ಒಂಟಿ ದಾರಿಯಲ್ಲೊಬ್ಬ ದಾರಿ ಹೋಕ ನಡೆದುಕೊಂಡು ಬರುವಾಗ ಮಧ್ಯಾಹ್ನದ ಬಿಸಿಲಿಗೆ ಕಾದ ಭೂಮಿಯಲ್ಲಿ ಕಾಲಿಟ್ಟರೆ ಸುಟ್ಟು ಕರಕಲಾಗುವಂತೆ ಭಾಸವಾಗುತ್ತಿರುತ್ತದೆ. ಆತನು ಬಾಯಾರಿ ನೀರನ್ನು ಹುಡುಕುತ್ತಾ ನಿಧಾನವಾಗಿ ಸಾಗುತ್ತಿರುತ್ತಾನೆ. ದಾರಿ ಉದ್ದಕ್ಕೂ ಮರಗಳು ಇದ್ದರೂ ಬಿಸಿಲ ತಾಪ ಹೆಚ್ಚಿತ್ತು.
ಈತನ ಬಾಯರಿಕೆಯ ಬಿಸಿ ಹೆಚ್ಚಾಗಿ ನೀರಿಗಾಗಿ ಸುತ್ತಲೂ ಅಲೆದಾಡುತ್ತಾನೆ. ಆದರೆ ಅಲ್ಲಿ ಒಂದು ಮನೆಯು ಕಾಣಲಿಲ್ಲ, ಒಂದು ಕೊಳವು ಇಲ್ಲ. ಆತನಿಗೆ ತುಂಬಾ ನಿರಾಸೆಯಾಗುತ್ತದೆ. ಸ್ವಲ್ಪ ಮುಂದೆ ನಡೆದುಕೊಂಡು ಬರುವಾಗ ಅಲ್ಲಿ ಒಂದು ಪುಟ್ಟ ಗುಡಿಸಲು ಕಾಣುತ್ತದೆ. ಅಬ್ಬಾ! ಅನತಿದೂರದಲ್ಲಿ ಯಾವುದೋ ಒಂದು ಗುಡಿಸಲು ಗೋಚರಿಸುತ್ತಿದೆ. ಅಲ್ಲಿ ಯಾರಾದರು ಇದ್ದರೇನೋ? ಅಲ್ಲಿ ಹೋಗಿ ನೀರು ಕೇಳಿದರೆ ಬಾಯರಿಕೆ ಇಂಗಿಸಿಕೊಳ್ಳಬಹುದು ಎಂದು ಆತ ಗುಡಿಸಲಿನ ಬಳಿ ಹೋಗುತ್ತಾನೆ.
ಗುಡಿಸಲಿನ ಒಳಕ್ಕೆ ಕಾಲಿಡುತ್ತಿದಂತೆ ಅಜ್ಜನನ್ನು ಇವನನ್ನು ನೋಡಿ ಏನಾದರೂ ಸಹಾಯ ಬೇಕೆ ಮಗು ನಿನ್ನ ನೋಡಿದರೆ ತುಂಬಾ ದಣಿದಿರುವಂತೆ ಕಾಣುತ್ತದೆ. ಎಂದಾಗ ಅಜ್ಜ ಸ್ವಲ್ಪ ನೀರು ಕೊಡಿ ಎನ್ನುತ್ತಾನೆ. ನೀರನ್ನು ಕುಡಿದ ನಂತರ ಎಂತಹ ಬಿಸಿಲು ಅಜ್ಜಾ ಸ್ವಲ್ಪ ದೂರ ನಡೆಯುವುದರೊಳಗೆ ಆಯಾಸವಾಗಿ ಬಿಡುತ್ತದೆ. ದಾರಿಯಲ್ಲಿ ಒಂದು ನೀರಿನ ಕೊಳವು ಇಲ್ಲ. ನನ್ನ ಪಾಲಿಗೆ ನೀವು ದೇವರಂತೆ ಸಿಕ್ಕಿರಿ ಎಂದ.
ಅಜ್ಜ ತನ್ನ ಇಳಿವಯಸ್ಸಿನಲ್ಲೂ ಅನೇಕ ಮರಗಿಡಗಳನ್ನು ಬೆಳೆಸಿ ಅವುಗಳಿಗೆ ನೀರುಣಿಸುತ್ತಿದ್ದ. ಅವನು ಅವುಗಳಿಗೆ ನೀರು ಹಾಕಿ ತನ್ನ ಮಕ್ಕಳಂತೆ ಪೋಷಿಸುತ್ತಿರುವುದ್ದನ್ನು ಕಂಡ ದಾರಿ ಹೋಕನಿಗೆ ಅಜ್ಜ ಮಾಡುವ ಕೆಲಸಗಳು ಸೋಜಿಗವೆನ್ನಿಸಿ ‘ಇದೇನಜ್ಜ ಆ ಮರ ಗಿಡಗಳಿಗೆ ನೀರು ಹಾಕಿ ಹೊಸ ಹೊಸ ಗಿಡಗಳನ್ನು ನೆಡುತ್ತಿದ್ದೀರಲ್ಲಾ? ಅವುಗಳು ನಿಮಗೇನಾದರೂ ಫಲ ಕೊಡುತ್ತದೆಯೇ’? ಎಂದು ಪ್ರಶ್ನಿಸುತ್ತಾನೆ. ಆಗ ವೃದ್ದ ‘ಈ ಮರಗಳು ನಮ್ಮ ತಾತ ಮುತ್ತಾತಂದಿರು ನೀರು ಹಾಕಿ ಬೆಳೆಸಿದ್ದು ಈಗ ಇವೆಲ್ಲಾ ನಮಗೆ ಪ್ರಯೋಜನವಾಗುತ್ತಿದೆಯಲ್ಲ. ಮುಂದೊಂದು ದಿನ ಈ ಮರಗಳೆಲ್ಲಾ ನಮ್ಮ ಮಕ್ಕಳು ಮೊಮ್ಮಕ್ಕಳಿಗೆ ಫಲ ಕೊಡುತ್ತದೆ’ ಎಂದು ಉತ್ತರಿಸುತ್ತಾನೆ.
ಅಜ್ಜ ಹಾಗೆ ತನ್ನ ಮಾತು ಮುಂದುವರೆಸಿ ‘ಇಂದಿನ ಕಾಲದಲ್ಲಿ ಮನುಷ್ಯ ಸ್ವಾರ್ಥಿಯಾಗುತ್ತಿದ್ದಾನೆ. ಬೇರೆಯವರನ್ನು ಕೊಂದರೂ ಸರಿಯೇ ತಾನು ಬೆಳೆಯಬೇಕು ಎಂಬ ಸ್ವಾರ್ಥ ಮನೋಭಾವನೆಯಲ್ಲಿ ಇದ್ದಾನೆ. ಇತರರಿಗೆ ಏನಾದರೂ ತನಗೇನು ಎಂಬಂತೆ ಬದುಕುತ್ತಿದ್ದಾನೆ. ಪರರ ಚಿಂತೆ ಬಿಟ್ಟು ತನ್ನ ಸ್ವಾರ್ಥಕ್ಕೆ ಒಳಗಾಗಿ ಮನೆಯ ಅಕ್ಕ ಪಕ್ಕ ಯಾರಿದ್ದಾರೆ, ಏನೆಂಬುದು ಅವನಿಗೆ ತಿಳಿಯದಾಗಿದೆ. ತಾನಾಯಿತು ತನ್ನ ಕೆಲಸವಾಯಿತು ಎಂದುಕೊಂಡು ಈ ಜಗತ್ತನ್ನು ಕಳೆಯಲು ಭ್ರಷ್ಟತನಕ್ಕೆ ಕಾಲಿರಿಸಿದ್ದಾನೆ. ಪ್ರಪಂಚದಲ್ಲಿ ಏನೇ ಆದರೂ ಅದರ ಗೋಜಿಗೆ ಹೋಗುವುದಿಲ್ಲ.
ಹೀಗಿರಬೇಕಾದರೆ ಪ್ರಾಣಿ ಪಕ್ಷಿ ಜೊತೆಗೆ ಸಸ್ಯ ಸಂಕುಲ ನಾಶವಾದರೂ ತನಗೇನಾಗಿಲ್ಲ ಅಂದುಕೊಳ್ಳುತ್ತಾನೆ. ಹೀಗೆ ಅನೇಕರು ಮರ-ಗಿಡಗಳನ್ನು ನಾಶಮಾಡಿದರೆ ಮುಂದಿನ ಪೀಳಿಗೆಯವರಿಗೆ ಶುದ್ದ ಗಾಳಿಯಿಲ್ಲದೆ ಓಜೋನ್ ಪದರ ಹಾಳಾಗಿ ಬಿಸಿಲ ತಾಪಕ್ಕೆ ಅನೇಕ ಕಾಯಿಲೆಗಳು ಉದ್ಭವಿಸಿ ಅದಕ್ಕೆ ಪರಿಹಾರವಿಲ್ಲದೆ ಜನ ನರಳಿ ನಮಗೆ ಶಾಪ ಹಾಕುವ ಸಂಗತಿ ಬಂದು ಒದಗುತ್ತದೆ.
ಆದ್ದರಿಂದ ಇರುವ ಮರಗಳನ್ನು ರಕ್ಷಿಸಿಕೊಂಡು ಹೊಸ ಗಿಡ ಮರಗಳನ್ನು ಬೆಳೆಸಬೇಕು ಸಾಲುಮರದ ತಿಮ್ಮಕ್ಕ ತನಗೆ ಮಕ್ಕಳಿಲ್ಲದ ಕಾರಣ ಅನೇಕ ಮರಗಳನ್ನು ನೆಟ್ಟು ಅದನ್ನು ತನ್ನ ಮಕ್ಕಳಂತೆ ಸಾಕಿ ಸಲುಹಿದಳು. ಆ ಮರಗಳೇ ಇಂದು ದಾರಿಯಲ್ಲಿ ಹೋಗುವವರಿಗೆ ನೆರಳು ನೀಡುತ್ತಿವೆ. ಇಂತಹವರ ಮಾರ್ಗದಲ್ಲಿ ನಾವು ನಡೆದರೆ ಮುಂದಿನ ಪೀಳಿಗೆಯವರಿಗೆ ಫಲಕಾರಿಯಾಗುವುದರಲ್ಲಿ ಸಂಶಯವಿಲ್ಲ ಮಗಾ’ ಎನ್ನುವ ಅಜ್ಜನ ಮಾತುಗಳನ್ನು ಕೇಳುತ್ತಾ ದಾರಿ ಹೋಕ ಅಲ್ಲೆ ಮರದಡಿಯಲ್ಲಿ ಕುಂತು ಸ್ವಲ್ಪ ಹೊತ್ತು ವಿಶ್ರಮಿಸುತ್ತಾನೆ.
-ರಮ್ಯ.ಆರ್.