ಮೋದಿ ವಿರುದ್ದ ಪ್ರಕಾಶ್‌ ರಾಜ್‌ ಟೀಕೆ …!

ಬೆಂಗಳೂರು: 

     ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಟ ಪ್ರಕಾಶ್ ರೈ ಮತ್ತೆ ವಾಗ್ದಾಳಿ ನಡೆಸಿದ್ದು, ಪ್ರಗತಿ, ಅಭಿವೃದ್ಧಿ ವಿಚಾರವಾಗಿ ಸೊಲ್ಲೆತ್ತದ ಮೋದಿ, ಹಿಂದೂ-ಮುಸ್ಲಿಂ ಗಲಾಟೆ ವಿಚಾರವಾಗಿ ಮಾತ್ರ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

    ಬೆಂಗಳೂರಿನ ಗೋಲ್ಡ್ ಫಿಂಚ್ ಹೊಟೆಲ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಟ ಪ್ರಕಾಶ್ ರೈ, ‘ಕಳೆದ 2 ಬಾರಿಯ ಮೋದಿ ಆಡಳಿತವನ್ನು ನೋಡಿರುವ ಜನ ಭ್ರಮನಿರಸನವಾಗಿದ್ದು, ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆ. ಆದರೆ ಮೋದಿ ಮಾತ್ರ ತಮ್ಮ ಬೇಳೆಕಾಳು ಬೇಯುತ್ತಿಲ್ಲ ಎಂದು ಹಿಂದೂ-ಮುಸ್ಲಿಂ ವಿಚಾರವಾಗಿ ಮಾತನಾಡುತ್ತಾ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದರು.

    ಅಂತೆಯೇ ‘ಕಾಂಗ್ರೆಸ್ ಪಕ್ಷ ಮುಸ್ಲಿಮರ ಪರವಾಗಿದ್ದು, ಎನ್ ಡಿಎ ಮೈತ್ರಿಕೂಟ ಮಾತ್ರ ಹಿಂದೂಗಳ ಪರವಾಗಿ ನಿಂತಿದೆ ಎಂದು ಹೇಳುತ್ತಿದ್ದಾರೆ. ಆ ಮೂಲಕ ಹಿಂದೂಗಳನ್ನು ಓಲೈಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರ ಈ ಹೇಳಿಕೆ ಬಗ್ಗೆ ಚುನಾವಣಾ ಆಯೋಗ ಮೌನವಹಿಸಿದ್ದು ನಿಜಕ್ಕೂ ನಮಗೆ ಅಚ್ಚರಿ ಮೂಡಿಸಿದೆ. ಪ್ರಧಾನಿ ಮೋದಿ ‘400 ಪಾರ್’ ಘೋಷಣೆ ಮೂಲಕ ತಮ್ಮನ್ನು ಪ್ರಶ್ನಿಸುವ ವಿರೋಧ ಪಕ್ಷಗಳೇ ಇರಬಾರದು ಎಂದು ಬಯಸುತ್ತಿದ್ದಾರೆ ಎಂದರು. 

    ಇದೇ ವೇಳೆ ಕೇಂದ್ರ ಸಚಿವ ಹಾಗೂ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಉದ್ಯಮಿ ರಾಜೀವ್ ಚಂದ್ರಶೇಖರ್ ವಿರುದ್ಧವೂ ಕಿಡಿಕಾರಿದ ಪ್ರಕಾಶ್ ರೈ, ‘ಕರ್ನಾಟಕದಲ್ಲಿ ಏನೂ ಅಭಿವೃದ್ಧಿ ಕೆಲಸ ಮಾಡದ ಬಿಜೆಪಿ ರಾಜ್ಯಸಭೆ ಸದಸ್ಯರೊಬ್ಬರು ಈಗ ಕೇರಳದಲ್ಲಿ ಸ್ಪರ್ಧಿಸುತ್ತಿದ್ದಾರೆ ಏಕೆ..? ಕರ್ನಾಟಕದಲ್ಲಿ ಅವರ ಪಾತ್ರವೇನು.. ರಾಜೀವ್ ಚಂದ್ರಶೇಖರ್ ಉದ್ಯಮಿಯಾಗಿದ್ದೂ ತೆರಿಗೆ ವಿಚಾರದಲ್ಲಿ ಕಳ್ಳಾಟ ಆಡುತ್ತಿದ್ದರೂ ಆದಾಯ ತೆರಿಗೆ ಇಲಾಖೆ ಏಕೆ ಸುಮ್ಮನಿದೆ ಎಂದು ಪ್ರಶ್ನಿಸಿದರು.

    ಇದೇ ವೇಳೆ ಚುನಾವಣಾ ಬಾಂಡ್ ಗಳ ಮೂಲಕ ಸಾವಿರಾರು ಕೋಟಿ ರೂಗಳನ್ನು ವಸೂಲಿ ಮಾಡಿದ್ದಾರೆ. ಸ್ವತಃ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಅನೈತಿಕ ಎಂದು ಹೇಳಿದೆ. ಆದರೆ ದೇಶದ ವಿತ್ತ ಸಚಿವರು ಇದನ್ನು ಮತ್ತೆ ಜಾರಿಗೊಳಿಸುವುದಾಗಿ ಹೇಳುತ್ತಿದ್ದಾರೆ. ಇತ್ತ ದೇಶದ ಪ್ರಧಾನಿಗಳು ಅದರ ಬಗ್ಗೆ ಮಾತನಾಡದಂತೆ ಎಡಪಕ್ಷಗಳಿಗೆ ಎಚ್ಚರಿಕೆ ನೀಡುತ್ತಿದ್ದಾರೆ ಎಂದರು.

    ಪಿಎಂ ಕೇರ್ಸ್ ಫಂಡ್ ಬಗ್ಗೆಯೂ ಆಕ್ಷೇಪ ಎತ್ತಿದ ಪ್ರಕಾಶ್ ರೈ, ಕೋವಿಡ್ ಸಂದರ್ಭದಲ್ಲಿ ಆರಂಭಿಸಲಾದ ಪಿಎಂ ಕೇರ್ಸ್ ಫಂಡ್ ನಲ್ಲಿ ಈಗಲೂ ಸಾವಿರಾರು ಕೋಟಿ ರೂ ಹಣ ಏಕಿದೆ. ಈ ಬಗ್ಗೆ ಆರ್ ಟಿಐ ಮೂಲಕ ಪ್ರಶ್ನಿಸಿದರೆ ಅದನ್ನು ಪ್ರಶ್ನಿಸುವಂತಿಲ್ಲ ಎಂದು ಹೇಳುತ್ತಾರೆ.

    ಪಿಎಂ ಕೇರ್ಸ್ ಫಂಡ್ ಗೆ ಬಂದ ಹಣದಲ್ಲಿ ಚೀನಾ ಸಂಸ್ಥೆಗಳ ಪಾಲೂ ಇದ್ದೂ ಅವರಿಂದ ಹಣ ಪಡೆದಿದ್ದೇಕೆ ಎಂಬ ಪ್ರಶ್ನೆಗೆ ಸರ್ಕಾರದ ಬಳಿ ಉತ್ತರವಿಲ್ಲ. ಸರ್ಕಾರವನ್ನು ಪ್ರಶ್ನಿಸಿದರೆ, ನೀವು ಕೊಟ್ಟ ಭರವಸೆಗಳು ಈಡೇರಿಲ್ಲ ಎಂದು ಹೇಳಿದರೆ ಅದು ತಪ್ಪು. ಆದರೆ ಆಯ್ಕೆಯಾದ ಪ್ರತೀಯೊಬ್ಬ ನಾಯಕನನ್ನು ಪ್ರಶ್ನಿಸುವ ಹಕ್ಕು ಜನರಿಗಿದೆ ಎಂದು ಹೇಳಿದರು. 

   ಇದೇ ವೇಳೆ ಭಾರತದ ಪ್ರಜಾಪ್ರಭುತ್ವದಲ್ಲಿ ಜನರು ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದರೆ, ಅವರು ಪ್ರಧಾನಿಯನ್ನು ಆಯ್ಕೆ ಮಾಡುತ್ತಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಪ್ರಧಾನಿ ಮುಖವನ್ನು ನೋಡಿ ಸಂಸದರ ಆಯ್ಕೆ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಹೀಗಾಗಗಬಾರದು.. ಪ್ರಧಾನಿ ನೋಡಿ ಸಂಸದರ ಆಯ್ಕೆ ಬೇಡ ಎಂದು ಪ್ರಕಾಶ್ ರೈ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap