ತಿರುವನಂತಪುರ:
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಈಗ ಚುನಾವಣಾ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಈ ಕ್ಷೇತ್ರಕ್ಕೆ ಚುನಾವಣಾ ಆಯೋಗ ಉಪಚುನಾವಣೆ ಘೋಷಿಸಿದ್ದು ಇದರ ಬೆನ್ನಲ್ಲೇ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಹೆಸರು ಘೋಷಿಸಿದೆ.
ಇನ್ನು ಪ್ರಿಯಾಂಕಾ ಗಾಂಧಿ ಈ ಚುನಾವಣೆಯಲ್ಲಿ ಗೆದ್ದರೆ ಸಂಸತ್ತಿನಲ್ಲಿ ಅವರ ಮೊದಲ ಹೆಜ್ಜೆ. ಅಲ್ಲದೆ, ಗಾಂಧಿ ಕುಟುಂಬದ ಮೂವರೂ – ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ-ಸಂಸತ್ತಿನಲ್ಲಿ ಒಟ್ಟಿಗೆ ಇರುವುದು ಇದೇ ಮೊದಲು. ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ನವೆಂಬರ್ 13ರಂದು ಇಲ್ಲಿ ಮತದಾನ ನಡೆಯಲಿದೆ. ನವೆಂಬರ್ 13ರಂದು ಕೇರಳದ ಎರಡು ವಿಧಾನಸಭಾ ಸ್ಥಾನಗಳಾದ ಪಾಲಕ್ಕಾಡ್ ಮತ್ತು ಚೆಲಕ್ಕರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.
ಚುನಾವಣಾ ಆಯೋಗದ ಘೋಷಣೆಯ ನಂತರ, ಮಂಗಳವಾರ ತಡರಾತ್ರಿ ಕಾಂಗ್ರೆಸ್ ಈ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತು. ರಾಹುಲ್ ಗಾಂಧಿ ಅವರ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡ್ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ. ಪಾಲಕ್ಕಾಡ್‌ನಿಂದ ರಾಹುಲ್ ಮಂಕುತಿಲ್ ಮತ್ತು ಚೇಲಕ್ಕರ ವಿಧಾನಸಭಾ ಕ್ಷೇತ್ರದಿಂದ ರಮ್ಯಾ ಹರಿದಾಸ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ.
ಇದೇ ಕ್ಷೇತ್ರದಿಂದ ಸಹೋದರ ರಾಹುಲ್ ಗಾಂಧಿ ಸತತ ಎರಡು ಬಾರಿ ಗೆದ್ದಿದ್ದರು. ರಾಹುಲ್ ಗಾಂಧಿ ರಾಯ್ ಬರೇಲಿ ಮತ್ತು ವಾಯನಾಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡಲ್ಲೂ ಗೆದ್ದಿದ್ದು ರಾಯ್ ಬರೇಲಿಯನ್ನು ಉಳಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವಾಯನಾಡು ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.
