ಪಾವಗಡ :
ತಾಲ್ಲೂಕಿನ ತಿರುಮಣಿಯಲ್ಲಿರುವ ಸೋಲಾರ್ ಪಾರ್ಕ್ ವೀಕ್ಷಿಸಲು ಸುಮಾರು 20 ದೇಶಗಳ ಪ್ರತಿನಿಧಿಗಳು ಬೆಂಗಳೂರಿನಿಂದ ರಸ್ತೆ ಮೂಲಕ ಮಂಗಳವಾರ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಕೆ-ಶಿಪ್ ರಸ್ತೆಗೆ ರಾತ್ರೋರಾತ್ರಿ ಅಲ್ಲಲ್ಲಿ ರಸ್ತೆ ಗುಂಡಿ ಮುಚ್ಚಿ, ಟಾರ್ ಹಾಕಿ, ಸುಣ್ಣ- ಬಣ್ಣ ಬಳಿದಿರುವುದರಿಂದ ತಾಲ್ಲೂಕಿನ ಜನತೆ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಜಿ 20ಶೃಂಗಸಭೆಯು ಬೆಂಗಳೂರಿನಲ್ಲಿ ಹಲವು ದಿನಗಳ ಕಾಲ ನಡೆದು, 20 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸೋಲಾರ್ ವಿದ್ಯುತ್ ಉತ್ಪಾದನೆ ಕುರಿತು ಶೃಂಗಸಭೆಯಲ್ಲಿ ಚರ್ಚೆಯಾಗಿತ್ತು ಎನ್ನಲಾಗಿದೆ. ಅವರು ತಾಲ್ಲೂಕಿನ ತಿರುಮಣಿ ಬಳಿ 13 ಸಾವಿರ ಎಕರೆಯಲ್ಲಿ ನಿರ್ಮಾಣವಾಗಿರುವ ಸೋಲಾರ್ ಪಾರ್ಕ್ ವೀಕ್ಷಣೆಗೆ ಆಗಮಿಸಿದ್ದು, ಆಂಧ್ರದ ಗಡಿಯಿಂದ ತಿರುಮಣಿ ಯವರೆಗೂ ರಸ್ತೆಯಲ್ಲಿದ್ದ ಗುಂಡಿಗಳನ್ನು ಮುಚ್ಚಿದ್ದು, ಅಲ್ಲಲ್ಲಿ ತೇಪೆಹಾಕಲಾಗಿದೆ.
ಪಳವಳ್ಳಿ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ರೈಲ್ವೆ ಅಂಡರ್ ಪಾಸ್ ರಸ್ತೆಯು ಹಾಳಾಗಿದ್ದು, ಕಳೆದ ಎರಡು ವರ್ಷಗಳಿಂದ ಸಂಚಾರಕ್ಕೆ ಕಿರಿಕಿರಿಯಾಗುತ್ತಿತ್ತು. ಈ ಸ್ಥಳದಲ್ಲಿ ಅನೇಕ ಅಪಘಾತಗಳು ಸಹ ನಡೆದಿದ್ದು, ರಸ್ತೆ ಸಾರಿಗೆ ಬಸ್ ಮತ್ತು ಬೈಕ್ ಸವಾರನ ನಡುವೆ ಡಿಕ್ಕಿಯಾಗಿ ಸವಾರ ಸ್ಥಳದಲ್ಲಿಯೆ ಅಸುನೀಗಿದ್ದನು. ಈ ರಸ್ತೆಗೆ ಟಾರ್ ಹಾಕಿದ್ದರಿಂದ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ವಿದೇಶಿ ಮಂದಿಗೆ ಧನ್ಯವಾದ ತಿಳಿಸಿದ್ದಾರೆ. ನಿಮ್ಮ ಆಗಮನದಿಂದ ನಮ್ಮ ಹಾಳಾದ ರಸ್ತೆಗೆ ಮುಕ್ತಿ ಸಿಕ್ಕಿದ್ದು, ನೀವು ವರ್ಷಕ್ಕೊಮ್ಮೆ ಬಂದರೆ ಇಂತಹ ಹಾಳಾದ ರಸ್ತೆಗಳಿಗೆ ಟಾರ್ ಹಾಕಬಹುದು ಎಂದು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.