ಶಾಸಕರ ಖಾಸಗಿ ಫೋಟೊ ವೈರಲ್‌ : ಪೊಲೀಸರಿಗೆ ದೂರು

ಬೆಂಗಳೂರು: 

    ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕ ಸಂಜೀವ ಮಠಂದೂರು ಅಪರಿಚಿತ ಮಹಿಳೆಯೊಂದಿಗಿರುವ ಖಾಸಗಿ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ  ಗುರುವಾರ ಪೊಲೀಸರಿಗೆ ದೂರು ನೀಡಿದ್ದಾರೆ.

     ತನ್ನನ್ನು ಮೂಲೆಗುಂಪು ಮಾಡುವ ಪಿತೂರಿಯ ಭಾಗವಾಗಿ ಫೋಟೊಗಳನ್ನು ಎಡಿಟ್ ಮಾಡಿ ವೈರಲ್ ಮಾಡಲಾಗಿದೆ ಎಂದು ಮಠಂದೂರು ಹೇಳಿದ್ದಾರೆ. ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಫೋಟೊಗಳನ್ನು ವೈರಲ್ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

      ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಈ ಬೆಳವಣಿಗೆಯು ಮೇ ತಿಂಗಳಲ್ಲಿ ನಡೆಯಲಿರುವ ಚುನಾವಣೆಗೆ ಮುನ್ನ ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅಪರಿಚಿತ ಮಹಿಳೆ ಯೊಂದಿಗೆ ಜಾಲಿ ಮೂಡ್‌ನಲ್ಲಿರುವ ಫೋಟೊಗಳು ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

      ಇದು ಬಿಜೆಪಿ ಒಳಜಗಳದ ಪರಿಣಾಮ ಎಂದು ಮೂಲಗಳು ತಿಳಿಸಿವೆ. ಮಠಂದೂರಿಗೆ ಟಿಕೆಟ್ ನಿರಾಕರಿಸುವಂತೆ ಪಕ್ಷದ ಮೇಲೆ ಒತ್ತಡ ಹೇರುವುದು ಈ ಕೃತ್ಯದ ಹಿಂದಿರುವ ಉದ್ದೇಶ ಎಂದು ಮೂಲಗಳು ತಿಳಿಸಿವೆ. ಅವರ ವಿರುದ್ಧ ತೀವ್ರ ಲಾಬಿ ನಡೆಯುತ್ತಿದೆ ಮತ್ತು ಕಾಂಗ್ರೆಸ್ ಕೂಡ ಈ ಸ್ಥಾನವನ್ನು ಗೆಲ್ಲಲು ಬಯಸಿದೆ ಎಂದಿವೆ. 

     2018ರ ಚುನಾವಣೆಯಲ್ಲಿ ಮಠಂದೂರು ಕಾಂಗ್ರೆಸ್ ಅಭ್ಯರ್ಥಿ ಶಕುಂತಲಾ ಶೆಟ್ಟಿ ಅವರನ್ನು 19,447 ಮತಗಳಿಂದ ಸೋಲಿಸಿದ್ದರು.ಈ ಹಿಂದೆಯೂ ಖಾಸಗಿ ವಿಡಿಯೋ ಮೂಲಕ ಮಠಂದೂರು ಬಗ್ಗೆ ವದಂತಿ ಹಬ್ಬಿತ್ತು. ಈ ಬೆಳವಣಿಗೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ