ತುಮಕೂರು
ಬರಪೀಡಿತ ಪ್ರದೇಶಗಳ ಬಡ ಜನರ ಬದುಕು ಮೂರಾಬಟ್ಟೆಯಾಗಿದೆ. ಮಳೆಯಿಲ್ಲದೆ ಸತತವಾಗಿ ಎದುರಾಗಿರುವ ಬರಗಾಲ ಬದುಕನ್ನೇ ಹೈರಾಣಾಗಿಸಿದ್ದರೆ ಇಸ್ಪೀಟ್ ಮತ್ತು ಮಟ್ಕಾದಂಧೆ ಇಡೀ ಕುಟುಂಬಗಳನ್ನು ಸರ್ವನಾಶ ಮಾಡುತ್ತಿವೆ. ಅದೆಷ್ಟೋ ಕುಟುಂಬಗಳ ಮಹಿಳೆಯರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ಬಡಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಈ ಕಣ್ಣಾಮುಚ್ಚಾಲೆ ಆಟಗಳು ಮೇಲ್ನೋಟಕ್ಕೆ ಕಾಣಿಸುವುದಿಲ್ಲ. ಇವೆಲ್ಲ ಬಹಿರಂಗವಾಗಿ ನಡೆಯುವ ಆಟಗಳಲ್ಲ. ಕೆಲವೇ ಕಡೆ ಸೀಮಿತ ಪ್ರದೇಶಗಳಲ್ಲಿ ನಡೆಯುವ ಆಟಗಳಿಗೆ ಹೆಚ್ಚಾಗಿ ಬಲಿಯಾಗುತ್ತಿರುವವರು ಬಡಜನರು, ಕೂಲಿ ಕಾರ್ಮಿಕರು. ದಿನವಿಡೀ ಸಂಪಾದಿಸಿದ ಹಣವನ್ನು ಈ ದಂಧೆಗೆ ಸುರಿದು ತಮ್ಮ ಬದುಕನ್ನೇ ದುರ್ಬರ ಮಾಡಿಕೊಳ್ಳುತ್ತಿದ್ದಾರೆ.
ಇಡೀ ಜಿಲ್ಲೆಯಲ್ಲಿ ಪಾವಗಡ ಈ ಆಟಗಳಿಗೆ ಹೆಸರುವಾಸಿ. ಹಿಂದಿನಿಂದಲೂ ಇಂತಹ ಆಟಗಳಿಂದಲೇ ತನ್ನ ಏಕಚಕ್ರಾಧಿಪತ್ಯವನ್ನು ಉಳಿಸಿಕೊಂಡೇ ಬಂದಿರುವ ಪಾವಗಡ ತಾಲ್ಲೂಕು ಈಗ ಮತ್ತೆ ಅಕ್ರಮ ಚಟುವಟಿಕೆಗಳಿಗೆ ಹೆಸರುವಾಸಿಯಾಗುತ್ತಿದೆ. ಹಿಂದೆ ನಕ್ಸಲರ ಚಟುವಟಿಕೆಗಳಿಗೆ ಹೆಸರಾಗಿತ್ತು. ಕ್ರಮೇಣ ನಕ್ಸಲ್ ಚಟುವಟಿಕೆ ಮರೆಯಾದಂತೆ ಮಟ್ಕಾ ಮತ್ತು ಇಸ್ಪೀಟ್ ದಂಧೆ ವ್ಯಾಪಕವಾಗಿ ಹರಡಿದೆ. ಇದನ್ನು ಹತ್ತಿಕ್ಕುವ ಪ್ರಯತ್ನಗಳಂತೂ ಆಗಿಲ್ಲ.
ಪಾವಗಡ ಮಾತ್ರವೇ ಈ ಆಟಗಳಿಗೆ ಸೀಮಿತವಾಗಿಲ್ಲ. ಅದಕ್ಕೆ ಹೊಂದಿಕೊಂಡಿರುವ ಮಧುಗಿರಿ, ಶಿರಾ, ಹುಳಿಯಾರು ಈ ಭಾಗಗಳಲ್ಲಿಯೂ ಇಸ್ಪೀಟ್, ಮಟ್ಕಾ ದಂಧೆಯ ಕರಾಮತ್ತು ಎಗ್ಗಿಲ್ಲದೆ ನಡೆಯುತ್ತಿದೆ. ನಗರ ಸೇರಿದಂತೆ ಆಯಾ ತಾಲ್ಲೂಕುಗಳ ವಿವಿಧ ಗ್ರಾಮಗಳಿಂದ ಮಟ್ಕಾ ಚೀಟಿ ಬರೆಯುವವರು (ಬೀಟರ್ ಗಳು) ಗುಪ್ತವಾಗಿ ಹೋಟೆಲ್‍ಗಳು, ಸಣ್ಣಪುಟ್ಟ ಟೀ ಅಂಗಡಿ, ಮದ್ಯದಂಗಡಿ, ಚಿಲ್ಲರೆ ಅಂಗಡಿಗಳನ್ನು ಗುರುತಿಸಿಕೊಂಡಿದ್ದು, ಗ್ರಾಹಕರ ಸೋಗಿನಲ್ಲಿ ಮಟ್ಕಾ ಚೀಟಿಗಳನ್ನು ಬರೆದುಕೊಂಡು ಹೋಗುತ್ತಿದ್ದಾರೆ.
ಒಬ್ಬ ವ್ಯಕ್ತಿ ಈ ಜಾಡಿನೊಳಗೆ ಬಿದ್ದನೆಂದರೆ ಆತ ಮತ್ತೆ ವಾಪಸ್ ಬರಲಾರ. ಅಂತಹ ವಿಷಮ ಸ್ಥಿತಿಗೆ ಸಿಲುಕಿ ಬಿಡುತ್ತಾನೆ. ಏನೋ ಸಿಗುತ್ತದೆ ಎಂಬ ಆಸೆಗೆ ಬಿದ್ದು ತನ್ನ ಜೀವನವನ್ನು ಅದರಲ್ಲಿಯೇ ಕೊನೆಗಾಣಿಸಿಕೊಳ್ಳುತ್ತಾನೆ.
ಮಟ್ಕಾದಲ್ಲಿ 6 ದಿನಗಳ ಆಟ ಹೆಚ್ಚು ಫೇಮಸ್.ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಸಂಜೆ ಈ ನಂಬರ್ ಗೇಮ್ ಆಟ ನಡೆಯುತ್ತದೆ. ಬೀಟರ್ (ಏಜೆಂಟ್) ಹಣ ಕಟ್ಟಿಸಿಕೊಳ್ಳುತ್ತಾನೆ. ಎಲ್ಲೋ ಮುಂಬೈನಲ್ಲಿರುವ ಮಾಲೀಕನೊಂದಿಗೆ ಈತನ ಸಂಪರ್ಕವಿರುತ್ತದೆ. ಬೇರೆ ಯಾರಿಗೂ ಈ ಮಾಲೀಕನ ಸಂಪರ್ಕ ಇರುವುದಿಲ್ಲ. ಹೀಗಾಗಿ ಎಲ್ಲವೂ ಅಯೋಮಯ. ಆಟ ಮಾತ್ರ ಸಲೀಸಾಗಿ ನಡೆಯುತ್ತಾ ಸಾಗುತ್ತದೆ.
ತನ್ನ ನಂಬರ್‍ಗೆ ಅದೃಷ್ಟ ಒಲಿದರೆ ಹಿಗ್ಗಿ ಹಿರೇಕಾಯಿ ಆಗುತ್ತಾರೆ. ಒಲಿಯದಿದ್ದರೆ ಸಪ್ಪೆ ಮೋರೆ ಹಾಕಿಕೊಂಡು ಹೋಗುತ್ತಾರೆ. ಮತ್ತೆ ಬರುತ್ತಾರೆ. ಇದು ನಿರಂತರ ಮುಗಿಯದ ಕಥೆ. ಇಲ್ಲಿ ಪಡೆದುಕೊಂಡುವರಿಗಿಂತ ಕಳೆದು ಕೊಂಡವರೇ ಹೆಚ್ಚು.
1 ರೂ.ಗೆ 7 ರೂಪಾಯಿ, 10 ರೂ.ಗಳಿಗೆ 70 ರೂಪಾಯಿ, 100 ರೂ.ಗೆ 700 ರೂಪಾಯಿ ಹೀಗೆ ನಂಬರ್ ಆಟ ನಡೆಯುತ್ತದೆ. ಕನಿಷ್ಠ ಮೊತ್ತದ ಹಣ ಹಾಕಿ ಬಂಪರ್ ಲಾಟರಿ ಪಡೆಯುವ ಈ ಆಟಗಳು ಕೂಲಿ ಕಾರ್ಮಿಕರ ಗಮನ ಸೆಳೆಯುತ್ತವೆ. ಹೋದರೆ ಕನಿಷ್ಠ ಹಣ, ಬಂದರೆ ಬಂಪರ್ ಹಣ ಎಂದು ಹಣ ತೊಡಗಿಸುವ ಮಂದಿಗೆ ತನ್ನ ಜೇಬಿನ ದುಡ್ಡು ಖಾಲಿಯಾಗುತ್ತಾ ಹೋಗುತ್ತದೆ ಎಂಬ ಅರಿವು ಬರುವುದೇ ಇಲ್ಲ.
ದಿನವಿಡೀ ದುಡಿದು ಮನೆಗೆ ಸೇರಿಕೊಳ್ಳಬೇಕಾದ ಕೂಲಿ ಕಾರ್ಮಿಕ ನಿಧಾನವಾಗಿ ಮಟ್ಕಾ ಸೆಂಟರ್‍ಗಳತ್ತ ಹೆಜ್ಜೆ ಹಾಕುತ್ತಾನೆ. ತನ್ನ ಮನೆಯ ಮಡದಿ ಮಕ್ಕಳಿಗಿಂತ ಹೆಚ್ಚಿನ ಪ್ರೀತಿ ಈ ಸೆಂಟರ್‍ಗಳ ಮೇಲೆ. ಕುಡಿತದ ಚಟಕ್ಕೂ ಬಲಿಯಾಗಿ ತನ್ನ ದುಡಿಯಮೆ ಭಾಗವೆಲ್ಲಾ ಇದಕ್ಕೆ ವ್ಯಯವಾಗುತ್ತದೆ. ಹೆಂಡತಿ ಮಕ್ಕಳು ಉಪವಾಸ ಬೀಳುತ್ತಾರೆ. ಪಾವಗಡ ಸುತ್ತಮುತ್ತಲ ಪ್ರದೇಶಗಳಿಗೆ ತೆರಳಿ ನೋಡಿದರೆ ಇಂತಹ ಆಟಗಳಿಗೆ ಬಲಿಯಾಗಿರುವ ಕುಟುಂಬಗಳ ದೈನೇಸಿ ಸ್ಥಿತಿ ಅರ್ಥವಾಗುತ್ತದೆ.
ಮಟ್ಕಾ ಆಟ ಕೆಲವು ಪ್ರದೇಶಗಳಲ್ಲಷ್ಟೇÀ ನಡೆಯುತ್ತಿದ್ದರೆ, ಇಸ್ಪೀಟ್ ದಂಧೆಯಂತೂ ಇಡೀ ಜಿಲ್ಲೆಯನ್ನು ಆವರಿಸಿದೆ. ಇಸ್ಪೀಟ್ ಆಟಕ್ಕೆ ಇಂತಹ ಪ್ರದೇಶವೆ ಎಂದು ನಿಗದಿಯಾಗಿಲ್ಲ. ಊರುಗಳ ಹಳ್ಳ-ಕೊಳ್ಳಗಳು, ಕೆರೆಯಂಗಳ, ಪಾಳು ಮನೆಗಳು, ತೋಟಗಳಲ್ಲಿ, ತೋಪುಗಳಲ್ಲಿ ಇಸ್ಪೀಟ್ ದಂಧೆ ವ್ಯಾಪಕವಾಗಿದೆ. ಬಡವರಷ್ಟೇ ಅಲ್ಲದೆ, ಮಧ್ಯಮ ವರ್ಗದವರು ಇದಕ್ಕೆ ಸಿಲುಕಿರುವುದು ದುರಂತ. ಪಾವಗಡದ ಗಡಿ ಪ್ರದೇಶಗಳಿಗೆ ಆಂಧ್ರದಿಂದ ಆಟಗಾರರು ಬಂದು, ಅಂದರ್-ಬಾಹರ್ ಜೂಜಿನಲ್ಲಿ ಭಾಗಿಯಾಗುತ್ತಿದ್ದಾರೆ ಎಂಬ ಆರೋಪಗಳಿವೆ. ಮೀಟರ್ ಬಡ್ಡಿ ದಂಧೆಕೋರರು ಈ ಆಟಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಪಾವಗಡಕ್ಕೆ ಹಿಂದೂಪುರ, ಗೌರಿಬಿದನೂರು ಇವೆಲ್ಲ ಪ್ರದೇಶಗಳು ಹೆಚ್ಚು ನಂಟು ಹೊಂದಿವೆ.
ಪ್ರತಿದಿನ ಸಂಜೆ ವೇಳೆಗೆ ಮಟ್ಕಾ (ನಂಬರ್ ಗೇಮ್) ಅದೃಷ್ಟದ ಆಟ ನಡೆಯುತ್ತದೆ. 1 ರಿಂದ 99ರ ಅಂಕೆಯವರೆಗೆ ಒಬ್ಬ ವ್ಯಕ್ತಿ ಎಷ್ಟು ನಂಬರ್‍ಗಳಿಗಾದರೂ ಆಟ ಆಡಬಹುದು. ತನಗೆ ಬೇಕಾದ ನಂಬರ್ ಆಯ್ಕೆ ಮಾಡಿಕೊಂಡು ಆ ಸಂಖ್ಯೆಗೆ ಹಣ ತೊಡಗಿಸುತ್ತಾನೆ. ನಂಬರ್ ಗೇಮ್‍ನಲ್ಲಿ ಅದೃಷ್ಟ ಒಲಿದವರಿಗೆ ಬೀಟರ್ ಹಣ ಪಾವತಿಸುತ್ತಾನೆ. 5ನೇ ಮನೆ ಆಟ, ಮಿಲನ್ ನೈಟ್ (6ನೇಮನೆ ಆಟ), ಕಲ್ಯಾಣಿ ಮಟ್ಕಾ, ಓ.ಸಿ., ಓಪನ್ ಕ್ಲೋಸ್ ಇತ್ಯಾದಿ ಸಾಂಪ್ರದಾಯಿಕ ಹೆಸರುಗಳಿಂದ ಈ ಆಟ ಪರಿಚಿತ.
ಆನ್‍ಲೈನ್ ಮಟ್ಕಾ:
ಸ್ಮಾರ್ಟ್ ಫೋನ್‍ಗಳು ಎಲ್ಲರ ಕೈಗೆ ಸಿಗುವಂತಾದ ಮೇಲೆ ಇತ್ತೀಚೆಗೆ ಆನ್‍ಲೈನ್ ಮಟ್ಕಾ ಹೆಚ್ಚು ಚಾಲ್ತಿಗೆ ಬರತೊಡಗಿದೆ. ಸಾಂಪ್ರದಾಯಿಕ ಮಟ್ಕಾದಂತೆ ಇದಕ್ಕಾಗಿ ಯಾವುದೇ ಅಡ್ಡೆಗಳೂ ಬೇಕಿಲ್ಲ. ಇಂತಹ ಕಡೆಗೆ ಹೋಗಬೇಕು, ಅಲ್ಲಿ ನಂಬರ್ ಗೇಮ್‍ನಲ್ಲಿ ತೊಡಗಿಸಿಕೊಳ್ಳಬೇಕು ಎಂಬ ನಿಬಂಧನೆಗಳಿಲ್ಲ. ಜನರು ಒಟ್ಟಿಗೆ ಒಂದು ಕಡೆ ಸೇರುವ ಅಗತ್ಯವೂ ಇಲ್ಲ. ಮೊಬೈಲ್ ಗಳು ಜನರ ಕೈಯಲ್ಲಿ ಹರಿದಾಡುತ್ತಿದ್ದಂತೆ ಇಂಟರ್‍ನೆಟ್ ಬಳಕೆ ಹೆಚ್ಚಾದಂತೆ ಆನ್‍ಲೈನ್ ಮಟ್ಕಾ ಈಗ ಹೊಸ ಹೈಟೆಕ್ ರೂಪ ಪಡೆದುಕೊಳ್ಳುತ್ತಿದೆ. ಇದು ಇನ್ನೂ ಹೆಚ್ಚು ಪ್ರಚಲಿತಕ್ಕೆ ಬಾರದೆ ಹೋದರೂ ಕೆಲವು ಕಡೆಗಳಲ್ಲಿ ಕೆಲವರಿಗಷ್ಟೇ ಪರಿಚಯವಾದಂತಿದೆ.
ಇನ್ನೊಂದು ಆತಂಕಕಾರಿ ವಿಷಯವೆಂದರೆ ಹಿಂದೆಲ್ಲ ಸಂಜೆಯ ವೇಳೆ ಮಟ್ಕಾದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ದಿನಕ್ಕೆ ಎರಡು ಬಾರಿ ಅಂದರೆ ಮಧ್ಯಾಹ್ನ ಅಥವಾ ಸಂಜೆ ಹೀಗೆ ಎರಡು ಬಾರಿ ಮಾತ್ರವೇ ತೊಡಗಿಸಿಕೊಳ್ಳುತ್ತಿದ್ದ ಜನ ಈಗ ಆನ್‍ಲೈನ್ ಆಟದಲ್ಲಿ ತೊಡಗಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಮಿಕರು, ಕೊಳಗೇರಿಗಳಲ್ಲಿ ವಾಸಿಸುವವರು, ಆಟೋ ಚಾಲಕರು, ದಿನಗೂಲಿ ನೌಕರರು, ಮಧ್ಯಮ ವರ್ಗದವರು ಈ ಆನ್‍ಲೈನ್ ಆಟಕ್ಕೆ ಸಿಲುಕುತ್ತಿದ್ದಾರೆ.
ಆನ್‍ಲೈನ್ ಮಟ್ಕಾ ಏಕಪ್ರಕಾರದ ಸ್ವರೂಪ ಹೊಂದಿಲ್ಲ. ಇದರಲ್ಲಿಯೂ ಹತ್ತಾರು ಸ್ವರೂಪಗಳಿವೆ. ಹಲವು ವೆಬ್‍ಸೈಟ್‍ಗಳು ವಿಭಿನ್ನ ರೀತಿಯ ಆಟದಲ್ಲಿ ತೊಡಗಿಸುತ್ತವೆ. ಇದಕ್ಕೆಲ್ಲ ಏಜೆಂಟರುಗಳು ಇರುತ್ತಾರೆ. ಬೆಳಗ್ಗೆ ಅಥವಾ ಸಂಜೆಯ ವೇಳೆ ಗ್ರಾಹಕರಿಂದ (ಆಟ ಆಡುವವರಿಂದ) ಹಣ ಸಂಗ್ರಹಿಸಿ ನಂಬರ್ (ಅಂಕಿ) ಪಡೆದುಕೊಳ್ಳುತ್ತಾರೆ. ನಿರ್ದಿಷ್ಟ ವೆಬ್‍ಸೈಟ್‍ನಲ್ಲಿ ನಿಗದಿತ ಸಮಯಕ್ಕೆ ಸಂಖ್ಯೆಗಳು ಬರುತ್ತವೆ. ಇಂತಹ ಆಟಗಳು ಗಂಟೆಗೊಮ್ಮೆ ನಡೆಯಲಿವೆ ಎಂದೂ ಹೇಳಲಾಗುತ್ತಿದೆ.
ಛಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ