ಕಣ್ಮರೆಯಾಯಿತು ಒತ್ತುವ ಬೋರ್‍ವೆಲ್. ಹಳ್ಳಿ ಹಳ್ಳಿಗೆ ಬಂತು ಟ್ಯಾಂಕರ್ ನೀರು. ಕಳೆದ ಇಪತ್ತು ವರ್ಷಗಳಲ್ಲಿ ಹವಾಮಾನ ವೈಪರಿತ್ಯದಿಂದ ಇದ್ದಕ್ಕೆ ಇದ್ದಂತೆ ನಮ್ಮ ಕಣ್ಮುಂದೆ ಬದಲಾದ ಜಗತ್ತಿನಂತೆ, ಪ್ರಕೃತಿಯಲ್ಲಿ ಕೂಡ ಒಂದಲ್ಲ ಒಂದು ರೀತಿ ಅವಘಡಗಳು ಸೃಷ್ಟಿಯಾಗುತ್ತಿರುವುದು ವಿಷಾದಕರ ಸಂಗತಿ. ಕಳೆದ ನಾಲ್ಕು ತಿಂಗಳ ಹಿಂದೆ ನಡೆದಂತಹ ಘಟನೆ ಮೈ ಝುಂ ಎನ್ನಿಸುತ್ತದೆ.
ಕೊಡಗಿನ ರುದ್ರ ನರ್ತನದಂತೆ ಬಂದ ಮಹಾ ಮಳೆಗೆ ಇಡೀ ರಾಜ್ಯದ ಅತಿ ಬುದ್ದಿವಂತರ ಕ್ಷೇತ್ರವೆಂದೇ ಹೆಸರಾದ ಊರು ಗುರುತಿಸಲಾಗದಂತಾಗಿ ಇಡಿ ಜಿಲ್ಲೆಯೇ ನೀರಿನಲ್ಲಿ ಕೊಚ್ಚಿ ಹೋಗಿರುವುದು ನೋವಿನ ಸಂಗತಿ. ಅಲ್ಲಿನ ಮನೆ ಮಠ, ಪಶು, ಪಕ್ಷಿಗಳು, ಜನಗಳು ನೀರಿಗೆ ಆಹುತಿಯಾಗಿರುತ್ತಾರೆ. ಸಂಬಂಧಿಕರನ್ನು ಕಳೆದಕೊಂಡವರ ಗೋಳು ಮುಗಿಲು ಮುಟ್ಟಿತ್ತು. ಇನ್ನು ಕೆಲವರು ಅಪಾಯವಾಗದಂತಹ ಸ್ಥಳಕ್ಕೆ ತೆರಳಿ ಒಬ್ಬರನ್ನೊಬ್ಬರು ರಕ್ಷಣೆ ಮಾಡಿಕೊಂಡು ಜೀವ ಉಳಿಸಿಕೊಂಡಿರುತ್ತಾರೆ.
ರಾಜ್ಯದ ದಾನಿಗಳ ಸಹಾಯದಿಂದ ಮತ್ತು ಸರಕಾರದ ನೆರವಿನಿಂದ ಪುನಃ ಜಿಲ್ಲೆ ಚೇತರಿಸಿಕೊಳ್ಳಲು ಹರಸಾಹಸ ಪಡುತ್ತಿರುವುದು ನಮಗೆ ನಿಮಗೆ ಗೊತ್ತಿರುವ ವಿಚಾರವಾಗಿದೆ. ಇಷ್ಟೆಲ್ಲ ವಿಷಯ ಏಕೆ ಎಂದು ಕೇಳಬಹುದು. ಸ್ನೆಹಿತರೆ ಒಂದು ಭಾಗದಲ್ಲಿ ಅತಿಯಾದ ಮಳೆಯಿಂದ ಹಾನಿಯಾದರೆ, ರಾಜ್ಯದ ಬಹು ಭಾಗದಲ್ಲಿ ಇಂದು ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿ ಕೆಲವೆಡೆ ಸರಕಾರ ಜನವಾಸಿಗರಿಗೆ ಟ್ಯಾಂಕರ್ ಮೂಲಕ ನೀರು ಒದಗಿಸುವಂತ ಪರಿಸ್ಥಿತಿ ಎದುರಾಗಿದೆ.
ಆದರೆ ಪಶು, ಪಕ್ಷಿ, ಪ್ರಾಣಿಗಳಿಗೆ ನೀರಿನ ಬವಣೆ ನೀಗದಂತಾಗಿದೆ. ಕಳೆದ ದಿನಮಾನಗಳ ಹಿಂದೆ ಗ್ರಾಮದ ಪ್ರತಿ ಹಳ್ಳಿಗಳಲ್ಲಿ ಕೈ ಪಂಪು ಬೋರ್ ವೆಲ್ ನೀರು ಸದ್ದು ಮಾಡಿ ಜನರ ಆರೋಗ್ಯ ಕಾಪಾಡುವುದರ ಜೊತೆಗೆ ದಿನದ ಇಪತ್ತು ನಾಲ್ಕು ತಾಸು ಅವಶ್ಯಕತೆಗೆ ತಕ್ಕಂತೆ ನೀರು ಜೀವಜಲದಂತೆ ಸುಲಭವಾಗಿ ಜನರಿಗೆ ವರದಾನವಾಗಿ ದೊರೆಯುತ್ತಿತ್ತು.
ನೀರು ಬೇಕಾದರೆ ವ್ಯಾಯಾಮ ಮಾಡು ಎನ್ನುವ ರೀತಿ ಒತ್ತುವ ಬೋರಿನ ಕೈ ಪಂಪು ಕೆಳಗೆ ಮೇಲೆ ಜಗ್ಗುವುದರಿಂದ ಪ್ರತಿ ಮನುಷ್ಯರಿಗೆ ರಕ್ತ ಸಂಚಲನ ಹೆಚ್ಚಾಗಿ ಆರೋಗ್ಯವೇ ಭಾಗ್ಯ ಎನ್ನುವಂತೆ ಆರೋಗ್ಯವಾಗಿದ್ದ ಜನರು ಇಂದು ಕುಡಿಯುವ ನೀರಿನ ಬವಣೆ ಅನುಭವಿಸುತ್ತಿದ್ದಾರೆ. ಜಗ್ಗುವ ಬೋರ್ ಕಣ್ಮರೆಯಾಗಿ ಹಳ್ಳಿ ಹಳ್ಳಿಗೂ ಟ್ಯಾಂಕರ್ ನೀರು ಬಂತು. ಮನೆಗೆ ಇಂತಿಷ್ಟು ಬಿಂದಿಗೆ ನೀರು ಹಿಡಿದುಕೊಳ್ಳಿ ಎಂದು ಜನರೆ ಆದೇಶ ಮಾಡಿ ಕೊಂಡು, ಹಂಚಿ ಕುಡಿಯುವ ಕಾಲವು ಬಂತು. ಇದರ ಮಧ್ಯೆ ತಾರತಮ್ಯ ದೋರಣೆಯು ಬಂತು.
ಒಂದು ಬೀದಿಗೆ ಹೆಚ್ಚಿಗೆ ನೀರು, ಇನ್ನೊಂದು ಬೀದಿಗೆ ಕಡಿಮೆ ನೀರು ಬಳಸಲು ನೀರಿಲ್ಲ. ಸರಕಾರ ಬಂತು, ಹೊಸ ಹೊಸ ಯೋಜನೆ ತಂತು. ಶೌಚಾಲಯಕ್ಕಂತೂ ಬಳಸಲು ನೀರಿಲ್ಲ. ಇಂತಹ ಇಕ್ಕಟ್ಟಿನ ಸ್ಥಿತಿಯಲ್ಲಿ ಜನ ಜೀವನ ಅಡಗಿದೆ. ಇನ್ನು ಸರಕಾರ ನಿರ್ಮಿಸಿರುವ ಶುದ್ದ ಕುಡಿಯುವ ನೀರಿನ ಘಟಕಗಳಂತೂ ಕೆಲವೆಡೆ ಕಾರ್ಯ ನಿರ್ವಹಿಸಿದರೆ ಕೆಲವೆಡೆ ಕೆಟ್ಟು ನಿಂತಿವೆ. ಕೆಲವೆಡೆ ಎಷ್ಟೆ ಕೊಳವೆಬಾವಿ ಕೊರೆಸಿದರೂ ನೀರು ಸಿಗದಂತಾಗಿ ಅಂತರ್ಜಲ ಮಟ್ಟ ಕುಸಿದಿದೆ.
ಮನುಷ್ಯ ತಾನೇ ಗುಂಡಿ ತೋಡಿಕೊಂಡು ಅದರಲ್ಲಿ ಕುಳಿತು ಮೇಲೆ ಮಣ್ಣು ಎಳೆದು ಕೊಂಡಂತಾಗಿದೆ. ಮನುಷ್ಯನ ಅತಿಯಾಸೆಯಿಂದ ಭೂಗರ್ಭದ ಸಂಪತ್ತಾದ ಮರಳು, ಇನ್ನಿತರೆ ಖನಿಜ ಸಂಪತ್ತನ್ನು ಬೇಕಾ ಬಿಟ್ಟಿಯಾಗಿ ಲೂಟಿ ಮಾಡಿ, ಭೂಮಿ ತಾಯಿ ಒಡಲು ಬಗೆದು, ದೊಡ್ಡ ದೊಡ್ಡ ರೆಸಾರ್ಟ್, ಬಂಗಲೆಗಳು ಐಶಾರಾಮಿ ಜೀವನಕ್ಕೆ ಮುಂದಾದ ಮನುಷ್ಯನಿಗೆ ಪ್ರಕೃತಿ ನೀಡಿದ ಭಿಕ್ಷೆ ಎಂದು ಭಾವಿಸುವೆ.
ಏಕೆಂದರೆ ಎರಡು ಎಕರೆ ಭೂಮಿ ಹಸನು ಮಾಡಿಕೊಂಡು ಬೆಳೆ ಬೆಳೆದು ಜೀವನ ನಡೆಸುವಂತಹ ಬಡ ರೈತನಿಗೆ ಇಲ್ಲಿ ಸಾಗುವಳಿ ಚೀಟಿ ನೀಡಲು ಸತಾಯಿಸುವ ಅಮಾನುಷರಿದ್ದಾರೆ. ಬೇಗ ಹಕ್ಕು ಪತ್ರ ನೀಡವುದಿಲ್ಲ. ಅದೇ ಮೈನ್ಸ್ ಗಣಿಗಾರಿಕೆ ನಡೆಸಿ ಮೂಲ ಪ್ರಕೃತಿಯ ಸ್ವರೂಪವನ್ನೆ ಹಾಳು ಮಾಡುವಂತಹ ಮಾಫಿಯಾಗಳಿಗೆ ಪರವಾನಗಿ ನೀಡಿ, ಅವರ ರಕ್ಷಣೆಗೆ ನಿಂತುಕೊಳ್ಳುವುದು ಯಾವ ನೈತಿಕತೆ? ಇಂತಹ ಹತ್ತಾರು ವಿಷಯಗಳಲ್ಲಿ ನಮ್ಮ ಕಾಲ ಮೆಲೆ ನಾವೇ ಕಲ್ಲು ಹಾಕಿಕೊಂಡಂತಾಗಿದೆ.
ಇಂದು ನೀರಿನ ಬವಣೆ ಹೆಚ್ಚಾಗಿದೆ. ಪ್ರಕೃತಿ ಭೂಮಿಯ ಮಡಿಲಲ್ಲಿ ತನ್ನ ಶಕ್ತಿಯನ್ನು ಕಳೆದುಕೊಂಡಾಗ ಅಂತರ್ಜಲ ಕಡಿಮೆಯಾಗಿ ಮಳೆ ಇಲ್ಲದೇ ಬೆಳೆಯಿಲ್ಲದೇ ಬರ ಅನುಭವಿಸುವಂತಹ ಅನಾಹುತಗಳು ಸಂಭವಿಸುವುದು ಸಹಜ. ಆದ್ದರಿಂದ ಅವಶ್ಯಕತೆಗೆ ತಕ್ಕಂತೆ ನಾವು ಪ್ರಕೃತಿಯನ್ನು ಬಳಕೆ ಮಾಡಿಕೊಂಡರೆ ಬರ ಎಂದೆಂದಿಗೂ ಬರದು. ನಮ್ಮನ್ನು ಭೂಮಿ ತಾಯಿ ರಕ್ಷಿಸಬೇಕಾದರೆ ಮರಳು ಮಾಫಿಯಾ ನಿಲ್ಲಬೇಕು. ಅಕ್ರಮ ಗಣಿಗಾರಿಕೆ ನಿಲ್ಲಬೇಕು. ಇವುಗಳನ್ನು ನಿಲ್ಲಿಸಿ ಭೂಮಿಯಲ್ಲಿರುವ ಸಂಪತ್ತನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಯದೇ ಹೋದರೆ ನಮಗೆ ದುರ್ಗತಿ ತಪ್ಪಿದ್ದಲ್ಲ. ಆದ್ದರಿಂದ ಮಳೆ ಬೆಳೆ ಹೆಚ್ಚಾಗಲು ಕಾಡು ರಕ್ಷಿಸಬೇಕು. ಬರ ಅಳಿಸಿ ಸಮೃದ್ದಿ ಕಂಡು ಪುನಃ ಒತ್ತುವ ಬೋರ್‍ವೆಲ್‍ಗಳನ್ನು ಪುನಶ್ಚೇತನ ಗೊಳಿಸಿ ನೀರಿನ ಬವಣೆ ನೀಗಿಸೋಣ.