ಪ್ರಜಾ ಪ್ರಗತಿ EXCLUSIVE : ನೀರಾವರಿ ಯೋಜನೆಗಳ ಜಾರಿಗೆ ಇಚ್ಚಾಶಕ್ತಿ ಕೊರತೆ:ಎಚ್.ಕೆ.ಪಾಟೀಲ್

ತುಮಕೂರು:

     ಕರ್ನಾಟಕದಲ್ಲಿ ಹೇರಳವಾದ ಜಲಸಂಪನ್ಮೂಲವಿದೆ. ರಾಜ್ಯಕ್ಕೆ ಯಾವುದೇ ನೀರಿನ ಕೊರತೆಯಿಲ್ಲ. ಆದರೆ ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ರಾಜಕೀಯ ಇಚ್ಚಾಶಕ್ತಿಯ ಕೊರತೆ ಇದೆ ಎಂದು ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಹಾಗೂ ಮಹಾರಾಷ್ಟ್ರ ಕಾಂಗ್ರೆಸ್ ನೂತನ ಉಸ್ತುವಾರಿ ಎಚ್.ಕೆ.ಪಾಟೀಲ್ ಹೇಳಿದರು.

    ಅವರು ಪ್ರಜಾಪ್ರಗತಿ ದಿನಪತ್ರಿಕೆ, ಪ್ರಗತಿ ಟಿವಿ ವಾಹಿನಿ ಸಹಯೋಗದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಜನ್ಮಜಯಂತಿ ಅಂಗವಾಗಿ ಏರ್ಪಡಿಸಿದ್ಧ ವಿಶ್ವೇಶ್ವರಯ್ಯ ಕನಸು, ನೀರಾವರಿ ನನಸು ಸಂವಾದದಲ್ಲಿ ಮಾತನಾಡಿದ ಅವರು ಕಾವೇರಿ, ಕೃಷ್ಣಾ, ತುಂಗಭದ್ರಾ, ಭದ್ರಾ ಮೇಲ್ದಂಡೆ ಸೇರಿದಂತೆ ಹಲವು ಯೋಜನೆಗಳಲ್ಲಿ ಸಾವಿರಾರು ಟಿಎಂಸಿ ನೀರಿನ ಲಭ್ಯತೆ ಇದೆ. ವಿಶೇಷವಾಗಿ ಯಾವುದೇ ಅಡೆತಡೆಯಿಲ್ಲದ ಪಶ್ವಿಮಾಭಿಮುಖವಾಗಿ ಹರಿಯುವ ಶರಾವತಿ, ಸೂಫಾ, ಕಾಳಿ ಮೊದಲಾದ ನದಿ ಕೊಳ್ಳಗಳಲ್ಲಿ 500 ಟಿಎಂಸಿಯಷ್ಟು ನೀರಿನ ಲಭ್ಯತೆ ಇದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕಿದೆ. ಇದು ನೀರಾವರಿ ತಜ್ಞ ದಿ. ಜಿ.ಎಸ್.ಪರಮಶಿವಯ್ಯ ಅವರ ಕನಸು ಆಗಿತ್ತು ಎಂದು ನುಡಿದರು.

    ವಿಶ್ವೇಶ್ವರಯ್ಯ ಜಯಂತಿ ಆಚರಣೆ ಅರ್ಥಬರಬೇಕಾದರೆ ರಾಜ್ಯದ ನೀರಾವರಿ ಯೋಜನೆಗಳು ಸಮರ್ಪಕ ಅನುಷ್ಟಾನ, ಮಳೆ ನೀರು ಸಂರಕ್ಷಣೆ ಜತೆ ಜತೆಯಾಗಿ ಸಾಗಬೇಕಿದೆ ಎಂದ ಎಚ್.ಕೆ.ಪಾಟೀಲ್ ಅವರು ರಾಜ್ಯದ ಎಲ್ಲಾ ಗ್ರಾಮಗಳಿಗೆ ಕುಡಿಯುವನೀರೊದಗಿಸಲು 75 ಟಿಎಂಸಿ ನೀರಾದರೆ ಸಾಕು. ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಇದಕ್ಕಾಗಿಯೇ ಜಲಧಾರೆ ಯೋಜನೆಯನ್ನು ಜಾರಿಗೆ ತರಲಾಯಿತು. ಹೊಸ ತಂತ್ರಜ್ಞಾನದೊಂದಿಗೆ ಬಯಲುಸೀಮೆ ಪ್ರದೇಶದಲ್ಲಿ ಮಳೆ ಹೆಚ್ಚು ಭರಿಸುವ ಮೋಡಬಿತ್ತನೆ ಪ್ರಯೋಗಗಳು, ಹರಿಯುವ ನೀರನ್ನು ಹೆಚ್ಚು ಹಿಡಿದಿಡುವ ಪ್ರಯತ್ನ ಆಗಬೇಕು ಎಂದರು.

ಕಳೆದುಕೊಳ್ಳದೆ ನೀರು ಅಲಭ್ಯ:

    ವಿವಾದ ರಹಿತವಾದ ಪಶ್ಚಿಮಾಭಿಮಾಗಿ ಹರಿಯುವ ನದಿ ನೀರನ್ನು ಬಯಲು ಸೀಮೆ ಪ್ರದೇಶಗಳಿಗೆ ಹರಿಸುವ ಯೋಜನೆ ಭೂಮಿಯ ಮೇಲೆ ಜಾರಿಗೊಳ್ಳಬೇಕಾದರೆ ಹೆಚ್ಚು ಅರಣ್ಯನಾಶವಾಗುತ್ತದೆ. ಮರಗಳನ್ನು ಉಳಿಸಲು ಭೂಮಿಯ ಒಳಗೆ ಜಾರಿಗೊಳಿಸುತ್ತೇವೆಂದರೆ ಹೆಚ್ಚು ಅನುದಾನ, ನಾವೀನ್ಯ ತಂತ್ರಜ್ಞಾನ ಬಳಕೆಯಾಗಬೇಕು. ಯಾವುದಾದರೊಂದು ಕಳೆದುಕೊಳ್ಳದೆ ನೀರು ಸಿಗುವುದು ದುರ್ಲಬವಾಗುತ್ತದೆ ಎಂದು ಎಚ್‍ಕೆಪಿ ಅಭಿಪ್ರಾಯಪಟ್ಟರು.

ನಿರ್ವಹಣೆಯೂ ಮುಖ್ಯ:

    ಬಚಾವತ್ ಆಯೋಗದ ತೀರ್ಪಿನ ಅನುಸಾರ ಚೈನ್ನೈಗೆ ಮಾನವೀಯ ನೆಲೆಯಲ್ಲಿ ಇಂದಿರಾಗಾಂಧಿ ಅವರ ಸೂಚನೆ ಮೇರೆಗೆ ಬಿಟ್ಟುಕೊಟ್ಟ 5 ಟಿಎಂಸಿ ನೀರನ್ನು ಹೊರತುಪಡಿಸಿ 729 ಟಿಎಂಸಿ ನೀರಿನ ಬಳಕೆಗೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲೂ ಹಲವು ಯೋಜನೆ ಜಾರಿಗೆ ತರಲಾಗಿದೆ. ಯೋಜನೆಗಳನ್ನು ಜಾರಿಗೆ ತರುವುದಷ್ಟೇ ಅಲ್ಲ. ಸೂಕ್ತ ನಿರ್ವಹಣೆಯೂ ಮುಖ್ಯ. ಜನರಲ್ಲೂ ಕುಡಿಯುವ ನೀರು ಹಾಗೂ ಕೃಷಿ ನೀರಾವರಿ ವಿಚಾರದಲ್ಲಿ ನೀರಿನ ಸದ್ಬಳಕೆ ಬಗ್ಗೆ ಜಾಗೃತಿ ಮೂಡಬೇಕು ಎಂದರು.

ಎತ್ತಿನಹೊಳೆ ನೀರಿನ ಲಭ್ಯತೆ ಖಾತ್ರಿಯಿಲ್ಲ:

     ಚಿಕ್ಕಬಳ್ಳಾಪುರ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಪ್ರತಿಕ್ರಿಯಿಸಿ ಬಯಲುಸೀಮೆ ಪ್ರದೇಶವಾದ ಅದರಲ್ಲೂ ಯಾವುದೇ ನೀರಾವರಿ ಯೋಜನೆಗಳಿಲ್ಲದ ಚಿಕ್ಕಬಳ್ಳಾಪುರ-ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಚಾಲ್ತಿಯಿರುವ ಯಾವುದೇ ನೀರಾವರಿ ಯೋಜನೆಗಳಲ್ಲೂ ನೀರಿನ ಅವಕಾಶ ಮಾಡಿಕೊಟ್ಟಿಲ್ಲ.ಪರಮಶಿವಯ್ಯ ವರದಿ ಆಧಾರದಲ್ಲಿ ಪೂರ್ಣ ಪ್ರಮಾಣದ ಯೋಜನೆಯನ್ನು ಜಾರಿಗೊಳಿಸದೆ 2008ರಲ್ಲಿ ಏಕಾಏಕಿ ಭದ್ರಾ ಮೇಲ್ಡಂಡೆಯಿಂದ ನೀರು ಹರಿಸುವ ಕೆ.ಸಿ.ರೆಡ್ಡಿ ಹೆಸರಿನ ಯೋಜನೆ ಪ್ರಕಟಿಸಲಾಯಿತು.

   ನಂತರ ಅದು ಮೂಲೆಗುಂಪಾಯಿತು. ಬಳಿಕ 9.50 ಟಿಎಂಸಿ ನೀರು ಲಭ್ಯವೆನ್ನುವ ನೇತ್ರಾವತಿ ತಿರುವು ಯೋಜನೆಯನ್ನು ಪ್ರಸ್ತಾಪಿಸಿ, ವಿವಾದವೇರ್ಪಟ್ಟಬಳಿಕ ಎತ್ತಿನಹೊಳೆ ಯೋಜನೆ ಪ್ರಸ್ತಾಪಿಸಿ 24 ಟಿಎಂಸಿ ನೀರು ಸಿಗುತ್ತದೆ ಎಂದು ಜಾರಿಗೆ ಮುಂದಾಗಲಾಯಿತು. ಇದು ಜನರ ಕಣ್ಣೊರೆಸುವ ತಂತ್ರ ಮಾಡಲಾಗಿದೆ ಹೊರತು ಅಷ್ಟು ಪ್ರಮಾಣದ ನೀರು ಹರಿಯುವ ಯಾವುದೇ ವೈಜ್ಞಾನಿಕ ಖಾತ್ರಿಯಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಹತ್ತಿರದ ನಾಗಾರ್ಜುನ ಸಾಗರ ಜಲಾಶಯದಿಂದ ನೀರು ಹರಿಸಬಾರದೇಕೇ?

    5 ಟಿಎಂಸಿಯಷ್ಟು ಕೃಷ್ಣಾ ನೀರನ್ನು ಮಾನವೀಯ ನೆಲೆಯಲ್ಲಿ ಚನ್ನೈ ಮಹಾನಗರಕ್ಕೆ ಹರಿಸಿರುವಂತೆ ಆಂಧ್ರ ಸರಕಾರದೊಡನೆ ಕರ್ನಾಟಕ ಸರಕಾರದವರು ಮಾತನಾಡಿ ರಾಜ್ಯದ ಗಡಿಭಾಗದವರಗೆ ಆಂಧ್ರದವರು ಹರಿಸಿರವ ನಾಗಾರ್ಜುನ ಸಾಗರ ಜಲಾಶಯದ ನೀರನ್ನು ಹತ್ತಿರದಲ್ಲೇ ಇರುವ ಕೋಲಾರ-ಚಿಕ್ಕಬಳ್ಳಾಪುರ, ತುಮಕೂರಿನ ಪಾವಗಡ, ಶಿರಾ ಭಾಗಕ್ಕೆ ಹರಿಸಲು ಸಾಧ್ಯವಿಲ್ಲವೇ? ಈ ಬಗ್ಗೆ ಅನೇಕ ವೇದಿಕೆಗಳಲ್ಲಿ ಪ್ರಸ್ತಾಪಿಸಿ, ಹೋರಾಟ ಮಾಡಿದರೂ ಸರಕಾರ ಗಮನಹರಿಸುತ್ತಿಲ್ಲ. ಅನಾವಶ್ಯಕ ಚೆಕ್‍ಡ್ಯಾಂಗಳನ್ನು ನಿರ್ಮಾಣ ಮಾಡಿ ಹಣ ಅಪವ್ಯಯ ಮಾಡಲಾಗುತ್ತಿದೆ. ಮಳೆ ನೀರಿನ ಸದ್ಬಳಕೆ ಹಿನ್ನೆಲೆಯಲ್ಲಿ ಪ್ರತೀ ಜಿಲ್ಲೆಗೂ ಮಳೆಮಾಪನದ ರ್ಯಾಡರ್ ಅಳವಡಿಸಬೇಕು ಎಂದು ಸಲಹೆ ನೀಡಿದರು.

   ಪರಮಶಿವಯ್ಯ ವರದಿ ಸಮಗ್ರ ಅನುಷ್ಠಾನಕ್ಕೆ ಆಗ್ರಹ: ದಿಶಾಸಮಿತಿ ಸದಸ್ಯರಾದ ಕುಂದರನಹಳ್ಳಿ ರಮೇಶ್ ಸಂವಾದದಲ್ಲಿ ಮಾತನಾಡಿ ಸಂಸದ ಜಿ.ಎಸ್.ಬಸವರಾಜು ಅವರ ಒತ್ತಾಯದ ಹಿನ್ನೆಲೆಯಲ್ಲಿ ಸಮಗ್ರ ನೀರಾವರಿಯ ಜಿ.ಎಸ್.ಪರಮಶಿವಯ್ಯ ವರದಿ ಅನುಷ್ಠಾನಕ್ಕೆ ಮೊದಲು ಚಾಲನೆ ಕೊಟ್ಟವರೆ ಅಂದಿನ ಸಿಎಂ ಎಸ್.ಎಂ.ಕೃಷ್ಣ, ನೀರಾವರಿ ಸಚಿವರಾಗಿದ್ದ ಎಚ್.ಕೆ.ಪಾಟೀಲ್ ಅವರು. ಪರಮಶಿವಯ್ಯ ಅವರ ಅಧ್ಯಕ್ಷತೆಯಲ್ಲೇ ಸಮಿತಿ ರಚಿಸಿ ಯೋಜನೆ ರೂಪಿಸಲು ಕಾರಣೀಭೂತರಾದರು. ಬಳಿಕ ಪರಮಶಿವಯ್ಯ ಅವರ ವರದಿಯಲ್ಲಿ ಮಾರ್ಪಾಡು ಮಾಡಿ ವರದಿ ಕೊನೆಭಾಗವಾದ ಎತ್ತಿನಹೊಳೆ ಯೋಜನೆಂ ಕೈಗೆತ್ತಿಕೊಂಡು ಹೆಡ್ ವಕ್ರ್ಸ್ ಅನ್ನು 960 ಮೀಟರ್‍ನಿಂದ 965 ಮೀಟರ್‍ಗೆ ಅನಾವಶ್ಯಕವಾಗಿ ಎತ್ತರಿಸಿ ಎತ್ತಿನಹೊಳೆ ಯೋಜನೆಯನ್ನು ಕಾರ್ಯಾನುಷ್ಠಾನಗೊಳಿಸಲಾಗುತ್ತಿದೆ ಎಂದರು.

   ಪಶ್ಚಿಮಾಭಿಮುಖವಾಗಿ ಹರಿಯುವ ನದಿ, ಕೊಳ್ಳಗಳಲ್ಲಿ 400ಕ್ಕೂ ಅಧಿಕ ಟಿಎಂಸಿಯಷ್ಟು ನೀರು ಲಭ್ಯವಿದ್ದು, ಅಂತರ್ ನದಿಗಳ ಜೋಡಣೆ, ಚೆಕ್‍ಡ್ಯಾಂಗಳ ನಿರ್ಮಾಣದ ಮೂಲಕ ನೀರನ್ನು ಬಳಕೆ ಮಾಡಬಹುದಾಗಿದೆ. ಈ ಬಗ್ಗೆ ರಾಜ್ಯಮಟ್ಟದ ದಿಶಾ ಸಮಿತಿ ಸಭೆಯಲ್ಲೂ ಸಿಎಂ ಚರ್ಚೆ ನಡೆಸಲಿದ್ದಾರೆ. ಇಲಾಖೆ ಅಧಿಕಾರಿಗಳು ಹಾಗೂ ಎಂಜಿನಿಯರ್ಸ್‍ಗಳ ನಡುವೆ ಸಾಮ್ಯತೆ ಇಲ್ಲದಿರುವುದು ರಾಜ್ಯದಲ್ಲಿ ನೀರಾವರಿ ಯೋಜನೆಗಳ ಹಿನ್ನಡೆಗೆ ಕಾರಣವಾಗಿದೆ. ಪರಮಶಿವಯ್ಯ ವರದಿ ಸಮಗ್ರ ಅನುಷ್ಟಾನವಾದರೆ ರಾಜ್ಯದಲ್ಲಿ ಜಲಸಂಪನ್ಮೂಲದ ಪೂರ್ಣ ಸದ್ಬಳಕೆಯಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರದ ಜಲಶಕ್ತಿ ಮಿಷನ್ ಯೋಜನೆಗಳು ಪೂರಕವಾಗಿದೆ ಎಂದರು.

ದೂರದೃಷ್ಟಿ, ವಾಸ್ತವತೆಯ ಅರಿವು ಮುಖ್ಯ

    ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣ ಅವರು ಮಾತನಾಡಿ ಕೋಲಾರ-ಚಿಕ್ಕಬಳ್ಳಾಪುರ ಭಾಗದವರಂತೆ ತುಮಕೂರು ಜಿಲ್ಲೆಯ ಉತ್ತರ ಭಾಗದ ಶಿರಾ, ಪಾವಗಡ ಭಾಗದ ಜನತೆ ನೀರಿನ ಸಮಸ್ಯೆಯಿಂದ ವ್ಯಾಪಕವಾಗಿ ಬಳಲುತ್ತಿದ್ದಾರೆ. ಹೇಮಾವತಿ ನೀರಿನ ಯೋಜನೆ ಜಾರಿಗೊಳ್ಳದೆ ಇದ್ದರೆ ತುಮಕೂರಿನ ಸ್ಥಿತಿ ಭೀಕರವಾಗಿರುತ್ತಿತ್ತು. ನೀರಾವರಿ ಯೋಜನೆಗಳ ಜಾರಿ ವಿಚಾರದಲ್ಲಿ ಜನಪ್ರತಿನಿಧಿಗಳಲ್ಲೂ ದೂರದೃಷ್ಟಿ, ಹೋರಾಟಗಾರರಲ್ಲೂ ವಾಸ್ತವತೆಯ ಅರಿವು ಅಗತ್ಯವಾಗಿ ಬೇಕಾಗಿದೆ. ಯಾವುದೇ ನೀರಾವರಿ ಯೋಜನೆ ಕಾಲಮಿತಿಯಲ್ಲಿ ಅನುಷ್ಠಾನಗೊಂಡಾಗ ಮಾತ್ರ ಆ ಪೀಳಿಗೆಯವರು ಸೇರಿದಂತೆ ಭವಿಷ್ಯದ ಜನ ನೆಮ್ಮದಿ ಬದುಕು ಕಾಣಲು ಸಾಧ್ಯ ಎಂದು ಸಲಹೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap