ಪ್ರಗತಿ ಪಥಕ್ಕೆ ಸಚಿವ ಸಂಪುಟ ಅಸ್ತು …..!

ಬೆಂಗಳೂರು:

     ರಾಜ್ಯದ ಗ್ರಾಮೀಣ ರಸ್ತೆಗಳನ್ನು ಸುಸ್ಥಿತಿಗೆ ತರುವ ಸಲುವಾಗಿ ಆಯವ್ಯದಲ್ಲಿ ಮುಖ್ಯಮಂತ್ರಿಗಳು ಘೋಷಿಸಿದ್ದಂತೆ ರಾಜ್ಯ ಸರ್ಕಾರ ವಿನೂತನವಾಗಿ ಜಾರಿಗೊಳಿಸುತ್ತಿರುವ ʼಪ್ರಗತಿಪಥʼ ಯೋಜನೆಯಡಿ ರಾಜ್ಯದ 7, 110 ಕಿ.ಮೀ ಉದ್ದದ ರಸ್ತೆಗಳನ್ನು 5,190 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಇಂದು ನಡೆದ ಸಚಿವ ಸಂಪಟದ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

     ʼಪ್ರಗತಿಪಥʼ ಐದು ವರ್ಷಗಳ ವಾರ್ಷಿಕ ನಿರ್ವಹಣಾ ಯೋಜನೆಯಾಗಿದ್ದು, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಮೂಲಕ ಆಯಾ ವಿಧಾನಸಭಾ ಕ್ಷೇತ್ರಗಳ ಆದ್ಯತೆಯ ಅನುಗುಣವಾಗಿ ಕೆ.ಟಿ.ಪಿ.ಪಿ ಕಾಯಿದೆ ಅನ್ವಯ ಪಾರದರ್ಶಕವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದೂ ಸಚಿವರು ಹೇಳಿದ್ದಾರೆ.

     ಗ್ರಾಮೀಣ ರಸ್ತೆಗಳು ಗ್ರಾಮೀಣ ಪ್ರದೇಶಗಳ ಜೀವನಾಡಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಮಾರುಕಟ್ಟೆಗಳು ಮುಂತಾದ ಅಗತ್ಯ ಸೇವೆಗಳಿಗೆ ಅವಶ್ಯ ಇರುತ್ತದೆ; ರೈತರ ಮತ್ತು ಗ್ರಾಮೀಣ ನಿವಾಸಿಗಳ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ಮುಖ್ಯ ಪಾತ್ರವಹಿಸುವ ಗ್ರಾಮೀಣ ರಸ್ತೆಗಳನ್ನು ವರ್ಷಪೂರ್ತಿ ಉತ್ತಮ ಗುಣಮಟ್ಟದಲ್ಲಿ ಕಾಪಾಡಿಕೊಳ್ಳುವ ಹಿನ್ನೆಲೆಯಲ್ಲಿ ʼಪ್ರಗತಿಪಥʼ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಮಾಹಿತಿ ನೀಡಿದ್ದಾರೆ.

    ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದರಿಂದ ಸಾಮೂಹಿಕ ಸಾರಿಗೆ ಸಂವಹನವನ್ನು ಮೇಲ್ದರ್ಜೆಗೆ ಏರಿಸಬಹುದಾಗಿದ್ದು, ಈ ಮೂಲಕ ಕೃಷಿ ಮಾರುಕಟ್ಟೆಗಳು, ಶಿಕ್ಷಣ, ಆರೋಗ್ಯ ಸೌಲಭ್ಯಗಳಿಗೆ ಒತ್ತಾಸೆಯಾಗಲಿದೆ, ರಸ್ತೆಗಳನ್ನು ಸುಸ್ಥಿತಿಗೆ ತರುವುದರಿಂದ ಕೃಷಿ ಉತ್ಪಾದಕತೆ ಹೆಚ್ಚುವುದಲ್ಲದೆ ರೈತರ ಜೀವನಮಟ್ಟ ಸುಧಾರಣೆಯಾಗಲಿದೆ, ಗುಡ್ಡಗಾಡು ಪ್ರದೇಶದಲ್ಲಿ ಸಂಭವಿಸಬಹುದಾದ ಭೂಕುಸಿತ, ನೆರೆ ಹಾವಳಿ ಮುಂತಾದ ವಿಪತ್ತುಗಳ ನಿರ್ವಹಣೆ, ಮೀನುಗಾರಿಕೆ ಪ್ರದೇಶಗಳಿಗೆ ಸರ್ವಋತು ಸಂಪರ್ಕ ರಸ್ತೆ ಸೌಲಭ್ಯಗಳ ಮೂಲಕ ʼಪ್ರಗತಿಪಥʼ ರಾಜ್ಯದ ರಸ್ತೆಗಳ ಸುಧಾರಣೆಯಲ್ಲಿ ಬಹು ಮುಖ್ಯ ಪಾತ್ರವಹಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವರು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ