ಆರ್ಥಿಕ ಸಂಕಷ್ಟ : ಉದ್ಯಮ ವಲಯ ತತ್ತರ(ಭಾಗ-5)

ಆರ್ಥಿಕ ಸಂಕಷ್ಟಕ್ಕೆ ತತ್ತರಿಸಿದ ಔದ್ಯಮಿಕ ವಲಯ 
ವಿಶೇಷ ವರದಿ:ಸಾ.ಚಿ.ರಾಜಕುಮಾರ
      ಇಂದು ಕೆಲವು ಉದ್ಯಮಗಳು ನಷ್ಟದ ಹಾದಿಯಲ್ಲಿರಬಹುದು. ಇನ್ನು ಕೆಲವು ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕಿ ಮುಚ್ಚಿ ಹೋಗಿರಬಹುದು ಅಥವಾ ಮುಂದೆ ಮುಚ್ಚಿಹೋಗಬಹುದಾದ ಭೀತಿಯಲ್ಲಿರಬಹುದು. ಈ ವಿದ್ಯಮಾನಗಳನ್ನು ಗಮನಿಸುತ್ತಾ ಕುಳಿತಿರುವ ಸುಸ್ಥಿತಿಯಲ್ಲಿರುವ ಉದ್ಯಮಗಳು ಅತ್ಯಂತ ಸೇಫ್ ಎಂದುಕೊಳ್ಳುವ ಹಾಗಿಲ್ಲ. ಕಾರ್ಖಾನೆಗಳು, ಉದ್ದಿಮೆಗಳು ಮುಚ್ಚಿದಂತೆಲ್ಲಾ ಸರ್ಕಾರಕ್ಕೂ ಅದರ ಬಿಸಿ ತಟ್ಟುತ್ತದೆ. ಸರ್ಕಾರಕ್ಕೆ ಬರಬೇಕಿದ್ದ ಆದಾಯಗಳು ಕಡಿಮೆಯಾಗುತ್ತವೆ. 
       ಎಷ್ಟು ಸಂಸ್ಥೆಗಳು ಮುಚ್ಚಿ ಹೋಗುತ್ತವೋ ಅಷ್ಟೂ ಸಂಸ್ಥೆಗಳಿಂದ ಸರ್ಕಾರಕ್ಕೆ ಬರಬೇಕಿದ್ದ ತೆರಿಗೆ ಆದಾಯವನ್ನು ಸುಸ್ಥಿತಿಯಲ್ಲಿರುವ ಕಂಪನಿಗಳಿಂದ ಪಡೆಯುವ ಹುನ್ನಾರ ಆರಂಭವಾಗುತ್ತದೆ. ಹೀಗಾಗಿ ಹೆಚ್ಚಿನ ತೆರಿಗೆ ಈ ಕಂಪನಿಗಳ ಮೇಲೆಯೇ ಬೀಳುವ ಅಪಾಯವೂ ಇದೆ. ಆದಾಯ ತೆರಿಗೆ, ಜಿ.ಎಸ್.ಟಿ., ಸೇವಾ ತೆರಿಗೆ (ರಾಜಧನ) ಪರವಾನಗಿ ಶುಲ್ಕ ಇತ್ಯಾದಿ ಹಲವು ಹತ್ತು ವಿಧದ ಆದಾಯ ತೆರಿಗೆ ರೂಪದಲ್ಲಿ ಈ ವಲಯದಿಂದ ಸರ್ಕಾರಕ್ಕೆ ಸಂಗ್ರಹವಾಗುತ್ತದೆ. ನಷ್ಟದ ಹಾದಿಯನ್ನು ಸರಿದೂಗಿಸಲು ಉತ್ತಮ ಸ್ಥಿತಿಯಲ್ಲಿರುವ ಉದ್ಯಮಗಳ ಮೇಲೆ ಹೊರೆ ಹಾಕುವ ಅನಿವಾರ್ಯತೆ ಸೃಷ್ಟಿಯಾಗಲೂಬಹುದು. ಹೀಗಾಗಿ ನಾನು ಅತ್ಯಂತ ಸೇಫ್ ಜೋನ್‍ನಲ್ಲಿದ್ದೇನೆ ಎಂದು ಯಾರೂ ಸಹ ಅಂದುಕೊಳ್ಳುವ ಸ್ಥಿತಿ ಇಲ್ಲ. 
       ಆಗಸ್ಟ್ 25 ರಂದು ಬೆಂಗಳೂರಿನಲ್ಲಿ ಮಲೆನಾಡಿನ ಸಂಘ ಸಂಸ್ಥೆಗಳ ಒಕ್ಕೂಟವು ವಿ.ಜಿ.ಸಿದ್ಧಾರ್ಥ ಹೆಗಡೆ ಅವರಿಗೆ ನುಡಿ ನಮನ ಕಾರ್ಯಕ್ರಮ ಆಯೋಜಿಸಿತ್ತು. ಅಲ್ಲಿ ಭಾಗವಹಿಸಿದ್ದ ಬಹುಪಾಲು ಉದ್ಯಮಿಗಳು ತೆರಿಗೆ ಕಾನೂನುಗಳ ಬಗ್ಗೆಯೆ ಮಾತನಾಡಿದ್ದಾರೆ. ದೇಶವನ್ನು ಮುನ್ನಡೆಸುತ್ತಿರುವವರು ಮತ್ತು ಕೆಲವು ಕಾನೂನುಗಳು ಒಳ್ಳೆಯವರನ್ನು ಹಿಂಸಿಸುತ್ತಿವೆ. ಸಾಲ ತೀರಿಸಲಾಗದೆ, ದೇಶದಿಂದ ಪರಾರಿಯಾಗುವವರಿಗೆ, ಮೋಸಗಾರರ ಪರವಾಗಿ ಕಾನೂನುಗಳು ಕೆಲಸ ಮಾಡುತ್ತವೆ ಎಂಬ ಆಕ್ರೋಶ ಹೊರ ಹಾಕಿದ್ದಾರೆ. ಈ ಬಗ್ಗೆ ಒಂದಷ್ಟು ಚಿಂತನ ಮಂಥನಗಳು ನಡೆಯಬೇಕು.
       ತೆರಿಗೆ, ಜಿ.ಎಸ್.ಟಿ., ಸೇವಾ ತೆರಿಗೆ ಇತ್ಯಾದಿಗಳ ಬಗ್ಗೆ ಅರಿವಿರುವ ಹಾಗೂ ಈ ಕ್ಷೇತ್ರದಲ್ಲಿಯೇ ಕೆಲಸ ಮಾಡುವ ಕೆಲವು ಸಂಘ ಸಂಸ್ಥೆಗಳಿವೆ. ಸರ್ಕಾರಿ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಗಳಿವೆ. ಇವರೆಲ್ಲ ಏನು ಮಾಡುತ್ತಿದ್ದಾರೆ? ಎಫ್.ಕೆ.ಸಿ.ಸಿ.ಐ., ಕಾಸಿಯಾ, ಸಣ್ಣ ಕೈಗಾರಿಕೆಗಳ ಸಂಘ ಹೀಗೆ ಇನ್ನು ಅನೇಕ ಸಂಸ್ಥೆಗಳು ಇದ್ದೂ ಆರ್ಥಿಕ ವಲಯದಲ್ಲಿನ ಏರುಪೇರುಗಳ ಬಗ್ಗೆ ಬಾಯಿ ಮುಚ್ಚಿಕೊಂಡು ಕುಳಿತಿರುವುದಾದರೂ ಏತಕ್ಕೆ? ಈ ಸಂಘಟನೆಗಳಷ್ಟೇ ಅಲ್ಲ, ಆರ್ಥಿಕ ವ್ಯವಹಾರಗಳ ಬಗ್ಗೆ ತಿಳಿದಿರುವವರು ಮಾತನಾಡುತ್ತಿಲ್ಲ. ಹೀಗೆ ಮೌನ ವಹಿಸಲು ಕಾರಣವಾದರೂ ಏನು? ಎಲ್ಲ ಮುಗಿದು ಹೋದ ಮೇಲೆ ಸಲಹೆ ಕೊಟ್ಟು ಪ್ರಯೋಜನವೇನು? ಇಂತಹ ಒಂದು ಸ್ಥಿತಿ ಭಾರತದಲ್ಲಿ ನಿರ್ಮಾಣವಾಗುತ್ತಿದೆ.
 
      ಎಚ್ಚೆತ್ತುಕೊಳ್ಳಿ ಎಂದು ಮುಂದೆ ಬಂದು ಹೇಳಲಾಗದ ಸ್ಥಿತಿಯಲ್ಲಿ ಕೆಲವರು ಇರುವುದಾದರೂ ಏತಕ್ಕೆ? ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಂತಹ ಕೆಲವೇ ವ್ಯಕ್ತಿಗಳು ಈಗಿನ ಪರಿಸ್ಥಿತಿಯ ಬಗ್ಗೆ ಊಹಿಸಿದ್ದರು. ನೋಟು ಅಮಾನ್ಯೀಕರಣದ ನಂತರ ಎದುರಾಗಬಹುದಾದ ಅಪಾಯಗಳನ್ನು ಸರಿಪಡಿಸದಿದ್ದರೆ ಮುಂದೆ ಆರ್ಥಿಕ ಸ್ಥಿತಿ ಶೇ.2 ರಷ್ಟು ಕಡಿಮೆಯಾಗಬಹುದು ಎಂಬ ಎಚ್ಚರಿಕೆ ನೀಡಿದ್ದರು. ಸರ್ಕಾರ ಇಂತಹ ಕೆಲವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. 
      ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿರುವ ಉದ್ಯಮ ವಲಯಗಳಲ್ಲಿ ಬಹು ಮುಖ್ಯವಾದವುಗಳೆಂದರೆ ರಿಯಲ್ ಎಸ್ಟೇಟ್, ಆಟೋಮೊಬೈಲ್, ಟೆಕ್ಸ್‍ಟೈಲ್, ಆನ್ಸ್ಸಿಲರಿ, ಆಹಾರ ಉತ್ಪನ್ನ, ಟೆಲಿಕಾಂ ಇಂಡಸ್ಟ್ರಿ ಮುಂತಾದವು. ಆದರೆ ಇವೆಲ್ಲವೂ ಈಗ ಸಂಕಷ್ಟದ ಸ್ಥಿತಿಯಲ್ಲಿವೆ. ಪರಿಸ್ಥಿತಿ ಹೀಗಿರುವಾಗ ಜಿಡಿಪಿ ಬೆಳವಣಿಗೆ ಸಾಧ್ಯ ಹೇಗೆ? ಆರ್ಥಿಕ ವಲಯ ಚೇತರಿಸಿಕೊಳ್ಳುವುದಾದರೂ ಹೇಗೆ? ಮೇಲೆ ಹೇಳಲಾದ ಪ್ರಮುಖ ಉದ್ಯಮ ವಲಯಗಳಲ್ಲೇ ಬಹುಸಂಖ್ಯಾತ ಉದ್ಯೋಗಿಗಳು ಆಶ್ರಯ ಪಡೆದಿದ್ದಾರೆ. ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುತ್ತಾ ಬಂದ ಈ ಉದ್ಯಮ ವಲಯಗಳೇ ಈಗ ಸಂಕಟದಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ನಿರುದ್ಯೋಗದ ಪ್ರಮಾಣ ಭೀಕರವಾಗಲಿದೆ. ಇದನ್ನು ಊಹಿಸಲೂ ಆಗದು. 
     ವಾಹನೋದ್ಯಮ ಕ್ಷೇತ್ರವನ್ನೇ ತೆಗೆದುಕೊಂಡರೆ ದೇಶದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) 7.5 ರಷ್ಟು ಉತ್ಪನ್ನ ನೀಡುತ್ತಿದೆ. ಸರಿ ಸುಮಾರು 4 ಕೋಟಿ ಜನರಿಗೆ ಉದ್ಯೋಗ ನೀಡುತ್ತಿರಬಹುದೆಂದು ಅಂದಾಜಿದೆ. ಅದರ ಪಾಲು ಉತ್ಪಾದನಾ ಜಿಡಿಪಿಯ 49 ರಷ್ಟಿದೆ. ದೇಶದ ಅತಿದೊಡ್ಡ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸಹಿತ 17 ಪ್ರಮುಖ ಕಂಪನಿಗಳಲ್ಲಿ ಶೇ.ಹತ್ತರಷ್ಟು  ಮಾರಾಟ ಇಳಿಮುಖವಾಗಿದ್ದು, ಅವುಗಳಲ್ಲಿ ಕಾರ್ಮಿಕರ ಕೆಲಸ ಕಡಿತ, ವಜಾ ಇತ್ಯಾದಿ ಜಾರಿಗೆ ತರಲಾಗುತ್ತಿದೆ. ಮುಂದೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗುವ ಸೂಚನೆಗಳಿವೆ. 55 ಸಾವಿರ ಕೋಟಿ ರೂ. ಮೌಲ್ಯದ ಕಾರುಗಳು ಮಾರಾಟವಾಗದೆ ಉಳಿದುಕೊಂಡಿವೆ ಎಂದರೆ ಬಿಕ್ಕಟ್ಟಿನ ತೀವ್ರತೆ ಎಷ್ಟಿರಬಹುದು.
     ಶೇ.7 ರ ಮಟ್ಟದಲ್ಲಿ ಸಾಗುತ್ತಿದ್ದ ಭಾರತದ ತ್ರೈಮಾಸಿಕ ಜಿಡಿಪಿ ಶೇ. 5.8 ಕ್ಕೆ ಇಳಿದಿರುವುದು ಉದ್ಯಮ ಹಾಗೂ ಆರ್ಥಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 69.06 ಕ್ಕೆ ಇಳಿದಿದೆ. ದೇಶದ ಒಟ್ಟಾರೆ ವಿತ್ತೀಯ  ಕೊರತೆ 4.32 ಲಕ್ಷ ಕೋಟಿ ರೂ. ಗಳಿಗೆ ಏರಿದೆ. ಕೇಂದ್ರ ಬಜೆಟ್ ಮಂಡನೆಯ ಬಳಿಕ ಒಂದೇ ತಿಂಗಳಲ್ಲಿ ವಿದೇಶಿ ಹೂಡಿಕೆದಾರರು ಮಾರುಕಟ್ಟೆಯಿಂದ ಸುಮಾರು 21 ಸಾವಿರ ಕೋಟಿಯಷ್ಟು ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದಾರೆ. 
      ಮೂಲ ಸೌಕರ್ಯದ ಪ್ರಮುಖ ರಂಗಗಳೆಂದು ಪರಿಗಣಿತವಾಗಿರುವ ಕಲ್ಲಿದ್ದಲು, ರಸಗೊಬ್ಬರ, ನೈಸರ್ಗಿಕ ಅನಿಲ, ಕಚ್ಛಾ ತೈಲ, ಉಕ್ಕು, ಸಿಮೆಂಟ್, ವಿದ್ಯುತ್ ಮುಂತಾದವುಗಳ ಪ್ರಗತಿ ಕನಿಷ್ಠ ಮಟ್ಟಕ್ಕೆ ಕುಸಿದಿರುವುದಾಗಿ ವರದಿಗಳು ತಿಳಿಸುತ್ತವೆ. ಮುಂಬೈ ಶೇರು ಮಾರುಕಟ್ಟೆ ಕಳೆದ 5 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು ಇದು ಆತಂಕವನ್ನುಂಟುಮಾಡಿದೆ. 
ಜಿಡಿಪಿ ಎಂದರೇನು?
     ಒಟ್ಟು ದೇಶಿಯ ಉತ್ಪಾದನೆ (ಜಿಡಿಪಿ) ಇದನ್ನು ದೇಶದ ಆರ್ಥಿಕ ಪ್ರಗತಿಯ ಅಳತೆಗೋಲಾಗಿ ಪರಿಗಣಿಸಲಾಗುತ್ತದೆ. ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪಾದಿಸಲಾದ ಉತ್ಪನ್ನ ಮತ್ತು ಹೊದಗಿಸಲಾದ ಸೇವೆಗಳ ವಹಿವಾಟಿನ ಒಟ್ಟು ಹಣಕಾಸಿನ ಮೌಲ್ಯವೇ ಜಿಡಿಪಿ. ಜಿಡಿಪಿ ದರದ ಆಧಾರದ ಮೇಲೆ ಉದ್ಯಮಗಳು ತಮ್ಮ ಉತ್ಪಾದನಾ ಅಥವಾ ಸೇವೆಗಳನ್ನು ವಿಸ್ತರಿಸಲು, ಇಲ್ಲವೆ ಕಡಿತಗೊಳಿಸಲು ಇದು ಅನುವು ಮಾಡಿಕೊಡುತ್ತದೆ. ಜಿಡಿಪಿಯನ್ನು ಅಂದಾಜಿಸಲು ಪ್ರತಿ ದೇಶವು ತನ್ನಲ್ಲಿ ಲಭ್ಯವಿರುವ ವಿವಿಧ ಬಗೆಯ ನೈಸರ್ಗಿಕ ಸಂಪನ್ಮೂಲಗಳಿಂದ ಉತ್ಪತ್ತಿಯಾಗುವ ಆದಾಯ ಮತ್ತು ಉತ್ಪಾದನೆ, ಸೇವಾ ವಲಯವನ್ನು ಪರಿಗಣಿಸುತ್ತದೆ. 
 
    ಸಾಮಾನ್ಯವಾಗಿ 8 ವಿವಿಧ ಕ್ಷೇತ್ರಗಳನ್ನು ಇದಕ್ಕೆ ಪರಿಗಣಿಸಲಾಗುತ್ತದೆ. ಕೃಷಿ, ಅರಣ್ಯ ಮತ್ತು ಮೀನುಗಾರಿಕೆ, ಗಣಿಗಾರಿಕೆ ಮತ್ತು ಪೂರಕ ಚಟುವಟಿಕೆಗಳು, ಉತ್ಪಾದನೆ, ವಿದ್ಯುತ್, ಅನಿಲ, ನೀರು ಸರಬರಾಜು ಮತ್ತು ನಾಗರಿಕಾ ಸೇವೆಗಳು, ನಿರ್ಮಾಣ ಚಟುವಟಿಕೆಗಳು, ವ್ಯಾಪಾರ, ಹೋಟೆಲ್, ಸಾರಿಗೆ, ಸಂವಹನ, ಆರ್ಥಿಕ,  ರಿಯಲ್ ಎಸ್ಟೇಟ್, ಸಾರ್ವಜಿನಿಕ ಆಡಳಿತ, ರಕ್ಷಣಾ ಇಲಾಖೆ ಮತ್ತು ಇತರೆ ಸೇವೆಗಳು. ಹೀಗೆ ವಿವಿಧ ಕ್ಷೇತ್ರಗಳ ಲೆಕ್ಕಾಚಾರವನ್ನು ಪ್ರತಿ ತ್ರೈಮಾಸಿಕ ಮತ್ತು ವಾರ್ಷಿಕ ಆಧಾರದ ಮೇಲೆ ಇವುಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.
    ಮೇಲ್ಕಂಡ ವಿವಿಧ ಕ್ಷೇತ್ರಗಳು ಈಗ ಯಾವ ಸ್ಥಿತಿಯಲ್ಲಿವೆ ಎಂಬುದನ್ನು ನಾವಿಲ್ಲಿ ವಿವರಿಸಿ ಹೇಳಬೇಕಿಲ್ಲ. ಎಲ್ಲೂ ಒಂದೆರಡು ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ವಲಯ ಆರ್ಥಿಕ ಸಂಕಷ್ಟದಲ್ಲಿಯೇ ಸಾಗುತ್ತಿವೆ. ಇದರ ಪರಿಣಾಮ ಉಳಿದ ಕ್ಷೇತ್ರಗಳ ಮೇಲೂ ಬೀರುವ ದಿನಗಳು ದೂರವಿಲ್ಲ. ಸಂಬಂಧಿಸಿದ ಇಲಾಖೆಗಳು, ಸಂಸ್ಥೆಗಳು ತಕ್ಷಣದ ಪರಿಹಾರೋಪಾಯಗಳನ್ನು ಸರ್ಕಾರಕ್ಕೆ ಸಲ್ಲಿಸದಿದ್ದರೆ, ಸರ್ಕಾರ ಈ ಕಡೆ ಗಮನ ಹರಿಸದಿದ್ದರೆ ಮತ್ತಷ್ಟು ಆರ್ಥಿಕ ಮುಗ್ಗಟ್ಟನ್ನು ಈ ದೇಶ ನೋಡಬೇಕಾದೀತು. 
    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link