ಬೆಂಗಳೂರು:
ಕಾಂಗ್ರೆಸ್ ಪಕ್ಷ ಬಾಬಾ ಸಾಹೇಬರಿಗೆ ತೋರಿರುವ ಅಗೌರವವನ್ನು ಮರೆಮಾಡಲು ಸಾಧ್ಯವಿಲ್ಲ. ಸುಳ್ಳು ಹಬ್ಬಿಸುವುದು ಯಾವಾಗ ನಿಲ್ಲುತ್ತೆ ಸಿದ್ದರಾಮಯ್ಯನವರೇ? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಬಾಬಾ ಸಾಹೇಬರನ್ನು ಅಗೌರವದಿಂದ ನಡೆಸಿಕೊಳ್ಳುವುದು, ಅವರ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡುವುದು ಸಂಪ್ರದಾಯವಾಗಿದೆ. ರಾಜ್ಯದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಡಾ ಬಾಬಾ ಸಾಹೇಬರ ಸೋಲಿನ ಬಗ್ಗೆ ಮಾತನಾಡುತ್ತಿದ್ದಾರೆ. ಡಾ ಬಾಬಾ ಸಾಹೇಬರೇ ಸ್ವತಃ ಉಲ್ಲೇಖಿಸಿ ಬರೆದಿರುವುದನ್ನು ಸಾಬೀತು ಪಡಿಸಲಿ. ಸುಖಾಸುಮ್ಮನೆ ಆರೋಪ ಮಾಡುವುದು ನಿಲ್ಲಿಸಲಿ.
ಕಾಂಗ್ರೆಸ್ ಪಕ್ಷ ಡಾ ಬಾಬಾ ಸಾಹೇಬರಿಗೆ ಮಾಡಿದ ಅಗೌರವ, ಪಂಡಿತ್ ನೆಹರು ಅವರ ಆತಿಥ್ಯಕ್ಕಾಗಿ, ಅವರಿಗೆ ಅಧಿಕಾರ ಸಿಗಬಾರದೆಂದು ಮಾಡಿದ ದ್ರೋಹ ರಾಷ್ಟ್ರ ಎಂದೆಂದಿಗೂ ಮರೆಯುವುದಿಲ್ಲ.ಬಾಬಾ ಸಾಹೇಬರು ಸಂವಿಧಾನ ಸಭೆಗೆ ಆಯ್ಕೆಯಾಗಲು ಬಯಸಿ ಮುಂಬೈನಿಂದ 1946 ರಲ್ಲಿ ಸ್ಪರ್ಧಿಸಿದರು. ಕಾಂಗ್ರೆಸ್ ಬೆಂಬಲಿಸಲಿಲ್ಲ. ಬಾಬಾ ಸಾಹೇಬರು ಸೋಲಿನ ಅವಮಾನ ಅನುಭವಿಸಿದರು.
ದಲಿತ ನಾಯಕ ಜೋಗೇಂದ್ರನಾಥ್ ಮೊಂಡಲ್ ಆಹ್ವಾನದ ಮೇರೆಗೆ ಬಾಬಾ ಸಾಹೇಬರು ಪಶ್ಚಿಮ ಬಂಗಾಳದಲ್ಲಿ ಸ್ಪರ್ಧಿಸಿ ಸಂವಿಧಾನ ಸಭೆಗೆ ಆಯ್ಕೆಯಾದರು. ಕುತಂತ್ರ, ನೀಚತನ ಪ್ರದರ್ಶಿಸಿದ ಕಾಂಗ್ರೆಸ್ ಬಾಬಾ ಸಾಹೇಬರು ಗೆದಿದ್ದ ಬಂಗಾಳದ ಜೈಸೂರು, ಕುಲ್ಲಾ ಪ್ರದೇಶವನ್ನು ಹಿಂದೂಗಳು ಬಹುಸಂಖ್ಯಾತರಾಗಿದ್ದರೂ ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿತು. ಬಾಬಾ ಸಾಹೇಬರ ಆಯ್ಕೆ ಅಸಿಂಧು ಆಯಿತು.
1952 – ಮೊದಲ ಲೋಕಸಭಾ ಚುನಾವಣೆ, ಬಾಬಾ ಸಾಹೇಬರು ಮುಂಬೈ ಉತ್ತರಕ್ಷೇತ್ರದಿಂದ ಸ್ಪರ್ಧಿಸಿದರು. ಕಾಂಗ್ರೆಸ್ ಬಾಬಾ ಸಾಹೇಬರ ಸಹಾಯಕನನ್ನೇ ಅಪಹರಿಸಿ ಅಭ್ಯರ್ಥಿಯಾಗಿಸಿತು. ನೆಹರೂ ಎರಡೆರಡು ಸಲ ಪ್ರಚಾರ ಮಾಡಿ ಬಾಬಾಸಾಹೇಬರು ಸೋಲಿಸಿದರು.
1954 – ಬಂಡಾರ ಲೋಕಸಭಾ ಕ್ಷೇತ್ರದ ಉಪಚುನಾವಣೆ, ಅಲ್ಲಿಯೂ ಬಾಬಾ ಸಾಹೇಬರನ್ನು ಗೆಲ್ಲಲು ಕಾಂಗ್ರೆಸ್ ಬಿಡಲಿಲ್ಲ.ಬಾಬಾ ಸಾಹೇಬರನ್ನು ಸೋಲಿಸಿದ ನಾರಾಯಣ ಎಸ್ ಕಾಟ್ರೋಲ್ಕರ್ ಗೆ 1970 ರಲ್ಲಿ ಬಾಬಾ ಸಾಹೇಬರನ್ನು ಅವಮಾನಿಸಲೆಂದೇ ಪದ್ಮಭೂಷಣ ಪ್ರಶಸ್ತಿ ಕೊಡಲಾಯಿತು.ಇದೇ ವೇಳೆ ಗಾಂಧಿ ಕುಟುಂಬದ ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ತಮಗೆ ತಾವೇ ಭಾರತ ರತ್ನ ಘೋಷಿಸಿ ಪಡೆದುಕೊಂಡಿತು.
1990 ರಲ್ಲಿ ಬಿಜೆಪಿ ಬೆಂಬಲಿತ ವಿ .ಪಿ. ಸಿಂಗ್ ಸರ್ಕಾರ ಬಾಬಾ ಸಾಹೇಬರಿಗೆ ಭಾರತರತ್ನ ಪುರಸ್ಕಾರ ಘೋಷಿಸಿತು. ಸಂಸತ್ತಿನ ಕೇಂದ್ರೀಯ ಸಭಾಂಗಣದಲ್ಲಿ ಬಾಬಾ ಸಾಹೇಬರ ಭಾವಚಿತ್ರ ಹಾಕಲಾಯಿತು.ಸ್ವತಂತ್ರ ಹೋರಾಟಗಾರ ಸಾರ್ವಕರ್ ಬಗ್ಗೆ ತುಚ್ಛವಾಗಿ ಮಾತನಾಡುವ ನೀತಿ ಕಾಂಗ್ರೆಸ್ ಪಕ್ಷದು.ನಿಮ್ಮ ಕಾಂಗ್ರೆಸ್ ಪಕ್ಷ ಬಾಬಾ ಸಾಹೇಬರಿಗೆ ತೋರಿರುವ ಅಗೌರವವನ್ನು ಮರೆಮಾಡಲು ಸಾಧ್ಯವಿಲ್ಲ. ಸುಳ್ಳು ಹಬ್ಬಿಸುವುದು ಯಾವಾಗ ನಿಲ್ಲುತ್ತೆ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದ್ದಾರೆ.
