ಹೊಸ ವರ್ಷ ಬಂದರೂ ಇಳಿಯದ ಬೆಲೆಗಳು…!

ತುಮಕೂರು:

ತರಕಾರಿ, ಹಣ್ಣು, ಸೊಪ್ಪು, ಚಿಕನ್ ಎಲ್ಲವೂ ದುಬಾರಿ : ಮಂಕಾದ ಗ್ರಾಹಕ

          ಕೊವೀಡ್ ಸಂಕಷ್ಟದ ನಡುವೆ ಕಳೆದ ವರ್ಷ ಬೆಲೆ ಏರಿಕೆಯಲ್ಲಿ ದಾಖಲೆ ನಿರ್ಮಿಸಿದ್ದ ತರಕಾರಿ, ಹಣ್ಣು, ಸೊಪ್ಪು ಹಾಗೂ ಕೋಳಿ ಮಾಂಸದ ದರಗಳ ನಾಗಲೋಟ ಹೊಸ ವರ್ಷದ ಆರಂಭದ ದಿನಗಳಲ್ಲೂ ಮುಂದುವರಿದಿದೆ. 2022 ರಲ್ಲಾದರೂ ಬೆಲೆಗಳು ಇಳಿಯಲಿ ಎಂಬ ಗ್ರಾಹಕನ ಸಹಜ ಆಸೆ ಸದ್ಯಕ್ಕಂತೂ ಈಡೇರುವ ಲಕ್ಷಣಗಳು ಕಾಣುತ್ತಿಲ್ಲ.

ದುಬಾರಿ ಬೆಲೆಗಳಿಂದಾಗಿ ಕೊಳ್ಳುವ ಶಕ್ತಿ ಗಣನೀಯವಾಗಿ ಕುಸಿದು ಗ್ರಾಹಕ ಮಂಕಾಗಿದ್ದಾನೆ. ಇದರಿಂದ ಹೊಸ ವರ್ಷದ ಸಂಭ್ರಮಾಚರಣೆ ಈ ಬಾರಿ ಎಲ್ಲಡೆ ಮಬ್ಬಾಗಿದೆ.

ಇಳಿಯದ ಸೊಪ್ಪು-ತರಕಾರಿ ಬೆಲೆ :

ಸೊಪ್ಪು-ತರಕಾರಿ ಬೆಲೆಗಳು ಈ ವಾರ ಮತ್ತಷ್ಟೂ ಏರಿಕೆಯಾಗಿವೆ. ಕಳೆದ ವಾರ 30-40 ರೂ. ಗೆ ಸಿಗುತ್ತಿದ್ದ ಈರುಳ್ಳಿ ಬೆಲೆ ಕೆ.ಜಿ.ಗೆ ಈ ವಾರ 35-45 ರೂ. ಗೆ ಏರಿಕೆಯಾಗಿದೆ. ಟೊಮ್ಯಾಟೊ ಕಳೆದ ವಾರದ ದರ ಸಾಧಾರಣ ಕೆ.ಜಿ.ಗೆ 40 ರೂ. ಉತ್ತಮ 50 ರೂ. ನಂತೆ ಮಾರಾಟವಾಗುತ್ತಿದ್ದು, ಆಲೂಗಡ್ಡೆ 25-30 ರೂ. ಗೆ ಸಿಗುತ್ತಿದೆ.

ಮೂಲಂಗಿ-40 ರೂ. ನಿಂದ 30 ರೂ.ಗೆ ಇಳಿದಿದೆ. ಬೀನ್ಸ್, ಕ್ಯಾರೇಟ್, ಬೀಟ್ರೂಟ್ ಬೆಲೆಗಳು ದುಬಾರಿಯಾಗಿದ್ದು, ಕೆ.ಜಿ.ಗೆ 80 ರೂ. ನಂತೆ ಮಾರಾಟವಾಗುತ್ತಿವೆ. ಮಿಕ್ಕಂತೆ ಪಟ್ಲಿಕಾಯಿ-60 ರೂ., ಹೀರೆಕಾಯಿ-40 ರೂ., ಗೋರಿಕಾಯಿ-60 ರೂ., ಅವರೆಕಾಯಿ-60-80 ರೂ., ತೊಗರಿಕಾಯಿ-80, ಹಸಿ ಬಟಾಣಿ-50 ರೂ. ನಂತೆ ಮಾರಾಟವಾಗುತ್ತಿವೆ.

ಸೊಪ್ಪುಗಳ ಬೆಲೆಗಳೂ ಇಳಿಯದೆ ನಾಟಿ ಕೊತ್ತಂಬರಿ-70 ರೂ., ಹೈಬ್ರಿಡ್ ಕೊತ್ತಂಬರಿ-60 ರೂ., ಸಬ್ಸಿಗೆ-120 ರೂ., ದಂಟು 80-100 ರೂ., ಪಾಲಕ್-60 ರೂ., ಚಕ್ಕೊತ್ತಾ-60 ರೂ., ಮೆಂತ್ಯೆ ಸೊಪ್ಪು-100 ರೂ. ನಂತೆ ನಂತೆ ಮಾರಾಟವಾಗುತ್ತಿವೆ.

ಹಣ್ಣುಗಳು ದುಬಾರಿ :

ಬಾಳೆಹಣ್ಣು ಹೊರತು ಪಡಿಸಿ ಮಿಕ್ಕೆಲ್ಲಾ ಹಣ್ಣುಗಳು ದುಬಾರಿ ಬೆಲೆಗೆ ಮಾರಾಟವಾಗುತ್ತಿವೆ. ಕಿತ್ತಳೆ ಸೀಸನ್ ಮುಗಿಯುತ್ತಿದ್ದು ಬೆಲೆ ಏರಿ ಕೆ.ಜಿ.ಗೆ 60-70 ರೂ. ನಂತೆ ಮಾರಾಟವಾಗುತ್ತಿದೆ. ಸೇಬು ಮತ್ತಷ್ಟು ದುಬಾರಿಯಾಗಿದ್ದು ಕೆ.ಜಿ. 140-160 ಗೆ ಏರಿದೆ. ದಾಳಿಂಬೆ-160 ರೂ.ನಿಂದ 120 ರೂ.ಗೆ ಇಳಿದಿದೆ.

ದ್ರಾಕ್ಷಿ ಸೀಸನ್ ಶುರುವಾಗಿದ್ದು ವಾರದಿಂದ ವಾರಕ್ಕೆ ಬೆಲೆ ಇಳಿಯುತ್ತಿದ್ದಿ ಈ ವಾರ ಕೆ.ಜಿ. 100 ರೂ. ನಂತೆ ಮಾರಾಟವಾಗುತ್ತಿದೆ. ಮಾಲು ಇಲ್ಲದ್ದರಿಂದ ಕಲ್ಲಂಗಡಿ, ಕರಬೂಜ ಬೆಲೆಗಳು ಏರಿಕೆಯಾಗಿವೆ.

ಸಂಕ್ರಾಂತಿ ಕಳೆದ ಬಳಿಕ ಬೇಸಿಗೆ ಆರಂಭವಾಗುವುದರಿಂದ ಹಣ್ಣುಗಳಿಗೆ ಬೇಡಿಕೆ ಹೆಚ್ಚಿ ಬೆಲೆಗಳು ಮತ್ತಷ್ಟೂ ಏರಿಕೆ ಆಗುತ್ತವೆ ಎನ್ನುತ್ತಾರೆ ಅಂತರಸನಹಳ್ಳಿ ಮಾರುಕಟ್ಟೆಯ ಟಿಕೆಪಿ ಫ್ರೂಟ್ಸ್ ಸ್ಟಾಲ್‍ನ ಮಾಲೀಕ ವೆಂಕಟೇಶ್.

ಮತ್ತೆ 5 ರೂ. ಇಳಿದ ಅಡುಗೆ ಎಣ್ಣೆ :

ಕೇಂದ್ರ ಸಕಾರವು ಅಡುಗೆ ಎಣ್ಣೆ ಮೇಲಿನ ಕಸ್ಟಮ್ ಸುಂಕವನ್ನು ಇಳಿಸಿದ್ದರಿಂದ ಖಾದ್ಯ ತೈಲದ ದರ ಇಳಿಕೆಯತ್ತ ಸಾಗಿದ್ದು, ಈ ವಾರ 5 ರೂ. ನಷ್ಟು ಇಳಿಕೆಯಾಗಿದೆ. ಫಾಮಾಯಿಲ್-130 ರೂ. ನಿಂದ 115 ರೂ.ಗೆ, ಕಡ್ಲೆಕಾಯಿ ಎಣ್ಣೆ-150 ರೂ.ನಿಂದ 135 ರೂ. ಗೆ ಹಾಗೂ ಸೂರ್ಯಕಾಂತಿ ಎಣ್ಣೆ-145 ರೂ.ನಿಂದ 135 ರೂ.ಗೆ ಬೆಲೆ ಇಳಿದಿದೆ.

ಕೋಳಿ ಮಾಂಸ ಏರಿಕೆ :

ಹೊಸ ವರ್ಷಾಚರಣೆ ನಡುವೆ ಕೋಳಿ ಮಾಂಸದ ಬೆಲೆ ಕೊಂಚ ಏರಿಕೆಯಾಗಿದ್ದು, ಹೊಸ ವರ್ಷದ ಸಂಭ್ರಮಾಚರಣೆಯ ಪಾರ್ಟಿಗಳು ದುಬಾರಿಯಾಗಿವೆ. ಬ್ರಾಯ್ಲರ್ ಕೆ.ಜಿ.ಗೆ 110 ರೂ. ನಿಂದ 130 ರೂ. ಏರಿ ಕೆ.ಜಿ.ಗೆ 20 ರೂ. ದುಬಾರಿಯಾಗಿದೆ.

ಫಾರಂ ಕೋಳಿ ಮಾಂಸದ ಬೆಲೆ ಕೆ.ಜಿ.ಗೆ 120 ರೂ. ಮೊಟ್ಟೆ 1 ಡಜನ್ ಗೆ 66 ರೂ. ನಂತೆ ಮಾರಾಟವಾಗುತ್ತಿದೆ.  ಭರ್ಜರಿ ವ್ಯಾಪಾರ ನಿರೀಕ್ಷೆಯಲ್ಲಿದ್ದ ಕೋಳಿ ಅಂಗಡಿಗಳ ವರ್ತಕರಿಗೆ ಸರ್ಕಾರದ ಹೊಸ ವರ್ಷಾಚರಣೆ ನೀತಿಯಿಂದ ಸಾಕಷ್ಟು ನಷ್ಟವಾಗಿದೆ, ಪ್ರತಿ ವರ್ಷ ಡಿ.31 ರಂದು 10 ಜಾಲರಿ ಕೋಳಿ ಮಾರಾಟವಾಗುತ್ತಿತ್ತು ಆದರೇ ಈ ವರ್ಷ 2 ಜಾಲರಿಯಷ್ಟು ಕೋಳಿ ಮಾರಲು ಆಗುತ್ತಿಲ್ಲ ಎನ್ನುತ್ತಾರೆ ಹುಳಿಯಾರಿನ ಕೋಳಿ ವರ್ತಕ ಕರವೇ ಶ್ರೀನಿವಾಸ್.

ಜನವರಿ ಬಳಿಕ ಬೆಲೆ ಇಳಿಕೆ ನಿರೀಕ್ಷೆ :

ಕೋವಿಡ್ ಎರಡನೆಯ ಅಲೆ ತಣ್ಣಗಾದ ಬೆನ್ನಲ್ಲೇ ಹಣ ದುಬ್ಬರ ತೀವ್ರವಾಗಿ ಕಾಡಿದೆ. ಒಂದು ಕಡೆ ಆದಾಯ ಕುಸಿತ, ಮತ್ತೊಂದು ಕಡೆ ಬೆಲೆ ಏರಿಕೆಗೆ ಜನ ತತ್ತರಿಸಿ ಹೋಗಿದ್ದಾರೆ. ಬೇಡಿಕೆಗೆ ತಕ್ಕಷ್ಟು ಪೂರೈಕೆ ಆಗದೆ ಅಡುಗೆ ಎಣ್ಣೆ, ಸೊಪ್ಪು-ತರಕಾರಿ, ಹಣ್ಣು, ಆಹಾರ ಧಾನ್ಯಗಳ ಬೆಲೆಗಳು ಏರಿಕೆಯಾಗಿವೆ.

ಹೀಗಿದ್ದರೂ 2022 ನೇ ವರ್ಷದಲ್ಲಿ ಆರ್ಥಿಕತೆಯ ಚೇತರಿಕೆ ಆಶಾದಾಯಕವಾಗಿರಲಿದೆ ಎಂದು ಆರ್‍ಬಿಐ ತನ್ನ ಹಣಕಾಸು ಪರಾಮರ್ಶೆಯಲ್ಲಿ ವಿಶ್ವಾಸ ವ್ಯಕ್ತ ಪಡಿಸಿದೆ.

ಚಳಿಗಾಲದಲ್ಲಿ ಬೆಳೆಯುವ ತರಕಾರಿಗಳು ಹೊಸ ವರ್ಷದಲ್ಲಿ ಯಥೇಚ್ಛವಾಗಿ ಮಾರುಕಟ್ಟೆಗೆ ಬರಲಿದ್ದು, ಇನ್ನು 1 ತಿಂಗಳ ಬಳಿಕ ಸೊಪ್ಪು-ತರಕಾರಿಗಳ ಬೆಲೆಗಳು ಕೈಗೆಟುಕುತ್ತವೆ ಎನ್ನುತ್ತಾರೆ ಅಂತರಸನ ಹಳ್ಳಿ ಮಾರುಕಟ್ಟೆಯ ತರಕಾರಿ ವರ್ತಕ ವಾಸು.

ಹಣ್ಣುಗಳ ಧಾರಣೆ  –(ಬೆಲೆ ಕೆ.ಜಿ ರೂ.)

ಸೇಬು             130-110
ದಾಳಿಂಬೆ          100-120
ಮೊಸಂಬಿ           60-80
ನಾಟಿ ಕಿತ್ತಳೆ         60-70
ಸಪೋಟ            40-50
ಏಲಕ್ಕಿ ಬಾಳೆ        35-40
ಪಚ್ಚ ಬಾಳೆ          20
ಪಪ್ಪಾಯ            25
ಕಲ್ಲಂಗಡಿ           20-40
ಕರಬೂಜ           40-50
ಸೀಬೆ               60-80
ಪೈನಾಪಲ್         40-60
ದ್ರಾಕ್ಷಿ             100-120

ತರಕಾರಿ -(ಬೆಲೆ ಕೆ.ಜಿ ರೂ.)

ಟೊಮೆಟೊ         50-60
ಈರುಳ್ಳಿ             30-40
ಆಲೂಗಡ್ಡೆ            25-30
ಬೀನ್ಸ್                 80
ಕ್ಯಾರೆಟ್               80
ಬೀಟ್ರೂಟ್             80
ಮೂಲಂಗಿ             30
ಗೆಡ್ಡೆಕೋಸು            50
ನುಗ್ಗೆಕಾಯಿ           300
ಬದನೆಕಾಯಿ          50
ಎಲೆಕೋಸು           60
ಹೂಕೋಸು          40
ಹಸಿ ಮೆಣಸಿನಕಾಯಿ  80
ಕ್ಯಾಪ್ಸಿಕಂ            70

ಮೊಟ್ಟೆ/ಮಾಂಸ ಬೆಲೆ (ಕೆ.ಜಿಗೆ)
ಬ್ರಾಯ್ಲರ್                      130
ಫಾರಂ                         120
ನಾಟಿ ಕೋಳಿ ಮಾಂಸ         250-300
ಮಟನ್                         600-650
ಮೀನು (ಸಾಮಾನ್ಯ)            120-150
ಮೊಟ್ಟೆ (1 ಡಜನ್)             66

ಕೊಬ್ಬರಿ ಧಾರಣೆ(ತಿಪಟೂರು)
ಪ್ರತಿ ಕ್ವಿಂಟಾಲ್

ಕನಿಷ್ಠ     15,000
ಗರಿಷ್ಠ     18,300
ಮಾದರಿ    18,200

ಒಟ್ಟು ಆವಕ–1712.68 ಕ್ವಿಂಟಾಲ್
(3983 ಚೀಲ)

  -ಚಿದಾನಂದ್ ಹುಳಿಯಾರು

Recent Articles

spot_img

Related Stories

Share via
Copy link
Powered by Social Snap