ಪ್ರಹ್ಲಾದ್ ಜೋಶಿ ಕುಟುಂಬಸ್ಥರ ವಿರುದ್ಧ FIR ದಾಖಲು : ಕಾರಣ ಗೊತ್ತಾ….?

ಬೆಂಗಳೂರು:

   ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಆರೋಪದ ಮೇಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ, ಸಹೋದರಿ ವಿಜಯ ಲಕ್ಷ್ಮೀ ಜೋಶಿ ಸೇರಿ ಮೂವರ ವಿರುದ್ಧ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

   ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ, ಸಹೋದರಿ ವಿಜಯ ಲಕ್ಷ್ಮಿ ಜೋಶಿ ಹಾಗೂ ಗೋಪಾಲ್ ಜೋಶಿ ಮಗ ಅಜಯ್ ಜೋಶಿ ಭರವಸೆ ನೀಡಿ ಎರಡು ಕೋಟಿ ರೂಪಾಯಿ ಪಡೆದು ಟಿಕೆಟ್ ಕೊಡಿಸದೆ, ಹಣವನ್ನು ವಾಪಸ್ ನೀಡದೆ ಮೋಸ ಮಾಡಿದ್ದಾರೆಂದು ಸುನೀತಾ ಚವ್ಹಾಣ್ ಎಂಬುವವರು ದೂರು ನೀಡಿದ್ದಾರೆ. ದೂರಿನನ್ವಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

   ನನ್ನ ಪತಿ ದೇವಾನಂದ್‌ ಫುಲ್‌ಸಿಂಗ್‌ ಅವರು 2018 ರ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ ನಾಗಠಾಣಾ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದರು. ನಂತರ 2023 ರ ಚುನಾವಣೆಯಲ್ಲಿ ಸೋತಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಪತಿಗೆ ವಿಜಯಪುರ ಕ್ಷೇತ್ರದಲ್ಲಿ ಬಿಜೆಪಿಯ ಟಿಕೆಟ್‌ ಕೊಡಿಸುವುದಾಗಿ ಹೇಳಿ ಗೋಪಾಲ್‌ ಜೋಶಿ ಅವರು 25 ಲಕ್ಷ ರೂ. ಹಾಗೂ 5 ಕೋಟಿ ರೂ.ಗಳ ಚೆಕ್‌ ಅನ್ನು ಮುಂಗಡವಾಗಿ ಪಡೆದಿದ್ದರು.

   ಅಥಣಿಯಲ್ಲಿ ಎಂಜಿನಿಯರ್‌ ಆಗಿದ್ದ ಶೇಖರ್‌ ನಾಯಕ್‌ ಎಂಬುವರ ಮೂಲಕ ಗೋಪಾಲ್‌ ಜೋಶಿ ಅವರ ಪರಿಚಯವಾಗಿತ್ತು. ಗೋಪಾಲ್‌ ಜೋಶಿ ಅವರು ಸೂಚಿಸಿದಂತೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿನ ಅವರ ಸಹೋದರಿ ವಿಜಯಲಕ್ಷ್ಮಿ ಅವರ ಮನೆಗೆ ಹಣ ಹಾಗೂ ಚೆಕ್‌ ತೆಗೆದುಕೊಂಡು ಹೋಗಿ ಕೊಟ್ಟಿದ್ದೆವು. ಆಗ ಸಹೋದರಿಯ ಮನೆಯಲ್ಲೇ ಇದ್ದ ಗೋಪಾಲ್‌ ಜೋಶಿ, ಕೇಂದ್ರ ಸಚಿವ ಅಮಿತ್‌ ಶಾ ಅವರ ಆಪ್ತ ಸಹಾಯಕರಿಗೆ ಕರೆ ಮಾಡಿ ಮಾತನಾಡಿದಂತೆ ನಟಿಸಿದ್ದರು. ಅಲ್ಲದೆ, ತಮ್ಮ ಪತಿಗೆ ಬಿಜೆಪಿ ಟಿಕೆಟ್‌ ಖಚಿತವಾಗಿರುವುದಾಗಿ ಹೇಳಿ ಹಂತ ಹಂತವಾಗಿ 2 ಕೋಟಿ ರೂ. ಪಡೆದಿದ್ದರು.

   ಪಕ್ಷದ ಟಿಕೆಟ್ ಸಿಗದ ಬಳಿಕ ಹಣ ವಾಪಸ್ ಕೇಳಿದಾಗ ಕಾರಣಗಳನ್ನು ಹೇಳಲು ಶುರು ಮಾಡಿದರು. 200 ಕೋಟಿ ರೂ.ಗಳ ಯೋಜನೆಯ ಬಿಲ್ ಬಾಕಿಯಿದ್ದು, ಹಣವನ್ನು ಒಟ್ಟಿಗೆ ಹಿಂದಿರುಗಿಸುವುದಾಗಿ ಹೇಳಿದರು. ಆಗಸ್ಟ್ 1 ರಂದು ವಿಜಯಲಕ್ಷ್ಮಿ ಅವರ ನಿವಾಸಕ್ಕೆ ಭೇಟಿ ನೀಡಿದಾಗ ನನ್ನ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದರು. ಅಲ್ಲದೆ, ನನಗೆ ಹಾಗೂ ನನ್ನ ಮಗನಿಗೆ ಬೆದರಿಕೆ ಹಾಕಿದರು ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.

   ದೂರು ಹಿನ್ನೆಲೆಯಲ್ಲಿ ಪೊಲೀಸರು ಮೂವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ, BNS ಸೆಕ್ಷನ್‌ಗಳ ಜೊತೆಗೆ SC/ST (ದೌರ್ಜನ್ಯ ತಡೆ) ಕಾಯಿದೆ ಅಡಿಯಲ್ಲೂ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap