ಪಾವಗಡ :
ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಸಂಘಸಂಸ್ಥೆಗಳು ಸಂಪೂರ್ಣ ಸಹಕಾರ ನೀಡಿ ಜ. 31 ರಿಂದ ಫೆ. 3 ರವರೆಗೆ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ತಿರುಪತಯ್ಯ ಕರೆ ನೀಡಿದರು.
ಅವರು ಬುಧವಾರ ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಕರೆದಿದ್ದ ಪಲ್ಸ್ ಪೋಲಿಯೋ ಚಾಲನಾ ಸಮಿತಿ ಸಭೆಯಲ್ಲಿ ಭಿತ್ತಿ ಚಿತ್ರಗಳನ್ನು ಪ್ರದರ್ಶಿಸಿ ಮಾತನಾಡಿದರು. ಜ. 31 ರಂದು ಶಾಸಕ ವೆಂಕಟರವಣಪ್ಪ ಮಗುವಿಗೆ ಪೋಲಿಯೊ ಹನಿ ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಒಟ್ಟು 179 ಪಲ್ಸ್ ಪೋಲಿಯೊ ಲಸಿಕಾ ಬೂತ್‍ಗಳನ್ನು ತಾಲ್ಲೂಕಿನಾದ್ಯಂತ ಗುರ್ತಿಸಿದೆ. ನಗರಪ್ರದೇಶದಲ್ಲಿ 5 ವರ್ಷದೊಳಗಿನ 2517ಮಕ್ಕಳನ್ನು, ಗ್ರಾಮಾಂತರದಲ್ಲಿ 20,032 ಮಕ್ಕಳನ್ನು ಗುರ್ತಿಸಿದೆ. 358 ಸಿಬ್ಬಂದಿ ಹಾಗೂ 36 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಶಾಲಾ, ಕಾಲೇಜು, ಅಂಗನವಾಡಿ ಕೇಂದ್ರಗಳನ್ನು ಬೂತ್‍ಗಳನ್ನಾಗಿ ಗುರ್ತಿಸಿದ್ದು, ಒಂದು ದಿನ ಮುಂಚಿತವಾಗಿ ಕೇಂದ್ರಗಳನ್ನು ಶುಚಿಗೊಳಿಸಬೇಕು ಎಂದು ತಿಳಿಸಿದರು.
ಲಸಿಕೆಯನ್ನು ಶೀಥಲ ಸರಪಳಿಯಲ್ಲಿಡಬೇಕಾಗಿರುವುದರಿಂದ ನಿರಂತರ ಹಾಗೂ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಬೇಕು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ಅಲ್ಲದೆ ನಗರವೂ ಸೇರಿದಂತೆ ಗ್ರಾಮಾಂತರಗಳಲ್ಲಿ ಒಂದು ದಿನ ಮುಂಚಿತವಾಗಿ ಪೋಲಿಯೊ ಲಸಿಕೆ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಮತ್ತು ಮೊದಲನೆ ದಿನ ಬೂತ್‍ಗಳಲ್ಲಿ ಪೋಲಿಯೊ ಹನಿ ಹಾಕಲಾಗುವುದು. ನಂತರ ಮೂರು ದಿನಗಳು ಒಟ್ಟು 59,174 ಮನೆಗಳಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.
ತಾ.ಪಂ. ಇ.ಒ. ನರಸಿಂಹಮೂರ್ತಿ ಮಾತನಾಡಿ, ಪೋಲಿಯೊ ಲಸಿಕಾ ಕಾರ್ಯಕ್ರಮವನ್ನು ಸರ್ಕಾರಿ ಇಲಾಖೆಗಳಿಂದ ವಾಹನಗಳನ್ನು ನೀಡಬೇಕು ಎಂದು ತಿಳಿಸಿದರು.
ಆರೋಗ್ಯಾಧಿಕಾರಿ ಸುರೇಶ್ ಮಾತನಾಡಿ, ತಾಲ್ಲೂಕಿನಲ್ಲಿ 105 ಅರೆಅಲೆಮಾರಿ ಕುಟುಂಬಗಳನ್ನು ಗುರ್ತಿಸಿದೆ. ಈ ಕುಟುಂಬಗಳ ಮಕ್ಕಳಿಗೂ ಪೋಲಿಯೊ ಹನಿ ಹಾಕಲಾಗುವುದು ಎಂದು ತಿಳಿಸಿದರು. ಬೆಸ್ಕಾಂನ ಆದಿಶೇಷಮೂರ್ತಿ, ಸಿ.ಡಿ.ಪಿ.ಓ. ನಾರಾಯಣ್, ರೇಷ್ಮೆ ಇಲಾಖಾಧಿಕಾರಿ ರಂಗನಾಥ್, ಪಿ.ಇ.ಓ. ಬಸವರಾಜು, ಡಾ.ಅನಿಲ್, ಡಾ.ಹರ್ಷಿತಾ, ಡಾ.ರವಿರಾಜ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
