ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಈಗ ಕೈದಿ ನಂ-5664…..!

ಬೆಂಗಳೂರು:

     ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪದಡಿ ಬಂಧಿತರಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು, ಪರಪ್ಪನ ಅಗ್ರಹಾರದ ಜೈಲು ಸೇರಿದ್ದಾರೆ.ಸದ್ಯ ಪ್ರಜ್ವಲ್ ರೇವಣ್ಣ, ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಕ್ವಾರೆಂಟೈನ್ ಸೆಲ್ ನಲ್ಲಿದ್ದು, ಅವರಿಗೆ ವಿಚಾರಣಾಧೀನ ಕೈದಿ ನಂಬರ್-5664 ನೀಡಲಾಗಿದೆ.

    ಸೋಮವಾರ ರಾತ್ರಿ ಊಟವನ್ನು ಸಹ ಜೈಲಾಧಿಕಾರಿಗಳು ನೀಡಿದ್ದು, ರಾತ್ರಿ ಜೈಲಿನ ಮೆನುವಿನಂತೆ ಮುದ್ದೆ, ಅನ್ನ, ಸಾಂಬರು, ಪಲ್ಯ ನೀಡಲಾಗಿದೆ. ಆದರೆ, ಪ್ರಜ್ವಲ್ ಜೈಲಿನ ಕ್ವಾರೆಂಟೈನ್ ಬ್ಯಾರಕ್ ನಲ್ಲಿ ಮೌನಕ್ಕೆ ಶರಣಾಗಿದ್ದಾರೆಂದು ತಿಳಿದುಬಂದಿದೆ.

    ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಮಾಜಿ ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ಅವರಿಗ ನಿನ್ನೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್​ ಆದೇಶ ಹೊರಡಿಸಿದೆ.

    ಸೋಮವಾರ ಪ್ರಜ್ವಲ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಕ್ಕೂ ಮುನ್ನ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್‌ ಅವರನ್ನು ಬಸವನಗುಡಿಯಲ್ಲಿರುವ ಅವರ ತಾಯಿ ಭವಾನಿ ರೇವಣ್ಣ ಅವರ ಮನೆಗೆ ಸ್ಥಳ ಮಹಜರುಗಾಗಿ ಕರೆದೊಯ್ದಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಾಜಿ ಸಂಸದರನ್ನು ನ್ಯಾಯಾಲಯಕ್ಕೆ ಕರೆತರಲಾಯಿತು.

   ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆಯೇ ಎಂದು ಪ್ರಜ್ವಲ್‌ಗೆ ನ್ಯಾಯಾಧೀಶರು ಪ್ರಶ್ನಿಸಿದಾಗ ಅವರು ನಕಾರಾತ್ಮಕವಾಗಿ ಉತ್ತರಿಸಿದರು. ಬಳಿಕ ಎಸ್‌ಐಟಿ ಸಲ್ಲಿಸಿದ್ದ ದಾಖಲೆಗಳನ್ನು ಓದಿದ ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

    ಮಧ್ಯಾಹ್ನ 3.45ರ ವೇಳೆಗೆ ಅವರನ್ನು ನ್ಯಾಯಾಲಯದ ಕೊಠಡಿಯಿಂದ ಹೊರಗೆ ಕರೆದುಕೊಂಡು ಹೋಗಿ ವ್ಯಾಪಕ ಭದ್ರತೆಯ ನಡುವೆ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು.

    ಪ್ರಜ್ವಲ್ ರೇವಣ್ಣ ವಿರುದ್ಧ ಮೂರು ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಮನೆ ಕೆಲಸದ ಮಹಿಳೆ ಮೇಲಿನ ಪ್ರಕರಣದಲ್ಲಿ ಅವರನ್ನು ಎಸ್ಐಟಿ ಬಂಧಿಸಿದೆ. ಉಳಿದ ಎರಡು ಪ್ರಕರಣಗಳಲ್ಲಿ ಅವರನ್ನು ಮತ್ತೆ ವಶಕ್ಕೆ ಪಡೆದು ವಿಚಾರಣೆ ನಡೆಸಲಿದೆ ಎಂದು ಹೇಳಲಾಗಿದೆ.

Recent Articles

spot_img

Related Stories

Share via
Copy link
Powered by Social Snap