ಬೆಂಗಳೂರು
ದರ ಏರಿಕೆಗಳಿಂದ ಈಗಾಗಲೆ ಕರ್ನಾಟಕದ ಜನರು ಕಂಗೆಟ್ಟಿದ್ದಾರೆ. ಇದೀಗ, ಬಜೆಟ್ ಬಳಿಕ ರಾಜ್ಯ ಸರ್ಕಾರ ಹಾಲಿನ ದರವನ್ನೂ ಕೂಡ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬೆಲೆ ಏರಿಕೆಗಾಗಿ ರಾಜ್ಯ ಸರ್ಕಾರದ ಮೇಲೆ ಹಾಲು ಒಕ್ಕೂಟಗಳು ಒತ್ತಡ ಹೇರುತ್ತಿದ್ದು, ಲೀಟರ್ಗೆ 5 ರೂಪಾಯಿ ಹೆಚ್ಚಳ ಮಾಡುವಂತೆ ಬೇಡಿಕೆ ಇಟ್ಟಿವೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಕಳೆದ ತಿಂಗಳು ಪಶು ಸಂಗೋಪನಾ ಸಚಿವರು ಕೆಎಂಎಫ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಸಭೆಯಲ್ಲಿ ಹಾಲಿನ ದರ ಏರಿಕೆ ಮಾಡಬೇಕಾದ ಅನಿವಾರ್ಯತೆ ಕುರಿತು ಚರ್ಚೆಯಾಗಿತ್ತು. ಈ ವೇಳೆ ಹಾಲಿನ ದರ ಲೀಟರಿಗೆ 5 ರೂಪಾಯಿ ಏರಿಸಬೇಕು ಎಂದು ಒಕ್ಕೂಟಗಳು ಪ್ರಸ್ತಾವನೆ ಸಲ್ಲಿಸಿದ್ದವು. ಸಂಗೋಪನೆಯ ಖರ್ಚು ವೆಚ್ಚಗಳ ಹೆಚ್ಚಳದಿಂದ ಬೆಲೆ ಏರಿಸಲೇ ಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಹೇಳಿದ್ದವು.
ಕಳೆದ ವರ್ಷ ಡಿಸೆಂಬರ್ನಲ್ಲಿ ರೈತರು ಹಾಗೂ ಹಾಲು ಒಕ್ಕೂಟಗಳು ಪ್ರತಿ ಲೀಟರ್ ನಂದಿನಿ ಹಾಲಿನ ದರ 5 ರೂಪಾಯಿ ಏರಿಕೆ ಮಾಡುವಂತೆ ಕೆಎಂಎಫ್ಗೆ ಮನವಿ ಮಾಡಿದ್ದವು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ತಿಳಿಸಿದ್ದರು.
ಇತ್ತೀಚಿಗೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ರೈತರಿಗೆ ನೀಡುವ ಹಾಲಿನ ಪ್ರೋತ್ಸಾಹ ಧನವನ್ನು ಪರಿಷ್ಕೃತ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಎಮ್ಮೆ ಹಾಲಿಗೆ 3.40 ರೂ., ಆಕಳ ಹಾಲಿಗೆ 1 ರೂ. ಅಂತೆ ಪ್ರೋತ್ಸಾಹ ಧನ ಹೆಚ್ಚಳ ಮಾಡುವುದಾಗಿ ತಿಳಿಸಿದ್ದರು.
ದರ ಪರಿಷ್ಕರಣೆಯಿಂದ ಪ್ರಸಕ್ತ ಎಮ್ಮೆ ಹಾಲಿನ ದರ ಪ್ರತಿ ಲೀ 41.60 ರೂ. ದರವಿದ್ದು, ಈಗ 3.40 ರೂ. ಹೆಚ್ಚಳ ಮತ್ತು 5 ರೂ. ಪ್ರೋತ್ಸಾಹ ಧನ ಸೇರಿ ಒಟ್ಟು 50 ರೂ. ಸಿಗಲಿದೆ. ಅದರಂತೆ ಆಕಳ ಹಾಲಿಗೆ ಪ್ರತಿ ಲೀ 29.10 ರೂ. ದರವಿದ್ದು, ಈಗ 1 ರೂ. ಹೆಚ್ಚಳ ಮತ್ತು 5 ರೂ. ಪ್ರೋತ್ಸಾಹ ಧನ ಸೇರಿ ಒಟ್ಟು 35 ರೂ. ರೈತರಿಗೆ ಸಿಗಲಿದೆ. ಬೆಳಗಾವಿ ಜಿಲ್ಲೆ ರೈತರಿಗೆ ಅನುಕೂಲ ಆಗಲಿದೆ ಎಂದು ಹೇಳಿದ್ದರು.
ರೈತರಿಗೆ 10 ದಿನದಲ್ಲೇ ಬಿಲ್ ಪಾವತಿ ಮಾಡಲಾಗುತ್ತಿದೆ. ಇದರಿಂದ ರೈತರಿಗೂ ಮತ್ತು ಗ್ರಾಹಕರಿಗೂ ಅನುಕೂಲವಾಗಲಿದೆ. ಕಳೆದ ವರ್ಷ 68 ಲಕ್ಷ ನಿವ್ವಳ ಲಾಭ ಜಿಲ್ಲಾ ಹಾಲು ಒಕ್ಕೂಟಕ್ಕೆ ಆಗಿತ್ತು. ಪ್ರಸಕ್ತ ಸಾಲಿನ ಮಾರ್ಚ್ ಅಂತ್ಯದವರೆಗೂ 5ಕೋಟಿ ಲಾಭ ತರಲು ಕೆಲಸ ಮಾಡಲಾಗುತ್ತಿದೆ ಎಂದರು.
