ತುಮಕೂರು:
ವಿಧಾನಪರಿಷತ್ ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಶುಕ್ರವಾರ ಚುನಾವಣೆ ನಡೆದಿದ್ದು, ದಾಖಲೆಯ ಶೇ.99.78ರಷ್ಟು ಮತದಾನವಾಗಿದೆ. ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತಪೆಟ್ಟಿಗೆಯಲ್ಲಿ ಭದ್ರವಾಗಿರಿಸಲಾಗಿದ್ದು, ಡಿ.14ರಂದು ತುಮಕೂರಿನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಣಿಕೆ ಕಾರ್ಯ ನಡೆಯಲಿದೆ.
ಆರಂಭದಲ್ಲಿ ನೀರಸ:
ಜಿಲ್ಲಾದ್ಯಂತ 338 ಮತದಾನ ಕೇಂದ್ರದಲ್ಲಿ ಶಾಂತಿಯುತ ಮತದಾನವಾಗಿದ್ದು, ಬೆಳಿಗ್ಗೆ 8 ರಿಂದ ಆರಂಭಗೊಂಡ ಮತದಾನ ಹತ್ತುಗಂಟೆಯವರೆಗೆ ಶೇ.4.26ರಷ್ಟು ಮತದಾನದೊಂದಿಗೆ ನೀರಸವಾಗಿಯೇ ಇತ್ತು. ಹತ್ತು ಗಂಟೆ ನಂತರ ಬಿರುಸು ಪಡೆದಿದ್ದು,12 ಗಂಟೆ ವೇಳೆಗೆ ಶೇ.31.75ರಷ್ಟು ಮತದಾನವಾಗಿತ್ತು. ಮಧ್ಯಾಹ್ನದ 3ರೊಳಗೆ ಬಹುತೇಕ ಕಡೆ ಪ್ರಾಶಸ್ತ್ಯ ಮತದಾನದ ಪ್ರಕ್ರಿಯೆ ಪೂರ್ಣಗೊಂಡಿದ್ದು ಕಂಡುಬಂತು. ಮತದಾನ ಮುಗಿಯುವ
ಮತದಾನಕ್ಕೆ ಅರ್ಹರಾದ 5559 ಅರ್ಹ ಮತದಾರರಲ್ಲಿ 2610 ಪುರುಷರು(ಶೇ.99.58) ಹಾಗೂ 2937 ಮಹಿಳೆಯರು (ಶೇ.99.97) ಸೇರಿದಂತೆ 5547 ಮತದಾರರು ಉತ್ಸಾಹದ ಮತದಾನ ಮಾಡಿದರು. ಈ ಪೈಕಿ 8 ಪುರುಷರು ಹಾಗೂ 5 ಮಹಿಳೆಯರು ಸೇರಿ 13 ಮಂದಿ ವಿಶೇಷಚೇತನರು ಸೇರಿದ್ದಾರೆ.
ಸಿರಾ-ತುಮಕೂರು ಶೇ.100ರಷ್ಟು ಮತದಾನ: ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಶೇ.99.39, ತಿಪಟೂರು-ಶೇ.99.77, ತುರುವೇಕೆರೆ-ಶೇ.99.76, ಕುಣಿಗಲ್-ಶೇ.99.62, ತುಮಕೂರು-ಶೇ.100, ಕೊರಟಗೆರೆ-ಶೇ.99.75, ಗುಬ್ಬಿ-ಶೇ.99.68, ಶಿರಾ-ಶೇ.100, ಪಾವಗಡ-ಶೇ.99.83, ಮಧುಗಿರಿ-ಶೇ.99.84 ಸೇರಿದಂತೆ ಒಟ್ಟಾರೆ ಶೇ.99.78ರಷ್ಟು ಮತದಾನವಾಗಿದೆ.
ಗಣ್ಯರ ಮತದಾನ:
ತುಮಕೂರು ಮಹಾನಗರಪಾಲಿಕೆಯಲ್ಲಿ ಸಂಸದ ಜಿ.ಎಸ್.ಬಸವರಾಜ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಎಂಎಲ್ಸಿ ಕಾಂತರಾಜು ಮೇಯರ್ ಬಿ.ಜಿ.ಕೃಷ್ಣಪ್ಪ ಸೇರಿ ಉಪಮೇಯರ್. ಪಾಲಿಕೆ ಸದಸ್ಯರು ಮತದಾನ ಮಾಡಿದರೆ ಕೊರಟಗೆರೆ ಪಟ್ಟಣ ಪಂಚಾಯಿತಿಯಲ್ಲಿ ಶಾಸಕ ಡಾ.ಜಿ.ಪರಮೇಶ್ವರ, ಗುಬ್ಬಿ ಪ.ಪಂನಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್, ಕುಣಿಗಲ್ ಪುರಸಭೆಯಲ್ಲಿ ಶಾಸಕ ಡಾ.ಎಚ್.ಡಿ.ರಂಗನಾಥ್, ಮಧುಗಿರಿಯಲ್ಲಿ ಎಂ.ವಿ.ವೀರಭದ್ರಯ್ಯ, ಪಾವಗಡದಲ್ಲಿ ಶಾಸಕ ವೆಂಕಟರಮಣಪ್ಪ, ತಿಪಟೂರು ನಗರಸಭೆಯಲ್ಲಿ ಸಚಿವ ಬಿ.ಸಿ.ನಾಗೇಶ್, ಚಿ.ನಾ.ಹಳ್ಳಿ ಪುರಸಭೆಯಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ, ತುರುವೇಕೆರೆಯ ಪ.ಪಂ ನಲ್ಲಿ ಮಸಾಲೆ ಜಯರಾಂ ಮತದಾನ ಮಾಡಿದರೆ, ಸಿರಾ ನಗರಸಭೆಯಲ್ಲಿ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಮತದಾನ ಮಾಡಿದರು.
ಎಂಎಲ್ಸಿಗಳಾದ ಕೆ.ಎ.ತಿಪ್ಪೇಸ್ವಾಮಿ ಅವರ ಮತ ಹಕ್ಕು ಬೆಂಗಳೂರು ನಗರದಲ್ಲಿರುವುದರಿಂದ ಅವರು ರಾಜಧಾನಿಯಲ್ಲಿ, ಎಂಎಲ್ಸಿ ಚಿದಾನಂದ ಎಂ.ಗೌಡ ದಾವಣಗೆರೆ ಮಹಾನಗರಪಾಲಿಕೆಯಲ್ಲಿ ಮತ ಚಲಾಯಿಸಿದರು. ಅಭ್ಯರ್ಥಿಗಳು ಸಹ ಕ್ಷೇತ್ರ ಪರ್ಯಟನೆ ಮಾಡಿ ಮತದಾರರನ್ನು ಕಡೇ ಕ್ಷಣದ ಮನಗೆಲ್ಲುವಲ್ಲಿ ನಿರತರಾಗಿದ್ದರು.
ತಾಲ್ಲೂಕುವಾರು ಮತದಾನದ ವಿವರ
(ಆವರಣದಲ್ಲಿ ಪುರುಷರು, ಮಹಿಳೆಯರು)
ಚಿಕ್ಕನಾಯಕನಹಳ್ಳಿ-492 (ಪು-238, ಮ-254)
ತಿಪಟೂರು-437(ಪು-208, ಮ-229)
ತುರುವೇಕೆರೆ-412(ಪು-192, ಮ-220)
ಕುಣಿಗಲ್-522(ಪು-245,ಮ-277)
ತುಮಕೂರು-786(ಪು-379, ಮ-407)
ಕೊರಟಗೆರೆ-406(ಪು-196, ಮ-210)
ಗುಬ್ಬಿ-622(ಪು-297,ಮ-325)
ಶಿರಾ-658(ಪು-302,ಮ-356)
ಪಾವಗಡ-577(ಪು-257,ಮ-320)
ಮಧುಗಿರಿ-635(ಪು-296, ಮ-339)
ಜಿಲ್ಲೆಯ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಶಾಂತಿಯುತ ಮತದಾನವಾಗಿದ್ದು, ಪ್ರತಿ ಮತಗಟ್ಟೆಯಲ್ಲಿ ಮತದಾರರನ್ನು ಹಾಗೂ ಚುನಾವಣಾ ಸಿಬ್ಬಂದಿಗಳನ್ನು ಕೋವಿಡ್ ನಿಯಮಾವಳಿಯನ್ವಯ ಥರ್ಮಲ್ ಸ್ಕ್ಯಾನಿಂಗ್ ತಪಾಸಣೆಗೊಳಪಡಿಸಲು ಆಶಾ ಕಾರ್ಯಕರ್ತೆಯರನ್ನು ನೇಮಿಸಲಾಗಿತ್ತು. ಪ್ರತಿ ಮತದಾನ ಕೇಂದ್ರಗಳಿಗೂ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಶಾಂತಿಯುತ ಮತದಾನಕ್ಕೆ ಅಭ್ಯರ್ಥಿಗಳು, ಮತದಾರರು ಅಗತ್ಯ ಸಹಕಾರ ನೀಡಿದರು.
-ವೈ.ಎಸ್. ಪಾಟೀಲ್, ಜಿಲ್ಲಾ ಚುನಾವಣಾಧಿಕಾರಿ
ರಾತ್ರಿ ಕಾರ್ಯಚರಣೆಯದ್ದೇ ಗುಸುಗುಸು…!
ತುಮಕೂರು ತಾಲೂಕು ದೊಡ್ಡನಾರವಂಗಲ, ಗುಬ್ಬಿ ತಾಲೂಕು ಸಿ.ಎಸ್.ಪುರದಲ್ಲಿ ಸದಸ್ಯರೆಲ್ಲ ಒಟ್ಟಾಗಿ ಬಂದು ಮತಚಲಾಯಿಸಿದ್ದು ಗಮನಸೆಳೆಯಿತು. ಆಯಾ ಕ್ಷೇತ್ರದ ಶಾಸಕರು, ಮುಖಂಡರ ಸೂಚನೆಗೆ ಅನುಗುಣವಾಗಿ ಸದಸ್ಯ ಮತದಾರರು ಮತ ಚಲಾಯಿಸುತ್ತಿರುವುದು ಮತಕೇಂದ್ರಗಳ ಬಳಿ ಕಂಡುಬಂದರೆ, ಚುನಾವಣೆ ಮುನ್ನಾದಿನ ರಾತ್ರಿ ಪಾರ್ಟಿವಾರು ಹಣ ಹಂಚಿಕೆ ಗುಸುಗುಸುಗಳು ಮತದಾನ ಕೇಂದ್ರಗಳ ಬಳಿ ಹರಿದಾಡತೊಡಗಿದ್ದವು.
ಯಾರು ಎಷ್ಟು ಕೊಟ್ಟರೂ ಎಂಬ ಬಗ್ಗೆ ಗುಟ್ಟು ಬಿಟ್ಟುಕೊಡದ ಮತದಾರ ಮಾತುಗಳು, ಈ ಅಭ್ಯರ್ಥಿ ಲೀಡ್ ತಗೋತಾರೆ, ಎಂಬ ಮಾತುಗಳು ಎಲ್ಲಾ ಮತದಾನಕೇಂದ್ರಗಳ ಬಳಿ ಸಾಮಾನ್ಯವೆನಿಸಿತ್ತು. ರಾತ್ರಿ ಕಾರ್ಯಚರಣೆಗಳಿಗೆ ಆಡಳಿತ ಕಡಿವಾಣ ಹಾಕಲಿಲ್ಲವೇಕೆ ಎಂಬ ಪ್ರಶ್ನೆಗಳು ಮತಗಟ್ಟೆ ಕೇಂದ್ರಗಳ ಬಳಿ ಕೇಳಿಬಂದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ