ಬೆಂಗಳೂರು
ಗುಡ್ ಫ್ರೈಡೇ, ಈಸ್ಟರ್, ವಾರಾಂತ್ಯದ ರಜೆಗಳ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ವಿವಿಧ ಊರುಗಳಿಗೆ ತೆರಳುವ ಬಸ್‌ಗಳ ಟಿಕೆಟ್ ದರ ಗಗನಕ್ಕೇರಿದೆ. ಅದರಲ್ಲೂ ಕೇರಳ ಮತ್ತು ಆಂಧ್ರಪ್ರದೇಶದ ವಿವಿಧ ಕಡೆಗಳಿಗೆ ತೆರಳುವ ಬಸ್ಸುಗಳ ಟಿಕೆಟ್ ದರ ದುಪ್ಪಟ್ಟಾಗಿದೆ. ವಾರವಿಡೀ ಇದೇ ಪರಿಸ್ಥಿತಿ ಇರುವ ಸಾಧ್ಯತೆ ಇದೆ. ಸುದೀರ್ಘ ವಾರಾಂತ್ಯ ಮತ್ತು ಬೇಸಿಗೆ ರಜೆ ಅಂತರರಾಜ್ಯ ಪ್ರಯಾಣ ದರ ಏರಿಕೆಗೆ ಕಾರಣವಾಗಿದೆ ಎಂದು ಅನೇಕ ಚಾಲಕರು ಮತ್ತು ಕಂಡಕ್ಟರ್ಗಳು ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯವಾಗಿ ಒಂದೆರಡು ತಿಂಗಳ ಮುಂಚಿತವಾಗಿಯೇ ಬುಕಿಂಗ್ ಕೂಡ ಆರಂಭವಾಗಿತ್ತು ಎಂದು ಅವರು ಹೇಳಿದ್ದಾರೆ.
ಇ-ಬುಕಿಂಗ್ ತಾಣಗಳು ಕೆಲವೊಮ್ಮೆ ರಿಯಾಯಿತಿಗಳನ್ನು ನೀಡುತ್ತವೆ. ಆದರೆ ಪ್ಲಾಟ್‌ಫಾರ್ಮ್ ಶುಲ್ಕಗಳು ಮತ್ತು ಶೇ 18 ರ ಜಿಎಸ್‌ಟಿಯಿಂದಾಗಿ ಸುಮಾರು 250 ರೂ.ಗಳಷ್ಟು ಹೆಚ್ಚು ವೆಚ್ಚವಾಗುತ್ತದೆ ಎಂದು ಕಲಾಸಿಪಾಳ್ಯ ಬಸ್ ನಿಲ್ದಾಣದ ಟ್ರಾವೆಲ್ ಏಜೆನ್ಸಿ ನಿರ್ವಾಹಕರು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಕಳೆದ ವರ್ಷ ಕ್ರಿಸ್‌ಮಸ್ ಸಮಯದಲ್ಲಿ, ದರಗಳು ಪ್ರತಿ ವ್ಯಕ್ತಿಗೆ 5,000 ರೂ.ಗೆ ಏರಿಕೆಯಾಗಿದ್ದವು. ಈ ಈಸ್ಟರ್‌ನಲ್ಲಿ ಅದು ಅಷ್ಟು ಹೆಚ್ಚಳವಾಗಿಲ್ಲ. 4,000 ರೂ.ಗಿಂತ ಕಡಿಮೆ ಇವೆ ಮತ್ತೊಬ್ಬ ಏಜೆನ್ಸಿ ಕೆಲಸಗಾರ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ಈಸ್ಟರ್ ವಾರಾಂತ್ಯದ ಕಾರಣ ಭಾನುವಾದ ವರೆಗೆ ಪ್ರಯಾಣ ದರಗಳು ಹೆಚ್ಚಿರುವ ಸಾಧ್ಯತೆ ಇದೆ. ಭಾನುವಾರದ ನಂತರ ಸ್ವಲ್ಪ ಇಳಿಕೆ ಕಂಡುಬರಬಹುದು, ಆದರೆ ಏಪ್ರಿಲ್ ಮತ್ತು ಮೇ ತಿಂಗಳುಗಳು ಸಾಮಾನ್ಯವಾಗಿ ಜನದಟ್ಟಣೆಯ ಪ್ರಯಾಣ ತಿಂಗಳುಗಳಾಗಿವೆ ಎಂದು ಕಲಾಸಿಪಾಳ್ಯದ ಬಸ್ ಚಾಲಕರೊಬ್ಬರು ತಿಳಿಸಿರುವುದನ್ನೂ ವರದಿ ಉಲ್ಲೇಖಿಸಿದೆ.
ಕೇರಳ ಪ್ರಯಾಣ ಬಲು ದುಬಾರಿ
ಕೇರಳಕ್ಕೆ ಹೋಗುವ ಮಾರ್ಗಗಳಲ್ಲಿ ಬಸ್ ಟಕೆಟ್ ದರ ತೀವ್ರವಾಗಿ ಏರಿಕೆಯಾಗಿವೆ. ಕೊಚ್ಚಿ ಮತ್ತು ತಿರುವನಂತಪುರದಂತಹ ನಗರಕ್ಕೆ ಪ್ರಯಾಣ ದರ ಕೆಲವು ಸಂದರ್ಭಗಳಲ್ಲಿ ದ್ವಿಗುಣಗೊಂಡಿವೆ. ಆಂಧ್ರಪ್ರದೇಶ ಮತ್ತು ಗೋವಾ ಮಾರ್ಗಗಳಲ್ಲಿ ಇದೇ ರೀತಿಯ ದರ ಏರಿಕೆ ವರದಿಯಾಗಿದೆ. ಆದರೆ ತಮಿಳುನಾಡಿಗೆ ಹೋಗುವ ಬಸ್‌ಗಳ ಟಿಕೆಟ್ ದರ ಅಲ್ಪ ಪ್ರಮಾಣದಲ್ಲಿ ಮಾತ್ರ ಏರಿಕೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಖಾಸಗಿ ಬಸ್ ದರ ಏರಿಕೆ ವಿವರ
ಕೇರಳ(ಆಫ್-ಸೀಸನ್: 1,100 – 1,200 ರೂ,ಪ್ರಸ್ತುತ: 2,000 – 3,000 ರೂ.),ಆಂಧ್ರಪ್ರದೇಶ(ಆಫ್-ಸೀಸನ್: 1,000 ರೂ.ಗಿಂತ ಕಡಿಮೆ,ಪ್ರಸ್ತುತ: 2,000 ರೂ. ಮತ್ತು ಅದಕ್ಕಿಂತ ಹೆಚ್ಚು)ತಮಿಳುನಾಡು(ಆಫ್-ಸೀಸನ್: 900 – 1,000 ರೂ,ಪ್ರಸ್ತುತ: 1,000 – 1,100 ರೂ.),ಗೋವಾ(ಆಫ್-ಸೀಸನ್: 600 – 700 ರೂ,ಪ್ರಸ್ತುತ: 1,500 ರೂ.)
ಮತ್ತೊಂದೆಡೆ, ಪ್ರಯಾಣ ದರ ಶೇ 20 ರಷ್ಟು ಹೆಚ್ಚಳಕ್ಕೆ ಖಾಸಗಿ ಬಸ್ ಮಾಲೀಕರು ಸಿದ್ಧತೆ ನಡೆಸುತ್ತಿದ್ದಾರೆ. ಡೀಸೆಲ್ ದರ ಏರಿಕೆ ಹಾಗೂ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಅವರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಒಟ್ಟಿನಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಜೊತೆಗೆ ಇನ್ನು ಮುಂದೆ ಪ್ರಯಾಣಿಕರ ಜೇಬಿಗೂ ಕತ್ತರಿ ಬೀಳಲಿದೆ.
