ಅಮೇರಿಕ :
ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಅಮೆರಿಕದಲ್ಲಿ ರಾಷ್ಟ್ರೀಯ ಚುನಾವಣೆಗೆ ಸಿದ್ಧವಾಗಿದೆ. ಅಮೆರಿಕದ ಮತದಾರರು ತಮ್ಮ ನಾಲ್ಕು ವರ್ಷಗಳ ಭವಿಷ್ಯವನ್ನು ನವೆಂಬರ್ 5 ರಂದು ಆಯ್ಕೆ ಮಾಡುತ್ತಾರೆ. ಈ ಚುನಾವಣೆಯಲ್ಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಪ್ರಮುಖ ಸ್ಪರ್ಧೆ ಏರ್ಪಟ್ಟಿದೆ. ಚುನಾವಣಾ ದಿನಕ್ಕೂ ಮುನ್ನವೇ ಕೋಟ್ಯಂತರ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಆರಂಭಿಕ ಮತದಾನದ ಅಂಕಿಅಂಶಗಳು ಬರಲಾರಂಭಿಸಿವೆ. ಅಧ್ಯಕ್ಷರ ಅಧಿಕಾರಾವಧಿಯು ಜನವರಿ 2025 ರಿಂದ ನಾಲ್ಕು ವರ್ಷಗಳವರೆಗೆ ಇರುತ್ತದೆ.
ಮಂಗಳವಾರ ಮಾತ್ರ ಮತದಾನ ಅಮೆರಿಕದಲ್ಲಿ ಪ್ರತಿ 4 ವರ್ಷಗಳಿಗೊಮ್ಮೆ ಎಲ್ಲಾ ರಾಜ್ಯಗಳಲ್ಲಿ ಒಂದೇ ದಿನದಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆ ನವೆಂಬರ್ನ ಮೊದಲ ಮಂಗಳವಾರದ ದಿನದಂದೇ ನಡೆಯಲಿದೆ. ಈ ಕಾನೂನನ್ನು 1845ರಲ್ಲಿ ಜಾರಿಗೊಳಿಸಲಾಯಿತು. 180 ವರ್ಷಗಳ ಹಿಂದೆ ಅಮೆರಿಕ ಬಹುತೇಕ ಕೃಷಿ ಪ್ರಧಾನ ರಾಷ್ಟ್ರವಾಗಿತ್ತು. ನವೆಂಬರ್ ಆರಂಭದ ದಿನಗಳಲ್ಲಿ ರೈತರಿಗೆ ಕೃಷಿ ಕೆಲಸಗಳೇ ಹೆಚ್ಚಿರುತ್ತಿದ್ದವು. ಬಹುತೇಕ ಕ್ರಿಶ್ಚಿಯನ್ನರು ಭಾನುವಾರದಂದು ಚರ್ಚ್ಗೆ ಹೋಗುತ್ತಿದ್ದರು. ಉಳಿದ ದಿನ ಮಾರಾಟ, ಖರೀದಿ ಸೇರಿದಂತೆ ಹಲವು ಕೆಲಸಗಳಿರುತ್ತಿದ್ದವು. ಆ ಕಾರಣದಿಂದ ಮಂಗಳವಾರವನ್ನು ನಿಗದಿಪಡಿಸಲಾಯಿತು.
ಜನವರಿಯಲ್ಲಿ ನಡೆಯಲಿದೆ ಮತ ಎಣಿಕೆ ಜನವರಿ 6 ರಂದು ಮತ ಎಣಿಕೆ ನಡೆಯಲಿದೆ, ಅಧ್ಯಕ್ಷರಾಗಿ ಆಯ್ಕೆಯಾದವರು ಜನವರಿ 20ರಂದು ಅಧಿಕಾರ ಗದ್ದುಗೆ ಏರುತ್ತಾರೆ. ನವೆಂಬರ್ನಲ್ಲಿ ಆಯ್ಕೆಯಾದ ಎಲೆಕ್ಟ್ರರ್ಸ್ ಡಿಸೆಂಬರ್ನ ಮೊದಲ ಬುಧವಾರದ ನಂತರದ ಮಂಗಳವಾರದಂದು ತಮ್ಮ ರಾಜ್ಯಗಳಲ್ಲಿ ಭೇಟಿಯಾಗುತ್ತಾರೆ. ಆಗ ಇಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆರಿಸಲಾಗುತ್ತದೆ. ಮತ್ತು ಸಹಿ ಮಾಡಿದ ಪ್ರಮಾಣಪತ್ರಗಳನ್ನು ವಾಷಿಂಗ್ಟನ್ ಡಿಸಿಗೆ ಕಳುಹಿಸಲಾಗುತ್ತದೆ.