ಇವರಿಗೆಲ್ಲಾ ಸಿದ್ದರಾಮಯ್ಯ ಒಬ್ಬರೇ ಕಾಣಿಸುತ್ತಾರಾ..?

ತುಮಕೂರು
    ದಿನಬೆಳಗೆದ್ದು ಯಾವುದೇ ವಾಹಿನಿಗಳನ್ನು ನೋಡಲಿ, ಪತ್ರಿಕೆಗಳನ್ನು ತಿರುವಿ ಹಾಕಲಿ ವ್ಯಕ್ತಿಗತ ರಾಜಕೀಯ ಟೀಕೆಗಳೇ ಹೆಚ್ಚು ರಾರಾಜಿಸುತ್ತವೆ. ಅದರಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ತೇಜೋವಧೆ ಮಾಡುವಂತಹ ಹೇಳಿಕೆಗಳು ವಿರೋಧ ಪಕ್ಷಗಳಿಂದ ಹೊರಹೊಮ್ಮುತ್ತಿವೆ. ಸಿದ್ದರಾಮಯ್ಯ ವಿರುದ್ಧ ಒಂದು ಸಣ್ಣ ಮಾತನಾಡಿದರೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಅದು ಬಹುದೊಡ್ಡ ಸುದ್ದಿಯಾಗುತ್ತದೆ. 
    ವಿರೋಧ ಪಕ್ಷಗಳ ಹಲವು ಮುಖಂಡರು ಸಿದ್ದರಾಮಯ್ಯ ವಿರುದ್ಧ ಈ ಪರಿಯಲ್ಲಿ ತಿರುಗಿ ಬಿದ್ದಿರುವುದಾದರೂ ಏಕೆ? ಸಿದ್ದರಾಮಯ್ಯ ಎಂದರೆ ಇವರಿಗೆಲ್ಲ ಅಷ್ಟೊಂದು ಭಯವೇ? ದಿನಬೆಳಗಾದರೆ ವಿರೋಧ ಪಕ್ಷದ ನಾಯಕರನ್ನು ಟೀಕಿಸುವುದರಲ್ಲೇ ಹೆಚ್ಚು ಸಮಯ ಕಳೆಯುತ್ತಿರುವ ಹಿನ್ನೆಲೆಯಾದರೂ ಏನು? ಇಂತಹ ಸುದ್ದಿಗಳಿಂದಲೇ, ಟೀಕಾತ್ಮಕ ನುಡಿಗಳಿಂದಲೇ ಪ್ರಚಾರಕ್ಕೆ ಬರಬಹುದು ಎಂಬ ಹಂಬಲವೇ?ಸಾವರ್ಕರ್‌ಗೆ ಭಾರತ ರತ್ನ ವಿಷಯ ರಾಷ್ಟ್ರಾದ್ಯಂತ ಭಾರಿ ಸದ್ದು ಮಾಡಿತು. ಮಹಾತ್ಮಗಾಂಧೀಜಿ ಹತ್ಯೆ ಆರೋಪದಲ್ಲಿ ಇವರ ಹೆಸರೂ ಇತ್ತು.
     ಇಂತಹವರಿಗೆ ಭಾರತ ರತ್ನ ಕೊಡುವ ಬದಲು ಸಿದ್ದಗಂಗೆಯ ಶ್ರೀ ಶಿವಕುಮಾರ ಮಹಾಸ್ವಾಮಿಗಳವರಿಗೆ ನೀಡಬಹುದಲ್ಲವೆ ಎಂದದ್ದೇ ತಡ, ನೊಣಗಳು ಮುತ್ತಿಕೊಳ್ಳುವ ರೀತಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಕೆಲವರು ಮುಗಿಬಿದ್ದರು. ಸಿದ್ದರಾಮಯ್ಯ ಅವರಿಗೆ ಇತಿಹಾಸವೆ ಗೊತ್ತಿಲ್ಲ ಎಂದರು. ಸ್ವಾತಂತ್ರ್ಯ  ಹೋರಾಟಗಾರರಿಗಲ್ಲದೆ ಮತ್ತಿನ್ನಾರಿಗೆ ಕೊಡಬೇಕಿತ್ತು ಎಂದು ಪ್ರಶ್ನಿಸಿದರು. ಅಲ್ಲಿಂದ ಒಂದಷ್ಟು ದಿವಸಗಳ ಕಾಲ ಪರ- ವಿರೋಧದ ಚರ್ಚೆಗಳು ನಡೆಯುತ್ತಲೇ ಬಂದವು. 
     ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಯಡಿಯೂರಪ್ಪ ಅವರು ಆಡಿದ ಮಾತುಗಳು ಆಡಿಯೋ ಮೂಲಕ ವೈರಲ್ ಆಗಿದ್ದೇ ತಡ ಹಿಂದಿನ ವಿವಾದ ಸ್ತಬ್ದಗೊಂಡಿತು. ಹೊಸ ವಿಚಾರ ಆರಂಭವಾಗಿದ್ದೇ ತಡ ಮತ್ತೆ ಟೀಕಾ ಪ್ರಹಾರಗಳು ಶುರುವಾದವು. ಅಲ್ಲಿ ನಡೆದ ಮಾತುಗಳು ಆಡಿಯೋ ಮೂಲಕ ಹೊರಬಂದಿರುವುದನ್ನು ಈವರೆಗೂ ಮುಖ್ಯಮಂತ್ರಿಗಳು ನಿರಾಕರಿಸಿಲ್ಲ. ಆದರೆ ಅವರದ್ದೆ ಪಕ್ಷದ ಕೆಲವರು ತಮಗೆ ಬೇಕಾದಂತೆ ಹೇಳಿಕೆ ನೀಡುತ್ತಿದ್ದಾರೆ. ವಿಡಿಯೋ ಅವರದ್ದಲ್ಲ, ಅದನ್ನು ತಿರುಚಲಾಗಿದೆ ಎಂದೆಲ್ಲಾ ಮಾತುಗಳು ಬರತೊಡಗಿದವು. ಈ ಆಡಿಯೋ ವೈರಲ್ ಆಗಿದ್ದು ದುರದೃಷ್ಟಕರ ಎಂದು ಸಚಿವ ವಿ.ಸೋಮಣ್ಣ ಹೇಳಿದರೆ, ಸಿದ್ದರಾಮಯ್ಯ ಬಾಯಿಬಿಟ್ಟರೆ ಸುಳ್ಳು, ಅವರು ಹೇಳುವುದೆಲ್ಲಾ ಬರೀ ಸುಳ್ಳು ಎಂದು ಆರ್.ಆಶೋಕ್ ಹೇಳುತ್ತಾರೆ. 
     ವಿ.ಸೋಮಣ್ಣ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನಾನೂ ಸಚಿವನಾಗಿದ್ದೆ. ಆ ಸಂದರ್ಭದಲ್ಲಿ ನಡೆದಿರುವ ಅಕ್ರಮಗಳನ್ನು ಶೀಘ್ರವೇ ಬಯಲಿಗೆಳೆಯಲಾಗುವುದು ಎನ್ನುತ್ತಾರೆ. ಸೇಡಿಗೆ ಪ್ರತಿ ಸೇಡು ಎನ್ನುವಂತಹ ರೀತಿಯಲ್ಲಿ ಹೇಳಿಕೆಗಳು ಹೊರಬರುತ್ತವೆ. ಅದೇ ಬಿಜೆಪಿ ಪಕ್ಷದೊಳಗಿರುವ ಮತ್ತೋರ್ವ ಮುಖಂಡರು ಯಾವಾಗಲೂ ಏಕವಚನ ಪ್ರಯೋಗದಲ್ಲೇ ತೊಡಗಿರುತ್ತಾರೆ.
   ಅಂದರೆ ಸಿದ್ದರಾಮಯ್ಯ ಅವರನ್ನು ತೆಗಳುತ್ತಾ ಹೆಚ್ಚು ಪ್ರಚಾರಕ್ಕೆ ಬರಬಹುದು ಎಂದೋ? ಪಕ್ಷದಮುಖಂಡರನ್ನು ಮೆಚ್ಚಿಸಬಹುದು ಎಂದೋ? ಅಂತೂ ಟೀಕೆಗಳ ಸುರಿಮಳೆಗೈಯ್ಯುತ್ತಲೇ ನಿತ್ಯ ಮಾಧ್ಯಮಗಳಲ್ಲಿ ಜೀವಂತಿಕೆ ಪಡೆಯುತ್ತಿದ್ದಾರೆ .ಇನ್ನು ಅನರ್ಹ ಶಾಸಕರ ರಾಜೀನಾಮೆ ವಿಷಯವಂತೂ ಇನ್ನೂ ಮುಗಿದಂತೆ ಕಾಣುತ್ತಿಲ್ಲ. ದಿನಕ್ಕೊಬ್ಬರು ಒಂದೊಂದು ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ಜೊತೆಗಿದ್ದವರೇ, ಆತ್ಮೀಯ ಮಿತ್ರರೇ ಇಂದು ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ನನ್ನ ದೇಹ ಬಗೆದರೆ ಅಲ್ಲಿ ಕಾಣುವುದು ಸಿದ್ದರಾಮಯ್ಯ ಮಾತ್ರ ಎಂದು ಹೇಳಿಕೊಳ್ಳುತ್ತಿದ್ದ ಮುಖಂಡರೊಬ್ಬರು ಇದೀಗ ಬೇರೆ ವರಸೆ ಎತ್ತಿದ್ದಾರೆ.
    ಅನರ್ಹ ಶಾಸಕರು ಇಲ್ಲಿಂದ ಹಾರಿ ರೆಸಾರ್ಟ್ನಲ್ಲಿ ಉಳಿಯಲು, ಸರ್ಕಾರ ಬಿದ್ದು ಹೋಗಲು ಸಿದ್ದರಾಮಯ್ಯ ಕಾರಣ ಎಂದು ಹೇಳುವವರು ಇನ್ನೂ ಇದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪರೋಕ್ಷ ಹೇಳಿಕೆ ನೀಡುತ್ತಿದ್ದವರು ಈಗ ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಇದಕ್ಕೆ ಟಾಂಗ್ ಕೊಡುವಂತೆ ಪಕ್ಷದೊಳಗಿನ ಇತರೆ ಮುಖಂಡರು ಧ್ವನಿಗೂಡಿಸುತ್ತಿದ್ದಾರೆ. 
     ಸಿದ್ದರಾಮಯ್ಯನವರೇ ನನ್ನ ದೇವರು ಎಂದು ಹೇಳಿಕೊಳ್ಳುತ್ತಿದ್ದ ಅನರ್ಹ ಶಾಸಕರೊಬ್ಬರು ಈಗ ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್ ಎಲ್ಲಿಂದ ಬಂದರು? ಅವರು ನಮಗೆ ಪಾಠ ಮಾಡುವ ಅಗತ್ಯವಿಲ್ಲ ಎಂದು ತಿರುಗಿ ಬೀಳುತ್ತಾರೆ. ಒಂದು ಕಾಲದಲ್ಲಿ ಸಿದ್ದರಾಮಯ್ಯ ಹಿಂದೆ ಕೈಕಟ್ಟಿ ಹೋಗುತ್ತಿದ್ದವರು ಇಂದು ತೆರೆಮರೆಯಲ್ಲಿ ಟೀಕಾ ಪ್ರಹಾರಕ್ಕೆ ಇಳಿದಿದ್ದಾರೆ. ಅನರ್ಹ ಶಾಸಕರಲ್ಲಿ ಕೆಲವರು ಅನಿವಾರ್ಯವಾಗಿ ಸಿದ್ದರಾಮಯ್ಯ ಹೆಸರನ್ನು ತೇಲಿ ಬಿಡುತ್ತಿದ್ದಾರೆಯೇ ಎಂಬುದು ಎಂತಹವರಿಗೂ ಅರ್ಥವಾಗುತ್ತದೆ. ಅನರ್ಹ ಶಾಸಕರು ಹೋಗಿದ್ದು ಎಲ್ಲಿಗೆ? ಅವರನ್ನು ಕರೆಸಿಕೊಂಡಿದ್ದು ಯಾರು? ಮಾತನಾಡಿದವರು ಯಾರು? ಈಗ ಯಾರ ಸಂಪರ್ಕದಲ್ಲಿದ್ದಾರೆ ಎಂಬ ಎಲ್ಲ ವಿವರಗಳು ಗೊತ್ತಿದ್ದರೂ ಮತ್ತೆ ಮತ್ತೆ ಸಿದ್ದರಾಮಯ್ಯ ಅವರ ಮೇಲೆಯೇ ಗೂಬೆ ಕೂರಿಸುವ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ.
     ಬಿ.ಎಸ್.ವೈ ಅವರ ಆಡಿಯೋ ಪ್ರಕರಣವನ್ನು ಇದೀಗ ಸುಪ್ರೀಂಕೋರ್ಟ್ಗೆ ಒಯ್ಯಲಾಗಿದೆ. ಅನರ್ಹ ಶಾಸಕರಲ್ಲಿ ತಳಮಳ ಉಂಟಾಗಿದೆ. ಬಿಜೆಪಿ ವಲಯದಲ್ಲಿ ಆತಂಕ ಶುರುವಾಗಿದೆ. ಅನರ್ಹ ಶಾಸಕರಿಗೂ ನಮಗೂ ಸಂಬಂಧವಿಲ್ಲ ಎಂದು ಅದೇ ಬಿಜೆಪಿ ಪಕ್ಷದಲ್ಲಿ ಕೆಲವರು ಹೇಳಿದರೆ, ಮರುದಿನವೇ ಮತ್ತೆ ಕೆಲವು ಮುಖಂಡರು ಅದಕ್ಕೆ ಪ್ರತಿಕ್ರಿಯೆ ನೀಡುತ್ತಾರೆ.
     ಬಿ.ಎಸ್.ಯಡಿಯೂರಪ್ಪ ಅವರಂತೂ ಯಾವುದೇ ಕಾರಣಕ್ಕೂ ಅನರ್ಹ ಶಾಸಕರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ, ನಮಗೆ ಅಧಿಕಾರ ನೀಡಿದ ನಿಮ್ಮನ್ನು ಮರೆಯುವುದು ಉಂಟೆ ಎಂದೇ ಹೇಳುತ್ತಾ ಬಂದಿದ್ದಾರೆ. ಹೀಗೆ ಪ್ರತಿದಿನವೂ ಅನರ್ಹ ಶಾಸಕರ ಪರವಾಗಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ತಂಡ ಬ್ಯಾಟಿಂಗ್ ಮಾಡುತ್ತಲೇ ಬರುತ್ತಿದೆ. ಇಷ್ಟೆಲ್ಲ ಎಂತಹ ಸಾಮಾನ್ಯ ಜನರಿಗೂ ಅರ್ಥವಾಗುವ ವಿಷಯ. ಇದನ್ನೇ ಸುಪ್ರೀಂಕೋರ್ಟ್ ಮುಂದೆಯೂ ಇಡಲಾಗಿದೆ. ಹಾಗಿದ್ದ ಮೇಲೆ ಸರ್ಕಾರ ಉರುಳಲು ಸಿದ್ದರಾಮಯ್ಯ ಕಾರಣ ಎನ್ನುವ ಮುಖಂಡರನ್ನು ಯಾವ ಭಾಷೆಯಲ್ಲಿ ಕರೆಯಬೇಕು?
     ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅಪ್ಪಿತಪ್ಪಿಯೂ ಜೆಡಿಎಸ್ ಜೊತೆ ಹೋಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದು ಸಹಜ ಮಾತು. ಇಷ್ಟಕ್ಕೆ ಸಿಟ್ಟುಗೊಳ್ಳುವ ಅಗತ್ಯವೇನಿತ್ತು? ಮರುಪ್ರಶ್ನೆ ಹಾಕಿದಂತಿರುವ ಕುಮಾರ ಸ್ವಾಮಿ ಅವರು ಇದಕ್ಕೆ ಪ್ರತಿಕ್ರಿಯಿಸಿ ಪ್ರಕೃತಿ ಚಿಕಿತ್ಸೆಯಲ್ಲಿ ಕುಳಿತು ಕತ್ತಿ ಮಸೆದದ್ದು ಯಾರು ಎಂದು ಪ್ರಶ್ನಿಸಿದ್ದಾರೆ. 
     ಬಿಜೆಪಿ, ಜೆಡಿಎಸ್‌ನೊಳಗೆ ಬಹಳಷ್ಟು ಮುಖಂಡರು ಸಿದ್ದರಾಮಯ್ಯ ಅವರನ್ನೇ ಟಾರ್ಗೆಟ್ ಮಾಡಿಕೊಂಡAತಿದೆ. ಬಹುಶಃ ಇವರೆಲ್ಲರೂ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನಾಗಲಾರರು ಎಂದೇ ಎಣಿಸಿದ್ದರೇನೋ? ಆದರೆ ಕಾಂಗ್ರೆಸ್ ಹೈಕಮಾಂಡ್ ಉತ್ತಮ ನಿರ್ಧಾರವನ್ನೇ ಕೈಗೊಂಡು ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದೆ. ಇದು ಬಹಳಷ್ಟು ಜನರಿಗೆ ಇಷ್ಟವಿಲ್ಲ. ಅವರನ್ನು ಬಿಟ್ಟರೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಮತ್ತೊಬ್ಬ ನಾಯಕರಿಲ್ಲ. ಇದನ್ನು ಮನಗಂಡೆ ಸಿದ್ದರಾಮಯ್ಯ ವಿರುದ್ಧ ಹಲವರು ಮುಗಿಬೀಳುತ್ತಿದ್ದಾರೆ. 
     ವಿರೋಧ ಪಕ್ಷಗಳು ಮಾತನಾಡಲಿ. ಆದರೆ ಕಾಂಗ್ರೆಸ್ ಒಳಗೆ ಇರುವ ಸ್ವಪಕ್ಷೀಯರು ಸಿದ್ದರಾಮಯ್ಯ ಪರವಾಗಿ ನಿಲ್ಲಬೇಕಲ್ಲವೆ? ಎಲ್ಲೋ ಕೆಲವರನ್ನು ಹೊರತುಪಡಿಸಿ ಉಳಿದವರೆಲ್ಲ ಮೌನವಾಗುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ರಾದವರಿಗೆ ಪ್ರಶ್ನಿಸುವ ಗಮ್ಮತ್ತು ಇರಬೇಕು. ಆ ತಾಕತ್ತು ಸಿದ್ದರಾಮಯ್ಯ ಅವರಿಗಿದೆ. ಇದನ್ನೇ ಸಹಿಸಲಾಗದವರು ವಿನಾಕಾರಣ ಅಸಂಬದ್ಧ ಹೇಳಿಕೆಗಳನ್ನು ನೀಡಲು ಮುಂದಾಗುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ವಿರೋಧ ಪಕ್ಷವೂ ಆಡಳಿತದ ಚುರುಕಿಗೆ ಕಾರಣ ಎಂಬುದನ್ನು ಎಲ್ಲರೂ ಮನಗಾಣಬೇಕು.
 
    ಸುಖಾಸುಮ್ಮನೆ ಸಿದ್ದರಾಮಯ್ಯ ಅವರ ವಿರುದ್ಧ ಟೀಕಿಸುವ, ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ಪ್ರಚಾರ ಬಯಸುವ ತಂತ್ರಗಾರಿಕೆಗಳಿಗೆ ಇನ್ನಾದರೂ ಕಡಿವಾಣ ಹಾಕಲಿ.
ಮೋಹನ್ ಕುಮಾರ್, ತುಮಕೂರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link