ತುಮಕೂರು:
ಅಭ್ಯರ್ಥಿ ಆಯ್ಕೆ ಕಸರತ್ತಿನಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ | ಗೆಲ್ಲುವ ಹಾದಿಯಲ್ಲಿ ವೈಮನಸ್ಯದ ಮುಳ್ಳು
ಡಿ.10ರಂದು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ ವೇಳಾಪಟ್ಟಿ ಘೋಷಣೆ ಬೆನ್ನಲ್ಲೆ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಗರಿಗೆದರಿದ್ದು, ಕಾಂಗ್ರೆಸ್-ಜೆಡಿಎಸ್-ಬಿಜೆಪಿ ಈ ಮೂರು ರಾಜಕೀಯ ಪಕ್ಷಗಳು ಅಭ್ಯರ್ಥಿ ಆಯ್ಕೆ ಕಸರತ್ತಿನಲ್ಲಿ ತೊಡಗಿರುವುದು ಕಂಡುಬಂದಿದೆ.
ಮೂರು ಪ್ರಮುಖ ರಾಜಕೀಯ ಪಕ್ಷಗಳಿಂದ ಅಭ್ಯರ್ಥಿಗಳು ಯಾರಾಗುವರು ಎಂಬ ಕುತೂಹಲ, ಚರ್ಚೆ ರಾಜಕೀಯ ವಲಯದಲ್ಲಿ ಹೆಚ್ಚಾಗಿದ್ದು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಜಿಲ್ಲಾ ಘಟಕದಲ್ಲಿ ಕಂಡುಬಂದಿರುವ ಆಂತರಿಕ ವೈಮನಸ್ಯಗಳು, ಅಭ್ಯರ್ಥಿ ಆಯ್ಕೆ ಹಾಗೂ ಪಕ್ಷದ ಅಧಿಕೃತ ಅಭ್ಯರ್ಥಿ ಸೋಲು-ಗೆಲುವಿನಲ್ಲಿ ಪರಿಣಾಮ ಬೀರಲಿದೆ ಎಂಬುದು ಪ್ರಸ್ತುತ ಚರ್ಚೆಯಾಗುತ್ತಿದೆ.
ಕಾಂಗ್ರೆಸ್‍ನಲ್ಲಿ ಆರ್.ರಾಜೇಂದ್ರ ಸೇರಿ ಐವರು ಆಕಾಂಕ್ಷಿಗಳು: ಕಾಂಗ್ರೆಸ್‍ನಿಂದ ಕಳೆದ ಬಾರಿ ಅಭ್ಯರ್ಥಿಯಾಗಿದ್ದ ಯುವ ಮುಖಂಡ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಪುತ್ರ ಆರ್.ರಾಜೇಂದ್ರ ಅವರು ಪ್ರಮುಖ ಅಭ್ಯರ್ಥಿ ಆಕಾಂಕ್ಷಿಯಾಗಿ ಜಿಲ್ಲಾ ಕಾಂಗ್ರೆಸ್ ಹಾಗೂ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದು, ಈಗಾಗಲೇ ಒಂದು ಸುತ್ತು ಮತದಾರರ ಭೇಟಿ ಮಾಡಿರುವುದಾಗಿ ಪ್ರಜಾಪ್ರಗತಿಗೆ ಪ್ರತಿಕ್ರಿಯಿಸಿದ್ದಾರೆ. ಇವರೊಂದಿಗೆ ಮಾಜಿ ಶಾಸಕ ಆರ್.ನಾರಾಯಣ್, ಜಿಪಂ ಮಾಜಿ ಸದಸ್ಯ ಕೆಂಚಮಾರಯ್ಯ, ಆಡಿಟರ್ ನಾಗರಾಜು ಯಲಚವಾಡಿ, ಡಾ.ಇಂತಿಯಾಜ್ ಅಹಮದ್ ಅವರು ಸಹ ಅಭ್ಯರ್ಥಿ ಆಕಾಂಕ್ಷಿಗಳಾಗಿ 1 ಲಕ್ಷ ಠೇವಣಿ ಪಾವತಿಸಿ ಅರ್ಜಿ ಸಲ್ಲಿಸಿದ್ದು, ತಮಗೆ ಟಿಕೆಟ್ ನೀಡಬೇಕೆಂದು ಮುಖಂಡರಲ್ಲಿ ಮನವಿ ಮಾಡುತ್ತಿದ್ದಾರೆ.
ನ.14ರಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಕೆಪಿಸಿಸಿಗೆ ಆಗಮಿಸುತ್ತಿದ್ದು, ಆಸಂದರ್ಭದಲ್ಲಿ ತುಮಕೂರು ಸೇರಿದಂತೆ ರಾಜ್ಯದ 25 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆಯಾಗಲಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.
ಹೊಸ, ಸಶಕ್ತ ಅಭ್ಯರ್ಥಿಗೆ ದಳಪತಿಗಳ ಹುಡುಕಾಟ: ಕಳೆದ ಬಾರಿ ಜೆಡಿಎಸ್‍ನಿಂದ ಆಯ್ಕೆಯಾಗಿದ್ದ ಬೆಮೆಲ್ ಕಾಂತರಾಜು ಕಾಂಗ್ರೆಸ್‍ನತ್ತ ಮುಖಮಾಡಿರುವುದರಿಂದ ಪಕ್ಷದಿಂದ ಹೊಸ ಆರ್ಥಿಕವಾಗಿಯೂ ಸಶಕ್ತವಾಗಿರುವ ಅಭ್ಯರ್ಥಿಯ್ಕ ಹುಡುಕಾಟವನ್ನು ದಳಪತಿಗಳು ನಡೆಸುತ್ತಿದ್ದು, ಸೋಮವಾರ ರಾತ್ರಿ ಜೆಪಿ ಭವನದಲ್ಲಿ ಜೆಡಿಎಸ್ ನಾಯಕರು ಸಭೆ ನಡೆಸಿದ್ದಾರೆ. ಆ ವೇಳೆ ತುಮಕೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಪಂ ಮಾಜಿ ಅಧ್ಯಕ್ಷ ಪ್ರೇಮಾ ಅವರ ಪತಿ ಉದ್ಯಮಿ ಮಹಾಲಿಂಗಪ್ಪ, ಜಿಪಂ ಮಾಜಿ ಸದಸ್ಯರಾದ ಶಿವರಾಮಯ್ಯ, ರಾಮಾಂಜಿನಯ್ಯ, ಮಾಜಿ ಸಚಿವ ಡಿ.ನಾಗರಾಜಯ್ಯ ಅವರ ಪುತ್ರ ಜಿಪಂ ಮಾಜಿ ಅಧ್ಯಕ್ಷ ಡಿ.ಎಲ್.ಜಗದೀಶ್, ಮಾಜಿ ಎಂಎಲ್ಸಿ ಸರವಣ, ಮಾಜಿ ಶಾಸಕ ಎಚ್.ನಿಂಗಪ್ಪ ಹಾಗೂ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ ಅವರ ಹೆಸರು ಸಹ ಪ್ರಸ್ತಾಪವಾಯಿತೆನ್ನಲಾಗಿದೆ.
ಬಿಡದಿಯ ಎಚ್ಡಿಕೆ ಮನೆಗೆ ಮಂಗಳವಾರ ಬೆಳಿಗ್ಗೆ ಜಿಪಂ ಮಾಜಿ ಸದಸ್ಯ ರಾಮಾಂಜಿನಯ್ಯ, ಅವರ ಪುತ್ರ ಅನಿಲ್ ಅವರನ್ನು ಗ್ರಾಮಾಂತರ ಶಾಸಕ ಗೌರಿಶಂಕರ್ ಕರೆದೊಯ್ದು ಅಪ್ಪ-ಮಗ ಯಾರಿಗಾದರೂ ಸರಿ, ಒಬ್ಬರಿಗೆ ಟಿಕೆಟ್ ಕೊಡಿಸುವ ಪ್ರಯತ್ನ ಮಾಡಿದರೆಂಬ ಚರ್ಚೆ ಜೆಡಿಎಸ್ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಕಳೆದ ಎರಡು ಅವಧಿಯಿಂದಲೂ ಜೆಡಿಎಸ್ ತೆಕ್ಕೆಯಲ್ಲಿ ವಿಧಾನಪರಿಷತ್ ಸ್ಥಳೀಯ ಸಂಸ್ಥೆ ಕ್ಷೇತ್ರವನ್ನು ಈ ಬಾರಿಯೂ ಕ್ಷೇತ್ರವನ್ನು ಜೆಡಿಎಸ್‍ನಲ್ಲೇ ಉಳಿಸಿಕೊಳ್ಳಲು ವರಿಷ್ಠರು ಸಮರ್ಥ ಅಭ್ಯರ್ಥಿಯನ್ನೇ ಹಾಕಲಿದ್ದಾರೆ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ತಿಳಿಸಿದ್ದಾರೆ.
ಬಿಜೆಪಿಯಲ್ಲಿ ಹುಲಿನಾಯ್ಕರ್, ಅಂಬಿಕಾ ಹೆಸರು ಮುನ್ನೆಲೆಗೆ: ಬಿಜೆಪಿಯಿಂದ ಕಳೆದ ಬಾರಿ ಅಭ್ಯರ್ಥಿಯಾಗಿದ್ದ ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಅವರ ಪುತ್ರಿ ಅಂಬಿಕಾ ಹುಲಿನಾಯ್ಕರ್, ತುಮಕೂರು ನಗರದ ಮಾಜಿ ಸಚಿವರ ಹೆಸರು ಕೇಳಿಬರುತ್ತಿದ್ದು, ಅಚ್ಚರಿಯ ಅಭ್ಯರ್ಥಿಯಾಗಿ ಸಚಿವ ಎಂಟಿಬಿ ನಾಗರಾಜು ಅವರ ಪುತ್ರ ಬಿಬಿಎಂಪಿ ಸದಸ್ಯರಾಗಿದ್ದ ನಿತಿನ್ ಪುರುಷೋತ್ತಮ್, ಹಿರಿಯೂರು ಶಾಸಕಿ ಪೂರ್ಣಿಮಾ ಪತಿ ಡಿ.ಟಿ.ಶ್ರೀನಿವಾಸ್ ಅವರು ಸಹ ಕಣಕ್ಕಿಳಿಯುತ್ತಾರೆಂಬ ಚರ್ಚೆಯೂ ಹುಟ್ಟಿಕೊಂಡಿದೆ. ಚುನಾವಣಾ ತಯಾರಿ ಸಂಬಂಧ ಸೋಮವಾರ ಜಿಲ್ಲಾ ನಾಯಕರ ಸಭೆಯು ಸಹ ನಡೆದಿದ್ದು, ರಾಜ್ಯ ಘಟಕಕ್ಕೆ ಆಕಾಂಕ್ಷಿಗಳ ಹೆಸರು ಪಟ್ಟಿ ಮಾಡಿ ಕಳುಹಿಸಲಾಗಿದೆ. 2-3ದಿನದಲ್ಲಿ ಅಭ್ಯರ್ಥಿಗಳು ಹೆಸರು ಅಂತಿಮಗೊಳ್ಳಲಿದ್ದು, ಸ್ಥಳೀಯರೇ ಅಭ್ಯರ್ಥಿಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ಪ್ರತಿಕ್ರಿಯಿಸಿದ್ದಾರೆ.
5537 ಮಂದಿ ಮತದಾನಕ್ಕೆ ಅರ್ಹರು, ಗ್ರಾಪಂ ಸದಸ್ಯರಿಗೆ ಡಿಮ್ಯಾಂಡಪ್ಪೋ, ಡಿಮ್ಯಾಂಡು!
ಪ್ರಸ್ತುತ ವಿಧಾನಪರಿಷತ್ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಗೆ ಜಿಲ್ಲೆಯಲ್ಲಿರುವ ಗ್ರಾಮ ಪಂಚಾಯ್ತಿ ಸದಸ್ಯರು, ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸದಸ್ಯರು ಸೇರಿ ಒಟ್ಟು 5537 ಮಂದಿ ಮತದಾನದ ಅರ್ಹತೆ ಪಡೆದಿದ್ದು, ಜಿಪಂ ತಾಪಂಗೆ ಚುನಾವಣೆ ನಡೆಯದಿರುವ ಕಾರಣ ಜಿಪಂ, ತಾಪಂಗಳ ಒಟ್ಟು 270 ಮಂದಿ ಸದಸ್ಯರ ಸಂಖ್ಯೆಯನ್ನು ಮತದಾರರ ಪಟ್ಟಿಯಿಂದ ಈ ಬಾರಿ ಕೈ ಬಿಡಲಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೆಚ್ಚಿನ ಡಿಮ್ಯಾಂಡ್ ಈಗಾಗಲೇ ಶುರುವಾಗಿದೆ.
ಸಮನ್ವಯತೆ ಸಾಧಿಸದಿದ್ದರೆ ಅಭ್ಯರ್ಥಿ ಗೆಲುವಿಗೆ ಕುತ್ತು !
ಜಿಲ್ಲೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳಲ್ಲಿರುವ ಆಂತರಿಕ ಭಿನ್ನಮತಗಳು ಪಕ್ಷದ ಅಭ್ಯರ್ಥಿ ಆಯ್ಕೆ ಹಾಗೂ ಮುಂಚೆ ಚುನಾವಣಾ ಅಖಾಡದಲ್ಲೂ ಪರಿಣಾಮ ಬೀರುವುದು ನಿಶ್ಚಯವೆನಿಸಿದೆ. ಟಿಕೆಟ್ ಹಂಚಿಕೆ ಸೇರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿಕೊಳ್ಳುವ ವಿಚಾರದಲ್ಲಿ ಜಿಲ್ಲೆಯ ಮುಖಂಡರಾದ ಡಾ.ಜಿ.ಪರಮೇಶ್ವರ, ಟಿ.ಬಿ.ಜಯಚಂದ್ರ, ಕೆ.ಎನ್.ರಾಜಣ್ಣ ಅವರುಗಳು ಸಮನ್ವಯತೆಯಿಂದ ಹೋಗದಿದ್ದರೆ ಕಾಂಗ್ರೆಸ್‍ಗೆ ತೊಂದರೆಯಾಗಲಿದೆ ಎಂಬ ಆತಂಕವನ್ನು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಸೇರಿ ಪಕ್ಷದ ಕಾರ್ಯಕರ್ತರೇ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಜೆಡಿಎಸ್ ಗುಬ್ಬಿ ಶಾಸಕ, ಎಂಎಲ್ಸಿ ಕಾಂತರಾಜ್ ಕೈ ಹಿಡಿಯುವತ್ತ ಆಸಕ್ತಿ ತಾಳಿರುವುದು ಕಾಂಗ್ರೆಸ್‍ಗೆ ಅನುಕೂಲಕರವಾಗಲಿದೆ ಎನ್ನುತ್ತಿದ್ದಾರೆ ಕೈ ಮುಖಂಡರು.
ಇನ್ನೂ ಬಿಜೆಪಿಯಲ್ಲಿ ಮಾಜಿ ಶಾಸಕ ಬಿ.ಸುರೇಶ್‍ಗೌಡ, ಸಂಸದರು, ಶಾಸಕರು, ಸಚಿವರುಗಳ ನಡುವೆ ಪರಸ್ಪರ ಸಹಮತವಿಲ್ಲದಿರುವುದು ಪಕ್ಷದ ಮತಗಳು ಕೈ ತಪ್ಪುವ ಆತಂಕವನ್ನು ಪಕ್ಷದ ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದು, ಜಿಲ್ಲಾಧ್ಯಕ್ಷರಿಲ್ಲದೆ ಚುನಾವಣೆ ತಯಾರಿ ನಡೆಸಲಾಗುತ್ತಿದೆ. ಜೆಡಿಎಸ್‍ನಲ್ಲಿ ಹಾಲಿ ಎಂಎಲ್ಸಿ ಕಾಂತರಾಜ್, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಪಕ್ಷದಿಂದ ದೂರಾಗಿರುವುದು, ಕೆಲವು ಮಾಜಿ ಶಾಸಕರು ಮುಖಂಡರು ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗದಿರುವುದು, ರಾಜ್ಯ ರಾಜಕಾರಣದಲ್ಲಿ ರಾಷ್ಟ್ರೀಯ ಪಕ್ಷಗಳ ಪಾರುಪತ್ಯ ಹೆಚ್ಚುತ್ತಿರುವುದು ಪಕ್ಷದ ಹೊಸ ಅಭ್ಯರ್ಥಿಯಾಗುವವರಿಗೆ ಗೆಲುವು ಸವಾಲಿನ ಸಂಗತಿಯಾಗಲಿದೆ.
ಜಿಲ್ಲಾ ಕಾಂಗ್ರೆಸ್‍ನಲ್ಲಿ ಭಿನ್ನಮತ ತೊರೆದು ಎಲ್ಲಾ ಮುಖಂಡರು ಒಟ್ಟಾಗಿ ಹೋದರೆ ಮಾತ್ರ ಪಕ್ಷಕ್ಕೆ ಲಾಭ. ಪಕ್ಷಕ್ಕೆ ಒಳಿತಾಗುವುದೆಂದರೆ ನಾವು ತ್ಯಾಗಕ್ಕೆ ಸಿದ್ದರಿದ್ದೇವೆ. 2019ರಲ್ಲಿ ಪುನರಾಯ್ಕೆಯಾಗುವ ಅವಕಾಶವಿದ್ದ ಲೋಕಸಭೆ ಟಿಕೆಟ್ ಕೈ ತಪ್ಪಿಸುವ ಜೊತೆಗೆ ಆ ಸಂದರ್ಭದಲ್ಲಿ ನೀಡಿದ್ದ ಎಂಎಲ್ಸಿ, ರಾಜ್ಯಸಭೆ ಸದಸ್ಯರಾಗಿಸುವ ಭರವಸೆಯನ್ನು ಈಡೇರಿಸಿಲ್ಲ. ನಾವು ಇನ್ನೆಷ್ಟು ದಿನ ಕಾಯಬೇಕು. ಅವಕಾಶ ಬರುವವರೆಗೂ ಕಾಯುತ್ತಾ ಕೂರಲು ನಮ್ಮ ವಯಸ್ಸುಸ್ಪಂದಿಸಬೇಕಲ್ಲ. ಒಟ್ಟಾಗಿ ಕಲೆತು ಆಗಬೇಕಾದ ಚರ್ಚೆಗಳು ಪಕ್ಷದಲ್ಲಿ ಆಗುತ್ತಿಲ್ಲ. ಸಿರಾ ಉಪ ಚುನಾವಣೆ ಸಂದರ್ಭದಲ್ಲೂ ನನ್ನನ್ನು ಕಡೆಗಣಿಸಲಾಯಿತು.
-ಎಸ್.ಪಿ.ಮುದ್ದಹನುಮೇಗೌಡ
ಕಳೆದ ಬಾರಿ ವಿಧಾನಪರಿಷತ್ ಅಭ್ಯರ್ಥಿಯಾಗಿ ಪರಾಭವಗೊಂಡಿದ್ದರೂ, ಇಡೀ ಜಿಲ್ಲೆಯಾದ್ಯಂತ ಗ್ರಾಮ ಪಂಚಾಯ್ತಿ, ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ನಿಕಟ ಒಡನಾಟ ಇಟ್ಟುಕೊಂಡು ಜನಪ್ರತಿನಿಧಿಗಳು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಿರುವೆ. ಪಕ್ಷ ಸಂಘಟನೆ, ಯುವ ನಾಯಕತ್ವವನ್ನು ಆಧರಿಸಿ ನನಗೆ ಈ ಬಾರಿ ಟಿಕೆಟ್ ಸಿಗುವ ವಿಶ್ವಾಸವಿದ್ದು, ಎಲ್ಲಾ ಹಿರಿಯ ನಾಯಕರು, ಸ್ಥಳೀಯ ಸಂಸ್ಥೆ ಪ್ರತಿನಿಧಿಗಳ ಆಶೀರ್ವಾದದೊಂದಿಗೆ ಪರಿಷತ್ ಸದಸ್ಯನಾಗಿ ಆಯ್ಕೆಯಾಗುವ ನಂಬಿಕೆಇ
-ಆರ್.ರಾಜೇಂದ್ರ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ.
ಎಸ್.ಹರೀಶ್ ಆಚಾರ್ಯ ತುಮಕೂರು