ಮಧುಗಿರಿ :
ಕರ್ತವ್ಯ ನಿರತ ಪೊಲೀಸರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ ಘಟನೆ ತಾಲ್ಲೂಕು ಕಛೇರಿಯ ಆವರಣದಲ್ಲಿ ನಡೆದಿದೆ.
ಸೋಮವಾರ ತಾಲ್ಲೂಕು ಕಛೇರಿಯ ಆವರಣದಲ್ಲಿ ರೈತ ಸಂಘದವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಆಗ ಮಧ್ಯಾಹ್ನ ಸುಮಾರು 1 ಘಂಟೆಯ ಸಮಯದಲ್ಲಿ ತುಂಗೋಟಿ ಗ್ರಾಮದ ರಂಗರಾಜು(46) ಎಂಬ ವ್ಯಕ್ತಿ ಅವಾಚ್ಯ ಶಬ್ದಗಳಿಂದ ಕೂಗಾಡುತ್ತಿದ್ದನು. ಅದನ್ನು ಕಂಡ ಪೋಲೀಸರು ಆತನಿಗೆ ಹೊರ ಹೋಗುವಂತೆ ತಿಳಿಸಿ, ಅಲ್ಲಿಂದ ಕರೆದೊಯ್ಯುವ ವೇಳೆ, ಪೋಲೀಸರ ಹೆಲ್ಮೆಟ್ ಕಿತ್ತುಕೊಳ್ಳಲು ಪ್ರಯತ್ನಿಸಿ, ಅವರ ಮೈ ಮೇಲೆ ಎರಗಿ, ನೂಕಿ, ತಳ್ಳಿ, ರಂಪಾಟ ಮಾಡಿದ್ದಾನೆ.
ಸ್ಥಳದಲ್ಲಿದ್ದವರು ಗಲಾಟೆಯನ್ನು ಕಂಡು ಕೆಲ ಕಾಲ ಸ್ತಬ್ಧರಾಗಿದ್ದರು. ಈ ವ್ಯಕ್ತಿ ಪೋಲೀಸರೊಬ್ಬರ ಮೇಲೆ ಎರಗಿದಾಗ ಆತನನ್ನು ಹಿಡಿದು ಕೊಂಡು, ಲಾಠಿ ರುಚಿ ತೋರಿಸಿ, ನಂತರ ಆತನನ್ನು ವಶಕ್ಕೆ ಪಡೆದು, ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್‍ಗೆ ಕಳುಹಿಸಿ ಕೊಟ್ಟಿದ್ದಾರೆ ಎನ್ನಲಾಗಿದೆ.
ಈತ ಮಾನಸಿಕ ಅಸ್ವಸ್ಥನೋ ಅಥವಾ ಮುಂಗೋಪಿಯೊ ಎಂಬುದು ಪೋಲೀಸರ ತನಿಖೆಯಿಂದ ತಿಳಿದು ಬರಬೇಕಾಗಿದ್ದು, ಈತ ಮಾನಸಿಕ ಅಸ್ವಸ್ಥನಾಗಿದ್ದರೆ, ಪಟ್ಟಣದಲ್ಲಿ ಮುಂದೆ ಈ ವ್ಯಕ್ತಿಯಿಂದ ಆಗಬಹುದಾದ ಅನಾಹುತಗಳನ್ನು ತಡೆದಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ