ಹಾಸನ
ಹಾಸನದಲ್ಲಿ ಬಿಜೆಪಿ ಜೆಡಿಎಸ್ ದೋಸ್ತಿಗಳ ನಡುವಣ ವೈಮನಸ್ಸು ಇನ್ನೂ ನಿಂತಿಲ್ಲವೇ ಎಂಬ ಅನುಮಾನ ಮತ್ತಷ್ಟು ಬಲವಾಗಿದೆ. ಇದಕ್ಕೆ ಪ್ರಬಲ ಕಾರಣ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ನೀಡಿರುವ ಹೇಳಿಕೆ. ಹೊಳೆನರಸೀಪುರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಿತ್ರ ಪಕ್ಷ ಜೆಡಿಎಸ್ ನಾಯಕ ಹೆಚ್ಡಿ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಲ್ಲದೆ, ಎದುರಾಳಿ ಕಾಂಗ್ರೆಸ್ ಪಕ್ಷದ ಸಂಸದ ಶ್ರೇಯಸ್ ಪಟೇಲ್ರನ್ನು ಹಾಡಿಹೊಗಳಿದ್ದಾರೆ.
ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ ಪ್ರೀತಂ ಗೌಡ, 2024ರ ನಂತರ ವಾಸ್ತು, ದಿಕ್ಕು, ದಿಸೆ ಎಲ್ಲಾ ಬದಲಾಗಿದೆ. ಅದರ ಶ್ರೇಯಸ್ಸು ಹಾಸನ ಸಂಸದ ಶ್ರೇಯಸ್ ಪಟೇಲ್ಗೆ ಸಲ್ಲುತ್ತದೆ. ಶ್ರೇಯಸ್ ಅವರೊಂದಿಗೆ ಹೊಳೆನರಸೀಪುರದ ಶ್ರೇಯಸ್ಸು ಕೂಡ ಅಡಗಿದೆ. ನಿಮ್ಮನ್ನೆಲ್ಲಾ ನೋಡಿದ ಮೇಲೆ ಹೊಳೆನರಸೀಪುರಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಅನ್ನಿಸಿತು ಎಂದರು.
ಇಷ್ಟುದಿನ ಈ ಭಾಗದಲ್ಲಿ ಯಾವುದೇ ಕಾರ್ಯಕ್ರಮಕ್ಕೆ ನಡೆಯುತ್ತದೆ ಎಂದರೆ, ಯಾವುದೋ ಒಂದು ಮನೆಗೆ, ಒಂದು ತೋಟದಲ್ಲಿ ಲೈಟ್ ಇರುತ್ತಿತ್ತು. ಇಡೀ ಹೊಳೆನರಸೀಪುರದಲ್ಲಿ ಲೈಟ್ ಇರುವುದನ್ನು ನಾನು ನೋಡಿರಲಿಲ್ಲ. ಈಗ ಹೊಳೆನರಸೀಪುರ ಪಟೇಲ್ರ ತಾತನ ಕಾಲಕ್ಕೆ ಕೊಂಡೊಯ್ದಿದೆ. ಈ ಸಂದರ್ಭದಲ್ಲಿ ಪುಟ್ಟಸ್ವಾಮಿ ಗೌಡರನ್ನು ಸ್ಮರಿಸುತ್ತೇನೆ ಎಂದು ಪ್ರೀತಂ ಗೌಡ ಹೇಳಿದರು.
ಇದೀಗ ಮತ್ತೆ ಪ್ರೀತಂ ಗೌಡ ಮೈತ್ರಿ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿ, ಎದುರಾಳಿ ಪಕ್ಷದ ಸಂಸದನನ್ನು ಬಹಿರಂಗವಾಗಿ ಹಾಡಿ ಹೊಗಳಿರುವುದು ಕುತೂಹಲ ಮೂಡಿಸಿದೆ.