ರಾಜಧಾನಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಸಂಚು ಮಾಡಲಾಗತ್ತಿದೆ : ಅತಿಶಿ

ನವದೆಹಲಿ:

   ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೊಡ್ಡ ರಾಜಕೀಯ ಸಂಚು ರೂಪಿಸುತ್ತಿದೆ ಎಂದು ದೆಹಲಿ ಸಚಿವ ಅತಿಶಿ ಶುಕ್ರವಾರ ಆರೋಪಿಸಿದ್ದಾರೆ.

   ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವುದು ಎಎಪಿ ಸರ್ಕಾರವನ್ನು ಉರುಳಿಸುವ ರಾಜಕೀಯ ಪಿತೂರಿಯಾಗಿದೆ. ಮುಂಬರುವ ದಿನಗಳಲ್ಲಿ ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗುವುದು ಎಂದು ನಮಗೆ ವಿಶ್ವಾಸಾರ್ಹ ಮೂಲಗಳಿಂದ ತಿಳಿದು ಬಂದಿದೆ. ಆದರೆ, ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದು ಕಾನೂನುಬಾಹಿರ ಮತ್ತು ಜನರ ಆದೇಶಕ್ಕೆ ವಿರುದ್ಧವಾಗಿದೆ’ ಎಂದರು.

   ಇತ್ತೀಚಿನ ದಿನಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆಯನ್ನು ಸೂಚಿಸುವ ಅನೇಕ ಘಟನೆಗಳು ಸಂಭವಿಸಿವೆ. ಕಳೆದ ಕೆಲವು ತಿಂಗಳುಗಳಿಂದ ದೆಹಲಿಯಲ್ಲಿ ಯಾವುದೇ ಹಿರಿಯ ಐಎಎಸ್ ಅಧಿಕಾರಿಯನ್ನು ನಿಯೋಜಿಸಿಲ್ಲ ಎಂದು ಹೇಳಿದರು.

   ‘ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇವೆ ಆದರೆ ಯಾವುದೇ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಮಾದರಿ ನೀತಿ ಸಂಹಿತೆಯನ್ನು ಉಲ್ಲೇಖಿಸಿ ಅಧಿಕಾರಿಗಳು ಸಚಿವರು ಕರೆದ ಸಭೆಗಳಿಗೆ ಹಾಜರಾಗುವುದನ್ನು ನಿಲ್ಲಿಸಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಅವರು ದೆಹಲಿ ಸರ್ಕಾರದ ಕಾರ್ಯನಿರ್ವಹಣೆ ಬಗ್ಗೆ ಎಂಎಚ್‌ಎಗೆ ಪತ್ರಗಳನ್ನು ಬರೆಯುತ್ತಿದ್ದಾರೆ’ ಎಂದು ಅವರು ಹೇಳಿದರು.

ಎಎಪಿ ನಾಯಕಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ, ವಿಧಾನಸಭೆಯಲ್ಲಿ 62 ಶಾಸಕರನ್ನು ಹೊಂದಿರುವ ಆಮ್ ಆದ್ಮಿ ಪಕ್ಷವನ್ನು ‘ರಾಷ್ಟ್ರಪತಿ ಆಳ್ವಿಕೆಯ ಭಯ’ ಕಾಡುತ್ತಿರುವುದು ಆಶ್ಚರ್ಯಕರವಾಗಿದೆ. ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

   ಕೇಜ್ರಿವಾಲ್ ದೆಹಲಿ ಹೈಕೋರ್ಟ್‌ನ ಛೀಮಾರಿಯ ಬಿಸಿಯನ್ನು ಅನುಭವಿಸುತ್ತಿದ್ದಾರೆ. ಅತಿಶಿ ಯಾವಾಗಲೂ ಆಪರೇಷನ್ ಕಮಲದ ಕಥೆಯನ್ನು ಹೇಳುತ್ತಿದ್ದರು. ಇಂದು ಮುಂಜಾನೆ ಹೊಸ ಕಥೆಯನ್ನು ಹೇಳುತ್ತಿದ್ದಾರೆ. ಇಂದು ಅವರು ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಅರವಿಂದ ಕೇಜ್ರಿವಾಲ್ ಅವರು ರಾಜೀನಾಮೆ ನೀಡಿ ಹೊಸ ಮುಖ್ಯಮಂತ್ರಿಗೆ ಸರ್ಕಾರವನ್ನು ಹಸ್ತಾಂತರಿಸಿದರೆ ಉತ್ತಮವಾಗಿರುತ್ತದೆ. ಈ ಮೂಲಕ ದೆಹಲಿಯ ಆಡಳಿತವು ಸರಿಯಾಗಿ ನಡೆಯಲು ಅವಕಾಶ ನೀಡಿದಂತಾಗುತ್ತದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap