ತುಮಕೂರು:

ತುಮಕೂರು ಪಾಲಿಕೆ ಮಾಜಿ ಮೇಯರ್ ರವಿ ಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಜಾಡು ಹಿಡಿದು ಬೆನ್ನಟ್ಟಿರುವ ಪೊಲೀಸರು ಜಿಲ್ಲೆಯ ಬೆಟ್ಟ-ಗುಡ್ಡಗಳನ್ನು ಹತ್ತಿಳಿಯುತ್ತಿದ್ದಾರೆ.
ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿರುವ ರೌಡಿಶೀಟರ್ ಮಲ್ಲೇಶ್ ಗಾಗಿ ಹುಡುಕಾಟ ಆರಂಭಿಸಿರುವ ಪೊಲೀಸರು, ಮೂರು ದಿನಗಳಿಂದ ಹುಡುಕಾಟ ಆರಂಭಿಸಿದ್ದು, ಮಧುಗಿರಿ ತಾಲೂಕು ಸೋಂಪುರ ಗ್ರಾಮದ ನಿವಾಸಿ ಮಲ್ಲೇಶ್ , ಗ್ರಾಮದ ಸಮೀಪದ ಬೆಟ್ಟಗಳಲ್ಲಿ ತಲೆ ಮರೆಸಿಕೊಂಡಿದ್ದಾನೆ ಎಂದು ಶಂಕಿಸಿ ಬೆಟ್ಟ-ಗುಡ್ಡಗಳನ್ನು ಹತ್ತಿಳಿಯುತ್ತಿದ್ದಾರೆ. ನಿನ್ನೆ ತಡರಾತ್ರಿವರೆಗೂ ಬೆಟ್ಟದಲ್ಲಿ ಟಾರ್ಚ್ ಹಿಡಿದು ಹುಡುಕಿದ್ದಾರೆ. ನಂತರ ಮಧುಗಿರಿ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಬಂದು ಉಳಿದುಕೊಂಡಿದ್ದಾರೆ.
ಡಿವೈಎಸ್‍ಪಿಗಳಾದ ನಾಗರಾಜ್, ಕಲ್ಲೇಶಪ್ಪ, ವೆಂಕಟೇಶ್ ನಾಯ್ಡು, ವೇಣುಗೋಪಾಲ್, ಇನ್ಸ್‍ಪೆಕ್ಟರ್‍ಗಳಾದ ಚಂದ್ರಶೇಖರ್, ರಾಘವೇಂದ್ರ, ರಾಧಾಕೃಷ್ಣ, ರಾಮಕೃಷ್ಣ, ಲಕ್ಷ್ಮಯ್ಯ, ಅಂಬರೀಶ್ ಸೇರಿದಂತೆ 40ಕ್ಕೂ ಹೆಚ್ಚು ಸಿಬ್ಬಂದಿಗಳು ಹಾಗೂ ಶ್ವಾನದಳ ಮೂರು ತಂಡಗಳಲ್ಲಿ ಹುಡುಕಾಟದಲ್ಲಿ ಸಕ್ರಿಯರಾಗಿದ್ದಾರೆ.
ಮಧುಗಿರಿ ತಾಲೂಕು ಮರುವೇಕೆರೆ, ಗೋಪಗೊಂಡನಹಳ್ಳಿ, ಪೆನ್ನಗೊಂಡಬೆಟ್ಟ, ಮರೇರಂಗಪ್ಪನ ಬೆಟ್ಟ, ದೊಡ್ಡಬೊಮ್ಮಕಲ್ಲು ಬೆಟ್ಟಗಳಲ್ಲಿ ಓಡಾಡುತ್ತಿದ್ದಾರೆ.
ಸುಮಾರು 18 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ವಿಸ್ತರಿಸಿಕೊಂಡಿರುವ ಬೆಟ್ಟದ ಸಾಲುಗಳಲ್ಲಿ ಅತ್ತಿಂದಿತ್ತ ಮೂರು ತಂಡಗಳಾಗಿ ಸುತ್ತಾಡುತ್ತಿದ್ದಾರೆ. ಇಂದೂ ಸಹ ಕಾರ್ಯಾಚರಣೆ ಮುಂದುವರಿದಿದ್ದು, ಬೆಟ್ಟಗಳು ಮತ್ತು ಮಧುಗಿರಿ ತಾಲೂಕಿನ ಸೋಂಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಪೊಲೀಸರು ತಂಡೋಪತಂಡವಾಗಿ ಹುಡುಕಾಟದಲ್ಲಿ ನಿರತರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








