ಗ್ರಾಹಕರ ಲೂಟಿಗಿಳಿದ ರಾಷ್ಟ್ರೀಕೃತ ಬ್ಯಾಂಕುಗಳು..!

ಬ್ಯಾಂಕ್ ಸೌಲಭ್ಯಗಳಿಗೆ ದರ ಏರಿಕೆ : ಗ್ರಾಹಕರಲ್ಲಿ ಗೊಂದಲ
ತುಮಕೂರು

ವಿಶೇಷ ವರದಿ:ರಾಕೇಶ್.ವಿ.

    ಬ್ಯಾಂಕುಗಳು ಇಲ್ಲದ ಕಾಲವೇ ಎಷ್ಟೋ ಚೆನ್ನಾಗಿತ್ತು ಎಂಬ ಮಾತುಗಳು ಇತ್ತೀಚೆಗೆ ಕೇಳಿ ಬರುತ್ತಿವೆ. ಜನರ ಬಾಯಿಂದ ಇಂತಹ ಮಾತುಗಳು ಹೊರಬರಲು ಕಾರಣವೂ ಇದೆ. ಬ್ಯಾಂಕುಗಳಲ್ಲಿ ವಿಧಿಸುವ ವಿವಿಧ ರೀತಿಯ ದರಗಳು ದುಬಾರಿಯಾಗುತ್ತಿವೆ. ಬ್ಯಾಂಕಿಂಗ್ ಕ್ಷೇತ್ರ ಸೇವಾ ವಲಯವಾಗಿ ಉಳಿಯದೆ ನೇರಾ ನೇರಾ ವಾಣಿಜ್ಯ ಉದ್ದೇಶಕ್ಕಾಗಿಯೇ ಹುಟ್ಟಿಕೊಂಡಿವೆಯೇನೋ ಎಂಬ ಭಾವನೆ ಮೂಡುತ್ತಿದೆ. ಗ್ರಾಹಕರಿಗೆ ಸರಳವಾಗಿ ಸೇವಾ ಸೌಲಭ್ಯ ನೀಡುವ ಬದಲು ರಾಷ್ಟ್ರೀಕೃತ ಬ್ಯಾಂಕುಗಳು ಗ್ರಾಹಕರ ಜೇಬಿಗೆ ಬರೆ ಹಾಕಲು ಹೊರಟಿವೆ. 
    ನಗರಗಳು ಸೇರಿದಂತೆ ಇಂದು ಹಳ್ಳಿಗಾಡಿನಲ್ಲೂ ಬ್ಯಾಂಕ್ ಸೌಲಭ್ಯ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಾ ಇದೆ. ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ತೆರೆಯಲೇ ಬೇಕು ಎಂಬ ಕೇಂದ್ರ ಸರ್ಕಾರದ ಯೋಜನೆಯಂತೆ ಇಂದು ದೇಶದ ಶೇ. 60ರಿಂದ 80ರಷ್ಟು ಜನ ಇಂದು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಆಯಾ ನಗರಗಳಲ್ಲಿ ಅವರಿಗೆ ಅನುಕೂಲವಾಗುವ ಬ್ಯಾಂಕ್‍ಗಳಲ್ಲಿ ಬ್ಯಾಂಕ್ ಖಾತೆ ತೆರೆದು ವ್ಯವಹಾರ ನಡೆಸುತ್ತಿದ್ದಾರೆ. ಆದರೆ ಇತ್ತೀಚೆಗೆ ಕೆಲವೊಂದು ಬ್ಯಾಂಕ್‍ಗಳನ್ನು ವಿಲೀನ ಮಾಡುತ್ತಾ, ಗ್ರಾಹಕರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ.
    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸಂಬಂಧಪಡುವ ಎಸ್‍ಬಿಎಂ, ಎಸ್‍ಬಿಎಚ್ ಸೇರಿದಂತೆ ಇನ್ನಿತರ ಬ್ಯಾಂಕ್‍ಗಳನ್ನು ಎಸ್‍ಬಿಐನೊಂದಿಗೆ ವಿಲೀನ ಮಾಡಲಾಯಿತು. ನಂತರ ಪಂಜಾಬ್ ನ್ಯಾಷನಲ್ ಬ್ಯಾಂಕ್, ವಿಜಯ ಬ್ಯಾಂಕ್‍ಗಳನ್ನು ವಿಲೀನ ಮಾಡಲಾಯಿತು. ಹೀಗೆ ಬ್ಯಾಂಕ್‍ಗಳನ್ನು ವಿಲೀನ ಮಾಡಿ ಎರಡು ಮೂರು ಬ್ಯಾಂಕ್‍ಗಳನ್ನು ವಿಲೀನಗೊಳಿಸುತ್ತಿರುವುದರಿಂದ ಈ ಬ್ಯಾಂಕ್‍ಗಳಲ್ಲಿ ಖಾತೆಗಳನ್ನು ಹೊಂದಿರುವ ಗ್ರಾಹಕರಿಗೆ ಗೊಂದಲಗಳು ಸೃಷ್ಟಿಯಾಗಿವೆ.
     ಸ್ಟೇಟ್ ಬ್ಯಾಂಕ್‍ಗಳಿಗೆ ಸಂಬಂಧಿಸಿದ ಖಾತೆಗಳನ್ನು ಎಸ್‍ಬಿಐನಲ್ಲಿ ವಿಲೀನಗೊಳಿಸಿದ್ದು, ಈ ಬ್ಯಾಂಕ್‍ಗಳಲ್ಲಿ ಖಾತೆಗಳನ್ನು ಹೊಂದಿರುವ ಎಲ್ಲರೂ ಎಸ್‍ಬಿಐ ಬ್ಯಾಂಕ್‍ಗೆ ಹೊಂದಿಕೊಂಡಿದ್ದಾರೆ. ಆದರೆ ಇದೀಗ ಎಸ್‍ಬಿಐ ಬ್ಯಾಂಕ್‍ನಲ್ಲಿ ವಹಿವಾಟು ನಡೆಸಲು ಇನ್ನಿಲ್ಲದ ದರಗಳನ್ನು ಹೆಚ್ಚಳ ಮಾಡಿದ್ದು, ಅದು ಜುಲೈ ತಿಂಗಳಿಂದಲೇ ಜಾರಿಗೊಂಡಿದೆ. ಆದರೆ ಈ ಬಗ್ಗೆ ಇನ್ನೂ ಬ್ಯಾಂಕ್ ನೌಕರರಿಗೆ ಸರಿಯಾದ ಮಾಹಿತಿ ಇಲ್ಲ. ಕೇವಲ ಹಿರಿಯ ಅಧಿಕಾರಿಗಳನ್ನು ಹೊರತು ಪಡಿಸಿದರೆ ಕೆಳ ವರ್ಗದ ನೌಕರರಿಗೆ ಈ ಬಗ್ಗೆ ಮಾಹಿತಿ ಇಲ್ಲ. ಇದು ಗ್ರಾಹಕರಿಗೆ ತಿಳಿಯದೇ ತಮ್ಮ ಜೇಬಿಗೆ ಕತ್ತರಿ ಹಾಕಿಸಿಕೊಳ್ಳುತ್ತಿದ್ದಾರೆ.
ಉಳಿತಾಯ ಖಾತೆದಾರ ಜೇಬಿಗೆ ಕತ್ತರಿ
      ಉದಾಹರಣೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉಳಿತಾಯ ಖಾತೆ ತೆರೆಯಲು ಕನಿಷ್ಟ ಮೊತ್ತವನ್ನು ಹೂಡಿಕೆ ಮಾಡಲೇಬೇಕು. ಅದರಲ್ಲಿ ಮೆಟ್ರೋ ನಗರಗಳು ಎಂದರೆ ಬೆಂಗಳೂರಿನಂತಹ ಮಹಾನಗರಗಳಲ್ಲಿ ಹಾಗೂ ಜಿಲ್ಲಾ ಕೇಂದ್ರಗಳಾದಂತಹ ಪ್ರದೇಶಗಳಲ್ಲಿ ಖಾತೆ ತೆರೆದರೆ ಅದರಲ್ಲಿ ಕನಿಷ್ಠ 3000 ಹಣವನ್ನು ಹೂಡಲೇಬೇಕು. ಅದರಲ್ಲಿ ಅರ್ಧದಷ್ಟು ಹಣ ಕಡಿಮೆ ಇದ್ದಲ್ಲಿ ಅಂದರೆ 1500 ರೂಗಳಿದ್ದರೆ ಅದಕ್ಕೆ 11.80 ಪೈಸೆ ಶುಲ್ಕ ವಿಧಿಸಲಾಗುತ್ತದೆ. 50 ರಿಂದ 75% ನಷ್ಟಿದ್ದರೆ, (  1500 ರಿಂದ 750ರೂಗಳವರೆಗೆ)  ಅದಕ್ಕೆ 14.16 ಪೈಸೆ ಹೆಚ್ಚುವರಿಯಾಗಿ ಶುಲ್ಕ ಭರಿಸಬೇಕಾಗುತ್ತದೆ. 750ಕ್ಕಿಂತ ಕಡಿಮೆ ಇದ್ದಲ್ಲಿ ಅದಕ್ಕೆ 17.70 ಪೈಸೆ ಹೆಚ್ಚುವರಿಯಾಗಿ ಶುಲ್ಕ ಭರಿಸಬೇಕಾಗುತ್ತದೆ . ಇದು ಗ್ರಾಹಕರ ಮೇಲಾಗುತ್ತಿರುವ ಹೊರೆ.
     ಅದೇ ರೀತಿ ತಾಲ್ಲೂಕು ಕೇಂದ್ರಗಳಲ್ಲಿನ ಬ್ಯಾಂಕ್‍ನಲ್ಲಿ ಖಾತೆ ಇದ್ದವರು ಕನಿಷ್ಠ 2000 ರೂಗಳನ್ನು ಹೂಡಲೇಬೇಕು. ಅದರಲ್ಲಿ 50% ಹಣಕ್ಕೆ ಅಂದರೆ 1000 ರೂಗಳಿಗೆ 8.85 ಪೈಸೆ, 50 ರಿಂದ 75% ನಷ್ಟಿದ್ದರೆ   1500 ರಿಂದ 750ರೂಗಳವರೆಗೆ 11.80 ಪೈಸೆ ಹೆಚ್ಚುವರಿಯಾಗಿ ಶುಲ್ಕ ಭರಿಸಬೇಕಾಗುತ್ತದೆ. 500ಕ್ಕಿಂತ ಕಡಿಮೆ ಇದ್ದಲ್ಲಿ ಅದಕ್ಕೆ 14.16 ಪೈಸೆ ಹೆಚ್ಚುವರಿಯಾಗಿ ಶುಲ್ಕ ಭರಿಸಬೇಕಾಗುತ್ತದೆ .
     ಹಳ್ಳಿ ಪ್ರದೇಶಗಳಲ್ಲಿ ತೆರೆದ ಉಳಿತಾಯ ಖಾತೆಗಳಿಗೆ ಕನಿಷ್ಠ 1000 ರೂ ಹಣವನ್ನು ಇಡಬೇಕಾಗುತ್ತದೆ. ಅದರಲ್ಲಿ 50% ಹಣಕ್ಕೆ ಅಂದರೆ 500 ರೂಗಳು ಮಾತ್ರ ಇದ್ದರೆ ಅದಕ್ಕೆ 5.10 ಪೈಸೆ, 50-75 % ಇದ್ದರೆ 8.40 ಪೈಸೆ, 75% ಕ್ಕಿಂತ ಕಡಿಮೆಯಿದ್ದರೆ 11.80 ಪೈಸೆ ಹಣ ಕಡಿತಗೊಳ್ಳುತ್ತದೆ.
     ಚಾಲ್ತಿ ಖಾತೆಯನ್ನು ತೆರೆದವರು ಕನಿಷ್ಠ 10 ಸಾವಿರ ರೂಗಳನ್ನು ಖಾತೆಯಲ್ಲಿ ಇಡದೇ ಹೋದರೆ ಅದಕ್ಕೆ 590 ರೂಗಳನ್ನು ವೆಚ್ಚದ ರೂಪದಲ್ಲಿ ವಿಧಿಸಲಾಗುತ್ತದೆ. ಮೇಲ್ಕಂಡ ಎಲ್ಲದಕ್ಕೂ ಶೇ.18ರಷ್ಟು ಜಿಎಸ್‍ಟಿ ಒಳಗೊಂಡಿರುತ್ತದೆ. ಒಂದು ತಿಂಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಹಣವನ್ನು ಉಳಿತಾಯ ಖಾತೆಗೆ ಜಮಾ ಮಾಡಿ ಒಂದು ದಿನದ ನಂತರ ವಾಪಸ್ಸು ಪಡೆದುಕೊಂಡಲ್ಲಿ ಆ ತಿಂಗಳಲ್ಲಿ ಕನಿಷ್ಠ ನಿರ್ವಹಣೆಗೆ ಶುಲ್ಕವಾಗುವುದಿಲ್ಲ.
ಡಿಮ್ಯಾಂಡ್ ಡ್ರಾಫ್ಟ್‍ಗಳಿಗೆ ಹೆಚ್ಚಿದ ಶುಲ್ಕ
     ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾಯಿಸಬಹುದಾಗಿದೆ. ಕೆಲವೊಮ್ಮೆ ಹಣವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ನೀಡಬೇಕಾಗುತ್ತದೆ. ಅದಕ್ಕೆ ಈ ಮುಂಚೆ ಇದ್ದ s ಸೇವಾ ಶುಲ್ಕ ದುಪ್ಪಟ್ಟಾಗಿದೆ. 5000 ರೂ ವರೆಗಿನ ಡಿಮ್ಯಾಂಡ್ ಡ್ರಾಫ್ಟ್‍ಗೆ 29.5 ರೂ, 5000ರೂ ದಿಂದ 10,000 ವರೆಗೆ 59ರೂ, 10 ಸಾವಿರದಿಂದ 1 ಲಕ್ಷವರೆಗೆ ಡಿಡಿ ಪಡೆಯುವುದಾದರೆ ಒಂದು ಸಾವಿರಕ್ಕೆ 5.10 ಪೈಸೆ ಹಣ ಅಥವಾ ಕನಿಷ್ಠ 600ರೂ ಹಾಗೂ ಗರಿಷ್ಠ 2000 ಹೆಚ್ಚುವರಿಯಾಗಿ ಕಟ್ಟಬೇಕಾಗುತ್ತದೆ. 
ನೆಫ್ಟ್ ಅಥವಾ ಆರ್‍ಟಿಜಿಎಸ್‍ನಲ್ಲಿ ಗೊಂದಲ
     ಈ ಮುಂಚೆ ನೆಫ್ಟ್ ಹಾಗೂ ಆರ್‍ಟಿಜಿಎಸ್‍ನಲ್ಲಿ ಹಣ ಇತರೆ ಖಾತೆಗೆ ಜಮಾವಣೆ ಮಾಡಬೇಕಾದರೆ ನಿರ್ದಿಷ್ಠ ಮೊತ್ತವನ್ನು ಭರಿಸಬೇಕಿತ್ತು. 2019ರ ಜುಲೈ 1 ರಿಂದ ಬದಲಾದ ಸೇವಾ ಶುಲ್ಕದ ಪಟ್ಟಿಯಲ್ಲಿ ನೀಡಿದಂತೆ ಆನ್‍ಲೈನ್ ಮೂಲಕ ಹಣ ವರ್ಗಾವಣೆ ಯಾವುದೇ ಶುಲ್ಕ ಭರಿಸಬೇಕಿಲ್ಲ.
   ಒಂದು ವೇಳೆ ಬ್ಯಾಂಕಿನ ಮೂಲಕ  ಹಣ ವರ್ಗಾವಣೆ ಮಾಡುವುದಾದರೆ 10 ಸಾವಿರ ರೂಗಳ ವರೆಗೆ 2.36 ಪೈಸೆ, 10,001 ರಿಂದ 1 ಲಕ್ಷವರೆಗೆ 4.72 ಪೈಸೆ, 1 ಲಕ್ಷದ 1ರೂ ದಿಂದ 2 ಲಕ್ಷದವರೆಗೆ 14.16 ಪೈಸೆ 2 ಲಕ್ಷದಿಂದ 5ಲಕ್ಷದವರೆಗೆ ವರ್ಗಾವಣೆ ಮಾಡಿದರೆ 23.06ಪೈಸೆ, 5 ಲಕ್ಷಕ್ಕೂ ಮೇಲ್ಪಟ್ಟು ವರ್ಗಾವಣೆ ಮಾಡಿದರೆ 47.02 ಪೈಸೆ ಶುಲ್ಕ ಭರಿಸಬೇಕಾಗುತ್ತದೆ. (ಇದೆಲ್ಲದಕ್ಕೂ ಜಿಎಸ್‍ಟಿ ಒಳಗೊಂಡಿದೆ )
     ಇದು ಬ್ಯಾಂಕ್‍ಗಳಲ್ಲಿ ಸೇವಾ ಶುಲ್ಕದ ಬಗ್ಗೆ ಹಾಕಲಾದ ಚಾರ್ಟ್‍ನಲ್ಲಿರುವ ಮಾಹಿತಿ ಆದರೆ ಜುಲೈ 5ರಂದು ಕೇಂದ್ರ ಸರ್ಕಾರದದ ಬಜೆಟ್‍ನಲ್ಲಿ ನೆಫ್ಟ್ ಹಾಗೂ ಆರ್‍ಟಿಜಿಎಸ್‍ನಲ್ಲಿ ಸೇವಾ ಶುಲ್ಕ ರದ್ದು ಮಾಡಲಾಗಿದೆ. ಇದಕ್ಕೆ ಯಾವುದೇ ರೀತಿಯ ಸೇವಾ ಶುಲ್ಕ ಅನ್ವಯಿಸುವುದಿಲ್ಲ ಎಂಬುದು ಕೆಲ ಬ್ಯಾಂಕ್ ಸಿಬ್ಬಂದಿಯ ಮಾಹಿತಿಯಾಗಿದೆ. ಇದು ಒಂದು ರೀತಿಯಲ್ಲಿ ಗೊಂದಲವನ್ನು ಸೃಷ್ಠಿ ಮಾಡಿದಂತಾಗಿದೆ. 
ಉಳಿತಾಯ ಖಾತೆ ಮುಚ್ಚಲು ಆಗುವ ಶುಲ್ಕ
     ಮೂಲಭೂತ ಹಾಗೂ ಸಣ್ಣ ಉಳಿತಾಯ ಖಾತೆಗಳನ್ನು ಹೊರತುಪಡಿಸಿ ಇತರೆ ಉಳಿತಾಯ ಖಾತೆಗಳನ್ನು ಮುಚ್ಚಬೇಕಾದರೆ ತೆರದ 14 ದಿನಗಳೊಳಗೆ ಖಾತೆಯನ್ನು ಮುಚ್ಚಿದರೆ ಯಾವುದೇ ಶುಲ್ಕ ಭರಿಸಬೇಕಿಲ್ಲ. 14ದಿನಗಳ ನಂತರದಿಂದ 6 ತಿಂಗಳ ಸಮಯದಲ್ಲಿ ಮುಚ್ಚಿದರೆ 590ರೂ ಸೇವಾ ಶುಲ್ಕ ಭರಿಸಬೇಕು. ಒಂದು ವೇಳೆ 6 ತಿಂಗಳ ನಂತರ ಒಂದು ವರ್ಷದ ಒಳಗೆ ಖಾತೆಯನ್ನು ಮುಚ್ಚುವುದಾದರೆ ಅದಕ್ಕೆ 1180 ರೂ ಭರಿಸಬೇಕಾಗುತ್ತದೆ. ಇದು ಉಳಿತಾಯ ಖಾತೆ ಮುಚ್ಚಲು ಭರಿಸಬೇಕಾದ ಶುಲ್ಕವಾದರೆ, ಚಾಲ್ತಿ ಖಾತೆ ಮುಚ್ಚಲು 1180ರೂ ವೆಚ್ಚ ಭರಿಸಬೇಕಾಗುತ್ತದೆ. 
ಸುರಕ್ಷಿತ ಲಾಕರ್‍ಗಳಿಗೆ ತಗುಲುವ ವೆಚ್ಚ
       ನಮ್ಮ ಯಾವುದೇ ದಾಖಲಾತಿಗಳಾಗಿರಬಹುದು ಅಥವಾ ಒಡವೆಗಳಾಗಿರಬಹುದು. ಇನ್ನಾವುದೇ ಪ್ರಮುಖವಾದ ವಸ್ತುಗಳಾಗಿರಬಹುದು ಅವುಗಳನ್ನು ಬ್ಯಾಂಕ್‍ಗಳಲ್ಲಿನ ಸುರಕ್ಷಿತಾ ಲಾಕರ್‍ಗಳಲ್ಲಿ ಇಡಲು ನಿರ್ದಿಷ್ಠ ಮೊತ್ತವನ್ನು ನಿಗದಿ ಮಾಡಲಾಗಿದೆ. ಹೊಸ ಪಟ್ಟಿಯಂತೆ ಅದರ ಸೇವಾ ಶುಲ್ಕ ನೋಡುವುದಾದರೆ ಮೆಟ್ರೋನಗರ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಒಂದು ವರ್ಷಕ್ಕೆ ಸಣ್ಣ ಲಾಕರ್‍ಗೆ 1770 ರೂ, ಮಧ್ಯಮ ಲಾಕರ್‍ಗೆ 354ರೂ, ದೊಡ್ಡ ಲಾಕರ್‍ಗೆ 7080, ಅತಿ ದೊಡ್ಡ ಲಾಕರ್‍ಗೆ 10,620 ಸೇವಾ ಶುಲ್ಕವಾಗುತ್ತದೆ. 
       ಅಲ್ಲದೆ ಒಂದು ವರ್ಷದಲ್ಲಿ 12 ಬಾರಿ ಉಚಿತವಾಗಿ ಈ ಲಾಕರ್‍ಗಳನ್ನು ವೀಕ್ಷಿಸಬಹುದು. ಅದರ ನಂತರ ಒಂದು ಬಾರಿ ವೀಕ್ಷಣೆಗೆ 1180 ನಂತೆ ವೆಚ್ಚ ಭರಿಸಬೇಕಾಗುತ್ತದೆ.  ಒಂದು ವೇಳೆ ಒಂದು ವರ್ಷದ ಸೇವಾವೆಚ್ಚ ಕಟ್ಟದೇ ಹೋದ ಪಕ್ಷದಲ್ಲಿ ಮೂರು ತಿಂಗಳಿಗೆ ಒಂದು ವರ್ಷದ ವೆಚ್ಚಕ್ಕೆ ಶೇ.10ರಷ್ಟು ಹಣ ಸಂದಾಯ ಮಾಡಬೇಕು. ಆರು ತಿಂಗಳಿಗೆ ಶೇ.20ರಷ್ಟು, ಒಂಭತ್ತು ತಿಂಗಳಿಗೆ ಶೇ.30 ರಷ್ಟು, ಹನ್ನೆರಡು ತಿಂಗಳಿಗೆ ಶೇ.40ರಷ್ಟು ವೆಚ್ಚ ಸಂದಾಯ ಮಾಡಬೇಕಾಗುತ್ತದೆ. 
      ಲಾಕರ್ ನೋಂದಣಿ ಮಾಡಿಸಿಕೊಳ್ಳಲು ಸಣ್ಣ ಮತ್ತು ಮಧ್ಯಮ ಲಾಕರ್‍ಗಳಿಗೆ 590ರೂ ಪಡೆದರೆ, ದೊಡ್ಡ ಮತ್ತು ಅತಿ ದೊಡ್ಡ ಲಾಕರ್‍ಗಳ ನೊಂದಣಿಗೆ 1180 ರೂ ಹಣವನ್ನು ನೀಡಬೇಕಾಗುತ್ತದೆ. ಒಂದು ವೇಳೆ ನೊಂದಣಿ ಮಾಡಿಸಿಕೊಂಡ ಲಾಕರ್‍ನ ಬೀಗ ಕಳೆದುಕೊಂಡಲ್ಲಿ ಅಥವಾ ವಾರ್ಷಿಕ ಬಾಡಿಗೆ ಕಟ್ಟದೇ ಹೋದಲ್ಲಿ ಲಾಕರ್ ತೆರೆಯಲು 1180ರೂಗಳ ಮೊತ್ತವನ್ನು ಸಲ್ಲಿಸಬೇಕಾಗುತ್ತದೆ. 
ಬ್ಯಾಂಕ್‍ಗೆ ನೀಡಿದ ಚೆಕ್ ವಾಪಸ್ಸಾದರೆ…
      ಯಾವುದೋ ಒಂದು ಖಾತೆಗೆ ಹಣ ಸಂದಾಯ ಮಾಡಬೇಕಿರುತ್ತದೆ. ಅದಕ್ಕೆ ಚೆಕ್ ಮೂಲಕವಾಗಿ ಹಣ ಸಂದಾಯ ಮಾಡಲು ನೀಡಿರುತ್ತಾರೆ. ಆದರೆ ಚೆಕ್ ನೀಡಿದ ವ್ಯಕ್ತಿಯ ಖಾತೆಯಲ್ಲಿ ನಿರ್ದಿಷ್ಠ ಮೊತ್ತ ಇರುವುದಿಲ್ಲ ಅಂತಹ ಸಮಯದಲ್ಲಿ ಉಳಿತಾಯ ಖಾತೆ ಜಾಗೂ ಚಾಲ್ತಿ ಖಾತೆ ಎರಡಕ್ಕೂ 590 ರೂ. ಶುಲ್ಕ ಭರಿಸಬೇಕು. ಒಂದು ವೇಳೆ ಸಹಿ ಸರಿಯಿಲ್ಲದ ಕಾರಣ ಅಥವಾ ದಿನಾಂಕ ತಪ್ಪಾಗಿ ನಮೂದು ಮಾಡಿರುವುದು, ಹೆಸರು ಸರಿಯಾಗಿ ಬರೆಯದೇ ಇರುವುದು ಸೇರಿದಂತೆ ಇನ್ನಿತರ ತಾಂತ್ರಿಕ ದೋಷಗಳು ಕಂಡು ಬಂದು ಚೆಕ್ ವಾಪಸ್ಸಾದರೆ ಅದಕ್ಕೆ 177 ರೂ ಶುಲ್ಕ ಭರಿಸಬೇಕು. 
ಪ್ರಶ್ನೆ ಮಾಡದ ಗ್ರಾಹಕರು
        ಇಂದಿನ ದಿನಗಳಲ್ಲಿ ಗ್ರಾಹಕರು ತಮ್ಮ ಕೆಲಸವಾದರೆ ಸಾಕು ಎಂಬಂತೆ ಇದ್ದಾರೆ. ಅವರ ಖಾತೆಗಳಲ್ಲಿ ಅವರಿಗೇ ತಿಳಿಯದಂತೆ ಕಣ ಕಡಿತವಾಗುತ್ತಿದೆ. ಆದರೆ ಇದನ್ನು ಗಮನಿಸುವ ಸಮಯವೂ ಸಿಗದಂತ ಸ್ಥಿತಿ ನಿರ್ಮಾಣವಾಗಿದೆ. ಖಾತೆಯಲ್ಲಿನ ಗೊಂದಲಗಳ ಬಗ್ಗೆ ಪ್ರಶ್ನೆ ಮಾಡಲು ಬ್ಯಾಂಕ್‍ಗೆ ಹೋದರೆ ಅಲ್ಲಿ ಅರ್ಜಿ ಬರೆದುಕೊಡಿ, ಪರಿಶೀಲನೆ ಮಾಡುತ್ತೇವೆ ಎಂಬ ಉತ್ತರಗಳು ಕೇಳಿಬರುತ್ತವೆ. ಬ್ಯಾಂಕ್ ಖಾತೆಯಲ್ಲಿ ಕಾರಣಾಂತರಳಿಂದ 10ರೂಪಾಯಿ ಕಡಿತವಾದರೆ ಅದನ್ನು ಪ್ರಶ್ನಿಸಲು ಹೋದರೆ ದಿನವಿಡೀ ಕಾಯುತ್ತಾ ಕುಳಿತುಕೊಳ್ಳಬೇಕು. ಇಂದಿನ ಕಾಲಘಟ್ಟದಲ್ಲಿ ಯಾರಿಗೂ ಬ್ಯಾಂಕ್‍ನಲ್ಲಿ ಕುಳಿತು ಸಮಸ್ಯೆ ಪರಿಹರಿಸಿಕೊಳ್ಳುವಷ್ಟು ಸಮಯ ವ್ಯರ್ಥ ಮಾಡಿಕೊಳ್ಳಲು ಯಾರು ಮುಂದೆ ಬರುತ್ತಿಲ್ಲ. 
ಭಾಷೆ ಬಾರದ ಬ್ಯಾಂಕ್ ಸಿಬ್ಬಂದಿ
       ಸದ್ಯದ ಪರಿಸ್ಥಿತಿಯಲ್ಲಿ ಬ್ಯಾಂಕ್‍ಗಳಲ್ಲಿ ಕೆಲಸ ಮಾಡಲು ಬರುತ್ತಿರುವ ಸಿಬ್ಬಂದಿ ಬಹುತೇಖ ಮಂದಿ ಅಂತಾರಾಜ್ಯ ದವರಾಗಿದ್ದು, ಅಂತವರಿಗೆ ಸ್ಥಳೀಯ ಭಾಷೆ ಬಾರದಿರುವುದು ಕೆಲವೊಂದು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‍ಗಳಲ್ಲಿ ನೇಮಕಗೊಳ್ಳುತ್ತಿರುವ ಸಿಬ್ಬಂದಿ ಹೆಚ್ಚಿನದಾಗಿ ಉತ್ತರ ಭಾರತ ಭಾಗದವರಾಗಿದ್ದು, ಅವರು ಕೇವಲ ಹಿಂದಿ ಹಾಗೂ ಇಂಗ್ಲಿಷ್ ಮಾತನಾಡಬಲ್ಲರು. ಅವರಿಗೆ ಸ್ಥಳೀಯ ಭಾಷೆಯ ಬಗ್ಗೆ ಅರಿವೇ ಇರುವುದಿಲ್ಲ. ಕೆಲ ಖಾತೆದಾರರಿಗೆ ಸ್ಥಳೀಯ ಕನ್ನಡ ಭಾಷೆ ಬಿಟ್ಟರೆ ಇನ್ನೊಂದು ಭಾಷೆ ಬರುವುದಿಲ್ಲ. ಇದರಿಂದ ಬ್ಯಾಂಕ್‍ಗಳಲ್ಲಿ ಕೊಂಚ ಸಮಸ್ಯೆ ಉಂಟಾಗುತ್ತಿದೆ.
ಗ್ರಾಹಕರ ಮೇಲೆ ಕೀಳು ಮನೋಭಾವನೆ
      ಬ್ಯಾಂಕುಗಳಿಗೆ ವಿದ್ಯಾವಂತರು ಬರುತ್ತಾರೆ, ಅವಿದ್ಯಾವಂತರು ಬರುತ್ತಾರೆ, ಅವರಿಗೆ ಸೂಕ್ತ ಮಾಹಿತಿ ಇಲ್ಲದೆ ಏನಾದರೂ ಕೇಳಲು ಮುಂದಾದರೆ ಅವರ ಮೇಲೆ ದಬ್ಬಾಳಿಕೆಯಂತೆ ವರ್ತನೆ ಮಾಡುತ್ತಾರೆ. ಗ್ರಾಹಕರ ಮೇಲೆ ಏರುಧ್ವನಿಯಲ್ಲಿ ಮಾತನಾಡು ತ್ತಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕೇವಲ ಬೆರಳಣಿಕೆಯಷ್ಟು ಗ್ರಾಹಕರಿಗೆ ಮಾತ್ರ ಬೆಲೆ ಕೊಟ್ಟು ಮಾತನಾಡಿ ಸುತ್ತಾರೆ ಹೊರತು ಸಣ್ಣ ಖಾತೆದಾರರಿಗೆ, ಜೀರೋ ಬ್ಯಾಲೆನ್ಸ್ ಖಾತೆದಾರರಿಗೆ, ವಿದ್ಯಾರ್ಥಿ ಖಾತೆಗಳಿಗೆ ಬೆಲೆನೇ ಇಲ್ಲವೆಂಬಂತೆ ವರ್ತಿಸುತ್ತಾರೆ. 
ಸ್ಕ್ಯಾಮ್‍ನಂತಾಗಿದೆ ಬ್ಯಾಂಕ್‍ಗಳ ವ್ಯವಹಾರ
      ರಾಷ್ಟ್ರೀಕೃತ ಬ್ಯಾಂಕುಗಳು ಕೆಲ ಖಾಸಗಿ ಕಂಪನಿಗಳಿಗೆ ಲಾಭದಾಯಕವಾಗುವಂತೆ ವರ್ತನೆ ಮಾಡುತ್ತಿದ್ದು, ಹಿಡನ್ ಅಜೆಂಡಾ ಇಟ್ಟುಕೊಂಡು ಗ್ರಾಹಕರಿಗೆ ಯಾವುದೇ ಮಾಹಿತಿ ನೀಡದೆ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ತಿಳಿಸದೆ ಹೆಚ್ಚಿನ ಶುಲ್ಕಗಳನ್ನು ವಿಧಿಸಲಾಗುತ್ತಿದೆ. ಜನರಿಗೆ ಅನುಕೂಲವಾಗಲೆಂದು ಇರುವ ಬ್ಯಾಂಕುಗಳಿಂದಲೇ ಸಾರ್ವಜನಿಕರಜೇಬಿಗೆ ಕತ್ತರಿ ಬೀಳಬೇಕಾದರೆ ಇದೀಗ ಬ್ಯಾಂಕ್‍ಗಳಲ್ಲಿ ಖಾತೆ ತೆಗೆಯುವ ಅನಿವಾರ್ಯತೆ ಇದೆಯೇ..? ಬ್ಯಾಂಕ್‍ಗಳ ಸೇವೆ ಪಡೆದುಕೊಳ್ಳುವ ಅವಶ್ಯಕತೆ ಆದರೂ ಇದೆಯೇ..? ಇದು ಒಂದು ರೀತಿಯಲ್ಲಿ ಸ್ಕ್ಯಾಂನಂತಾಗಿದೆ. 
ಡಿಜಿಟಲೈಸೇಷನ್ ಉದ್ದೇಶವೇನು..?

ಕೇಂದ್ರ ಸರ್ಕಾರವು ಪ್ರತಿಯೊಂದು ಪಾರದರ್ಶಕವಾಗಿರಬೇಕು ಎಂಬ ಉದ್ದೇಶದಿಂದ ಬ್ಯಾಂಕ್ ವ್ಯವಹಾರಗಳು ಸೇರಿದಂತೆ ಇನ್ನಿತರೆ ವ್ಯವಹಾರಗಳು ಆನ್‍ಲೈನ್ ಮೂಲಕವೇ ನಡೆಸಬೇಕು ಎಂಬ ಕಾರಣದಿಂದ ಡಿಜಿಟಲೈಸೇಷನ್ ಎಂಬ ಯೋಜನೆ ಪ್ರಾರಂಭ ಮಾಡಿತು. ಇದರೊಂದಿಗೆ ಪ್ರತಿಯೊಬ್ಬರು ಖಾತೆ ಹೊಂದಬೇಕು. ರೈತರಿಂದ ಹಿಡಿದು ಸಣ್ಣ ವ್ಯಾಪಾರಸ್ಥರು, ಬೃಹತ್ ಬಂಡವಾಳದಾರರು ಪ್ರತಿಯೊಬ್ಬರಿಗೂ ಖಾತೆ ಇದ್ದು, ಅವರು ನಗದು ಇಲ್ಲದೆ ನೇರವಾಗಿ ಆನ್‍ಲೈನ್ ಮೂಲಕವೇ ವಹಿವಾಟು ನಡೆಸಬೇಕು ಎಂಬ ಉದ್ದೇಶವಿದೆ. ಆದರೆ ಇಂದು ಸಣ್ಣಪುಟ್ಟ ವ್ಯವಹಾರಗಳಿಗೆ ಹೆಚ್ಚಿನ ವೆಚ್ಚ ಭರಿಸುವ ಸ್ಥಿತಿ ನಿರ್ಮಾಣವಾಗಿದೆ.
   ಇದರಿಂದ ಸಣ್ಣ ರೈತರು, ಸಣ್ಣ ವ್ಯಾಪಾರಸ್ಥರ ಸ್ಥಿತಿಗತಿಗಳು ಏನಾಗಬೇಕು ? ಬ್ಯಾಂಕುಗಳಲ್ಲಿ ಪ್ರತಿಯೊಂದಕ್ಕೂ ಹೆಚ್ಚಿನ ವೆಚ್ಚ ವಿಧಿಸುವುದಾದರೆ ಇಲ್ಲಿ ಡಿಜಿಟಲೈಸೇಸನ್‍ನ ಉದ್ದೇಶ ಏನಾಗುತ್ತಿದೆ..?
ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಂದ ಆಗುತ್ತಿರುವ ಲಾಭಗಳಾದರೂ ಏನು? 
      ಈ ಹಿಂದೆ ಸರ್ಕಾರಿ ಸ್ವಾಮ್ಯದ ಅಥವಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಹಿವಾಟು ನಡೆಸಲು ಹೆಚ್ಚಿನ ವೆಚ್ಚ ಇರಲಿಲ್ಲ. ಇದರಿಂದ ಸಾಕಷ್ಟು ಜನ ಖಾತೆಗಳನ್ನು ಹೊಂದಿದ್ದರು. ಇದರಲ್ಲಿ ದಿನದಿಂದ ದಿನಕ್ಕೆ ಬ್ಯಾಂಕುಗಳಲ್ಲಿ ವಹಿವಾಟು ಹೆಚ್ಚಾಗುತ್ತಿತ್ತು. ಆದರೆ ಬರುಬರುತ್ತಾ ಬ್ಯಾಂಕುಗಳಲ್ಲಿ ನೀಡುವ ಸೇವೆಗಳಿಗೆ ಇದ್ದಂತಹ ಕಡಿಮೆ ವೆಚ್ಚವನ್ನು ಹೆಚ್ಚಿಸುತ್ತಾ ಬಂದರು. ಕೆಲವು ಬಂಡವಾಳಶಾಹಿಗಳು ಬ್ಯಾಂಕುಗಳ ಸಾಲ ಪಡೆದು ಸಾಲ ಮರುಪಾವತಿ ಮಾಡಲಾಗದೆ ಓಡಿ ಹೋಗಿದ್ದು, ಆ ಹಣವನ್ನು ಭರಿಸಲು ಈಗ ಖಾತೆದಾರರ ಮೇಲೆ ಭರೆ ಎಳೆಯಲಾಗುತ್ತಿದೆ. ಸಾಲ ವಸೂಲಿ ಮಾಡಲಾಗದೆ ಸಣ್ಣ ಖಾತೆದಾರರು ಹಾಗೂ ಮಧ್ಯಮ ಖಾತೆದಾರರ ಮೇಲೆ ಪ್ರತಿಯೊಂದರಲ್ಲಿ 18% ರಂತೆ ಜಿಎಸ್‍ಟಿ ಹಣ ಸೇರಿಸಿ ವೆಚ್ಚ ಭರಿಸಬೇಕು ಎಂಬುದು ಎಷ್ಟರ ಮಟ್ಟಿಗೆ ಸರಿ. ಪ್ರತಿಯೊಬ್ಬರು ಬ್ಯಾಂಕ್‍ನ ಖಾತೆದಾರರು ಆಗಬೇಕು ಎಂದರೆ ಸೇವೆಗಳು ಉಚಿತವಾಗಬೇಕೇ ಹೊರತು ದುಪ್ಪಟ್ಟು ವೆಚ್ಚ ಭರಿಸುವಂತೆ ಮಾಡಬಾರದು. 
ಆನ್‍ಲೈನ್ ವ್ಯವಹಾರಕ್ಕೆ ಆದ್ಯತೆ 
        ಎಲ್ಲಾ ಬ್ಯಾಂಕುಗಳಲ್ಲಿ ಆನ್‍ಲೈನ್  ವ್ಯವಹಾರ ನಡೆಸುವಂತೆ ಕೇಂದ್ರ ಸರ್ಕಾರ ಪ್ರಚೋದನೆ ನೀಡುತ್ತಿದೆ. ಆದರೆ ಇಂದು ಬ್ಯಾಂಕುಗಳಲ್ಲಿ ಪ್ರತಿಯೊಂದು ವ್ಯವಹಾರಕ್ಕೆ ಇಂತಿಷ್ಟು ಎಂದು ಹಣ ಶುಲ್ಕ ಭರಿಸಬೇಕಾಗುತ್ತಿದೆ. ಆ ಶುಲ್ಕವನ್ನು ಕಡಿತಗೊಳಿಸ ಬೇಕೆಂದರೆ ಬ್ಯಾಂಕ್‍ಗಳಿಗೆ ತೆರಳಿ ತಮ್ಮ ವ್ಯವಹಾರ ನಡೆಸಿಕೊಳ್ಳಬೇಕಿದೆ. ಹೀಗಿದ್ದಾಗ ಆನ್‍ಲೈನ್ ವ್ಯವಹಾರ ನಡೆಸುವ ಅಗತ್ಯ ವಿದೆಯೇ..? 
ಎಟಿಎಂ ಶುಲ್ಕವೇ ಹೆಚ್ಚು
       ಬ್ಯಾಂಕ್‍ಗಳಲ್ಲಿ ಉಳಿತಾಯ ಖಾತೆಯಲ್ಲಿ ಇಡಲಾದ ಹಣವನ್ನು ಅವಶ್ಯಕತೆ ಇದ್ದಾಗ ಎಟಿಎಂ ಮೂಲಕ ಹಣ ಪಡೆಯಲು ಮುಂದಾದರೆ ಅದಕ್ಕೂ ಶುಲ್ಕ ಭರಿಸಬೇಕಾಗುತ್ತದೆ. ಮೊದಲ ಐದು ಬಾರಿ ಉಚಿತವಾಗಿ ಹಣ ಪಡೆಯಬಹುದು. ಆರನೇ ಬಾರಿಯಿಂದ ಎಟಿಎಂ ಬಳಸಿ ಹಣ ಪಡೆಯಬೇಕಾದರೆ ಶುಲ್ಕ ಭರಿಸಬೇಕಾಗುತ್ತದೆ. ಅಲ್ಲದೆ ಹೆಚ್ಚುವರಿ ಶುಲ್ಕದ ಹಣ ಬ್ಯಾಂಕ್‍ಗೆ ಸೇರುವುದಿಲ್ಲ. ಬದಲಿಗೆ ನಮಗೆ ನೀಡಲಾದ ಎಟಿಎಂ ಕಾರ್ಡ್ ( ವಿಸಾ, ರೂಪೆ, ಮಾಸ್ಟರ್ ಕಾರ್ಡ್) ತಯಾರಿಸುವ ಕಂಪನಿಗೆ ಹೋಗುತ್ತದೆ. ಇದರಿಂದ ಬ್ಯಾಂಕ್‍ಗೂ ಲಾಭವಿಲ್ಲ. ಖಾತೆದಾರನಿಗೂ ಲಾಭವಿಲ್ಲ. ಬದಲಾಗಿ ಮೂರನೇ ವ್ಯಕ್ತಿ ಇದರ ಲಾಭ ಪಡೆಯುತ್ತಿದ್ದಾನೆ. 
ವೆರಿಫಿಕೇಶನ್‍ಗೆ ಹಣ
     ಯಾವುದೇ ಸಂಘ ಸಂಸ್ಥೆಗಳಿಂದ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಪಡೆಯಲು ಅರ್ಜಿ ಹಾಕಿದಾಗ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನೀಡಿದ್ದರೂ ಅದರ ವೆರಿಫಿಕೇಶನ್ ಮಾಡಲು ಒಮ್ಮೆ ಸಂಸ್ಥೆ ಅಥವಾ ಕಚೇರಿಗೆ ಭೇಟಿ ನೀಡಿದರೆ ಅದಕ್ಕೆ 20 ರಿಂದ 30 ಸಾವಿರ ರೂಗಳ ವರೆಗೆ ಹಣ ಪಡೆಯುತ್ತಾರೆ ಎಂಬುದು ಕೆಲವು ಸಂಸ್ಥೆಯ ಮುಖ್ಯಸ್ಥರಿಂದ ದೊರೆತ ಮಾಹಿತಿ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap