ಇಸ್ಲಾಮಾಬಾದ್:
1947ರಲ್ಲಿ ಸ್ವತಂತ್ರ ಸಿಕ್ಕಿದಾಗಿನಿಂದ ಅರ್ಧದಷ್ಟು ಕಾಲ ಸೈನಿಕ ಆಡಳಿತದ ಅಡಿಯಲ್ಲಿದ್ದ ಪಾಕಿಸ್ತಾನದಲ್ಲಿ , ಸೈನಿಕ ದಂಗೆಯ ಚರ್ಚೆ ಹೊಸದೇನಲ್ಲ. ಆದರೆ, ಸೇನಾ ಮುಖ್ಯಸ್ಥ ಅಸಿಮ್ ಮುನೀರ್ , ಪ್ರಧಾನಮಂತ್ರಿ ಶೆಹಬಾಜ್ ಶರೀಫ್‌ಗಿಂತ ಮೊದಲೇ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಭೇಟಿಯಾಗಿ, ವೈಟ್‌ಹೌಸ್‌ನಲ್ಲಿ ಎರಡು ಗಂಟೆಗಳ ಕಾಲ ಡಿನ್ನರ್ ಸಭೆ ನಡೆಸಿದ್ದು, ಗಮನ ಸೆಳೆದಿದೆ. ಇದೀಗ, ಮುನೀರ್ ಶರೀಫ್ ಇಲ್ಲದೇ ಶ್ರೀಲಂಕಾ ಮತ್ತು ಇಂಡೋನೇಷಿಯಾದ ನಾಯಕರನ್ನು ಭೇಟಿಯಾಗಲು ತೆರಳಿದ್ದಾರೆ.
ಜೈಲಿನಲ್ಲಿರುವ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್, ತನಗೇನಾದರೂ ಆಗಿದ್ದರೆ ಮುನೀರ್‌ರನ್ನೇ ಹೊಣೆಗಾರನನ್ನಾಗಿಸಬೇಕು ಎಂದಿದ್ದಾರೆ. ಇದು ಮುನೀರ್ ಇಸ್ಲಾಮಾಬಾದ್‌ನಲ್ಲಿ ಪೂರ್ಣ ಅಧಿಕಾರಕ್ಕಾಗಿ ಯತ್ನಿಸುತ್ತಿದ್ದಾರಾ ಎಂಬ ಊಹಾಪೋಹಕ್ಕೆ ಕಾರಣವಾಗಿದೆ. ಆಯುಬ್ ಖಾನ್ ಬಳಿಕ ಎರಡನೇ ಬಾರಿಗೆ ಫೀಲ್ಡ್ ಮಾರ್ಷಲ್ ಆಗಿರುವ ಮುನೀರ್, ಅಧ್ಯಕ್ಷ ಆಸಿಫ್ ಆಲಿ ಝರ್ದಾರಿಯನ್ನು ಕೆಳಗಿಳಿಸಿ ಅಧಿಕಾರ ಹಿಡಿಯುವ ಯೋಜನೆಯಲ್ಲಿದ್ದಾರೆಯೇ ಎಂಬ ಚರ್ಚೆ ಜೋರಾಗಿದೆ. ಆದರೆ, ಶರೀಫ್, “ಮುನೀರ್‌ಗೆ ಅಧ್ಯಕ್ಷನಾಗುವ ಯಾವುದೇ ಯೋಜನೆ ಇಲ್ಲ” ಎಂದಿದ್ದಾರೆ.
ಐಎಸ್‌ಐ ಮುಖ್ಯಸ್ಥ, ಮಿಲಿಟರಿ ಇಂಟೆಲಿಜೆನ್ಸ್ ಡಿಜಿ, ಕಾರ್ಪ್ಸ್ ಕಮಾಂಡರ್ ಸೇರಿದಂತೆ ಪಾಕಿಸ್ತಾನದ ಪ್ರಮುಖ ಹುದ್ದೆಗಳನ್ನು ಅಸಿಮ್ ಮುನೀರ್ ಒಳಗೊಂಡಿದ್ದಾರೆ. ಜೂನ್‌ನಲ್ಲಿ ಟ್ರಂಪ್ ಜೊತೆಗಿನ ವಿಶೇಷ ಡಿನ್ನರ್ ಸಭೆಯಲ್ಲಿ ಭಾಗಿಯಾಗಿದ್ದು, ಮುನೀರ್‌ರ ಪ್ರಾಮುಖ್ಯತೆಯನ್ನು ಇದು ಎತ್ತಿ ಹಿಡಿದಿತ್ತು. ಆದರೆ, ಶರೀಫ್ ಇನ್ನೂ ಟ್ರಂಪ್‌ರನ್ನು ಭೇಟಿಯಾಗಿಲ್ಲ. ಜುಲೈ 10ರಂದು ಪಾಕ್ ಮಿಲಿಟರಿಯು ಮುನೀರ್‌ರ ಯುಎಸ್ ಭೇಟಿಯ ಬಗ್ಗೆ ಕೂತುಹಲ ಹುಟ್ಟಿ ಹಾಕಿದ್ದು, ಚರ್ಚೆಗೂ ಗ್ರಾಸವಾಗಿದೆ.
ಆದರೆ ಮುನೀರ್ ನೇತೃತ್ವದಲ್ಲಿ ಪಾಕಿಸ್ತಾನದ ಸೈನಿಕ ಪ್ರಾಬಲ್ಯವು ಭಾರತಕ್ಕೆ ಒಳ್ಳೆಯ ಸುದ್ದಿಯಲ್ಲ. ಅಮೆರಿಕ ಪಾಕಿಸ್ತಾನಕ್ಕೆ ದಿನದಿಂದ ದಿನಕ್ಕೆ ಹೆಚ್ಚಿನ ಮಣೆ ಹಾಕುತ್ತಿರುವುದನ್ನು ಭಾರತ ಎಚ್ಚರಿಕೆಯಿಂದ ಗಮನಿಸುತ್ತಿದ್ದು, ಪಾಕಿಸ್ತಾನ-ಅಮೆರಿಕ ಮಿಲಿಟರಿ ಸಂಪರ್ಕ ಮತ್ತೆ ಗಟ್ಟಿಗೊಳ್ಳುತ್ತಿರುವುದನ್ನು ಹಿರಿಯ ಭದ್ರತಾ ಅಧಿಕಾರಿಗಳು ಅನುಮಾನದಿಂದ ನೋಡುತ್ತಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದೆ ಮುನೀರ್ ಇದ್ದಾರೆ ಎಂಬ ಶಂಕೆಯನ್ನು ಭಾರತ ವ್ಯಕ್ತಪಡಿಸಿದ್ದು, ಆತ ಕಾಶ್ಮೀರವನ್ನು ಪಾಕಿಸ್ತಾನದ “ಧ್ವನಿ” ಎಂದು ಕರೆದು, ಎರಡು-ರಾಷ್ಟ್ರ ಸಿದ್ಧಾಂತವನ್ನು ಬೆಂಬಲಿಸುತ್ತಾನೆ. ಆತನ ಚಾಣಕ್ಷತನದಿಂದ ಸೇನೆಯು ಚುನಾವಣೆ ಮತ್ತು ವಿದೇಶಾಂಗ ನೀತಿಯಲ್ಲಿ ಪ್ರಾಬಲ್ಯ ಮೆರೆಯುವ ಸಾಧ್ಯತೆಯಿದೆ ಎಂದಿದ್ದಾರೆ.
