ವಾಹನಗಳ ಖರೀದಿ ಕ್ಷೀಣಿಸಿದೆ. ಟೆಕ್ಸ್‍ಟೈಲ್ ಮಳಿಗೆಗಳು ಈ ಹಿಂದಿನಂತೆ ಜನಜಂಗುಳಿಯಿಂದ ಕೂಡಿಲ್ಲ. ಕೆಲವು ಅಂಗಡಿಗಳಂತೂ ಬಿಕೋ ಎನ್ನುತ್ತಿವೆ. ಕೋಟಿಗಟ್ಟಲೆ ಬಂಡವಾಳ ಹೂಡಿ ಉತ್ತಮ ಲಾಭ ಗಳಿಕೆಯ ನಿರೀಕ್ಷೆಯಲ್ಲಿ ಜವಳಿ ಅಂಗಡಿ ಆರಂಭಿಸಿದ್ದ ಕೆಲವರು ಈಗ ವಿಲವಿಲ ಒದ್ದಾಡುತ್ತಿದ್ದಾರೆ.
ಬೇರಾವುದೋ ರಾಜ್ಯದ ಉದಾಹರಣೆಯಲ್ಲ. ತುಮಕೂರಿನಲ್ಲಿಯೇ ಈ ಸ್ಥಿತಿ ಇದೆ. ಆಟೋಮೊಬೈಲ್ ಕ್ಷೇತ್ರದ ವಾಹನ ಮಳಿಗೆಗಳಿಗೆ ಹೋದರೆ, ಟೆಕ್ಸ್‍ಟೈಲ್ ಮಳಿಗೆಗಳಲ್ಲಿ ವಿಚಾರಿಸಿದರೆ ನೈಜ ಪರಿಸ್ಥಿತಿ ಬಯಲಾಗುತ್ತದೆ. ಆದರೆ ಯಾರೂ ಪರಿಪೂರ್ಣವಾಗಿ ಹೇಳಿಕೊಳ್ಳುವಂತಹ ಸ್ಥಿತಿಯಲ್ಲಿಲ್ಲ. ಕಳೆದ ವರ್ಷ ಮಾರಾಟವಾಗಿದ್ದ ಸಂಖ್ಯೆಯಲ್ಲಿ ಈ ವರ್ಷ ವಾಹನಗಳ ಮಾರಾಟವಾಗಿಲ್ಲ.
ದ್ವಿಚಕ್ರ ವಾಹನಗಳಿಂದ ಹಿಡಿದು ಕಾರುಗಳವರೆಗೆ ಎಲ್ಲರಿಗೂ ಬೇಡಿಕೆ ಇದೆ. ವಾಹನಗಳನ್ನು ಖರೀದಿಸಬೇಕೆಂಬ ಆಸೆ ಇದೆ. ಆದರೆ ಸಾಧ್ಯವಾಗುತ್ತಿಲ್ಲ. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಅನೇಕರು ಇಂತಹ ನರಳಾಟದಲ್ಲಿ ಇದ್ದಾರೆ. ಸಾರ್ವಜನಿಕವಾಗಿ ನಗದು ಹರಿವು ಕಡಿಮೆಯಾಗಿರುವುದು, ಸಾಲ ಕೊಡಲು ಬ್ಯಾಂಕುಗಳು ವಿಪರೀತ ನಿಬಂಧನೆಗಳನ್ನು ಹೇರುತ್ತಿರುವುದು, ಬಡ್ಡಿ ಹೇರಿಕೆ, ವಿಮಾ ಮೊತ್ತವನ್ನು ಗಣನೀಯವಾಗಿ ಏರಿಸಿರುವುದು ಹೀಗೆ ಹಲವು ಹತ್ತು ಸಮಸ್ಯೆಗಳು ವಾಹನ ಖರೀದಿದಾರರಿಗೆ ಎದುರಾಗುತ್ತಿವೆ.
ದ್ವಿಚಕ್ರ ವಾಹನಗಳ ಉದಾಹರಣೆಯನ್ನೇ ತೆಗೆದುಕೊಂಡರೆ ಒಂದು ಆಕ್ಟೀವಾ ದ್ವಿಚಕ್ರ ವಾಹನಕ್ಕೆ 70 ಸಾವಿರ ರೂ.ಗಳಿದ್ದರೆ, 5 ಸಾವಿರ ವಿಮಾ ಪಾಲಿಸಿ ಸೇರಿದರೆ 75 ಸಾವಿರ ರೂ.ಗಳಾಗುತ್ತದೆ. 70 ಸಾವಿರ ರೂ.ಗಳಿಗೆ ಸಿಗುತ್ತಿದ್ದ ವಾಹನವನ್ನು ದಿಢೀರ್ 75 ಸಾವಿರ ರೂ.ಗಳಿಗೆ ಏರಿಸಿದ್ದಾರೆ ಎಂಬ ಲೆಕ್ಕಾಚಾರ ಗ್ರಾಹಕನದ್ದು. ಆದರೆ ಸರ್ಕಾರ ವಿಮಾ ಕಂತು ಹೆಚ್ಚಳ ಮಾಡಿರುವುದು ಬಹಳ ಜನರಿಗೆ ತಿಳಿಯಲಿಕ್ಕಿಲ್ಲ. ಹೀಗೆ ಒಂದಕ್ಕೊಂದು ಸೇರಿಕೊಂಡು ವಾಹನಗಳ ಬೆಲೆಯೂ ದುಬಾರಿಯಾಗಿ ಜನರ ಬಳಿ ಹಣವೂ ಕಡಿಮೆಯಾಗಿ ವಾಹನೋದ್ಯಮ ತತ್ತರಿಸುತ್ತಿದೆ. ಯಾವ ಮೋಟಾರ್ಸ್‍ಗಳಿಗೆ ಹೋದರೂ ಕಳೆದ ಬಾರಿಯ ವ್ಯವಹಾರ ಈ ಬಾರಿ ಆಗಿಲ್ಲ.
ಅತಂತ್ರದಲ್ಲಿ ಸಣ್ಣ ಕೈಗಾರಿಕೆಗಳು
ತುಮಕೂರು ನಗರ ಸೇರಿದಂತೆ ಹೊರವಲಯದಲ್ಲಿ ನೂರಾರು ಸಣ್ಣ ಕೈಗಾರಿಕೆಗಳಿವೆ. ಸಾವಿರಾರು ಮಂದಿ ಇಲ್ಲಿ ದುಡಿಯುತ್ತಿದ್ದಾರೆ. ಅಂತರಸನಹಳ್ಳಿ ಕೈಗಾರಿಕಾ ಪ್ರದೇಶ ಸೇರಿದಂತೆ ಆ ಭಾಗದ ಕೆಲವು ಕಡೆ ಘಟಕಗಳು ಈ ಹಿಂದಿನಂತೆ ಸುಸ್ಥಿತಿಯಲ್ಲಿಲ್ಲ. ಅಲ್ಲೆಲ್ಲ ಹೊಂದಾಣಿಕೆಯ ವಾತಾವರಣ ನಿಗದಿಯಾಗಿದೆ. ಆಡಳಿತ ಮಂಡಳಿ ಮತ್ತು ಕೆಲಸಗಾರರ ನಡುವೆ ಕೆಲವು ಒಪ್ಪಂದಗಳು ಆಗಿವೆ. ಅದೇ ರೀತಿಯಲ್ಲಿ ಕೆಲಸ ಕಾರ್ಯಗಳು ನಡೆದುಕೊಂಡು ಹೋಗುತ್ತಿವೆ.
ಇಂಡೋಸ್ವಿಸ್ ಕಾರ್ಖಾನೆ ಸುಮಾರು 35 ವರ್ಷಗಳಿಗೂ ಹಳೆಯದು. ಸಾವಿರಾರು ಜನರು ಇಲ್ಲಿ ತಮ್ಮ ಬದುಕು ಕಟ್ಟಿಕೊಂಡು ಬಂದಿದ್ದಾರೆ. ಇತ್ತೀಚೆಗೆ ಆರ್ಡರ್ ಬರುತ್ತಿಲ್ಲ. ಈ ಕಾರ್ಖಾನೆಯ ನೌಕರರು ಈಗ ಆತಂಕದಲ್ಲಿದ್ದಾರೆ. ಅಂದರೆ, ಕೆಲವು ಸೌಲಭ್ಯಗಳು ನಿಂತು ಹೋಗಿವೆ. ಕಿರ್ಲೋಸ್ಕರ್ ಮೋಟಾರ್ ಕಾರ್ಖಾನೆಯಲ್ಲಿಯೂ ಇದೇ ಪರಿಸ್ಥಿತಿ. ಇಲ್ಲಿಯೂ ಆರ್ಡರ್ ಕಡಿಮೆಯಾಗಿ ಮೂರು ತಿಂಗಳಿಗೊಮ್ಮೆ ವೇತನ ಪಾವತಿಸಲಾಗುತ್ತಿದೆ. ಫಿಟ್‍ವೆಲ್ ಕಾರ್ಖಾನೆಯಲ್ಲಿ ಆಗಸ್ಟ್ 28 ರಿಂದ ಸೆಪ್ಟೆಂಬರ್ 3ರವರೆಗೆ ರಜೆ ಘೋಷಿಸಲಾಗಿದೆ. ಕೆಲವು ಕಾರ್ಖಾನೆಗಳು ಲೇಆಫ್ ಘೋಸಿಸಿವೆ.
ಉದ್ಯೋಗಿಗಳಿಗೆ ಸಾಮಾಜಿಕ ಸುರಕ್ಷತೆ ಇಲ್ಲದಂತಾಗಿದೆ. ಇಂಜಿನಿಯರಿಂಗ್ ವ್ಯಾಸಂಗ ಮಾಡಿಕೊಂಡು ಬಂದ ಉದ್ಯೋಗಿಗಳು ಕೇವಲ 10 ರಿಂದ 15 ಸಾವಿರ ರೂ. ಸಂಬಳಕ್ಕೆ ದುಡಿಯುವಂತಾಗಿದೆ. ಸರ್ಕಾರದ ನೀತಿಗಳನ್ನು ಮನಗಂಡ ಉದ್ಯಮ ಪತಿಗಳು ಯಾವುದೇ ಹೊಣೆಗಾರಿಕೆ ನಮ್ಮ ಮೇಲೆ ಬಾರದಿರಲೆಂದು ಉದ್ಯೋಗಿಗಳನ್ನು ಟ್ರೈನಿಗಳಾಗಿ ತೆಗೆದುಕೊಳ್ಳುತ್ತಿದ್ದಾರೆ. ಇವರಿಗೆ ಯಾವುದೇ ಸೇವಾ ಭದ್ರತೆ ಇಲ್ಲ. ಯಾವಾಗ ಬೇಕಾದರೂ ತೆಗೆದು ಹಾಕಬಹುದು. ವರ್ಷಕ್ಕೊಮ್ಮೆ ತೆಗೆದು ಹಾಕುವ, ಮತ್ತೆ ಸೇರಿಸಿಕೊಳ್ಳುವ ಪ್ರವೃತ್ತಿ ಉದ್ಯಮ ವಲಯದಲ್ಲಿ ಹೆಚ್ಚಾಗಿದೆ. ಹೀಗಿರುವಾಗ ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕಿ ಮತ್ತಷ್ಟು ಸಾಮಾಜಿಕ ಅಭದ್ರತೆ ಕಾಡತೊಡಗಿದೆ. 2008 ರಿಂದಲೂ ನಾವು ಈ ಬಗ್ಗೆ ಎಚ್ಚರಿಸುತ್ತಲೇ ಬಂದೆವು. ಆದರೆ ಸರ್ಕಾರಗಳು ಗಮನ ಹರಿಸಲಿಲ್ಲ. ಪರಿಣಾಮವಾಗಿ ಇಂದು ಉದ್ಯೋಗಧಾತರಷ್ಟೇ ಅಲ್ಲ, ಉದ್ಯೋಗಿಗಳೂ ಸಹ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಕಾರ್ಮಿಕ ಮುಖಂಡ ಎನ್.ಕೆ.ಸುಬ್ರಹ್ಮಣ್ಯಂ.
ಇನ್ನು ಕೆಲವು ಕೈಗಾರಿಕೆಗಳು ಸುಸ್ಥಿತಿಯಲ್ಲಿವೆ. ಆದರೆ ದೇಶಾದ್ಯಂತ ಎದ್ದಿರುವ ಆರ್ಥಿಕ ಹಿಂಜರಿತದ ಭೀತಿಯನ್ನು ಮುಂದಿಟ್ಟುಕೊಂಡು ಕಾರ್ಮಿಕರನ್ನು ಹೆದರಿಸುವ ಪ್ರವೃತ್ತಿಯೂ ಹೆಚ್ಚುತ್ತಿದೆ. ಇಂತಹ ಗಂಡಾಂತರಗಳಿಂದ ಪಾರುಮಾಡಲು ಸರ್ಕಾರಗಳು ಮುಂದಾಗಬೇಕು. ಉದ್ಯೋಗಿಗಳಿಗೂ ರಕ್ಷಣೆ ಇರಬೇಕು. ಬೀದಿಗೆ ಬಿದ್ದ ಅವರು ಏನಾಗಬೇಕು. ಅವರೂ ಮನುಷ್ಯರಲ್ಲವೆ? ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಉದ್ಯೋಗಿಗಳ ಕುಟುಂಬಗಳು ಅದೆಷ್ಟು ನರಕ ಅನುಭವಿಸಬೇಕು ಎನ್ನುತ್ತಾರೆ ಸುಬ್ರಹ್ಮಣ್ಯಂ.
ತುಮಕೂರಿನಲ್ಲಿ ಕೆಲವು ಗಾರ್ಮೆಂಟ್ಸ್‍ಗಳು ಅನೇಕ ಮಹಿಳೆಯರಿಗೆ ಉದ್ಯೋಗ ನೀಡಿವೆ. ಇದರಲ್ಲಿ ಸ್ಕಾರ್ಟ್ ಗಾರ್ಮೆಂಟ್ಸ್ ಸಹ ಒಂದಾಗಿತ್ತು. ಆದರೆ ಇದು ಬಾಗಿಲು ಮುಚ್ಚಿ ಒಂದು ವರ್ಷವಾಗುತ್ತಾ ಬಂದಿದೆ. ಈವರೆಗೂ ಅಲ್ಲಿನ ಕಾರ್ಮಿಕರಿಗೆ ಕೆಲವು ತಿಂಗಳ ವೇತನ ಪಾವತಿಸಿಲ್ಲ. ಬಾಕಿ ವೇತನ ಪಾವತಿಗಾಗಿ ಮಹಿಳೆಯರು ಕಾರ್ಮಿಕ ಇಲಾಖೆ, ಜಿಲ್ಲಾಡಳಿತ ಸೇರಿದಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿಗಳ ಮೇಲೆ ಅರ್ಜಿ ಬರೆದು ಹೋರಾಡುತ್ತಲೇ ಇದ್ದಾರೆ.
ಆಟೋಮೋಬೈಲ್ ಕ್ಷೇತ್ರವಿರಲಿ ಅಥವಾ ಇತರೆ ಯಾವುದೇ ಉದ್ಯೋಗದ ಕ್ಷೇತ್ರವಿರಲಿ ದೇಶದ ಉದ್ದಗಲದಲ್ಲಿ ಎದುರಾಗಿರುವ ಆರ್ಥಿಕ ಹಿಂಜರಿತದ ಪರಿಣಾಮ ಇಲ್ಲಿಯೂ ಉಂಟಾಗಬಹುದು. ತಕ್ಷಣಕ್ಕೆ ಕೆಲವು ಕ್ಷೇತ್ರಗಳಲ್ಲಿ ಯಾವುದೇ ಆತಂಕಗಳು ಕಂಡುಬರುತ್ತಿಲ್ಲ. ಡಿಸೆಂಬರ್ ವೇಳೆಗೆ ವ್ಯಾಪಾರ ವಹಿವಾಟು ಚೇತರಿಸಿಕೊಳ್ಳದೇ ಹೋದರೆ ಸಂಕಟಕ್ಕೆ ಸಿಲುಕುವ ಪರಿಸ್ಥಿತಿ ಬರಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ