ತುಮಕೂರುವಿಶೇಷ ವರದಿ : ರಾಕೇಶ್.ವಿ
ತುಮಕೂರು ನಗರವನ್ನು 2016 ಅಕ್ಟೋಬರ್‍ನಲ್ಲಿ ಸ್ಮಾರ್ಟ್‍ಸಿಟಿ ಆಯ್ಕೆ ಘೋಷಣೆ ಮಾಡಲಾಯಿತು. ನಂತರ ನಡೆದ ವಿವಿಧ ಬೆಳವಣಿಗೆಗಳ ಮೂಲಕ ನಗರದಲ್ಲಿ ಹಲವು ಸಭೆಗಳನ್ನು ನಡೆಸಿ ಕಾಮಗಾರಿ ಮಾಡುವ ಬಗ್ಗೆ ಚರ್ಚೆಗಳನ್ನು ನಡೆಸಲಾಯಿತು. ಸ್ಮಾರ್ಟ್ ರೋಡ್‍ಗಳ ಅಭಿವೃದ್ಧಿ ವಿಚಾರ ಬಂದಾಗ ಮೊದಲು ಫೀಲ್ಡ್ ಮಾರ್ಷಲ್ ಕಾರಿಯಪ್ಪ ರಸ್ತೆಯನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿ ನಂತರ ಇತರೆ ರಸ್ತೆಗಳನ್ನು ಕೈಗೆತ್ತಿಕೊಳ್ಳಲಾಗುವ ಬಗ್ಗೆ ನಿರ್ಧರಿಸಲಾಗಿತ್ತು. ಅದರ ಪ್ರಕಾರವೇ ಕಾಮಗಾರಿಗಳು ಆರಂಭವಾದವು.
2018ರ ಡಿಸೆಂಬರ್ ತಿಂಗಳಿನಲ್ಲಿ ಆರಂಭವಾದ ಜನರಲ್ ಕಾರಿಯಪ್ಪ ರಸ್ತೆಯ (ಎಫ್‍ಎಂಸಿ ರಸ್ತೆ ) ಅಭಿವೃದ್ಧಿ ಕಾಮಗಾರಿ ಸುಮಾರು ಒಂದೂವರೆ ವರ್ಷ ಕಳೆಯುತ್ತಾ ಬಂದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲದಿರುವುದು ವಿಪರ್ಯಾಸ. ಪ್ರಾರಂಭದಲ್ಲಿ ನಡೆದ ಜಿಲ್ಲಾ ಮಟ್ಟದ ಸಭೆಗಳಲ್ಲಿ ಮೊದಲು ಆಯ್ಕೆ ಮಾಡಿಕೊಂಡ ರಸ್ತೆಯನ್ನು ಪೂರ್ಣಗೊಳಿಸಿದ ನಂತರವೆ ಇತರೆ ರಸ್ತೆಗಳನ್ನು ಅಭಿವೃದ್ಧಿ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಇಂದು ಆಯ್ಕೆ ಮಾಡಿಕೊಂಡಿದ್ದ ಕಾರಿಯಪ್ಪ ರಸ್ತೆ ಹೊರತು ಪಡಿಸಿ ಉಳಿದ ಸಾಕಷ್ಟು ರಸ್ತೆಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಅವು ಸಹ ಆಮೆಗತಿಯಲ್ಲಿ ನಡೆಯುತ್ತಿದ್ದು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ಮಾರ್ಟ್ ಸಿಟಿಯಿಂದ ಅಳವಡಿಸಲಾದ ಮಾಹಿತಿ ಫಲಕದಂತೆ ಕೆ.ಆರ್.ಬಡಾವಣೆಯಿಂದ ಗ್ರಾಮಾಂತರ ಪೊಲೀಸ್ ಠಾಣೆವರೆಗೆ 530 ಮೀಟರ್ ಉದ್ದದ ರಸ್ತೆ ಅಭಿವೃದ್ಧಿಗೆ ಬರೊಬ್ಬರಿ 363.37 ಲಕ್ಷ ವೆಚ್ಚ ಮಾಡಲಾಗಿದೆ. ಶ್ರೀ ಶ್ರೀನಿವಾಸ ಕನ್‍ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್‍ನವರು ಈ ಕಾಮಗಾರಿ ಮಾಡುತ್ತಿದ್ದು, 2018ರ ಡಿಸೆಂಬರ್ 05 ರಿಂದ 12 ತಿಂಗಳ ಕಾಲಾವಧಿ ಪ್ರಕಾರ 2019ರ ಡಿಸೆಂಬರ್ 05ಕ್ಕೆ ಕಾಮಗಾರಿ ಮುಗಿಯಬೇಕಿತ್ತು. ಆದರೆ ಇನ್ನೂ ಅಲ್ಲಿನ ರಸ್ತೆ ಯಥಾ ಸ್ಥಿತಿಯಲ್ಲಾದರೂ ಇರದೆ ಹಳ್ಳಕೊಳ್ಳಗಳಿಂದ ತಗ್ಗುಗುಂಡಿಗಳಿಂದ ಕೂಡಿ ಸಮಸ್ಯೆ ಉಂಟಾಗಿದೆ.
ಯಾವುದೇ ಕಾಮಗಾರಿ ಮಾಡುವ ಮುನ್ನ ಆ ಕಾಮಗಾರಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು, ಎಂಜಿನಿಯರ್‍ಗಳು ಜೊತೆಗೆ ಪಿಎಂಸಿಯವರು ಚರ್ಚೆ ಮಾಡಿ ಯೋಜನೆ ರೂಪಿಸಿರುತ್ತಾರೆ. ಅದು ಒಂದು ವರ್ಷದಲ್ಲಿ ಮುಗಿಯಬೇಕಾದರೆ ಅದಕ್ಕೆ ಎಷ್ಟು ಜನ ಕೆಲಸ ಮಾಡಬೇಕು. ಹೇಗೆ ಕಾರ್ಯ ನಿರ್ವಹಿಸಬೇಕು ಎಂದೆಲ್ಲಾ ಯೋಚನೆ ಮಾಡಿರುತ್ತಾರೆ. ಆದರೂ ಸಮಯ ಮುಗಿದರೂ ಇನ್ನೂ ಕಾಮಗಾರಿ ಮುಗಿಯಲಿಲ್ಲ ಎಂದಾದರೆ ಹೇಗೆ..?
ಸುಮಾರು ಒಂದೂವರೆ ವರ್ಷದ ಹಿಂದೆ ಪ್ರಾರಂಭವಾದ ಕಾಮಗಾರಿ ಇಂದಿಗೂ ಪೂರ್ಣಗೊಳ್ಳದೆ ಇದ್ದು, ಸದರಿ ನಡೆಯುತ್ತಿರುವ ಕಾಮಗಾರಿಯೂ ಸಹ ಅವೈಜ್ಞಾನಿಕ ಎನ್ನುವ ಮಾತುಗಳು ವ್ಯಾಪಕವಾಗಿದ್ದು, ಈ ಬಗ್ಗೆ ಯಾವುದೇ ಸ್ಪಷ್ಟತೆ ಇನ್ನೂ ಕಂಡುಬರುತ್ತಿಲ್ಲ. ಇದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ. ಇಷ್ಟು ದಿನಗಳ ಕಾಲ ನಿಲ್ಲಿಸಿದ್ದ ಕಾಮಗಾರಿ ಇದೀಗ ಏಕಾಏಕಿ ತರಾತುರಿಯಲ್ಲಿ ಕಾಮಗಾರಿ ನಡೆಸುತ್ತಿರುವುದಕ್ಕೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ.
ಈ ಹಿಂದೆ ನಗರಕ್ಕೆ ಪ್ರಧಾನಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಎರಡೆ ದಿನದಲ್ಲಿ ಬಿಎಚ್ ರಸ್ತೆಯನ್ನು ಅಭಿವೃದ್ಧಿ ಮಾಡಲಾಯಿತು. ಅದಕ್ಕು ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನೀಡಿದ್ದ ಸಂದರ್ಭದಲ್ಲಿ ಉಪ್ಪಾರಹಳ್ಳಿ ಮೇಲ್ಸೇತುವೆ ಬಳಿ ವೇಗವಾಗಿ ರಸ್ತೆಯನ್ನು ಅಭಿವೃದ್ಧಿ ಮಾಡಲಾಯಿತು. ಹಾಗಾದರೆ ಈಗ ಈ ರಸ್ತೆಗೆ ಮತ್ಯಾವ ಗಣ್ಯ ವ್ಯಕ್ತಿ ಆಗಮಿಸಲಿದ್ದಾರೆ, ಏಕೆ ಶರವೇಗದಲ್ಲಿ ಕಾಮಗಾರಿ ಮಾಡಿಸುತ್ತಿದ್ದಾರೆ ಎಂಬುದು ಹಲವರ ಪ್ರಶ್ನೆಯಾಗಿದೆ.
ಇತ್ತೀಚೆಗಷ್ಟೇ ನಗರದ 15ನೇ ವಾರ್ಡ್ ಎಸ್‍ಎಸ್‍ಪುರಂನಲ್ಲಿ ನಡೆದ ಕಾಮಗಾರಿಯಿಂದ ತೆಗೆಯಲಾಗಿದ್ದ ಹಳ್ಳಗಳಿಂದ ವಿವಿಧ ಸಮಸ್ಯೆಗಳು ಎದುರಾಗುತ್ತಿವೆ ಎಂಬ ದೂರಿನ ಮೇರೆಗೆ ಗುತ್ತಿಗೆದಾರರು ತರಾತುರಿಯಲ್ಲಿ ಅಗೆಯಲಾದ ಗುಂಡಿಗೆ ಮಣ್ಣನ್ನು ಮುಚ್ಚಿ ಇನ್ನೊಂದು ಕಡೆ ಹಳ್ಳ ತೋಡುವ ಕೆಲಸ ಮಾಡಿದ್ದರು. ಇದರಿಂದ ಆ ಪ್ರದೇಶದಲ್ಲಿ ಅಳವಡಿಸಲಾದ ಕುಡಿಯುವ ನೀರಿನ ಪೈಪುಗಳಿಗೆ ಹಾನಿಯುಂಟಾಗಿತ್ತು.
ಇದೀಗ ಇದೇ ರೀತಿಯ ಸಮಸ್ಯೆಗಳು ಬಾರ್‍ಲೈನ್ ರಸ್ತೆಯಲ್ಲಿ ಉದ್ಭವವಾಗುವವೇ ಎಂಬ ಆತಂಕ ಎದುರಾಗಿದೆ.ಕಳೆದ 2019ರ ಜನವರಿ ತಿಂಗಳಲ್ಲಿ ಯುಟಿಲಿಟಿ ಚೇಂಬರ್‍ಗಳನ್ನು ಮಾಡಲಾಯಿತು. ನಗರದಾದ್ಯಂತ ಮಾಡಿದ ಚೇಂಬರ್‍ಗಳ ಪೈಕಿ ಜನರಲ್ ಕಾರಿಯಪ್ಪ ರಸ್ತೆಯಲ್ಲಿ 11 ಕಡೆಯಲ್ಲಿ ಚೇಂಬರ್‍ಗಳನ್ನು ಮಾಡಲಾಗಿದೆ. ಅವುಗಳಿಗೆ ಸರಿಯಾದ ರೀತಿಯಲ್ಲಿ ಕ್ಯೂರಿಂಗ್ ಮಾಡಿಲ್ಲ. ಎತ್ತರವೂ ಕೂಡ ಒಂದೊಂದು ಕಡೆಯಲ್ಲಿ ಒಂದೊಂದು ಅಳತೆಯಲ್ಲಿ ನಿರ್ಮಾಣ ಮಾಡಲಾಗಿದೆ. ಇದರಿಂದ ವಾಹನ ಸವಾರರು ಓಡಾಡಲು ಕಿರಿಕಿರಿ ಉಂಟಾಗುತ್ತಿದೆ.
ಅದನ್ನು ಹೇಗೆ ಸಮತಟ್ಟಾಗಿ ಮಾಡಿ ರಸ್ತೆ ಅಭಿವೃದ್ಧಿ ಮಾಡುತ್ತಾರೆ ಎಂಬ ಪ್ರಶ್ನೆಯು ಕಾಡುತ್ತಿದೆ. ಆರಂಭದಲ್ಲಿ ರೂಪಿಸಲಾದ ಯೋಜನೆಯಂತೆ ಕಾಮಗಾರಿ ಮಾಡುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲವೇಕೆ..? ಯೋಜನೆಯಲ್ಲಿ ರೂಪಿಸಿದಂತೆ ಪಾರ್ಕಿಂಗ್ ವ್ಯವಸ್ಥೆ, ಕುಳಿತುಕೊಳ್ಳಲು ಆಸನದ ಸೌಲಭ್ಯ, ಗಿಡ ನೆಡುವುದು, ವಿದ್ಯುತ್ ಸೌಲಭ್ಯ ಹಾಗೂ ಚರಂಡಿ ಇಷ್ಟೆಲ್ಲಾ ಮಾಡಲು ಎಷ್ಟು ಜಾಗ ಬೇಕಾಗುತ್ತದೆ. ಇದೆಲ್ಲಾ ಪ್ರಾಯೋಗಿಕವಾಗಿ ಮಾಡಿದಾಗ ಅದು ಎಷ್ಟರ ಮಟ್ಟಿಗೆ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ. ಇದೆಲ್ಲ ಸಾಧ್ಯವೇ..? ಈ ಬಗ್ಗೆ ಯೋಚಿಸಲಾಗಿದೆಯೇ..?
ಕಾಮಗಾರಿ ಪ್ರಾರಂಭ ಮಾಡುವ ಮುನ್ನ ನಡೆದ ಸಭೆಯ ವೇಳೆಯಲ್ಲಿ ನಾನು ಕೂಡ ಭಾಗವಹಿಸಿದ್ದೆ. ಅಂದು ಜನಾಭಿಪ್ರಾಯ ಕೇಳಿದಾಗ ನಮ್ಮ ಅನುಭವಕ್ಕೆ ತಕ್ಕಂತೆ ಸಲಹೆಗಳನ್ನು ನೀಡಲಾಗಿತ್ತು. ಆದರೆ ಅದ್ಯಾವುದನ್ನು ಲೆಕ್ಕಿಸದೆ ಅವರ ಯೋಜನೆಯಂತೆ ಕಾಮಗಾರಿ ಮಾಡುತ್ತಿದ್ದಾರೆ. ಇವರು ಮಾಡುವ ಕಾಮಗಾರಿಗಳು ಜನರಿಗೆ ಉಪಯೋಗವಾಗಬೇಕೆ ಹೊರತು ಕಿರಿಕ್ ಉಂಟುಮಾಡಬಾರದು.
-ಸಿದ್ದಲಿಂಗಪ್ಪ, ಸ್ಥಳೀಯ ನಿವಾಸಿ
ಕಾಮಗಾರಿ ಮಾಡುವುದರ ಬಗ್ಗೆ ಕೇವಲ ಒಂದು ಕಡೆ ಫಲಕವನ್ನು ಹಾಕಿದರು. ಅದರಲ್ಲಿ ನೀಡಿದ ಗಡುವು ಮುಗಿದು ಹೋಗಿದೆ. ಅದರ ಮುಂದಿನ ನಡೆ ಏನು ಎಂಬುದು ಯಾರಿಗೂ ಮಾಹಿತಿ ಇಲ್ಲ. ಪ್ರಾರಂಭದಲ್ಲಿ ರಾಮನ ದೇವಸ್ಥಾನದ ಬಳಿ ಬಂಡೆಗಲ್ಲು ಇದ್ದ ಕಾರಣಕ್ಕೆ ಕಾಮಗಾರಿ ತಡವಾಯಿತು ಎನ್ನುತ್ತಾರೆ. ಉಳಿದ ಭಾಗ ಏಕೆ ತಡವಾಯಿತು ಎಂದು ಹೇಳು ವುದಿಲ್ಲ . ಕಾಮಗಾರಿ ಮಾಡುವಾಗ ಸಂಬಂಧಿಸಿದ ಇಲಾಖೆಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡ ಬೇಕಲ್ಲವೇ..?
ಜಿ.ಕೆ.ಶ್ರೀನಿವಾಸ್, ಸ್ಥಳೀಯ ನಿವಾಸಿ
ಮುಂದುವರೆಯುವುದು…..
![](https://prajapragathi.com/wp-content/uploads/2020/02/Untitled-3-2.gif)