ನವದೆಹಲಿ:
ಸುಮಾರು 34.6 ಲಕ್ಷ ಪಡಿತರ ಚೀಟಿಗಳು ನಕಲಿ ಎನ್ನುವ ಆರೋಪ ಇದೆ, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.ಬಜೆಟ್ ಅಧಿವೇಶನದ ಎರಡನೆಯ ಅವಧಿಯ ಮೂರನೆಯ ದಿನವಾದ ಇಂದು ಲೋಕಸಭೆಯಲ್ಲಿ ಪಡಿತರ ಚೀಟಿಯಲ್ಲಿನ ಅವ್ಯವಹಾರ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಡಿತರ ಚೀಟಿಗಳಲ್ಲಿ ಕೆಲವು ರಾಜ್ಯಗಳಲ್ಲಿ ಅವ್ಯವಹಾರ ನಡೆಯುತ್ತಿರುವುದಾಗಿ ಆರೋಪಗಳಿವೆ.
2.2 ಕೋಟಿಗೂ ಅಧಿಕ ಮಂದಿ ಪಡಿತರ ಚೀಟಿಯ ಪ್ರಯೋಜನ ಪಡೆಯುತ್ತಿಲ್ಲ. ಸುಮಾರು 34.6 ಲಕ್ಷ ಚೀಟಿಗಳು ನಕಲಿ ಎನ್ನುವ ಆರೋಪ ಇದೆ. ಈ ಹಿನ್ನೆಲೆಯಲ್ಲಿ, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ. ಅರ್ಹರನ್ನು ಪಡಿತರ ಚೀಟಿಗೆ ಸೇರಿಸುವುದು ಹಾಗೂ ಅನರ್ಹರನ್ನು ಕೈಬಿಡುವಂತೆ ನಿರ್ದೇಶಿಸಲಾಗಿದೆ, ಅಂತ್ಯೋದಯ ಅನ್ನ ಯೋಜನೆಯಡಿ ಪ್ರತಿ ಕುಟುಂಬಗಳಿಗೆ 35 ಕೆ.ಜಿ ಪಡಿತರವನ್ನು ವಿತರಿಸಲಾಗುತ್ತಿದೆ, ಈ ಯೋಜನೆಯನ್ನು ಗ್ರಾಹಕ ವ್ಯವಹಾರಗಳ ಸಚಿವಾಲಯವು 2000 ದಿಂದ ಆರಂಭಿಸಿದೆ. ಆರ್ಥಿಕವಾಗಿ ದುರ್ಬಲರ ಜೊತೆಗೆ ದಿವ್ಯಾಂಗರಿಗೂ ಈ ಯೋಜನೆಯ ಲಾಭ ನೀಡಲಾಗುತ್ತಿದೆ. ಅತಿ ಕಡಿಮೆ ಬೆಲೆಯಲ್ಲಿ ತಿಂಗಳಿಗೆ 35 ಕೆಜಿ ಆಹಾರ ಧಾನ್ಯ ನೀಡಲಾಗುತ್ತದೆ ಎಂದರು.
