ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ದೋಷಿ ಎಂದು‌ ಕೋರ್ಟ್ ತೀರ್ಪು; ನಾಳೆ ಶಿಕ್ಷೆ ಪ್ರಕಟ

ಬೆಂಗಳೂರು: 

   ಕೆ.ಆರ್‌.ನಗರ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಾಕ್‌ ನೀಡಿದೆ. ಪ್ರಕರಣದಲ್ಲಿ (Prajwal Revanna Case) ಪ್ರಜ್ವಲ್‌ ರೇವಣ್ಣ ದೋಷಿ ಎಂದು‌ ಕೋರ್ಟ್ ಶುಕ್ರವಾರ ತೀರ್ಪು ನೀಡಿದ್ದು, ನಾಳೆ ಶಿಕ್ಷೆ ಪ್ರಕಟವಾಗಲಿದೆ. ತೀರ್ಪು ಪ್ರಕಟವಾದಾಗ ಕೋರ್ಟ್‌ನಲ್ಲಿ ಪ್ರಜ್ವಲ್‌ ರೇವಣ್ಣ ಕಣ್ಣೀರು ಹಾಕಿರುವುದು ಕಂಡುಬಂದಿದೆ. ‌

   ತೀರ್ಪು ಪ್ರಕಟವಾದ ವೇಳೆ ಕಣ್ಣೀರಿಡುತ್ತಾ ಪ್ರಜ್ವಲ್‌ ಹೊರಗೆ ಬಂದಿದ್ದಾರೆ. ಈ ವೇಳೆ ಅವರ ವಕೀಲರು ಸಮಾಧಾನಪಡಿಸಿದ್ದಾರೆ. ಇದಕ್ಕೂ ಮೊದಲು ಜಡ್ಜ್‌, ತೀರ್ಪಿಗೆ ಸಹಿ ಹಾಕುತ್ತಿದ್ದ ವೇಳೆ, ಪ್ರಜ್ವಲ್‌ ಕೈಮುಗಿದುನಿಂತು ಮಂತ್ರ ಪಠಿಸುತ್ತಿದ್ದರು. ತೀರ್ಪು ಪ್ರಕಟವಾಗುತ್ತಲೇ ಪ್ರಜ್ವಲ್‌ ಕಣ್ಣೀರು ಹಾಕಿದ್ದಾರೆ.

   ಪ್ರಕರಣದಲ್ಲಿ 26 ಸಾಕ್ಷಿಗಳ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (Special Court) ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ನೀಡಿದೆ. ಸರಣಿ ಅತ್ಯಾಚಾರ ಆರೋಪ ಹೊತ್ತು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೊಳಗಾಗಿ 14 ತಿಂಗಳು ಕಳೆದಿವೆ. ಮೂರು ಅತ್ಯಾಚಾರ ಪ್ರಕರಣ, ಒಂದು ಲೈಂಗಿಕ ದೌರ್ಜನ್ಯ ಹೀಗೆ ಒಟ್ಟು ನಾಲ್ಕು ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ಇದೀದ ತೀರ್ಪು ಪ್ರಕಟವಾಗಿದೆ.

   ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ದೃಶ್ಯವಿದ್ದ ಪೆನ್ ಡ್ರೈವ್​ಗಳನ್ನು ಹಾಸನ ಕ್ಷೇತ್ರದಾದ್ಯಂತ ಹಂಚಲಾಗಿತ್ತು. ಹೊಳೆನರಸೀಪುರದ ಮಹಿಳೆಯೊಬ್ಬರು ನೀಡಿದ್ದ ದೂರಿನ ಆಧಾರದ ತನಿಖೆ ಆರಂಭವಾಯಿತು. ಪ್ರಕರಣ ಸಂಬಂಧ 2024ರ ಮೇ 31ರಂದು ಪ್ರಜ್ವಲ್ ರೇವಣ್ಣ ಅವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ, ಕೆ.ಆರ್.ನಗರದ ಮನೆ ಕೆಲಸದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದರು.

   ತನಿಖೆ ನಡೆಸಿದ ಎಸ್‌ಐಟಿ ಆರೋಪಪಟ್ಟಿ ಸಲ್ಲಿಸಿತ್ತು. ಇದಾದ ಬಳಿಕ 2024ರ ಡಿಸೆಂಬರ್ 30ರಂದು ಕೇಸ್ ಮ್ಯಾಜಿಸ್ಟ್ರೇಟ್ ಕೋರ್ಟ್​ನಿಂದ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ವರ್ಗಾವಣೆಯಾಗಿತ್ತು. ಕೇಸ್ ವರ್ಗಾವಣೆಯಾದ ಕೇವಲ 7 ತಿಂಗಳಿನಲ್ಲಿ ಸಾಕ್ಷ್ಯ ವಿಚಾರಣೆ ಪೂರ್ಣಗೊಳಿಸಿದ ಜಡ್ಜ್ ಸಂತೋಷ್ ಗಜಾನನ ಭಟ್ ಅವರು ತೀರ್ಪು ಕಾಯ್ದಿರಿಸಿದ್ದರು. 

   ಐಪಿಸಿ ಸೆಕ್ಷನ್ 376 (2)(k) ಅಡಿ ಮಹಿಳೆಯ ಮೇಲೆ ಹಕ್ಕು ಚಲಾಯಿಸುವ ಸ್ಥಿತಿಯಲ್ಲಿದ್ದು ಅತ್ಯಾಚಾರ ಎಸಗುವುದು, 376 (2) (n) ಅಡಿ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗುವುದು, 354(A) ಲೈಂಗಿಕತೆ ಬೇಡಿಕೆ ಇಡುವುದು, 354 (B) ಮಹಿಳೆಯನ್ನು ವಿವಸ್ತ್ರಗೊಳಿಸುವುದು, 354 (c) ಮಹಿಳೆಯ ಅಶ್ಲೀಲ ದೃಶ್ಯ ಚಿತ್ರೀಕರಿಸುವುದು, 506 ಜೀವ ಬೆದರಿಕೆ, 201 ಸಾಕ್ಷ್ಯನಾಶದ ಅಡಿ ದೋಷಾರೋಪ ಹೊರಿಸಲಾಗಿದೆ. ಕೋರ್ಟ್ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಮಾನಿಸಿದ್ದರಿಂದ ಕನಿಷ್ಠ 10 ವರ್ಷಗಳಿಂದ ಗರಿಷ್ಠ ಜೀವಿತಾವಧಿ ವರೆಗೂ ಸೆರೆವಾಸದ ಶಿಕ್ಷೆ ವಿಧಿಸುವ ಅವಕಾಶವಿರಲಿದೆ.

Recent Articles

spot_img

Related Stories

Share via
Copy link