ಹುಬ್ಬಳ್ಳಿ:
ಪಡಿತರ ಅಕ್ಕಿ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಈಗ ಜ್ಞಾನೋದಯವಾಗಿದೆ. ನಾವು ಅಕ್ಕಿ ಕೊಡುತ್ತೇವೆ ಅಂದಾಗ ಇವರು ತಗೊಳ್ಳೋಕೆ ಮುಂದೆ ಬರಲಿಲ್ಲ, ಈಗ ಈ ಬಗ್ಗೆ ಚರ್ಚೆ ಗಂಭೀರವಾದಾಗ ಸಿಎಂಗೆ ಬುದ್ದಿ ಬಂದಿದೆ. ಇದೀಗ ಅನಿವಾರ್ಯವಾಗಿ ಅಕ್ಕಿ ಖರೀದಿಗೆ ಮುಂದಾಗಿದ್ದಾರೆಂದು ಕೇಂದ್ರ ಸಚಿವ ಸಚಿವ ಪ್ರಹ್ಲಾದ್ ಜೋಶಿ ಅವರು ಅವರು ವ್ಯಂಗ್ಯವಾಡಿದ್ದಾರೆ.
ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 10 ಕೆಜಿ ಪಡಿತರ ಅಕ್ಕಿ ವಿತರಣೆ ವಿಚಾರದಲ್ಲಿ ರಾಜ್ಯ ಸರ್ಕಾರ ತಡವಾಗಿಯಾದರೂ ಎಚ್ಚೆತ್ತುಕೊಂಡಿದೆ. ರಾಜ್ಯ ಸರ್ಕಾರ ತನ್ನ ಪಾಲಿನ 5 ಕೆಜಿ ಅಕ್ಕಿ ಬದಲು ರೂ.34 ಹಣ ನೀಡುತ್ತಿತ್ತು. 6 ತಿಂಗಳ ಹಿಂದೆಯೇ ಕೇಂದ್ರ ಕಡಿಮೆ ಬೆಲೆಗೆ ಹೆಚ್ಚುವರಿ ಅಕ್ಕಿ ಕೊಡಲು ಸಿದ್ಧವೆಂದು ತಿಳಿಸಿದ್ದರೂ ಖರೀದಿಗೆ ಮುಂದಾಗಿರಲಿಲ್ಲ, ರಾಜ್ಯ ಸರ್ಕಾರ ಅಕ್ಕಿ ಕೇಳಿದಾಗ ನಮ್ಮಲ್ಲಿ ಅಕ್ಕಿ ಇರಲಿಲ್ಲ. ಹಾಗಾಗಿ ಆಗ ಬಿಜೆಪಿ ಮತ್ತು ಬಿಜೆಪಿಯೇತರ ಅಧಿಕಾರವಿದ್ದ ಎಲ್ಲಾ ಸರ್ಕಾರಗಳಿಗೂ ಹೆಚ್ಚುವರಿ ಅಕ್ಕಿಯಿಲ್ಲ ಎಂದೇ ಹೇಳಲಾಗಿತ್ತು. ಬಳಿಕ ಕೇಂದ್ರ ಸರ್ಕಾರ, ಜೂನ್ ವೇಳೆಗೆ ಹೆಚ್ಚುವರಿ ಅಕ್ಕಿ ಪೂರೈಸಲು ಸಿದ್ಧವೆಂದು ರಾಜ್ಯ ಆಹಾರ ಇಲಾಖೆ ಸಚಿವ ಮುನಿಯಪ್ಪ ಅವರಿಗೆ ತಿಳಿಸಲಾಗಿತ್ತು. ಹಣದ ಕೊರತೆಯಿಂದಾಗಿ ರಾಜ್ಯ ಸರ್ಕಾರ ಖರೀದಿ ಮಾಡಲಿಲ್ಲ ಎಂದು ಹೇಳಿದರು.
ರಾಜ್ಯಕ್ಕೆ ಬೇಕಾದಷ್ಟು ಅಕ್ಕಿ ಲಭ್ಯವಿದೆ ಎಂದು ರಾಜ್ಯ ಸರ್ಕಾರಕ್ಕೆ ಅಧಿಕೃತ ಪತ್ರ ಬರೆದು 5 ತಿಂಗಳಾದರೂ ಪ್ರತಿಕ್ರಿಯಿಸಿರಲಿಲ್ಲ. ರೂ.22.50 ಕಡಿಮೆ ಬೆಲೆ ವಿಧಿಸಿದರೂ ರಾಜ್ಯ ಸರ್ಕಾರ ಮನಸ್ಸು ಮಾಡಿರಲಿಲ್ಲ. ರಾಜ್ಯದ ಜನಕ್ಕೆ ಇತ್ತ ಹೆಚ್ಚುವರಿ 5 ಕೆಜಿ ಅಕ್ಕಿಯೂ ಇಲ್ಲ, ಬದಲಿಗೆ ಹಣವನ್ನೂ ಸರ್ಕಾರ ಜಮೆ ಮಾಡುತ್ತಿರಲಿಲ್ಲ. ವಂಚನೆ ಬಹಿರಂಗಗೊಳ್ಳುತ್ತಿದ್ದಂತೆ ಈಗ ಕೇಂದ್ರದಿಂದ ಹೆಚ್ಚುವರಿ ಅಕ್ಕಿ ಖರೀದಿಗೆ ಮುಂದಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತಡವಾಗಿಯಾದರೂ ಜ್ಞಾನೋದಯವಾಗಿದೆ ಎಂದು ಟಾಂಗ್ ಕೊಟ್ಟರು.
