ಬೆಂಗಳೂರು:
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸುತ್ತಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪನ್ನು ಆಗಸ್ಟ್ 1ಕ್ಕೆ ಮುಂದೂಡಿಕೆ ಮಾಡಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ನಾಲ್ಕು ಪ್ರಕರಣಗಳಲ್ಲಿ ಒಂದರ ತೀರ್ಪನ್ನು ಇಂದು ಪ್ರಕಟಿಸಲಾಗುವುದು ಎಂದು ತಿಳಿಸಲಾಗಿತ್ತು. ಇದೀಗ ಕೋರ್ಟ್ ಎರಡೂ ಕಡೆಯ ವಕೀಲದಿಂದ ಕೆಲವು ಸ್ಪಷ್ಟೀಕರಣ ಕೇಳಿದ್ದು, ತೀರ್ಪನ್ನು ಮುಂದೂಡಿದೆ.
ಗೂಗಲ್ ಮ್ಯಾಪ್ ಅನ್ನು ಸಾಕ್ಷಿಯಾಗಿ ಪರಿಗಣಿಸಬಹುದೇ ಎಂದು ಕೋರ್ಟ್ ವಕೀಲರಿಗೆ ವಿವರಣೆ ಕೇಳಿದೆ. ಅತ್ಯಾಚಾರ ಕೃತ್ಯ ನಡೆದಿರುವ ಹೊಳೆನರಸೀಪುರದ ಫಾರ್ಮ್ ಹೌಸ್ ಸ್ಥಳ ತೋರಿಸಲು ಗೂಗಲ್ ಮ್ಯಾಪ್ ಆಧರಿಸಿ ಎರಡೂ ಕಡೆಯ ವಕೀಲರು ವಾದಿಸಿದ್ದರು. ಗೂಗಲ್ ಸಂಸ್ಥೆಯಿಂದ ಅಧಿಕೃತ ಮಾಹಿತಿ ಇಲ್ಲದ ದಾಖಲೆ ಪರಿಗಣಿಸಬಹುದೇ ಎಂದು ಜಡ್ಜ್ ಸಂತೋಷ ಗಜಾನನ ಭಟ್ ಈ ಬಗ್ಗೆ ಪ್ರಶ್ನಿಸಿದರು. ವಿವರಣೆ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಕೆಲಕಾಲ ಮುಂದೂಡಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ. ವಿಚಾರಣೆ ಪ್ರಕ್ರಿಯೆ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಪದೇ ಪದೆ ಕಣ್ಣು ಮುಚ್ಚಿ ಏನನ್ನೋ ಪಠಿಸುತ್ತಿದ್ದರು ಎಂದು ಗೊತ್ತಾಗಿದೆ.
ಸರಣಿ ಅತ್ಯಾಚಾರ ಆರೋಪ ಹೊತ್ತು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೊಳಗಾಗಿ 14 ತಿಂಗಳು ಕಳೆದಿವೆ. ಮೂರು ಅತ್ಯಾಚಾರ ಪ್ರಕರಣ, ಒಂದು ಲೈಂಗಿಕ ದೌರ್ಜನ್ಯ ಹೀಗೆ ಒಟ್ಟು ನಾಲ್ಕು ಪ್ರಕರಣಗಳ ಪೈಕಿ ಒಂದು ಪ್ರಕರಣ ಈಗ ನಿರ್ಣಾಯಕ ಹಂತ ತಲುಪಿದೆ. ಕೆ.ಆರ್ ನಗರದಲ್ಲಿ ಮಹಿಳೆಯ ಅತ್ಯಾಚಾರ ಪ್ರಕರಣದ ಸಂಬಂಧ ವಿಚಾರಣೆ ಮುಕ್ತಾಯವಾಗಿದ್ದು, ತೀರ್ಪನ್ನು ಕೋರ್ಟ್ ಪ್ರಕಟಿಸಲಿದೆ.
ಹೊಳೆನರಸೀಪುರದ ಮಹಿಳೆಯೊಬ್ಬರು ನೀಡಿದ್ದ ದೂರಿನ ಆಧಾರದ ತನಿಖೆ ಆರಂಭವಾಯಿತು. ಪ್ರಕರಣ ಸಂಬಂಧ 2024ರ ಮೇ 31ರಂದು ಪ್ರಜ್ವಲ್ ರೇವಣ್ಣ ಅವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ, ಕೆ.ಆರ್.ನಗರದ ಮನೆ ಕೆಲಸದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ನಡೆಸಿದ ಎಸ್‌ಐಟಿ ಆರೋಪಪಟ್ಟಿ ಸಲ್ಲಿಸಿತ್ತು. ಇದಾದ ಬಳಿಕ 2024ರ ಡಿಸೆಂಬರ್ 30ರಂದು ಕೇಸ್ ಮ್ಯಾಜಿಸ್ಟ್ರೇಟ್ ಕೋರ್ಟ್ನಿಂದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ವರ್ಗಾವಣೆಯಾಗಿತ್ತು. ಕೇಸ್ ವರ್ಗಾವಣೆಯಾದ ಕೇವಲ 7 ತಿಂಗಳಿನಲ್ಲಿ ಸಾಕ್ಷ್ಯ ವಿಚಾರಣೆ ಪೂರ್ಣಗೊಳಿಸಿದ ಜಡ್ಜ್ ಸಂತೋಷ್ ಗಜಾನನ ಭಟ್ ಅವರು ತೀರ್ಪು ಕಾಯ್ದಿರಿಸಿದ್ದಾರೆ.








