ಮಟ್ಕಾ ದಂಧೆ ನಿಯಂತ್ರಿಸುವಲ್ಲಿ ಎದ್ದು ಕಾಣುತ್ತಿರುವ ಪೊಲೀಸ್ ವೈಫಲ್ಯ.!

ಪೊಲೀಸ್ ವೈಫಲ್ಯ
      ಕದ್ದೂ ಮುಚ್ಚಿ ನಡೆಯುವ ಈ ಆಟಗಳೆಲ್ಲ ಸಾರ್ವಜನಿಕವಾಗಿ ಬಹಿರಂಗವಾಗದೇ ಇರಬಹುದು. ಆದರೆ ಯಾವ ಸ್ಥಳಗಳಲ್ಲಿ ಈ ಆಟಗಳು ನಡೆಯುತ್ತವೆ ಎಂಬುದು ಪೊಲೀಸರಿಗೆ ನಿಖರವಾಗಿ ಗೊತ್ತು. ಮಟ್ಕಾದಂಧೆ ಮಟ್ಟ ಹಾಕಿ ಸಾರ್ವಜನಿಕ ವಲಯದಲ್ಲಿ ನೆಮ್ಮದಿ ತರಬೇಕಾಗಿರುವ ಪೊಲೀಸರು ಅದೇಕೋ ಗೊತ್ತಿದ್ದೂ ಗೊತ್ತಿಲ್ಲದವರಂತೆ ವರ್ತಿಸುತ್ತಾರೆ. ಯಾವಾಗಲೋ ಒಮ್ಮೆ ದಾಳಿ ಮಾಡುವುದನ್ನು ಬಿಟ್ಟರೆ ಕಡಿವಾಣ ಹಾಕುವ ಖಡಕ್ ನಿರ್ಧಾರಗಳು ಮಾತ್ರ ಇಲಾಖೆಯಲ್ಲಿ ಕೈಗೊಳ್ಳಲಾಗುತ್ತಿಲ್ಲ. 
      ಇಂತಹ ಕಡೆ ಮಟ್ಕಾ ನಡೆಯುತ್ತಿದೆ ಎಂದು ಯಾರಾದರೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೆ ಆ ಮಾಹಿತಿ ಬಹುಬೇಗನೆ ಮಟ್ಕಾ ಕೇಂದ್ರಗಳಿಗೆ ರವಾನೆಯಾಗುತ್ತದೆ. ವ್ಯವಸ್ಥೆ ಇಷ್ಟು ಚುರುಕಾಗಿದೆ ಎಂದರೆ ಪೊಲೀಸರು ಇದರಲ್ಲಿ ಶಾಮೀಲಲ್ಲವೆ ಎಂಬುದು ಸಹಜವಾಗಿ ಕೇಳಿ ಬರುವ ಪ್ರಶ್ನೆ. ಮಟ್ಕಾ, ಜೂಜಾಟ ಎಲ್ಲೆಲ್ಲಿ ನಡೆಯುತ್ತಿದೆಯೋ ಅಲ್ಲೆಲ್ಲಾ ಪೊಲೀಸರಿಗೆ ಸುಗ್ಗಿಯಂತೆ. ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾದ ಒಂದೆರಡು ದಿನ ಸ್ಥಗಿತಗೊಂಡಂತೆ ಕಂಡುಬರುವ ಆಟಗಳು ಮತ್ತೆ ಎರಡೇ ದಿನಗಳಲ್ಲಿ ಕಾಣಿಸಿಕೊಳ್ಳುತ್ತವೆ. 
   
      ಮಟ್ಕ, ಜೂಜಾಟ, ಮರಳುದಂಧೆ ಇತ್ಯಾದಿಗಳು ಕಾನೂನಿನ ಯಾವ ಭಯವೂ ಇಲ್ಲದೇ ರಾಜಾರೋಷವಾಗಿ ನಡೆಯುತ್ತಿರುವುದರ ಹಿಂದೆ ಪೋಲೀಸರ ರಕ್ಷಣೆ ಇದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಆಯಾ ವ್ಯಾಪ್ತಿಯ ಪೋಲೀಸ್ ಠಾಣೆಯ ಕಾನ್ಸ್‍ಟೇಬಲ್‍ನಿಂದ ಹಿಡಿದು ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳವರೆಗೂ ಈ ದಂಧೆಗಳ ಬಗ್ಗೆ ಮಾಹಿತಿ ಇರುತ್ತದೆ. 
     
     ಎಲ್ಲೆಲ್ಲಿ ಇಂತಹ ಅಕ್ರಮ ದಂಧೆಗಳು ನಡೆದುಕೊಂಡು ಬಂದಿವೆಯೋ ಅಲ್ಲೆಲ್ಲಾ ಕೆಲವು ಪೋಲೀಸರು ಇಂತಹ ಅಕ್ರಮ ಚಟುವಟಿಕೆಗಳ ದಂಧೆಕೋರರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಒಂದು ಠಾಣೆಯಲ್ಲಿ ಇಂತಿಷ್ಟು ವರ್ಷ ಇರಬೇಕೆಂಬ ನಿಯಮವಿದ್ದರೂ ಕೆಲವರು ಮಾತ್ರ ಅಲ್ಲೇ ಠಿಕ್ಕಾಣಿ ಹೂಡಿರುತ್ತಾರೆ. ಇವರೇ ಇಂತಹ ದಂಧೆಗಳಿಗೆ ರಕ್ಷಣೆ ನೀಡುತ್ತಾ ಬಂದಿರುತ್ತಾರೆ.
     ಐದರಿಂದ  ಹತ್ತು ವರ್ಷಗಳ ಕಾಲ ಆ ಪೋಲೀಸ್ ಠಾಣೆಯ ಸರಹದ್ದಿನಲ್ಲೇ ಇವರು ಕರ್ತವ್ಯ ನಿರ್ವಹಿಸುತ್ತಾರೆ. ಎಲ್ಲಾ ಮಾಹಿತಿಯು ಇವರ ಬಳಿ ಇರುತ್ತದೆ. ಇವರೇ ಮೇಲಾಧಿಕಾರಿಗಳಿಗೆ ಮಾಹಿತಿ ರವಾನಿಸುತ್ತಾರೆ. ತಮಗೆ ಬೇಕಾದವರನ್ನು ರಕ್ಷಿಸುವ, ಬೇಡವಾದವರನ್ನು ಕಾನೂನಿನ ಕುಣಿಕೆಗೆ ಸಿಲುಗಿಸುವ ಕೆಲಸವನ್ನು ಚಾಚುತಪ್ಪದೇ  ಮಾಡುತ್ತಾರೆ. ಕಳ್ಳ ದಂಧೆಕೋರರಿಗೂ ಇಂತಹ ಕೆಲವು ಪೋಲೀಸರಿಗೂ ನಿಕಟ ಸಂಬಂಧ. ಈ ಪೋಲೀಸರನ್ನು ಕಂಡು ಹೆದರಿ ಓಡಿ ಹೋಗಬೇಕಾದ ದಂಧೆಕೋರರು ನಸುನಗುತ್ತಾ ನಿಲ್ಲುತ್ತಾರೆ. ಅವರ ಜೊತೆ ಟೀ ಕುಡಿಯುತ್ತಾರೆ. ಸಿಗರೇಟ್ ಸೇದುತ್ತಾರೆ. ಜೊತೆಯಲ್ಲಿಯೇ ಹೋಗುತ್ತಾರೆ. 
     
       ಸ್ಥಳೀಯ ಪೋಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜಿಲ್ಲಾ ಮಟ್ಟಕ್ಕೆ ದೂರು ರವಾನಿಸಿದರೆ ಆಗಲೂ ಪರಿಸ್ಥಿತಿ ಭಿನ್ನವೇನಲ್ಲಾ. ಈ ದೂರು ಮಗದೊಂದು ದಾರಿ ಮಾಡಿಕೊಡುತ್ತದೆ. ದೂರು ಬಂದಿದೆ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಹೇಳುತ್ತಲೇ ಮತ್ತಷ್ಟು ಪೀಕುವ ಕಾರ್ಯ ನಡೆಯುತ್ತದೆ. ಒಮ್ಮೆ, ಮಗದೊಮ್ಮೆ ಹೀಗೆ ದಂಧೆಯಲ್ಲಿ ತೊಡಗಿಸಿಕೊಂಡವರು ಪೋಲೀಸರಿಗೆ ಭಕ್ಷೀಸು ನೀಡುತ್ತಾ ನಿರಾತಂಕವಾಗಿ ತಮ್ಮ ಕೆಲಸ ಮುಂದುವರೆಸುತ್ತಾರೆ. 
       
       ಈ ಅಕ್ರಮಕೂಟಗಳಲ್ಲಿ ಭಾಗಿಯಾದ ಆರೋಪದ ಮೇರೆಗೆ ಅಂತಹ ಪೋಲೀಸರನ್ನು ವರ್ಗಾವಣೆ ಮಾಡಿಸಲು ಯಾರಾದರೂ ಪ್ರಯತ್ನಿಸಿದರೆ ಅದು ಸಹ ತಾತ್ಕಾಲಿಕ. ಅಕ್ರಮ ಚಟುವಟಿಕೆಗಳ ದಂಧೆಕೋರರೇ ಆ ಪೋಲೀಸರನ್ನು ತಮ್ಮ ವ್ಯಾಪ್ತಿಯ ಠಾಣೆಗೆ ಬರುವಂತೆ ನೋಡಿಕೊಳ್ಳುತ್ತಾರೆ. ಅದಕ್ಕಾಗಿ ಏನು ಬೇಕೋ ಅಷ್ಟು ಖರ್ಚು ಮಾಡಲು ಸಿದ್ದರಿರುತ್ತಾರೆ. ಪರಿಸ್ಥಿತಿ ಹೀಗಿರುವಾಗ ನಿಯಂತ್ರಣ ಹೇಗೆ ಸಾಧ್ಯ?
       
      ಮಟ್ಕ, ಜೂಜಾಟ ನಡೆಯುತ್ತಿದೆ ಎಂದು ಮಾಹಿತಿ ಬಂದರೆ ಪೋಲೀಸರು ಅಲ್ಲಿಗೆ ತೆರಳುತ್ತಾರೆ. ಜೂಜಾಟ ಪ್ರಕರಣಗಳಲ್ಲಿ ಪತ್ರಿಕೆಗಳಿಗೆ ಮಾಹಿತಿ ಬಂದಷ್ಟು ಮಟ್ಕ ವಿಷಯಗಳಲ್ಲಿ ಯಾವುದೇ ಮಾಹಿತಿ ಹೊರ ಬರುವುದಿಲ್ಲ. ದಾಖಲಾತಿಯಲ್ಲಿ ತೋರಿಸುವ ಸಲುವಾಗಿ ಅನಿವಾರ್ಯವಾಗಿ ಕೆಲವು ಪ್ರಕರಣಗಳನ್ನು ದಾಖಲಿಸುತ್ತಾರೆ. ಮಟ್ಕ, ಜೂಜಾಟದಲ್ಲಿ ತೊಡಗಿದ್ದವರ ವಿರುದ್ದ ಕ್ರಮ ಎಂದು ಯಾವಾಗಲೋ ಒಮ್ಮೆ ಮಾಹಿತಿ ಹೊರ ಬರುತ್ತದೆ.
       ಕೇಸು ದಾಖಲಿಸಿ ಕೈ ತೊಳೆದುಕೊಂಡರೆ ನಂತರ ದಿನಗಳಲ್ಲಿ ಮತ್ತೆ ಯಥಾಸ್ಥಿತಿಯಾಗಿ ಎಲ್ಲವೂ ಮುಂದುವರೆಯುತ್ತದೆ. ಈ ಅಕ್ರಮ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುವುದೇ ಇಲ್ಲ. ಚಟುವಟಿಕೆಗಳನ್ನು ನಡೆಸುವವರಿಗೂ ಗೊತ್ತು. ಅನಿವಾರ್ಯವಾಗಿ ಪೋಲೀಸರು ನಮ್ಮ ವಿರುದ್ದ ಪ್ರಕರಣ ದಾಖಲಿಸಿದ್ದಾರೆ ಎಂದು. ಆನಂತರ ಈ ಚಟುವಟಿಕೆಗಳು ಮತ್ತೆ ಚಾಲನೆ ಪಡೆಯುತ್ತವೆ.
       ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕಿ ಸಾರ್ವಜನಿಕ ನೆಮ್ಮದಿ ಕಾಪಾಡಬೇಕಿರುವ ಪೊಲೀಸ್ ಇಲಾಖೆ ತನ್ನ ಕಾರ್ಯದಿಂದ ವಿಮುಖವಾಗುತ್ತಿದೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡುತ್ತಿರುವುದು ಸಹಜ. ಇಲಾಖೆಯಲ್ಲಿ ಕೆಲವರು ಪ್ರಾಮಾಣಿಕರು ಇರಬಹುದು. ಕರ್ತವ್ಯನಿಷ್ಠೆ ಪ್ರದರ್ಶಿಸಬಹುದು. ಆದರೆ ಅಂತಹವರಿಗೆ ಬೆಲೆ ಸಿಗುತ್ತಿಲ್ಲ. ಖಡಕ್ ಆಗಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಬಹು ಬೇಗನೆ ಎತ್ತಂಗಡಿಯಾಗುತ್ತಾರೆ.
     ಇಲಾಖೆಯ ಒಳಗಿರುವವರೇ ಇದಕ್ಕೆ ಸಾಥ್ ನೀಡುತ್ತಾರೆ. ಅಂತಹ ವ್ಯವಸ್ಥೆಯಲ್ಲಿ ಇನ್ನೇನು ನಿರೀಕ್ಷಿಸಲು ಸಾಧ್ಯ? ಸಣ್ಣಪುಟ್ಟ ವ್ಯಾಜ್ಯಗಳು ಪೊಲೀಸ್ ಠಾಣೆ ಮೆಟ್ಟಿಲು ಏರಿದಾಗ ತಮ್ಮ ಕಾರ್ಯವ್ಯಾಪ್ತಿಗೆ ಬಾರದೆ ಹೋದರೂ ಠಾಣೆಗೆ ಬಂದವರನ್ನು ಹಿಂಸಿಸುವ, ಪದೆ ಪದೇ ಠಾಣೆಗೆ ಕರೆಸಿಕೊಳ್ಳುವ ಕರಾಮತ್ತು ನಡೆಸುವವರಿಗೆ ಸಾಮಾನ್ಯ ಜನರ ಕಷ್ಟಕಾರ್ಪಣ್ಯಗಳು ಹೇಗೆ ತಾನೇ ಅರ್ಥವಾದೀತು? ಮಟ್ಕಾ, ಜೂಜಾಟ ಮತ್ತಿತರ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬಂದರೂ ಅದನ್ನು ಹತ್ತಿಕ್ಕುವ ಪ್ರಯತ್ನಗಳು ಮತ್ತು ಕಟ್ಟುನಿಟ್ಟಿನ ಕ್ರಮಗಳು ಜರುಗುತ್ತಿಲ್ಲ ಎಂದಾದರೆ ಪೊಲೀಸ್ ವ್ಯವಸ್ಥೆ ಇರುವುದಾದರೂ ಯಾರಿಗಾಗಿ ಮತ್ತು ಏತಕ್ಕಾಗಿ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡುವುದು ಸಹಜ. ಕಳ್ಳರಿಗೆ, ಅಕ್ರಮ ಚಟುವಟಿಕೆಗಳ ದಂಧೆಕೋರರಿಗೆ ಸಿಂಹಸ್ವಪ್ನವಾಗಿರಬೇಕಾದ ಪೊಲೀಸರು ಅಂತಹ ವರ್ಗಕ್ಕೆ ಸ್ನೇಹಿತರಾಗುತ್ತಿರುವುದು ನಾಗರಿಕ ವ್ಯವಸ್ಥೆಗೆ ಹಿಡಿದ ಕಳಂಕ. 
ಕುಟುಂಬಗಳ ಕಣ್ಣೀರು 
      ಪಾವಗಡ ತಾಲ್ಲೂಕು ಸೇರಿದಂತೆ ಜಿಲ್ಲೆಯ ಕೆಲವು ಭಾಗಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಮಟ್ಕಾ ಜೂಜಿನಿಂದಾಗಿ ಹಲವು ಕುಟುಂಬಗಳು ಕಣ್ಣೀರಿನಲ್ಲಿ ಮುಳುಗಿ ಹೋಗಿವೆ. ಯಾರೋ ಈ ಆಟಕ್ಕೆ ಹೋದನೆಂದು ಮತ್ತೊಬ್ಬ ಹಿಂಬಾಲಿಸುವುದು, ಆತನ ಹಿಂದೆ ಮಗದೊಬ್ಬ ಹೋಗುವುದು ಹೀಗೆ ನಿರಂತರ ಚಾಳಿಯಿಂದಾಗಿ ಕುಟುಂಬಗಳಲ್ಲಿ ಆರ್ಥಿಕ ಸಮಸ್ಯೆಗಳು ಹೆಚ್ಚುತ್ತಿವೆ.
      ದುಡಿದ ಹಣವನ್ನು ಇಂತಹ ದಂಧೆಗಳಿಗೆ ಬಳಸುತ್ತಿರುವ ಪರಿಣಾಮ ಹೆಂಡತಿ ಮಕ್ಕಳಿಗೆ ದವಸ ಧಾನ್ಯ ಪೂರೈಸಲಾಗದೆ ಎಷ್ಟೋ ಮಂದಿ ಮನೆಯ ಹೊರಗೆ ಉಳಿಯುತ್ತಿದ್ದಾರೆ. ಮನೆಗೆ ಹೋದರೆ ಹೆಂಡತಿ ಮಕ್ಕಳ ಕಾಟ ಎಂದರಿತ ಕೆಲವರು ಸ್ನೇಹಿತರ ಜೊತೆಯಲ್ಲಿ ಸುತ್ತತೊಡಗಿದ್ದಾರೆ. ಗಂಡನನ್ನು ಬಿಟ್ಟು ತವರು ಸೇರಿಕೊಂಡಿರುವ ಪತ್ನಿಯರ ಉದಾಹರಣೆಗಳು ಸಾಕಷ್ಟಿವೆ. 
       ಪ್ರತಿನಿತ್ಯ ಕೂಲಿನಾಲಿ ಮಾಡಿ ಬದುಕು ಸಾಗಿಸುವ ಮಂದಿ ಹಣದಾಸೆಗೆ ಬೆವರು ಸುರಿಸಿ ದುಡಿದದ್ದನ್ನೆಲ್ಲಾ ಮಟ್ಕಾ ಆಟದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಕೌಟುಂಬಿಕ ವ್ಯವಸ್ಥೆಯನ್ನೇ ಛಿದ್ರಗೊಳಿಸುತ್ತಿವೆ. ಇತ್ತೀಚೆಗಿನ ಆನ್‍ಲೈನ್ ಆಟಗಳು ಮೊಬೈಲ್ ಗೀಳು, ಕುಡಿತದ ಚಟಗಳಿಂದಾಗಿ ಸಂಸಾರವನ್ನೇ ಹಾಳು ಮಾಡಿಕೊಂಡಿರುವ ಉದಾಹರಣೆಗಳು ಹೇರಳವಾಗಿ ಸಿಗುತ್ತಿವೆ. 
       ಹಿಂದುಳಿದಿರುವ ಪಾವಗಡ, ಮಧುಗಿರಿ, ಶಿರಾ, ಹುಳಿಯಾರಿನಂತಹ ಪ್ರದೇಶಗಳಲ್ಲಿ ಈಗಾಗಲೇ ಅಕ್ರಮ ಮರಳು ಗಣಿಗಾರಿಕೆಯಿಂದ ಅಂತರ್ ಜಲ ಮಟ್ಟ ಕುಸಿದು ಹೋಗಿದೆ. ಎಲ್ಲಿ ನೋಡಿದರೂ ಮರಳು ಸಿಗುತ್ತಿಲ್ಲ. ನೀರು ಬರಿದಾಗಿದೆ. ಶಾಶ್ವತ ನೀರು ತರುವ ವ್ಯವಸ್ಥೆಗಳು ಇನ್ನೂ ಜೀವ ಪಡೆದಿಲ್ಲ. ಕೊಳವೆ ಬಾವಿಗಳು ಬತ್ತಿ ಹೋಗಿವೆ. ಜನರ ಜೀವನವೇ ರೌರವ ನರಕವಾಗಿದೆ. ಇಂತಹ ಸಮಸ್ಯೆಗಳ ನಡುವೆ ಮಟ್ಕಾ, ಜೂಜಾಟಗಳಿಗೆ ಸಿಲುಕಿಕೊಂಡರೆ ಪರಿಸ್ಥಿತಿ ಹೇಗಾಗಬೇಡ. ಸಂಸಾರಗಳು ಮತ್ತಷ್ಟು ಬೀದಿ ಪಾಲಾಗುವ ಮುನ್ನ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ. 
      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link