ತುಮಕೂರು: 

ವಿಶೇಷ ವರದಿ: ಸಾ.ಚಿ.ರಾಜಕುಮಾರ
ಭಾರತದಲ್ಲಿ ಉದ್ಯಮಗಳು ನೆಲ ಕಚ್ಚುತ್ತಿವೆ. ಉದ್ಯಮಿಗಳು ಹೊರರಾಷ್ಟ್ರಗಳತ್ತ ನೋಡುತ್ತಿದ್ದಾರೆ. ಬಹುತೇಕ ಕೈಗಾರಿಕೆಗಳು ನಷ್ಟದ ಹಾದಿಯಲ್ಲಿವೆ. ಒಂದು ಕಾಲದಲ್ಲಿ ರಾಜರಂತೆ ಮೆರೆಯುತ್ತಿದ್ದ ಉದ್ಯಮ ಪತಿಗಳು ಇಂದು ಉದ್ಯಮ ಉಳಿಸಿಕೊಳ್ಳುವ ಚಿಂತೆಯಲ್ಲಿ ಮುಳುಗಿದ್ದಾರೆ. ಉದ್ಯಮ ವಲಯವಿಂದು ಆಂತರಿಕ ಕ್ಷೋಭೆಯಲ್ಲಿದೆ.
ಈ ದೇಶದ ಅತಿದೊಡ್ಡ ಬಿಸ್ಕೆಟ್ ತಯಾರಿಕಾ ಕಂಪನಿಯಾದ ಪಾರ್ಲೆ ಜಿ ಫುಡ್ ಪ್ರಾಡೆಕ್ಟ್ ಕಂಪನಿ (ಕ್ವಾಲಿಟಿ ಬಿಸ್ಕೆಟ್ಸ್ ಕಂಪನಿ) ತನ್ನ ಕಾರ್ಮಿಕರ ಪೈಕಿ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವ ನಿರ್ಧಾರಕ್ಕೆ ಬಂದಿದೆ. ಹಲವು ತಿಂಗಳಿನಿಂದ ವಾಹನೋದ್ಯಮ ವಹಿವಾಟು ತೀವ್ರ ಕುಸಿತ ಕಂಡಿದೆ. ಭಾರತದ ಪ್ರಸಿದ್ದ ಕಾರು ತಯಾರಿಕರಲ್ಲಿ ಒಂದಾದ ಟಯೋಟಾ ಮೋಟಾರ್ಸ್ ಮತ್ತು ಕೊರಿಯಾದ ಹುಂಡೈ ಮೋಟಾರ್ಸ್ ಆರ್ಥಿಕ ಕುಸಿತ ಎದುರಿಸಲು ತನ್ನ ಉತ್ಪಾದನಾ ಘಟಕಗಳನ್ನು ಕೆಲ ಕಾಲ ಸ್ಥಗಿತಗೊಳಿಸಲು ತೀರ್ಮಾನಿಸಿವೆ.
ದೇಶದ ಹಲವಾರು ಉತ್ಪಾದನಾ ವಸ್ತುಗಳು ಮತ್ತು ಜನರ ನಡುವೆ ಒಂದು ಭಾವನಾತ್ಮಕ ಸಂಬಂಧವಿದೆ. ಈ ದೇಶದ ಕುರುಹು ಹಾಗೂ ಐತಿಹ್ಯ ಅದರೊಳಗೆ ಸೇರಿಕೊಂಡಿವೆ. ಇದಕ್ಕೊಂದು ಉತ್ತಮ ಉದಾಹರಣೆ ಭಾರತೀಯ ನಾರಿಯರು ಉಡುವ ಸೀರೆಗಳು. ಈ ಸೀರೆಗಳ ಮೇಲೂ ತೆರಿಗೆ ವಿಧಿಸಲಾಗಿ ಸೂರತ್‍ನಲ್ಲಿ ಈ ಉದ್ಯಮದಲ್ಲಿದ್ದ ಮೂರು ಲಕ್ಷಕ್ಕೂ ಹೆಚ್ಚು ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಹೇಗೋ ವ್ಯಾಪಾರ ವಹಿವಾಟು ನಡೆಯತ್ತಿತ್ತು. ಆದರೆ ತೆರಿಗೆ ವ್ಯವಸ್ಥೆಗಳು, ಜಿಎಸ್‍ಟಿಯಂತಹ ನಿಯಮಗಳು ಬಂದ ನಂತರ ನಮ್ಮ ಉದ್ಯಮ ವ್ಯವಹಾರದಲ್ಲಿ ಸಾಕಷ್ಟು ನಷ್ಟ ಉಂಟಾಯಿತು ಎಂದು ಅವರು ಹೇಳುತ್ತಾರೆ.
ಭಾರತದಲ್ಲಿನ ಉದ್ಯಮರಂಗ ಕಳೆದ 6 ತಿಂಗಳಿನಲ್ಲಿ ತೀವ್ರ ಕುಸಿತ ಕಾಣುತ್ತಿದೆ. ಬಹುತೇಕ ಎಲ್ಲ ಉದ್ಯಮ ವಲಯಗಳೂ ಆರ್ಥಿಕ ಹಿಂಜರಿತದ ಭೀತಿಯಲ್ಲಿದ್ದು, ಉದ್ಯಮ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. 2017 ರಲ್ಲಿ ವಿಶ್ವಬ್ಯಾಂಕ್‍ನ ಜಾಗತಿಕ ಜಿಡಿಪಿ ಪಟ್ಟಿಯಲ್ಲಿ ಭಾರತ 6ನೇ ಸ್ಥಾನದಲ್ಲಿತ್ತು. ಜಗತ್ತಿನ 6ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದ ಭಾರತ ಕ್ರಮೇಣ ಕುಸಿತದತ್ತ ಜಾರಿತು. ಈಗ ವಿಶ್ವಬ್ಯಾಂಕ್ ಪ್ರಕಟಿಸಿರುವ ಪಟ್ಟಿಯಲ್ಲಿ ಭಾರತ 7ನೇ ಸ್ಥಾನಕ್ಕೆ ಹೋಗಿದೆ.
ಬ್ಯಾಂಕ್ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ವಸೂಲಿಯಾಗದ ಸಾಲಗಳ ಮೊತ್ತ ಭಾರಿ ಪ್ರಮಾಣದಲ್ಲಿ ಬೆಳೆದಿದೆ. ಕೆಲವರು ಈ ಸಾಲವನ್ನೆ ಮುಂದಿಟ್ಟುಕೊಂಡು ಈ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಬ್ಯಾಂಕುಗಳು ಸಾಲ ಕೊಡಲು ಹಿಂದೆ ಮುಂದೆ ನೋಡುತ್ತಿವೆ. ಹೊಸ ಹೊಸ ನೀತಿಗಳು ಜಾರಿಯಾಗುತ್ತಿರುವ, ಬದಲಾಗುತ್ತಿರುವ ಪರಿಣಾಮದಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆ ಜನರ ಕೈಗೆಟುಕದ ಪರಿಸ್ಥಿತಿಗೆ ಬಂದಿದೆ. ವಾಸ್ತವವಾಗಿ ಬ್ಯಾಂಕುಗಳಲ್ಲಿ ಹೆಚ್ಚಿನ ಹಣದ ಹರಿವು ಇಲ್ಲ. ಹೊಸ ಉದ್ಯಮಗಳನ್ನು ತೆರೆಯುವವರು ಹಿಂಜರಿಕೆಯಲ್ಲಿದ್ದಾರೆ. ಈಗಾಗಲೇ ಉದ್ಯಮ ನಡೆಸುತ್ತಿರುವವರು ಉಳಿಸಿಕೊಳ್ಳುವ ಚಿಂತೆಯಲ್ಲಿದ್ದಾರೆ. ಬಹುತೇಕ ಎಲ್ಲ ಉತ್ಪಾದನಾ ಸಂಸ್ಥೆಗಳೂ ಈಗ ಆತಂಕ ಎದುರಿಸುತ್ತಿವೆ. ಕೃಷಿ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ.
ಸಾರ್ವಜನಿಕ ವಲಯದ ಬ್ಯಾಂಕುಗಳು ಸಾಲದ ಕೋರಿಕೆಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ರೈತನೊಬ್ಬ ತನ್ನ ಕಿಡ್ನಿಯನ್ನೇ ಮಾರಾಟಕ್ಕಿಟ್ಟಿರುವ ಪ್ರಸಂಗ ಆಗಸ್ಟ್ 24ರ ಶನಿವಾರದ ಪತ್ರಿಕೆಗಳಲ್ಲಿ ವರದಿಯಾಗಿದೆ. ಉತ್ತರ ಪ್ರದೇಶ ಚಟ್ಟರ್ ಸಾಲಿಗ್ರಾಮದ ರೈತ ರಾಮಕುಮಾರ್ ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯಡಿ ಹೈನುಗಾರಿಕೆ ಕೋರ್ಸ್ ನಡೆಸಿದ್ದರು. ಪ್ರಮಾಣ ಪತ್ರ ತೋರಿಸಿದ ಹೊರತಾಗಿಯೂ ಯಾವ ಬ್ಯಾಂಕುಗಳೂ ಸಾಲ ಕೊಡಲು ಮುಂದೆ ಬರಲಿಲ್ಲ.
ಇದು ಇತ್ತೀಚೆಗೆ ಬೆಳಕಿಗೆ ಬಂದಿರುವ ಒಂದು ಪ್ರಕರಣ. ಇಂತಹ ಸಾವಿರಾರು ಪ್ರಕರಣಗಳನ್ನು ನಾವು ದಿನನಿತ್ಯ ನೋಡಬಹುದು. ರೈತನಿಗಿರಲಿ ಉದ್ಯಮ, ವ್ಯವಹಾರ ನಡೆಸುವವರಿಗೂ ಆರ್ಥಿಕ ಚಿಂತೆ ಎದುರಾಗಿದೆ. ಹಿಂದೆ ಸುಲಭವಾಗಿ ಸಿಗುತ್ತಿದ್ದ ರೀತಿಯಲ್ಲಿ ಸಾಲಗಳು ದೊರೆಯುತ್ತಿಲ್ಲ. ಸಾಲ ಪಡೆದರೂ ಅದನ್ನು ತೀರಿಸುವ ಖಾತ್ರಿ ಈಗ ಇಲ್ಲ. ಇಂತಹ ಗೊಂದಲಗಳ ನಡುವೆ ಆರ್ಥಿಕ ಪರಿಸ್ಥಿತಿ ಇಡೀ ವ್ಯವಸ್ಥೆಯನ್ನು ಏರುಪೇರಾಗಿಸಿದೆ.
ಯಾವುದೇ ಪತ್ರಿಕೆಗಳನ್ನು ಒಮ್ಮೆ ಗಮನಿಸಿದರೆ ದೇಶದ ಉದ್ದಗಲಕ್ಕೂ ಉದ್ಯಮ ವಲಯ ತತ್ತರಿಸುತ್ತಿರುವುದು, ಕೈಗಾರಿಕೆಗಳು, ಸಂಸ್ಥೆಗಳು ಸ್ಥಗಿತಗೊಳ್ಳುವ ಆತಂಕ, ಉದ್ಯೋಗಿಗಳನ್ನು ತೆಗೆದು ಹಾಕುವ ಸೂಚನೆ… ಇಂತಹ ವಿಷಯಗಳು ಪ್ರತಿದಿನ ಸಿಗುತ್ತವೆ. ಹಾಗಾದರೆ ಉದ್ಯಮ ವಲಯ ಈ ಪರಿಸ್ಥಿತಿಗೆ ಬರಲು ಕಾರಣವಾದರೂ ಏನು? ಉದ್ಯಮಿಗಳು ಆತಂಕಕ್ಕೊಳಗಾಗಲು ಇರುವ ಅಡೆತಡೆಗಳಾದರೂ ಯಾವುವು? ಈ ಪ್ರಶ್ನೆಗಳು ಈಗ ಸಾಮಾನ್ಯವಾಗಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
