀಸರ ಅತಿಥಿಯಾಗಿದ್ದಾನೆ.
ಆರೋಪಿ ಯುವಕನನ್ನು ಬಾರಾಬಂಕಿ ನಿವಾಸಿ ಅಬ್ದುಲ್ ಸಮದ್ ಖಾನ್ ಅಲಿಯಾಸ್ ಶಾಹಿದ್ ಖಾನ್ ಎಂದು ಗುರುತಿಸಲಾಗಿದೆ. ಈ ಯುವಕನಿಗೆ ಬಾರಾಬಂಕಿ ಮತ್ತು ಕೇರಳದಲ್ಲಿ ಇಬ್ಬರು ಮತ್ತು ಕೆನಡಾದಲ್ಲಿ ಒಬ್ಬಳು ಗೆಳತಿಯ ಜೊತೆ ಸ್ನೇಹವಿತ್ತು. ಈತ ಇನ್ಸ್ಟಾಗ್ರಾಂನಲ್ಲಿ ಮೂವರೊಂದಿಗೆ ಸ್ನೇಹ ಬೆಳೆಸಿದ್ದಾನೆ. ಹಾಗಾಗಿ ಅವರನ್ನು ಮೆಚ್ಚಿಸಲು ಅವರಿಗೆ ದುಬಾರಿ ಉಡುಗೊರೆಗಳನ್ನು ನೀಡಲು ನಿರ್ಧರಿಸಿದ್ದಾನೆ. ಆದರೆ ಆತನ ಬಳಿ ಅಷ್ಟೊಂದು ಹಣವಿರದ ಕಾರಣ ಆತ ಹಣವನ್ನು ದರೋಡೆ ಮಾಡಲು ನಿರ್ಧರಿಸಿದ್ದಾನಂತೆ.
ಆರೋಪಿ ಯುವಕ ಬ್ಯಾಂಕ್ ಬಳಿಯ ಅಂಗಡಿಯಲ್ಲಿ ಚಹಾ ಕುಡಿಯುತ್ತಿದ್ದಾಗ, ಛಾಯಾ ಚೌರಾಹಾದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಗೆ ಅನೇಕ ಜನರು ಹೋಗಿ, ಬರುತ್ತಿರುವುದನ್ನು ಆತ ಗಮನಿಸಿದ್ದಾನೆ. ಜನಸಂದಣಿಯನ್ನು ನೋಡಿ, ಬ್ಯಾಂಕಿನಲ್ಲಿ ಕೋಟಿ ರೂಪಾಯಿಗಳು ಇರಬೇಕು ಎಂದು ಅವನು ಭಾವಿಸಿದ್ದಾನೆ. ಹಾಗೇ ದೀಪಾವಳಿ ಹಬ್ಬದ ಪ್ರಯುಕ್ತ ರಜೆ ಇದ್ದ ಕಾರಣ ಶಾಹಿದ್ ಖಾನ್ ಬ್ಯಾಂಕ್ ದರೋಡೆ ಮಾಡುವ ಯೋಜನೆ ಮಾಡಿದ್ದಾನಂತೆ.
ರಾತ್ರಿ ಬ್ಯಾಂಕ್‌ಗೆ ಹೋಗಿ ಮುಖ್ಯ ಬಾಗಿಲನ್ನು ಕಟ್ ಮಾಡಲು ಪ್ರಯತ್ನಿಸಿದ್ದಾನೆ. ಆದರೆ ಅದು ಸಾಧ್ಯವಾಗದೆ ಆತ ಹಿಂತಿರುಗಿದ್ದಾನೆ. ನಂತರ ನವೆಂಬರ್ 4 ರಂದು ಬ್ಯಾಂಕ್ ಅನ್ನು ತೆರೆದಾಗ, ಅನುಮಾನಗೊಂಡ ವ್ಯವಸ್ಥಾಪಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ ತಂಡವು 70 ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶಿಲನೆ ಮಾಡಿದೆ. ನಂತರ ಬಾರಾಬಂಕಿ ಪೊಲೀಸರು ಸಿಸಿಟಿವಿ ತಜ್ಞರು ಮತ್ತು ತಾಂತ್ರಿಕ ತಂಡದ ಸಹಾಯದಿಂದ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಶಾಹಿದ್ ಖಾನ್ ಎಂದು ಗುರುತಿಸಿ ಆತನನ್ನು ಬಂಧಿಸಿದ್ದಾರೆ.