ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದ ಕಾನೂನುಗಳಿಗೆ ಸಂಬಂಧಿಸಿದಂತೆ ಕಳೆದ 3 ವರ್ಷಗಳಿಂದ ಹೊಸ ನಿಯಮಾವಳಿಗಳು ಮತ್ತು ತೀರ್ಪುಗಳು ಬರುತ್ತಲೇ ಇವೆ. 2014 ರಲ್ಲಿ ಸುಪ್ರೀಂಕೋರ್ಟ್ 498 ಎ ಭಾರತ ದಂಡ ಸಂಹಿತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದಾಗ ರಾಷ್ಟ್ರಾದ್ಯಂತ ಒಂದು ಹೊಸ ಚರ್ಚೆ ಮತ್ತು ಸಂಚಲನಕ್ಕೆ ನಾಂದಿ ಹಾಡಿತ್ತು.
ಜುಲೈ 27 2017 ರಂದು ಸರ್ವೋಚ್ಛ ನ್ಯಾಯಾಲಯವು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ಎನ್ನಬಹುದಾದ ಕೆಲವು ಮಹತ್ವದ ನಿರ್ದೇಶನಗಳನ್ನು ನೀಡಿದೆ. ವರದಕ್ಷಿಣೆ ಕಿರುಕುಳದ ದೂರಿಗೆ ಸಂಬಂಧಿಸಿದಂತೆ ಮಹಿಳೆಯರು ನೀಡುವ ದೂರನ್ನು ಆಧರಿಸಿ ತಕ್ಷಣಕ್ಕೆ ಯಾರನ್ನೂ ಬಂಧಿಸಬಾರದು ಎಂಬುದೇ ಸುಪ್ರೀಂಕೋರ್ಟ್ ನಿರ್ದೇಶನ.
2014 ರಲ್ಲಿ ಅರ್ಣೇಶ್ ಕುಮಾರ್ ವಿರುದ್ಧ ಬಿಹಾರ ರಾಜ್ಯ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಹಾಗೂ 2017 ರಂದು ನೀಡಿರುವ ನಿರ್ದೇಶನ ಇವೆಲ್ಲವನ್ನೂ ಗಮನಿಸಿದಾಗ ಪೊಲೀಸರ ಅಧಿಕಾರಕ್ಕೆ ಕಡಿವಾಣ ಹಾಕಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಹಾಗೆಂದ ಮಾತ್ರಕ್ಕೆ ದೂರುಗಳನ್ನು ಸ್ವೀಕರಿಸಬಾರದು ಎಂದಲ್ಲ.
ಐಪಿಸಿ 498 ಎ ಅಥವಾ ವರದಕ್ಷಿಣೆ ನಿಷೇಧ ಕಾಯಿದೆ ಅಡಿ ಪೊಲೀಸರಿಗೆ ಮಹಿಳೆಯರು ದೂರು ನೀಡಿದಾಗ ಸದರಿ ದೂರನ್ನು ಪರಿಗಣಿಸಿ ಪೊಲೀಸರು ಪ್ರಥಮ ವರ್ತಮಾನ ವರದಿ ದಾಖಲಿಸಬಹುದು. ಆನಂತರ ತನಿಖೆ ಕೈಗೊಳ್ಳಲು ಯಾವುದೇ ಅಡ್ಡಿಯಿಲ್ಲ. ಸುಪ್ರೀಂಕೋರ್ಟ್ ಈ ಬಗ್ಗೆ ಯಾವುದೇ ತಡೆ ನೀಡಿಲ್ಲ. ಆದರೆ ಬಂಧನದ ವಿಷಯದಲ್ಲಿ ನಿರ್ದೇಶನಗಳನ್ನು ನೀಡಿದೆ. ಪ್ರಕರಣ ದಾಖಲಾದ ಕೂಡಲೇ ಬಂಧನ ಬೇಡ. ಇದಕ್ಕಾಗಿ ಒಂದು ಪರಿಶೀಲನಾ ಸಮಿತಿ ಇರಬೇಕು. ನಂತರವಷ್ಟೇ ಬಂಧಿಸಬಹುದು ಎಂಬುದು ನ್ಯಾಯಾಲಯದ ವ್ಯಾಖ್ಯಾನ.
ಕೆಲವು ಪೊಲೀಸ್ ಠಾಣೆಗಳಲ್ಲಿ 2014 ರ ತೀರ್ಪು ಅಥವಾ ಆನಂತರದ ನ್ಯಾಯಾಲಯದ ಮಾರ್ಗದರ್ಶಿ ಸೂತ್ರಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗಿಲ್ಲ. 498 ಎ ಅಥವಾ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದ ದೂರುಗಳನ್ನು ಪಡೆಯುವಂತೆಯೇ ಇಲ್ಲ ಎಂದೂ ಸಹ ಕೆಲವೊಮ್ಮೆ ಹೇಳಿದ್ದುಂಟು. ಆನಂತರದ ದಿನಗಳಲ್ಲಿ ದೂರುಗಳು ಬಂದಾಗ ಅದನ್ನು ಸಾಧ್ಯವಾದರೆ ರಾಜಿ ಸೂತ್ರಕ್ಕಾಗಿ ಕೌಟುಂಬಿಕ ಸಲಹಾ ಕೇಂದ್ರಗಳು, ಸಾಂತ್ವನ ಕೇಂದ್ರಗಳಿಗೆ ಸಮಾಲೋಚನೆಗಾಗಿ ಕಳುಹಿಸುತ್ತಾ ಬರಲಾಗಿದೆ.
ಅಲ್ಲಿಯೂ ಸಂಧಾನ ವಿಫಲವಾದರೆ ಎಫ್.ಐ.ಆರ್. ದಾಖಲಿಸುತ್ತಾರೆ. ಇದೊಂದು ಉತ್ತಮ ಬೆಳವಣಿಗೆ ಎನ್ನಬಹುದು.ವಿವಾಹ ನಂತರ ಎದುರಾಗುವ ಕೌಟುಂಬಿಕ ಸಮಸ್ಯೆಗಳು ಸಾಧ್ಯವಾದಷ್ಟು ಸಮಾಲೋಚನೆಯ ಪರಿಧಿಯಲ್ಲಿ ಇತ್ಯರ್ಥವಾಗಲಿ ಎಂಬುದು ಇದರ ಹಿಂದಿರುವ ಸದಾಶಯ. ಈ ಕಾರಣಕ್ಕಾಗಿಯೇ ಸಾಮಾನ್ಯ ದೂರುಗಳನ್ನು ಕೌನ್ಸಿಲಿಂಗ್‍ಗಾಗಿ ಕಳುಹಿಸಿ ಕೊಡಲಾಗುತ್ತದೆ. ಅಲ್ಲಿ ಒಪ್ಪಬಹುದು, ಒಪ್ಪದೇ ಇರಲೂಬಹುದು. ನಂತರದ ಪ್ರಕ್ರಿಯೆಗಳು ಯಥಾವತ್ತಾಗಿ ಕಾನೂನು ಪ್ರಕಾರ ನಡೆಯುತ್ತವೆ.
ಆದರೆ ಇಂತಹ ಪ್ರಕರಣಗಳಲ್ಲಿಯೂ ಸಹ ಪೊಲೀಸರು ಮೀನಾ-ಮೇಷ ಎಣಿಸುವುದಿದೆ. ಗಂಡ ಅಥವಾ ಕುಟುಂಬದವರಿಂದ ದೌರ್ಜನ್ಯ ತೀವ್ರ ಸ್ವರೂಪವಾಗಿದ್ದರೆ, ಹಲ್ಲೆಯಾಗಿದ್ದರೆ ಅಂತಹ ಪ್ರಕರಣಗಳನ್ನು ಸಮಾಲೋಚನೆ ಮೂಲಕ ರಾಜಿ ಮಾಡಿಸಲು ಬರುವುದಿಲ್ಲ. ಕ್ರಿಮಿನಲ್ ಅಪರಾಧಗಳಾಗಿರುವುದರಿಂದ ಪ್ರಕರಣ ದಾಖಲಾಗಬೇಕು.
ಕಳೆದ ವಾರ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ರಾಷ್ಟ್ರಾದ್ಯಂತ ಬಹಳಷ್ಟು ಮಹಿಳಾ ಸಂಘಟನೆಗಳಿಗೆ ಅಸಮಾಧಾನ ತಂದಿರಬಹುದು. ಗಂಡ ಅಥವಾ ಆತನ ಮನೆಯವರಿಂದ ಹಿಂಸೆ ಅನುಭವಿಸಿದ ಮಹಿಳೆಗೆ ರಕ್ಷಣೆ ನೀಡುವುದು ಕಾನೂನಿನ ಉದ್ದೇಶ. ಆದರೆ ಮನೆಯವರನ್ನೆಲ್ಲಾ ಬಂಧಿಸಿದರೆ ಕಾನೂನಿನ ಉದ್ದೇಶವೇ ವಿಫಲವಾಗುತ್ತವೆ. ಎಲ್ಲೋ ವಾಸವಾಗಿರುವ ವ್ಯಕ್ತಿಗಳ ವಿರುದ್ಧವೂ ದೂರು ಕೊಟ್ಟಾಗ ಪೂರ್ವಾಪರ ವಿಚಾರಿಸದೆ ಬಂಧಿಸಿದರೆ ಅವರ ಹಕ್ಕುಗಳಿಗೂ ಚ್ಯುತಿ ಬರುತ್ತದೆ.
ವಿನಾಕಾರಣ ಯಾರ ಬಂಧನವೂ ಆಗಬಾರದು ಎಂಬುದು ನ್ಯಾಯಾಲಯದ ಉದ್ದೇಶ. ಬಹಳಷ್ಟು ಪ್ರಕರಣಗಳಲ್ಲಿ ಗಂಡನ ಜೊತೆ ಕುಟುಂಬದ ಇತರೆ ಸದಸ್ಯರನ್ನು (ಅವರು ಪ್ರತ್ಯೇಕವಾಗಿ ವಾಸಿಸುತ್ತಿರುವಾಗ) ಅವರ ಹೆಸರನ್ನೂ ಸೇರಿಸಿ ದೂರು ನೀಡಿ ಬಂಧನವಾಗುತ್ತಿರುವುದನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಅಂದರೆ, ಕೆಲವರು ಕಾನೂನಿನ ದುರುಪಯೋಗ ಪಡೆಯುತ್ತಿದ್ದಾರೆ ಎಂಬುದೇ ಇಲ್ಲಿ ಪ್ರಮುಖವಾಗಿ ಗುರುತಿಸಬೇಕಾದ ಅಂಶ.
ಪ್ರಸ್ತುತ ಸನ್ನಿವೇಶಕ್ಕೂ ಈಗ್ಗೆ 20 – 30 ವರ್ಷಗಳ ಸನ್ನಿವೇಶಕ್ಕೂ ಸಾಕಷ್ಟು ವ್ಯತ್ಯಾಸಗಳಾಗಿವೆ. ವರದಕ್ಷಿಣೆ ಪೆಡಂಬೂತ ಸಮಾಜದಲ್ಲಿ ಹೆಚ್ಚಿದಂತೆಲ್ಲಾ ಇದಕ್ಕೆ ಬಲಿಯಾದ ಮಹಿಳೆಯರ ಸಾವಿನ ಪ್ರಕರಣಗಳು ಲೆಕ್ಕಕ್ಕಿಲ್ಲ. ಅದೆಷ್ಟೋ ಮಹಿಳೆಯರು ಜೀವಂತ ಶವವಾಗಿ ಬದುಕಿ ಅಸುನೀಗಿದ್ದಾರೆ. ಇಂತಹ ಉದಾಹರಣೆಗಳನ್ನು ಮನಗಂಡೇ 1961 ರಲ್ಲಿಯೇ ವರದಕ್ಷಿಣೆ ನಿಷೇಧ ಕಾಯಿದೆ ಜಾರಿಗೆ ತರಲಾಯಿತು.
1980 ರ ದಶಕದಲ್ಲಿ ಈ ಪಿಡುಗು ಭಯಾನಕವಾಗಿ ವ್ಯಾಪಿಸತೊಡಗಿದಾಗ ರಾಷ್ಟ್ರ ವ್ಯಾಪಿ ಪ್ರತಿಭಟನೆಗಳು, ಹೋರಾಟಗಳು ಹೆಚ್ಚಾದವು. ವರದಕ್ಷಿಣೆ ಸಮಸ್ಯೆ ವಿರುದ್ಧ ಸಂಘಟನೆಗಳು ಒಪ್ಪಿಕೊಂಡವು. ಇದರ ಪರಿಣಾಮ 1983 ರಲ್ಲಿ ಭಾರತ ದಂಡ ಸಂಹಿತೆಗೆ ತಿದ್ದುಪಡಿ ತಂದು 498 ಎ ಸೇರಿಸಲಾಯಿತು. ಅಂದರೆ, ವರದಕ್ಷಿಣೆ ನಿಷೇಧ ಕಾಯಿದೆ ಜೊತೆಗೆ ಐಪಿಸಿನಲ್ಲಿಯೂ ಇದನ್ನು ಅಪರಾಧವೆಂದು ಪರಿಗಣಿಸಲಾಯಿತು. ಒಂದು ಕುಟುಂಬದಲ್ಲಿ ಗಂಡ ಮತ್ತು ಮನೆಯವರಿಂದ ಎದುರಾಗುವ ದೌರ್ಜನ್ಯ, ವರದಕ್ಷಿಣೆಗಾಗಿ ಹಿಂಸೆ ಇವೆರಡೂ ಈ ಕಲಂ ವ್ಯಾಪ್ತಿಯಲ್ಲಿ ಸೇರ್ಪಡೆಗೊಂಡವು. ನಂತರದ ದಿನಗಳಲ್ಲಿ ವಿವಾಹವಾಗಿ 7 ವರ್ಷಗಳ ಒಳಗೆ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟರೆ ವರದಕ್ಷಿಣೆ ಸಾವು ಎಂದು ಊಹಿಸುವ ರೀತಿಯಲ್ಲಿ ಐಪಿಸಿ 304 ಬಿ ತಿದ್ದುಪಡಿ ಮಾಡಲಾಯಿತು.
ಸುಮಾರು ವರ್ಷಗಳ ಕಾಲ ವರದಕ್ಷಿಣೆ ಸಾವು-ನೋವಿನ ಪ್ರಕರಣಗಳನ್ನು ಪ್ರತಿನಿತ್ಯ ನೋಡುವಂತಹ ಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿತ್ತು. ಕ್ರಮೇಣ ಜನಸಂಖ್ಯೆಯ ಲಿಂಗಾನುಪಾತದಲ್ಲಿ ಏರುಪೇರು ಕಂಡುಬಂದಿತು. ಹೆಣ್ಣು ಮಕ್ಕಳಾದರೆ ವರದಕ್ಷಿಣೆ ಕೊಡಬೇಕು ಎಂಬುದರಿಂದ ಹಿಡಿದು ಇತರೆ ಹಿಂಸೆಗಳನ್ನು ಕಂಡ ಸಮಾಜ ಹೆಣ್ಣು ಮಕ್ಕಳೆಂದರೆ ತಾತ್ಸಾರ ಮನೋಭಾವವನ್ನು ರೂಢಿಸಿಕೊಂಡಿತು.
ಹೀಗಾಗಿ ಲಿಂಗಾನುಪಾತದಲ್ಲಿ ದಿನೇ ದಿನ ಏರುಪೇರಾಗಿ ಪ್ರಸ್ತುತ ಒಂದು ಸಾವಿರ ಜನಸಂಖ್ಯೆಗೆ 940ಕ್ಕೂ ಕಡಿಮೆ ಹೆಣ್ಣು ಮಕ್ಕಳು ಇದ್ದಾರೆ. ಇದು ಸಾಮಾಜಿಕ ಅಸಮತೋಲನಕ್ಕೆ ಕಾರಣವಾಗುತ್ತದೆ. ಅಲ್ಲದೆ, ಹೆಣ್ಣು ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ವರದಕ್ಷಿಣೆ ಪಿಡುಗು ಸಹ ದಿನೇ ದಿನೇ ಕಡಿಮೆಯಾಗುತ್ತಿದೆ.
ಈಗ ವರದಕ್ಷಿಣೆಯನ್ನೇ ಕೇಳುವ ಮಂದಿ ಹೆಚ್ಚು ಕಂಡುಬರುವುದಿಲ್ಲ. ಎಲ್ಲರೂ ವಿದ್ಯಾವಂತರಾಗಿ ಉದ್ಯೋಗ ಹುಡುಕಿಕೊಳ್ಳುತ್ತಿರು ವುದರಿಂದ ತಕ್ಕ ಹೆಣ್ಣು ಮಗಳು ಸಿಕ್ಕರೆ ಸಾಕು ಎನ್ನುವಂತಹ ನಿರ್ಧಾರಕ್ಕೆ ಬರುತ್ತಿದ್ದಾರೆ. ಹೀಗಾಗಿ ಉತ್ತಮವಾಗಿ ವಿವಾಹ ಮಾಡಿಕೊಟ್ಟರೆ ಸಾಕು ಎಂದು ಕೇಳುತ್ತಿದ್ದಾರೆ. ಇದನ್ನು ನೋಡಿದ ಬಹಳ ಜನ ವರದಕ್ಷಿಣೆ ಸಮಸ್ಯೆ ನಿಂತೇ ಹೋಯಿತು ಎಂದು ಹೇಳುವುದುಂಟು. ಆದರೆ ಪರೋಕ್ಷವಾಗಿ ಮತ್ತಷ್ಟು ಹಣ ಹೇರಳವಾಗಿ ಖರ್ಚಾಗುತ್ತಿದೆ ಎಂಬುದು ಮಾತ್ರ ಗಮನಕ್ಕೆ ಬರುತ್ತಿಲ್ಲ.
ಹಿಂದೆಲ್ಲಾ ಬೈಕು, ನಿವೇಶನ, ಉದ್ಯೋಗ ಇತ್ಯಾದಿಗಳಿಗೆ ಬೇಡಿಕೆ ಇಡುತ್ತಿದ್ದರು. ಅತ್ಯಂತ ಸಿರಿವಂತರಾದರೆ ಕಾರು ಇತ್ಯಾದಿಗಳನ್ನು ನೀಡುತ್ತಿದ್ದರು. ಈಗ ವರದಕ್ಷಿಣೆಯ ಸ್ವರೂಪವೇ ಬದಲಾಗಿದೆ. ಬೈಕನ್ನು ಯಾರೂ ಕೇಳುತ್ತಿಲ್ಲ. ವಾಚು, ಉಂಗುರಗಳ ಮಾತೇ ಇಲ್ಲ. ಏನಿದ್ದರೂ ಕೊರಳ ಚೈನು, ಬ್ರಾಸ್‍ಲೆಟ್ ಜೊತೆಗೆ ಅದ್ಧೂರಿ ವಿವಾಹ ಇಷ್ಟು ಮಾಡಿಕೊಟ್ಟರೆ ಸಾಕು ಎನ್ನುತ್ತಾರೆ. ಈ ಖರ್ಚುಗಳನ್ನು ಲೆಕ್ಕ ಹಾಕಿ ನೋಡಿದರೆ ಕನಿಷ್ಠ 8 ಲಕ್ಷ ರೂ.ಗಳಿಗೆ ಕಡಿಮೆಯಂತೂ ಆಗುವುದೇ ಇಲ್ಲ.
ಪ್ರತ್ಯಕ್ಷವಾಗಿ ವರದಕ್ಷಿಣೆಗೆ ಒತ್ತಾಯಿಸುವ ಪ್ರಕರಣಗಳು ಇತ್ತೀಚೆಗೆ ಕಡಿಮೆಯಾಗುತ್ತಿವೆಯಾದರೂ ವಿವಾಹಾನಂತರ ದ ದಿನಗಳಲ್ಲಿ ಎದುರಾಗುವ ಸಮಸ್ಯೆಗಳಿಗೆ ಕೆಲವೊಮ್ಮೆ ಮತ್ತಷ್ಟು ಬೇಡಿಕೆ ಇಡುವ ಉದಾಹರಣೆಗಳು ಇಲ್ಲವೆಂದಲ್ಲ. ಇಂತಹ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಠಾಣೆಗೆ ಹೋಗುವ ಪ್ರಸಂಗಗಳು ಎದುರಾಗುತ್ತವೆ. ಇದುವರೆಗಿನ ಅಂಕಿ ಅಂಶಗಳನ್ನು ಗಮನಿಸುತ್ತಾ ಹೋದರೆ ವರದಕ್ಷಿಣೆ ಕೇಳಿದರು ಅಂಥ ಯಾರೂ ಸಹ ದೂರು ನೀಡಿರುವ ಉದಾಹರಣೆಗಳಿಲ್ಲ.
ಮಗಳಿಗೆ ಸಂಕಟ ಬಂದಾಗ ಅಥವಾ ಜೀವಕ್ಕೆ ಹಾನಿ ಉಂಟಾದರೆ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿರುವ ಉದಾಹರಣೆ ಗಳೇ ಹೆಚ್ಚು.ವರದಕ್ಷಿಣೆ ಪ್ರಕರಣಗಳಲ್ಲಿ ನ್ಯಾಯಾಲಯಗಳು ಕ್ರಮೇಣ ಮೃಧು ಧೋರಣೆ ತಾಳುತ್ತಿರು ವುದಾದರೂ ಏಕೆ ಎಂಬ ಪ್ರಶ್ನೆ ಮಹಿಳಾ ಪರ ಹೋರಾಟಗಾರರಲ್ಲಿ ಹಾಗೂ ಇತರೆ ಕ್ಷೇತ್ರದಲ್ಲಿರುವವರಿಗೆ ಬರುವುದು ಸಹಜ. ಪುರುಷ ಪ್ರಧಾನ ವ್ಯವಸ್ಥೆ ಮುಂದುವರೆದೇ ಇದೆ ಎಂದು ಕೆಲವರು ವಾದಿಸುತ್ತಾರೆ. ಆದರೆ ಇಲ್ಲಿ ಸಾಮಾನ್ಯವಾಗಿ ನೋಡುತ್ತಿರುವುದು ಒಟ್ಟಾರೆ ಕೌಟುಂಬಿಕ ವ್ಯವಸ್ಥೆಯನ್ನು.
ನಮ್ಮ ಭಾರತೀಯ ಪರಂಪರೆಯಲ್ಲಿ ಕುಟುಂಬಗಳು ಕುಟುಂಬವಾಗಿಯೇ ಇರಬೇಕೆಂಬ ಅಪೇಕ್ಷೆ ಎಲ್ಲರದ್ದು. ಈ ಕಾರಣಕ್ಕಾಗಿಯೇ ದೌರ್ಜನ್ಯಗಳನ್ನು ಸಹಿಸಿಕೊಳ್ಳುವ ಅಥವಾ ಅಂತಹ ದೌರ್ಜನ್ಯಗಳನ್ನು ನಿವಾರಿಸುವ ಪ್ರಯತ್ನಗಳಿಗೆ ಆದ್ಯತೆ ನೀಡಿ ಎಂದೇ ಹೇಳಲಾಗುತ್ತಿದೆ. ಇದರ ಪರಿಣಾಮವಾಗಿ ಮಧ್ಯಸ್ಥಿಕೆ ಕೇಂದ್ರಗಳು, ಸಲಹಾ ಕೇಂದ್ರಗಳು, ಸಾಂತ್ವನ ಕೇಂದ್ರಗಳಿಗೆ ಹೆಚ್ಚು ಬೇಡಿಕೆ ಬರುತ್ತಿದೆ. ಸಾಧ್ಯವಾದಷ್ಟು ಮಟ್ಟಿಗೆ ಪಕ್ಷಗಾರರೊಂದಿಗೆ ಸಮಾಲೋಚನೆ ನಡೆಸಿ ವ್ಯಕ್ತಿಗಳ ಮನಸ್ಸಿನಲ್ಲಿರುವ ಕಹಿಯನ್ನು ಹೊರ ಹಾಕಿಸಿ ಸೌಹಾರ್ದ ವಾತಾವರಣ ನಿರ್ಮಿಸುವತ್ತ ಇಲ್ಲಿ ಮಾರ್ಗದರ್ಶನಗಳು ದೊರೆಯುತ್ತವೆ.
ಈ ತಿಂಗಳಲ್ಲಿ ಸುಪ್ರೀಂಕೋರ್ಟ್ ವರದಕ್ಷಿಣೆ ಕಿರುಕುಳ ದೂರು ಪ್ರಕರಣಗಳಲ್ಲಿ ಒಂದು ನಿರ್ದೇಶನ ನೀಡಿ ಇನ್ನು ಮುಂದೆ ಇಂತಹ ದೂರುಗಳು ಬಂದಾಗ ಆ ದೂರುಗಳು ಗಂಭೀರ ಸ್ವರೂಪ ಇನ್ನೂ ಪಡೆದಿಲ್ಲ ಎಂದಾದರೆ ತಕ್ಷಣಕ್ಕೆ ಯಾರನ್ನೂ ಬಂಧಿಸುವುದು ಬೇಡ ಎಂದು ಹೇಳಿದೆ. ಬಂಧನಕ್ಕೆ ಮುನ್ನ ಸದರಿ ಪ್ರಕರಣವನ್ನು ಕುಟುಂಬ ಕಲ್ಯಾಣ ಸಮಿತಿಗೆ ವರ್ಗಾಯಿಸಲು ತಿಳಿಸಿದೆ. ಈ ಸಮಿತಿಗಳು ಪ್ರತಿ ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬರಲಿವೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ರಚನೆಯಾಗುವ ಈ ಸಮಿತಿಗಳಲ್ಲಿ ವಿವಿಧ ಕ್ಷೇತ್ರಗಳ ತಜ್ಞರು ಕಾರ್ಯನಿರ್ವಹಿಸಲಿದ್ದಾರೆ.
ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ನಂತರ ಪೊಲೀಸರು ಸದರಿ ದೂರನ್ನು ಈ ಸಮಿತಿಗೆ ಕಳುಹಿಸಿ ಕೊಡಲಿದ್ದಾರೆ. ಸಮಿತಿಯು ದೂರನ್ನು ಪರಿಶೀಲಿಸಿ ವರದಿ ನೀಡಿದ ನಂತರವಷ್ಟೇ ಆರೋಪಿಗಳ ಬಂಧನವಾಗುತ್ತದೆ. ಅಲ್ಲಿಯವರೆಗೆ ಕೇವಲ ಎಫ್.ಐ.ಆರ್. ಮಾತ್ರ ದಾಖಲಿಸಲಾಗುತ್ತದೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಕುಟುಂಬ ಕಲ್ಯಾಣ ಸಮಿತಿಗಳು ಅಸ್ತಿತ್ವಕ್ಕೆ ಬರಲಿವೆ. ಸಾಮಾನ್ಯ ದೂರುಗಳನ್ನು ಈ ಸಮಿತಿ ಪರಿಶೀಲಿಸಿ ವರದಿ ನೀಡಲಿವೆ. ಆದರೆ ಗಂಭೀರ ಸ್ವರೂಪದ ಪ್ರಕರಣಗಳು ಅಂದರೆ, ಗಾಯವಾಗಿರುವಂತಹ, ದೈಹಿಕ ಹಲ್ಲೆ, ಪ್ರಾಣಹಾನಿಯಂತಹ ದೂರುಗಳಲ್ಲಿ ಈ ಸಮಿತಿಯ ವರದಿ ಕಾಯುವ ಅವಶ್ಯವಿಲ್ಲ. ಗಂಭೀರ ಸ್ವರೂಪದ ಪ್ರಕರಣಗಳನ್ನು ಅಪರಾಧ ಪ್ರಕರಣಗಳನ್ನಾಗಿ ಪರಿಗಣಿಸಿ ಹಾಲಿ ಇರುವ ಕಾನೂನುಗಳ ಅನ್ವಯ ಪ್ರಕ್ರಿಯೆ ಮುಂದುವರೆಸಲು ಪೊಲೀಸರಿಗೆ ಯಾವುದೇ ಅಡ್ಡಿಗಳಿಲ್ಲ. ಸುಪ್ರೀಂಕೋರ್ಟ್ ನಿರ್ದೇಶನ ಕೆಲವರಿಗೆ ಅಸಮಾಧಾನ ತಂದಿರಬಹುದು.
ಆದರೆ ಇದರ ಹಿಂದಿನ ಉದ್ದೇಶ ಉದಾತ್ತ ಎನ್ನುವವರು ಇದ್ದಾರೆ. ಕೌಟುಂಬಿಕ ವಾತಾವರಣ ಉತ್ತಮಗೊಳಿ ಸುವುದು, ಪರಸ್ಪರ ದ್ವೇಷ ಮನೋಭಾವ ಉಲ್ಬಣಿಸದಂತೆ ನೋಡಿಕೊಳ್ಳುವುದು, ಆ ಮೂಲಕ ದಾಂಪತ್ಯ ಬದುಕನ್ನು ಸುಗಮವಾಗಿಸುವುದು… ಈ ಎಲ್ಲಾ ಅಂಶಗಳು ಇದರಲ್ಲಿ ಅಡಕಗೊಂಡಿವೆ. ಸಾಮಾನ್ಯ ಕಿರುಕುಳದ ಪ್ರಕರಣಗಳನ್ನು ಇಲ್ಲಿ ಬಗೆಹರಿಸಬಹುದಾಗಿದ್ದು, ದೌರ್ಜನ್ಯಗಳು ಮಿತಿ ಮೀರಿದ್ದರೆ ಅಥವಾ ಹಾನಿಯಾಗುವಂತಹ ಯಾವುದೇ ಪ್ರಕರಣಗಳಲ್ಲಿ ಕಾನೂನಿನ ಯಾವುದೇ ಸಡಿಲಿಕೆ ಇಲ್ಲ ಎಂಬುದೂ ಇಲ್ಲಿ ಅಷ್ಟೇ ಗಮನಾರ್ಹ.
ಬಹಳ ವರ್ಷಗಳ ಹಿಂದೆ ನಮ್ಮ ಸಮಾಜದಲ್ಲಿ ವರದಕ್ಷಿಣೆ ಪದ್ಧತಿಯೇ ಇರಲಿಲ್ಲ. ಬ್ರಿಟೀಷರು ಶಿಕ್ಷಣ ಹುಟ್ಟು ಹಾಕಿದ ತರುವಾಯ ಈ ಪದ್ಧತಿ ನಮ್ಮಲ್ಲೂ ಜೀವಂತಿಕೆ ಪಡೆಯಿತು. ಬಳುವಳಿಯಾಗಿ ನೀಡುತ್ತಿದ್ದ ಪರಂಪರೆ ಕ್ರಮೇಣ ವರದಕ್ಷಿಣೆ ಯಾಗಿ ಪರಿವರ್ತನೆಗೊಂಡಿತು. ಸ್ವಾತಂತ್ರ್ಯಾನಂತರದಲ್ಲಿ ಇದರ ತೀಷ್ಣತೆಯನ್ನು ಅರಿತು ಅಂದೇ 1961 ರಲ್ಲಿ ವರದಕ್ಷಿಣೆ ನಿಷೇಧ ಕಾಯಿದೆ ಜಾರಿಗೆ ತರಲಾಯಿತು.
ಆನಂತರ ಈ ಕಾಯಿದೆಗೆ ಎರಡು ಬಾರಿ ತಿದ್ದುಪಡಿಗಳಾಗಿವೆ. ಸಾಮಾನ್ಯವಾಗಿ ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಐಪಿಸಿ ಕಲಂ 498 ಎ ಜೊತೆಗೆ 3 ಮತ್ತು 4 ವರದಕ್ಷಿಣೆ ನಿಷೇಧ ಕಾಯಿದೆ ಕಲಂಗಳನ್ನು ಸೇರಿಸಲಾಗುತ್ತದೆ. ಕೌಟುಂಬಿಕ ಕಿರುಕುಳ ಮತ್ತು ವರದಕ್ಷಿಣೆ ಹಿಂಸೆ ಇದರ ಪರಿಭಾಷೆಯಲ್ಲಿ ಅಡಗಿರುತ್ತದೆ. ಇದಕ್ಕೆ ತಕ್ಕಂತೆ ಕಾನೂನುಗಳ ಜಾರಿಯಾಗಿದೆ. ಕ್ರಿಮಿನಲ್ ಕಾನೂನುಗಳ ಜೊತೆಗೆ ಭಾರತ ಸಾಕ್ಷ್ಯೆ ಅಧಿನಿಯಮದಲ್ಲೂ ಇದಕ್ಕೆ ಪೂರಕ ಹೊಂದಾಣಿಕೆ ಇದೆ. ಹೀಗಾಗಿ ಈ ಕಾಯಿದೆ ಬಹಳಷ್ಟು ವರ್ಷಗಳ ಕಾಲ ಭಾರತೀಯ ಪರಂಪರೆಯಲ್ಲಿ ಒಂದಷ್ಟು ಭಯವನ್ನು ಮೂಡಿಸಿದ್ದಂತೂ ಸತ್ಯ.
ಸಾ.ಚಿ.ರಾಜಕುಮಾರ
ಪ್ರಜಾ ಪ್ರಗತಿ.ತುಮಕೂರು