ಖಾಸಗಿ ಬಸ್ ಟಿಕೆಟ್ ದರವೂ ಶೀಘ್ರ ಏರಿಕೆ

ಬೆಂಗಳೂರು

     ಕರ್ನಾಟಕ ಜನರಿಗೆ ಮತ್ತೊಂದು ಬೆಲೆ ಏರಿಕೆಯ  ಶಾಕ್‌ ನೀಡಲು ಖಾಸಗಿ ಬಸ್‌ ಮಾಲೀಕರು  ಸಿದ್ಧತೆ ನಡೆಸಿದ್ದಾರೆ. ಕೆಎಸ್​ಆರ್​ಟಿಸಿ, ಬಿಎಂಟಿಸಿ ಹಾಗೂ ಮೆಟ್ರೋ ಟಿಕೆಟ್ ದರ ಏರಿಕೆ ಆಗಿರುವುದೇ ಪ್ರಯಾಣಿಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರ ಬೆನ್ನಲ್ಲೇ ಖಾಸಗಿ ಬಸ್ ಮಾಲೀಕರು ಸಹ ವಿವಿಧ ಕಾರಣಗಳನ್ನು ಮುಂದಿಟ್ಟು ಟಿಕೆಟ್ ದರ ಏರಿಕೆ  ಅನಿವಾರ್ಯ ಅಂತ ಹೇಳಿರುವುದು ಪ್ರಯಾಣಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ರಾಜ್ಯ ಸರಕಾರ ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳದ ಕ್ರಮ ಹಿಂಪಡೆಯದಿದ್ದರೆ ನಾವು ಟಿಕೆಟ್‌ ದರ ಹೆಚ್ಚಳ ಮಾಡುತ್ತೇವೆ ಎಂದು ಮಾಲೀಕರು ಹೇಳಿರುವುದಾಗಿ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಟರಾಜ್ ಶರ್ಮಾ ತಿಳಿಸಿದ್ದಾರೆ. ದರ ಶೇಕಡಾ 15 ರಿಂದ 20 ರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ. 

    ಶಕ್ತಿ ಯೋಜನೆಯಡಿ ಇದುವರೆಗೆ ರಾಜ್ಯದಲ್ಲಿ ಸುಮಾರು 429 ಕೋಟಿ ಟಿಕೆಟ್ ನೀಡಲಾಗಿದೆ. ಪ್ರತಿಪಕ್ಷಗಳ ಟೀಕೆಯ ನಡುವೆ ಶಕ್ತಿ ಯೋಜನೆ ಯಶಸ್ವಿಯಾಗಿದೆ. ಆದರೆ ಖಾಸಗಿ ಸಾರಿಗೆ ಸಂಸ್ಥೆಗಳ ಆದಾಯ ನೆಲ ಕಚ್ಚುತ್ತಿದೆ. ಈಗ ಖಾಸಗಿ ಬಸ್‌ಗಳು ದರ ಏರಿಕೆ ಮಾಡದಿದ್ದರೆ ಉದ್ಯಮಕ್ಕೆ ಭಾರಿ ನಷ್ಟವಾಗಲಿದೆ. ಪ್ರತಿ ಬಸ್‌ ನಿರ್ವಹಣೆಗೆ ಸುಮಾರು 18-20 ಸಾವಿರ ರೂ. ಖರ್ಚಾಗುತ್ತಿದೆ ಎಂದು ಖಾಸಗಿ ಬಸ್ ಮಾಲೀಕರು ಹೇಳಿದ್ದಾರೆ.

   ಆದರೆ ಒಂದು ವೇಳೆ ಶೇ 20 ರಷ್ಟು ಏರಿಕೆ ಮಾಡಿದರೆ ಜನಸಾಮಾನ್ಯರಿಗೆ ತೀರಾ ಹೊರೆ ಆಗಲಿದೆ ಎನ್ನುವ ಅಭಿಪ್ರಾಯ ಕೇಳಿಬಂದಿದೆ. ಸಾಮಾನ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ಖಾಸಗಿ ಬಸ್‌ಗಳು ಟಿಕೆಟ್ ದರ ಹೆಚ್ಚಳ ಮಾಡುತ್ತವೆ. ಆದರೆ ಇದೀಗ ಕಾಯಂ ಆಗಿ ಟಿಕೆಟ್ ದರ ಹೆಚ್ಚಳಕ್ಕೆ ಮುಂದಾಗಿರುವುದು ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡಲಿದೆ 

   ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ಹಾಗೂ ಕರ್ನಾಟಕದ ಇತರ ಕಡೆಗಳಿಗೆ ಪ್ರಯಾಣ ಮಾಡುವ ಜನರು ಬೆಲೆ ಏರಿಕೆಯ ಪರಿಣಾಮ ತತ್ತರಿಸಿ ಹೋಗುತ್ತಿದ್ದಾರೆ. ಇನ್ನು ಖಾಸಗಿ ಬಸ್​​ಗಳ ಟಿಕೆಟ್ ಸಹ ಏರಿಕೆಯಾದರೆ ಜನ ಮತ್ತಷ್ಟು ಸಂಕಷ್ಟಕ್ಕೀಡಾಗಲಿದ್ದಾರೆ. ಇದಕ್ಕೆ ಸರ್ಕಾರ ಕಡಿವಾಣ ಹಾಕುತ್ತದೆಯೇ ಎಂದು ಕಾದು ನೋಡಬೇಕಿದೆ.

Recent Articles

spot_img

Related Stories

Share via
Copy link