ಪ್ರಧಾನ ಮಂತ್ರಿ ಜನೌಷಧ ಕೇಂದ್ರಕ್ಕೆ ಬೇಕಿದೆ ಕಾಯಕಲ್ಪ

ತುರುವೇಕೆರೆ:


  ತೆರೆಯದ ಔಷಧ ಕೇಂದ್ರ : ಜನ ಸಾಮಾನ್ಯರಿಗೆ ಹೆಚ್ಚುವರಿ ಹೊರೆ

  ಹಲವು ತಿಂಗಳುಗಳಿಂದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ಜನೌಷಧಿ ಕೇಂದ್ರದ ಬಾಗಿಲು ಮುಚ್ಚಿದ್ದು ರೋಗಿಗಳು ಪರದಾಡುವಂತಾಗಿದೆ.

ಕಡುಬಡವರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧ ಹಾಗೂ ಸರ್ಜಿಕಲ್ ಉತ್ಪನ್ನಗಳನ್ನು ಒದಗಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಭಾರತೀಯ ಜನೌಷಧಿ(ಎಂ.ಎಸ್.ಐ.ಎಲ್) ಕೇಂದ್ರಗಳಿಂದ ಕಡು ಬಡವರಿಗೆ ತುಂಬಾ ಅನುಕೂಲವಾಗಿತ್ತು. ಖಾಸಗಿ ಮೆಡಿಕಲ್ ಅಂಗಡಿಗಳಲ್ಲಿ ಔಷಧಿ ಮಾತ್ರೆಗಳಿಗೆ ನೀಡುವ ದರದ ಅರ್ಧದಷ್ಟು ಕಡಿಮೆ ಬೆಲೆಗೆ ಜನೌಷಧಿ ಕೇಂದ್ರದಲ್ಲಿ ಸಿಗುತ್ತಿದ್ದರಿಂದ ಇದು ಕಡುಬಡವರಿಗೆ ವರದಾನವಾಗಿತ್ತು.

ಖಾಸಗಿ ಮೆಡಿಕಲ್‍ಗೆ ಹೋಗಬೇಕಾದ ದುಸ್ಥಿತಿ : ಅಧಿಕ ರಕ್ತದೊತ್ತಡ, ಮಧುಮೇಹ ಕಾಯಿಲೆಗೆ ಒಳಗಾಗಿರುವವರು ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಕೈಗೆಟಕುವ ದರದಲ್ಲಿ ಮಾತ್ರೆಗಳು ಜನೌಷಧಿ ಕೇಂದ್ರಗಳಲ್ಲಿ ಸಿಗುವುದರಿಂದ ಬಿ.ಪಿ., ಶುಗರ್ ರೋಗಿಗಳು ಇಲ್ಲಿಗೆ ಮುಗಿ ಬೀಳುವುದುಂಟು.

ಅಲ್ಲದೆ ಇತರೆ ಕಾಯಿಲೆಗಳಿಗೆ ಔಷಧಿ ಮಾತ್ರೆಗಳು ಹಾಗೂ ಸರ್ಜಿಕಲ್ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುವ ಅವಕಾಶವಿದ್ದರೂ ಸಹ, ಜನೌಷಧಿ ಕೇಂದ್ರಗಳಲ್ಲಿ ರೋಗಿಗಳಿಗೆ ಅವಶ್ಯಕವಾಗಿರುವ ಔಷಧಗಳ ಕೊರತೆ ಎದ್ದು ಕಾಣುತ್ತಿದೆ. ಎಲ್ಲಾ ರೀತಿಯ ಔಷಧಿ ಮಾತ್ರೆಗಳ ಬೇಡಿಕೆಯಿದ್ದರೂ ಸಮರ್ಪಕವಾಗಿ ಸರಬರಾಜಾಗದೆ ದುಪ್ಪಟ್ಟು ಹಣ ನೀಡಿ ಖಾಸಗಿ ಮೆಡಿಕಲ್ ಅಂಗಡಿಗಳಲ್ಲಿ ಖರೀದಿಸಬೇಕಾದ ದುಸ್ಥಿತಿ ಉಂಟಾಗಿದೆ.

ಹಾಳಾಗುತ್ತಿವೆ ಔಷಧಗಳು :

ತುರುವೇಕೆರೆ ಜನೌಷಧಿ ಕೇಂದ್ರ ಮುಚ್ಚಿ ಹಲವಾರು ತಿಂಗಳುಗಳೇ ಕಳೆದರೂ ಇದುವರೆವಿಗೆ ತೆರೆದಿಲ್ಲ. ಈ ಮುಂಚೆ ಬಿ.ಫಾರ್ಮ್ ತಾಂತ್ರಿಕ ಶಿಕ್ಷಣ ಅರ್ಹತೆಯ ಮಹಿಳೆಯೊಬ್ಬರು ಇಲ್ಲಿ ಕೆಲಸ ಮಾಡುತ್ತಿದ್ದು ಅನಾರೋಗ್ಯ ನಿಮಿತ್ತ ಕೆಲಸ ಬಿಟ್ಟು ಹೋಗಿದ್ದರಿಂದ ಕೇಂದ್ರವನ್ನು ಮುಚ್ಚಲಾಗಿದೆ. ಮತ್ತೆ ಬಿ.ಫಾರ್ಮ್ ಮಾಡಿದವರು ಕಡಿಮೆ ಸಂಬಳವೆಂದು ಯಾರೊಬ್ಬರೂ ಇತ್ತ ಸುಳಿಯುತ್ತಿಲ್ಲ.

ಈಗಾಗಲೇ ಜನೌಷಧಿ ಕೇಂದ್ರದ ಬಾಗಿಲ ಮೇಲಿದ್ದ ಫಲಕ ಕಿತ್ತು ನೇತಾಡುತ್ತಿದೆ. ಬಾಗಿಲು ತೆರೆಯದೆ ಇರುವುದರಿಂದ ಜನೌಷಧಿ ಕೇಂದ್ರದೊಳಗಿರುವ ಔಷಧ-ಮಾತ್ರೆಗಳು ಹಾಗೂ ಸರ್ಜಿಕಲ್ ಉತ್ಪನ್ನಗಳು ಮಾರಾಟವಾಗದೆ ಹಾಗೆಯೇ ಉಳಿದು ಅವುಗಳ ಎಕ್ಸ್‍ಪೈರಿ (ವಾಯಿದೆ) ದಿನಾಂಕ ಮುಗಿದು ಕಂಪನಿಗೆ ಅಪಾರ ನಷ್ಟವಾಗಲಿದೆ. ಜನೌಷಧಿ ಕೇಂದ್ರ ಬಾಗಿಲು ಮುಚ್ಚಿರುವುದು ತಿಳಿಯದ ಅಪರೂಪಕ್ಕೊಮ್ಮೆ ಬಂದ ಅದೆಷ್ಟೋ ರೋಗಿಗಳು ಬಾಗಿಲ ಮುಂಭಾಗ ಕುಳಿತು ಸಂಜೆವರೆಗೆ ಕಾಯ್ದು ವಾಪಸ್ಸು ಹೋಗುವಂತಾಗಿದೆ.

ಜನೌಷಧಿ ಕೇಂದ್ರದ ಬಾಗಿಲು ಮುಚ್ಚಿರುವ ವಿಷಯ ತಿಳಿಯದ ಔಷಧಿ-ಮಾತ್ರೆಗೆ ಬಂದಂತ ರೋಗಿಯೊಬ್ಬರು ಬಾಗಿಲ ಬಳಿ ಕಾಯುತ್ತಿರುವುದು.

ಜನೌಷಧ ಕೇಂದ್ರವು ಎಂ.ಎಸ್.ಐ.ಎಲ್. ಕಂಪನಿಗೆ ಸಂಬಂಧಿಸಿದ್ದರಿಂದ ಆ ಕಂಪನಿಯೇ ಬಿ.ಫಾರ್ಮ್ ಮಾಡಿದಂತಹವರನ್ನು ಆಯ್ಕೆ ಮಾಡಬೇಕು. ಕೇವಲ 15,000 ರೂ. ಸಂಬಳ ನೀಡುವುದರಿಂದ ಯಾರೊಬ್ಬರು ಬರುತ್ತಿಲ್ಲ. ಬಿ.ಫಾರ್ಮ್ ಆಗಿರುವ ಯಾರೇ ಬಂದಲ್ಲಿ ಜನೌಷಧಿ ಕೇಂದ್ರ ತೆರೆದು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು.

-ಡಾ.ಶ್ರೀಧರ್, ತಾಲ್ಲೂಕು ಆರೋಗ್ಯಾಧಿಕಾರಿ

ಹೋಬಳಿಗೊಂದು ಜನೌಷಧ ಕೇಂದ್ರ ತೆರೆಯಲಿ :

ಒಟ್ಟಿನಲ್ಲಿ ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತು. ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ಹಾಕಿದರು ಎಂಬಂತೆ ಯಾರೋ ಮಾಡುವ ತಪ್ಪಿಗೆ ಮತ್ಯಾರೋ ಶಿಕ್ಷೆ ಅನುಭವಿಸುವಂತೆ ಜನೌಷಧಿ ಕೇಂದ್ರದ ಬಾಗಿಲು ಮುಚ್ಚಿರುವುದರಿಂದ ತಾಲ್ಲೂಕಿನ ಜನತೆಗೆ ಯಾವುದೇ ಅನುಕೂಲವಿಲ್ಲದಂತಾಗಿದೆ.

ಗ್ರಾಮೀಣ ಭಾಗದ ಜನತೆಗೆ ಸದರಿ ಯೋಜನೆಯ ಅನುಕೂಲ ಸರಿಯಾಗಿ ತಲಪುತ್ತಿಲ್ಲ. ಜನೌಷಧಿ ಕೇಂದ್ರಗಳು ಕೇವಲ ತಾಲ್ಲೂಕು ಕೇಂದ್ರಗಳಿಗೆ ಮಾತ್ರ ಸೀಮಿತವಾಗದೆ ಹೋಬಳಿವಾರು ಕೇಂದ್ರ ತೆಗೆದರೆ ಜನತೆಗೆ ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಆಶಯವಾಗಿದೆ.

        -ಮಲ್ಲಿಕಾರ್ಜುನ ದುಂಡ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link