ನವದೆಹಲಿ:
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿರುವುದು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳ ವೈಫಲ್ಯ ಎಂದು ನೇರವಾಗಿ ಒಪ್ಪಿಕೊಂಡಂತಾಗಿದೆ ಎಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ ಮತ್ತು ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.
ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಣಿಪುರದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಇದು ರಾಷ್ಟ್ರಪತಿ ಆಳ್ವಿಕೆ ಹೇರಲು ಕಾರಣವಾಯಿತು ಎಂದು ಹೇಳಿದ್ದಾರೆ.
“ನರೇಂದ್ರ ಮೋದಿ ಜೀ, ಕೇಂದ್ರದಲ್ಲಿ 11 ವರ್ಷಗಳಿಂದ ಆಡಳಿತ ನಡೆಸುತ್ತಿರುವುದು ನಿಮ್ಮ ಪಕ್ಷ. ಎಂಟು ವರ್ಷಗಳಿಂದ ಮಣಿಪುರವನ್ನು ಆಳುತ್ತಿರುವುದು ನಿಮ್ಮ ಪಕ್ಷ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಬಿಜೆಪಿಯದ್ದು. ರಾಷ್ಟ್ರೀಯ ಭದ್ರತೆ ಮತ್ತು ಗಡಿ ಗಸ್ತು ಜವಾಬ್ದಾರಿ ನಿಮ್ಮ ಸರ್ಕಾರದ್ದು. ನಿಮ್ಮ ಸ್ವಂತ ಪಕ್ಷದ ಸರ್ಕಾರವನ್ನು ಅಮಾನತುಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿರುವುದು ನಿಮ್ಮ ಸರ್ಕಾರದ ವೈಫಲ್ಯವನ್ನು ನೇರ ಒಪ್ಪಿಕೊಂಡಂತಾಗಿದೆ” ಎಂದು ಖರ್ಗೆ ಹೇಳಿದರು. ಕೇಂದ್ರ ಸರ್ಕಾರ ತಾನು ಬಯಸಿ ರಾಷ್ಟ್ರಪತಿ ಆಳ್ವಿಕೆ ಹೇರಿಲ್ಲ, ಬದಲಾಗಿ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಇರುವುದರಿಂದ, ಯಾವುದೇ ಎನ್‌ಡಿಎ ಶಾಸಕರು “ನಿಮ್ಮ ಅಸಮರ್ಥತೆಯ ಹೊರೆಯನ್ನು”ಒಪ್ಪಿಕೊಳ್ಳಲು ಸಿದ್ಧರಿಲ್ಲದ ಕಾರಣ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿದ್ದೀರಿ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
“ನಿಮ್ಮ ‘ಡಬಲ್ ಎಂಜಿನ್’ ಸರ್ಕಾರ ಮಣಿಪುರದ ಮುಗ್ಧ ಜನರ ಜೀವನದ ಮೇಲೆ ದಾಳಿ ನಡೆಸಿದೆ! ನೀವು ಈಗ ಮಣಿಪುರಕ್ಕೆ ಹೋಗಿ ಬಳಲುತ್ತಿರುವ ಜನರ ನೋವು ಮತ್ತು ಆಘಾತವನ್ನು ಆಲಿಸಿ ಅವರಲ್ಲಿ ಕ್ಷಮೆಯಾಚಿಸುವ ಸಮಯ ಬಂದಿದೆ. ನಿಮಗೆ ಈ ತಪ್ಪನ್ನು ಒಪ್ಪಿಕೊಳ್ಳುವ ಧೈರ್ಯವಿದೆಯೇ?” ಎಂದು ಖರ್ಗೆ ಪ್ರಶ್ನಿಸಿದ್ದಾರೆ.ಮಣಿಪುರದ ಜನ, ಪ್ರಧಾನಿ ಮೋದಿ ಮತ್ತು ಅವರ ಪಕ್ಷವನ್ನು ಕ್ಷಮಿಸುವುದಿಲ್ಲ ಎಂದು ಕಾಂಗ್ರೆಸ್ ಮುಖ್ಯಸ್ಥರು ಹೇಳಿದ್ದಾರೆ.
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯು, ಬಿಜೆಪಿಯು ಮಣಿಪುರದಲ್ಲಿ ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿದೆ ಎಂಬುದನ್ನು ತಡವಾಗಿ ಒಪ್ಪಿಕೊಂಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದ್ದರು.
