ಪಳೆಯುಳಿಕೆಯೇತರ ಇಂಧನದಲ್ಲಿ 5 ವರ್ಷ ಮೊದಲೇ ಗುರಿ ಸಾಧಿಸಿದ ಭಾರತ: ಪ್ರಲ್ಹಾದ್‌ ಜೋಶಿ

ದೆಹಲಿ:

   ಇಂಧನ ಪರಿವರ್ತನೆಯ ಪ್ರಯಾಣದಲ್ಲಿ ಭಾರತ ಒಂದು ಮೈಲಿಗಲ್ಲು ಸಾಧಿಸಿದೆ. ಪಳೆಯುಳಿಕೆಯೇತರ ಇಂಧನದಲ್ಲಿ ಐದು ವರ್ಷ ಮೊದಲೇ 242.8 GW ವಿದ್ಯುತ್‌ ಸಾಮರ್ಥ್ಯ ಸಾಧಿಸಿ ಹೆಗ್ಗಳಿಕೆಗೆ ಪಾತ್ರವಾಗಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತ 2030ರ ವೇಳೆಗೆ 484.8 GW ಒಟ್ಟು ಸ್ಥಾಪಿತ ವಿದ್ಯುತ್‌ ಸಾಮರ್ಥ್ಯ ಗುರಿಯೊಂದಿಗೆ ವಿಶಿಷ್ಠ ಹೆಜ್ಜೆ ಹಾಕಿತ್ತು. ಆದರೆ, 2025ರ ವೇಳೆಗಾಗಲೇ 242.8 GW ಸಾಮರ್ಥ್ಯದೊಂದಿಗೆ ಪ್ಯಾರಿಸ್ ಒಪ್ಪಂದಕ್ಕೆ ಅನುಗುಣವಾಗಿ ನಿಗದಿತ ಗುರಿಗಿಂತ ಐದು ವರ್ಷ ಮೊದಲೇ ಸಾಧನೆ ತೋರಿದೆ. 

   ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಂತೆ ಭಾರತ ಇಂದು ಹಸಿರು ಮತ್ತು ಸುಸ್ಥಿರ ಇಂಧನ ಭವಿಷ್ಯದತ್ತ ಸಾಗುತ್ತಿದೆ. ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಶೇ.50ರಷ್ಟನ್ನು ಸಾಧಿಸಿದ್ದು, ಇದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ಕ್ಷಣವಾಗಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi)‌ ಸಂತಸ ಹಂಚಿಕೊಂಡಿದ್ದಾರೆ. 

   PM ಕುಸುಮ್‌, PM ಸೂರ್ಯಘರ್‌, ಸೋಲಾರ್‌ ಪಾರ್ಕ್‌ ಅಳವಡಿಕೆ-ಅಭಿವೃದ್ಧಿ, ಮತ್ತು ರಾಷ್ಟ್ರೀಯ ವಿಂಡ್‌-ಸೋಲಾರ್‌ ಹೈಬ್ರಿಡ್‌ ಪಾಲಿಸಿಯಂತಹ ಪ್ರಮುಖ ಕಾರ್ಯಕ್ರಮಗಳು ನವೀಕರಿಸಬಹುದಾದ ಇಂಧನ ವಲಯಕ್ಕೆ ಬಲಿಷ್ಠ ಬುನಾದಿ ಹಾಕಿವೆ. ಒಂದು ಕಾಲದಲ್ಲಿ ಅಂಚಿನಲ್ಲಿದ್ದ ಜೈವಿಕ ಇಂಧನ ವಲಯವೂ ಇದೀಗ ಗ್ರಾಮೀಣ ಜೀವನೋಪಾಯ ಮತ್ತು ಶುದ್ಧ ಇಂಧನ ಉತ್ಪಾದನೆಗೆ ಪ್ರಮುಖ ಕೊಡುಗೆ ನೀಡಿದೆ ಎಂದಿದ್ದಾರೆ.

   ʼಪ್ರಧಾನಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನʼ (PM-KUSUM) ಸೌರಶಕ್ತಿ ಚಾಲಿತ ಪಂಪ್‌ಗಳನ್ನು ಒದಗಿಸುವ ಮೂಲಕ ಲಕ್ಷಾಂತರ ರೈತರನ್ನು ಸಬಲೀಕರಣಗೊಳಿಸಿದೆ. ಇಂಧನ-ಸುರಕ್ಷಿತ ಮತ್ತು ಸುಸ್ಥಿರ ಕೃಷಿಯನ್ನು ಸಕ್ರಿಯಗೊಳಿಸಿದೆ. 2024ರಲ್ಲಿ ಪ್ರಾರಂಭಿಸಲಾದ PM ಸೂರ್ಯ ಘರ್ 1 ಕೋಟಿ ಮನೆಗಳಿಗೆ ಸೌರಶಕ್ತಿ ಪ್ರವೇಶಿಸುವಂತೆ ಮೇಲ್ಛಾವಣಿ ಕ್ರಾಂತಿ ತಂದಿದೆ ಎಂದು ಹೇಳಿದ್ದಾರೆ.

   ಜಾಗತಿಕ ಸನ್ನಿವೇಶದಲ್ಲಿ ಭಾರತದ ಪ್ರಗತಿ ಮಹತ್ವ ಪಡೆದಿದೆ. ಭಾರತ NDC ಬದ್ಧತೆಗಳನ್ನು ಪೂರೈಸುವ ಹಾದಿಯಲ್ಲಿರುವ ಕೆಲವೇ G20 ದೇಶಗಳಲ್ಲಿ ಒಂದಾಗಿದೆ. G20 ಮತ್ತು ಹವಾಮಾನ ಬದಲಾವಣೆ ಕುರಿತಾದ ವಿಶ್ವಸಂಸ್ಥೆಯ COP ನಂತಹ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ಹವಾಮಾನ ಸಮಾನತೆ, ಸುಸ್ಥಿರ ಜೀವನಶೈಲಿ ಮತ್ತು ಕಡಿಮೆ ಇಂಗಾಲದ ಅಭಿವೃದ್ಧಿ ಮಾರ್ಗಗಳನ್ನು ನಿರಂತರವಾಗಿ ಪ್ರತಿಪಾದಿಸಿದೆ ಎಂದು ಅವರು ತಿಳಿಸಿದ್ದಾರೆ.

   ನಿಗದಿತ ಸಮಯಕ್ಕಿಂತ ಮೊದಲೇ ಶೇ.50ರಷ್ಟು ಪಳೆಯುಳಿಕೆ ರಹಿತ ಇಂಧನ ಸಾಮರ್ಥ್ಯದಲ್ಲಿ ಹೊಸ ಮೈಲಿಗಲ್ಲು ದಾಖಲಿಸಿರುವ ಭಾರತ, ಶುದ್ಧ ಇಂಧನ ಮುಂಚೂಣಿಯಲ್ಲಿ ತನ್ನ ನಾಯಕತ್ವವನ್ನು ಮತ್ತಷ್ಟು ಬಲಪಡಿಸುತ್ತಿದೆ. ಆರ್ಥಿಕ ಬೆಳವಣಿಗೆ ಮತ್ತು ಪರಿಸರ ರಕ್ಷಣೆಯನ್ನು ಒಟ್ಟೊಟ್ಟಿಗೇ ತೆಗೆದುಕೊಂಡು ಹೋಗುತ್ತಿದೆ ಎಂದಿದ್ದಾರೆ. 

   ಭಾರತದ ಇಂಧನ ಪರಿವರ್ತನೆಯ ಮುಂದಿನ ಹಂತವು ಶುದ್ಧ ಇಂಧನ, ಗುಣಮಟ್ಟ, ಸಮಾನತೆ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಆದ್ಯತೆ ನೀಡುತ್ತದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನವೀಕರಿಸಬಹುದಾದ ಇಂಧನವನ್ನು ಉತ್ತೇಜಿಸಲಿದೆ. ಅಲ್ಲದೇ, ಇದಕ್ಕಾಗಿ ಡಿಜಿಟಲ್ ಸಂಯೋಜಿತ ವಿದ್ಯುತ್ ಗ್ರಿಡ್ ನಿರ್ಮಿಸುವತ್ತ ಹೆಜ್ಜೆ ಹಾಕಲಿದೆ ಎಂದು ಹೇಳಿದ್ದಾರೆ. 

   ಗ್ರಿಡ್ ವಿಶ್ವಾಸಾರ್ಹತೆ ಮತ್ತು 24/7 ವಿದ್ಯುತ್ ಲಭ್ಯತೆಗಾಗಿ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್‌ (BESS) ಮತ್ತು ಪಂಪ್ಡ್ ಹೈಡ್ರೋ ಸ್ಟೋರೇಜ್ ನಿಯೋಜನೆ ವಿಸ್ತರಣೆಗೆ ನಿರ್ಣಾಯಕ ಕ್ರಮ ಕೈಗೊಳ್ಳುತ್ತಿದೆ. ಭವಿಷ್ಯದ ದೃಷ್ಟಿಯಿಂದ ಕೈಗಾರಿಕಾ ಇಂಧನವಾಗಿ ಹಸಿರು ಹೈಡ್ರೋಜನ್‌ ವಲಯದಲ್ಲಿ ಹೆಚ್ಚಿನ ಹೂಡಿಕೆಗೆ ಗಮನ ಹರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

  ಭಾರತದ ಭವಿಷ್ಯದ ಇಂಧನ ಮೂಲಸೌಕರ್ಯದ ಬೆನ್ನೆಲುಬಾಗಿ ಕೃತಕ ಬುದ್ಧಿಮತ್ತೆ (AI) ಹೊರಹೊಮ್ಮಲಿದೆ. ಬೇಡಿಕೆ ಮುನ್ಸೂಚನೆ, ಮುನ್ಸೂಚಕ ನಿರ್ವಹಣೆ, ಸ್ವಯಂಚಾಲಿತ ಗ್ರಿಡ್ ನಿರ್ವಹಣೆ ಮತ್ತು ವ್ಯವಸ್ಥೆಯ ದಕ್ಷತೆಯಲ್ಲಿ AI ಪ್ರಮುಖ ಪಾತ್ರ ವಹಿಸುತ್ತದೆ. AI-ಚಾಲಿತ ವೇದಿಕೆಗಳೊಂದಿಗೆ, ಮೇಲ್ಛಾವಣಿ ಸೌರಶಕ್ತಿ ಮತ್ತು ಸ್ಮಾರ್ಟ್ ಮೀಟರ್‌ಗಳು ಗ್ರಾಹಕರು ಸಕ್ರಿಯ ಇಂಧನ ಉತ್ಪಾದಕರಾಗಲು ಅನುವು ಮಾಡಿಕೊಡುತ್ತದೆ. 

  2030ಕ್ಕೂ ಮೊದಲೇ ಭಾರತ ಶೇ.50ರಷ್ಟು ಪಳೆಯುಳಿಕೆಯೇತರ ಇಂಧನ ಸ್ಥಾಪಿತ ಸಾಮರ್ಥ್ಯ ಸಾಧಿಸಿರುವುದು ಅದರ ಮಹತ್ವಾಕಾಂಕ್ಷೆ, ನಾವೀನ್ಯತೆ ಮತ್ತು ಸುಸ್ಥಿರ ಅಭಿವೃದ್ಧಿಯ ಬದ್ಧತೆಗೆ ಸಾಕ್ಷಿಯಾಗಿದೆ. 2030ರ ವೇಳೆಗೆ 500 GW ಪಳೆಯುಳಿಕೆಯೇತರ ಸಾಮರ್ಥ್ಯ ಮತ್ತು 2070ರ ವೇಳೆಗೆ ನಿವ್ವಳ-ಶೂನ್ಯ ಹೊರಸೂಸುವಿಕೆಯ ಗುರಿಯತ್ತ ದೇಶ ಸಾಗುತ್ತಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link