ನಗರತಪೇಟೆ ಪ್ರಕರಣ : ಸ್ಪಷ್ಟನೆ ನೀಡಿದ ಪೊಲೀಸರು …!

ಬೆಂಗಳೂರು:

     ಹನುಮಾನ್ ಚಾಲೀಸಾ ಹಾಕಿದ್ದಕ್ಕಾಗಲೀ ಅಥವಾ ಅಜಾನ್ ಪ್ರಾರ್ಥನೆಗೆ ಅಡ್ಡಿಯಾಗುತ್ತಿದೆ ಎಂದು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆದಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

     ನಗರದ ನಗರತಪೇಟೆಯಲ್ಲಿ ಹನುಮಾನ್ ಜಾಲೀಸಾ ಹಾಕಿದ್ದಕ್ಕೆ ಮೊಬೈಲ್ ಸ್ಪೇರ್ ಪಾರ್ಟ್ಸ್ ಅಂಗಡಿಯ ಮಾಲೀಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

     ಹಲಸೂರು ಗೇಟ್‌ ಠಾಣೆ ವ್ಯಾಪ್ತಿಯ ನಜರತ್‌ ಪೇಟೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿತ್ತು. ನಜರತ್ ಪೇಟೆಯ ಜುಮ್ಮಾ ಮಸೀದಿ ರಸ್ತೆಯಲ್ಲಿ ಮುಖೇಶ್‌ ಎಂಬುವವರು ಮೊಬೈಲ್‌ ಸರ್ವೀಸ್‌ ಅಂಗಡಿ ಹೊಂದಿದ್ದು, ಭಾನುವಾರ ಸಂಜೆ ಅಂಗಡಿಯಲ್ಲಿ ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ನಡೆಸಿದ್ದಾಗಿ ಆರೋಪ ಕೇಳಿಬಂದಿತ್ತು.

     ಸಿಸಿಟಿವಿ ದೃಶ್ಯಾವಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆರಿಗೆ. ಆರೋಪಿಗಳಲ್ಲಿ ಒಬ್ಬನು ಮೊದಲು ಮುಖೇಶ್ ಮೇಲೆ ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಬಳಿಕ ಕೋಪಕೊಂಡ ಮುಖೇಶ್ ಕೂಡ ಅಂಗಡಿಯಿಂದ ಹೊರಹೋಗಿ ಕೈಕೈ ಮಿಲಾಯಿಸಿರುವುದು ಕಂಡು ಬಂದಿದೆ. ಘಟನೆ ಸಂಬಂಧ ಭಾನುವಾರ ರಾತ್ರಿ 10.30ಕ್ಕೆ ಕಬ್ಬನ್‌ಪೇಟೆ ನಿವಾಸಿ ಜಿ ಮುಖೇಶ್ ಅವರು, ಸುಲೇಮಾನ್, ಶಹನವಾಜ್, ರೋಹಿತ್, ದ್ಯಾನೀಶ್, ತರುಣ ಹಾಗೂ ಇತರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

     ದೂರು ಹಿನ್ನೆಲೆಯಲ್ಲಿ ಹಲಸೂರು ಗೇಟ್ ಪೊಲೀಸರು ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. ಶಹನವಾಜ್, ಸುಲೇಮಾನ್ ಮತ್ತು ರೋಹಿತ್ ಬಂಧಿತರು ಎನ್ನಲಾಗಿದೆ. ದ್ಯಾನೀಶ್ ಮತ್ತು ತರುಣ್ ಎಂಬುವವರು ಪರಾರಿಯಾಗಿದ್ದು, ಇಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

     ಘಟನೆ ಸಂಬಂಧ ಹೇಳಿಕೆ ನೀಡಿರುವ ಮುಖೇಶ್, ಹನುಮಾನ್ ಚಾಲೀಸಾ ಹಾಕಿದ್ದೆ. ಈ ವೇಳೆ ಆಜಾನ್ ಪ್ರಾರ್ಥನೆಗೆ ಸಮಸ್ಯೆಯಾಗುತ್ತಿದೆ ಎಂದು ಹೇಳಿ, ಜಗಳಕ್ಕೆ ಬಂದಿದ್ದರು. ಹನುಮಾನ್ ಚಾಲೀಸಾ ಆಫ್ ಮಾಡದ ಹಿನ್ನೆಲೆಯಲ್ಲಿ ಚೂರಿ ಹಿಡಿದು ಹಲ್ಲೆ ನಡೆಸಿ ಬೆದರಿಕೆ ಹಾಕಿದರು. ಅಂಗಡಿಯಿಂದ ನನ್ನನ್ನು ಹೊರಗೆಳೆದು ಹಲ್ಲೆ ನಡೆಸಿದರು. ಆರೋಪಿಗಳು ಇತ್ತೀಚೆಗೆ ಇದೇ ಪ್ರದೇಶದಲ್ಲಿ ಇನ್ನೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದು, ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

     ಈ ನಡುವೆ ಘಟನೆ ಸಂಬಂಧ ಹೇಳಿಕೆ ನೀಡಿರುವ ಪೊಲೀಸರು ಹನುಮಾನ್ ಚಾಲೀಸಾ ಹಾಕಿದ್ದಕ್ಕಾಗಲೀ ಅಥವಾ ಅಜಾನ್ ಪ್ರಾರ್ಥನೆಗೆ ಅಡ್ಡಿಯಾಗುತ್ತಿದೆ ಎಂದು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆದಿಲ್ಲ ಎಂದು ಹೇಳಿದ್ದಾರೆ. 

     ಆರೋಪಿಗಳ ಮೇಲೆ ಆರೋಪಗಳ ಸಾಬೀತು ಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಹೇಳಿಕೆ ನೀಡಿದಂತೆಯೇ ದೂರಿನಲ್ಲಿ ಆರೋಪಗಳನ್ನು ಉಲ್ಲೇಖ ಮಾಡಿಲ್ಲ ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಈ ನಡುವೆ ಘಟನೆ ಸಂಬಂಧ ಹಲಸೂರು ಗೇಟ್ ಪೊಲೀಸರು ಆರೋಪಿಗಳ ವಿರುದ್ಧ ಕ್ರಿಮಿನಲ್ ಬೆದರಿಕೆ (ಐಪಿಸಿ 506), ಶಾಂತಿ ಭಂಗದ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ (ಐಪಿಸಿ 504), ಕಾನೂನುಬಾಹಿರ ಸಭೆ (ಐಪಿಸಿ 149) ಮತ್ತು ಕೊಲೆ ಯತ್ನ (ಐಪಿಸಿ 307) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

     ಈ ನಡುವೆ ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ ಮಾಡಿರುವ ಸಚಿವ ದಿನೇಶ್ ಗುಂಡೂರಾವ್ ಅವರು, ಪ್ರಚೋದನೆಗೆ ಒಳಗಾಗದೆ ವಿವೇಚನೆಯಿಂದ ಯೋಚಿಸಿ. ಲಭ್ಯವಾದ ಎಫ್‌ಐಆರ್ ಪ್ರತಿ ಮತ್ತು ಮುಖೇಶ್ ಅವರು ಕೊಟ್ಟಿರುವ ಕೈ ಬರಹದ ದೂರಿನಲ್ಲಿ ಎಲ್ಲಿಯೂ ನಮಾಝ್ ಅಥವಾ ಆಝಾನ್ ಸಮಯದಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಎಲ್ಲೂ ಉಲ್ಲೇಖಿಸಿಲ್ಲ ಎಂದು ದಾಖಲೆಯೊಂದಿಗೆ ತಿಳಿಸಿದ್ದಾರೆ.

    ಅಲ್ಲದೆ, ಮಾಧ್ಯಮಗಳು ಮತ್ತು ಬಿಜೆಪಿ ನಾಯಕರು ಆರೋಪಿಸಿದಂತೆ ಪ್ರಕರಣದ ಆರೋಪಿಗಳಲ್ಲಿ ಮುಸ್ಲಿಮರು ಮಾತ್ರ ಇರುವುದಲ್ಲ. ಆರು ಆರೋಪಿಗಳಲ್ಲಿ ಮೂವರು ಮುಸ್ಲಿಮರು ಮತ್ತು ಇಬ್ಬರು ಹಿಂದೂ ಆರೋಪಿಗಳಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಣೆ ಮತ್ತು ಸ್ಪಷ್ಟೀಕರಣವನ್ನು ತನಿಖೆಯ ಬಳಿಕ ಪೊಲೀಸರು ತಿಳಿಸಬೇಕಾಗಿದೆ ಎಂದು ಹೇಳಿದ್ದಾರೆ.

Recent Articles

spot_img

Related Stories

Share via
Copy link
Powered by Social Snap