ಬೆಂಗಳೂರು
ಆರ್ಟಿಕಲ್ 371ಜೆ ಅಡಿಯಲ್ಲಿ ದೊರಕಿರುವ ವಿಶೇಷತೆಗಳನ್ನು ಸಮರ್ಥವಾಗಿ ಅನುಷ್ಠಾನ ಮಾಡಿದಾಗ ಮಾತ್ರ ಕಲ್ಯಾಣ ಕರ್ನಾಟಕದ ಕಲ್ಯಾಣ ಸಾಧ್ಯವಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ವಿಶೇಷ ಸ್ಥಾನಮಾನದ ಹಕ್ಕುಗಳು ಕಾರ್ಯಗತವಾಗದೆ ಕೇವಲ ಕಾಗದದ ಮೇಲೆ ಉಳಿದರೆ ಅಭಿವೃದ್ಧಿ ಸಾಧ್ಯವಾಗುವುದಿಲ್ಲ.
ಹಿಂದುಳಿದ ಪ್ರದೇಶದ ಜನರ ಬದುಕನ್ನು ಸುಭದ್ರಗೊಳಿಸುವ ಅವಕಾಶ ಆರ್ಟಿಕಲ್ 371ಜೆ ಇಂದಾಗಿ ನೇಮಕಾತಿ, ಮುಂಬಡ್ತಿಯಲ್ಲಿ ಮೀಸಲಾತಿ ದೊರಕಿದೆ, ಆದರೆ ಅದು ಸಮರ್ಥವಾಗಿ ಬಳಕೆಯಾಗದಿರುವುದು ಗಮನಕ್ಕೆ ಬಂದಿದೆ. ಇಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ 371 (ಜೆ) ಅಡಿ ನೇಮಕಾತಿ, ಮುಂಬಡ್ತಿ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
- ನೇಮಕಾತಿ, ಮುಂಬಡ್ತಿ ವಿಚಾರದಲ್ಲಿ ವಿಳಂಬ ನೀತಿಯನ್ನು ಹೋಗಲಾಡಿಸಿ ಈ ಪ್ರಕ್ರಿಯೆಗೆ ವೇಗ ನೀಡಲು ಹದಿನೈದು ದಿನಕ್ಕೊಮ್ಮೆ ಸಭೆ ನಡೆಸಲು ತೀರ್ಮಾನಿಸಲಾಯಿತು.
- ವಿವಿಧ ಇಲಾಖೆಗಳ ಮುಖ್ಯಸ್ಥರು ಸಭೆಗೆ ಬಾರದೆ ಮಾಹಿತಿಯ ಕೊರತೆ ಇರುವ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿ ಆಭಾಸ ಉಂಟುಮಾಡುತ್ತಿದ್ದಾರೆ, ಸಭೆಗೆ ಬರುವ ಕಿರಿಯ ಅಧಿಕಾರಿಗಳು ವಿಷಯವನ್ನು ತಿಳಿದುಕೊಳ್ಳದೆ ಅಭಾಸವನ್ನುಂಟು ಮಾಡುತ್ತಿದ್ದಾರೆ, ಇಲಾಖೆಗಳ ಮುಖ್ಯ ಅಧಿಕಾರಿಗಳ ಗೈರು ಹಾಜರಿಗೆ ನೋಟಿಸ್ ನೀಡಲು ತೀರ್ಮಾನಿಸಲಾಯಿತು, ಮುಂದಿನ ಸಭೆಗಳಿಗೆ ಕಡ್ಡಾಯವಾಗಿ ಹಾಜರಾಗಿ ಪ್ರಗತಿ ವರದಿಯನ್ನು ನೀಡಬೇಕು ಎಂದು ಸೂಚನೆ ನೀಡಲಾಯಿತು.
- ಬೆಂಗಳೂರಿನ ಅಪೆಕ್ಸ್ ಬ್ಯಾಂಕ್ ನಿ. 371(ಜೆ) ಪಾಲಿಸದೇ ಇರುವ ಹಿನ್ನೆಲೆಯಲ್ಲಿ ಸ್ಥಳೀಯ ವೃಂದದ ಅಧಿಕಾರಿಗಳು ಹಾಗೂ ನೌಕರರಿಗೆ ಮುಂಬಡ್ತಿ ಹಾಗೂ ಸೇವಾ ಜೇಷ್ಠತೆ ಪರಿಗಣಿಸಲು ಕಳೆದ ಸಭೆಯಲ್ಲಿ ಸೂಚನೆ ನೀಡಲಾಗಿದ್ದರೂ ಇಂದಿನ ಸಭೆಗೆ ಸಹಕಾರ ಇಲಾಖೆಯ ಯಾವುದೇ ಅಧಿಕಾರಿಗಳು ಬಾರದೆ ಗೈರು ಹಾಜರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲು ನಿರ್ದೇಶಿಸಲಾಯಿತು.
- ಕಳೆದ ಸಭೆಯಲ್ಲಿ ನಡೆದ ನಡಾವಳಿಗಳಿಗೆ ಸಂಬಂಧಿಸಿದಂತೆ ಅನುಪಾಲನ ವರದಿ ಸಲ್ಲಿಸದ ಒಳಾಡಳಿತ ಇಲಾಖೆ, ಅಬಕಾರಿ ಇಲಾಖೆ ಹಾಗೂ ಪೊಲೀಸ್ ವೈರ್‌ಲೆಸ್ ಘಟಕ ಇಲಾಖೆಗಳಿಗೂ ನೋಟೀಸ್ ಜಾರಿ ಮಾಡುವಂತೆ ತಿಳಿಸಲಾಯಿತು.
- ಮುಂದಿನ ಸಭೆಗೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರು ಹಾಜರಾಗುವುದರೊಂದಿಗೆ ಕಾನೂನು ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಹುದ್ದೆಗಳ ನೇಮಕಾತಿ, ಮುಂಬಡ್ತಿ, ಜೇಷ್ಠತೆಯಲ್ಲಿನ ಲೋಪದೋಷ ಪ್ರಕರಣಗಳಲ್ಲಿ ನ್ಯಾಯಾಲಯಗಳನ್ನು ಪ್ರತಿನಿಧಿಸುತ್ತಿರುವ ವಕೀಲರನ್ನು ಆಹ್ವಾನಿಸಬೇಕೆಂದು ಸಚಿವ ಸಂಪುಟ ಉಪ ಸಮಿತಿಯ ಸಭೆಯಲ್ಲಿ ನಿರ್ದೇಶಿಸಲಾಯಿತು.
ಹಿಂದುಳಿದ ಪ್ರದೇಶದ ಏಳಿಗೆಗಾಗಿ ವರದಾನದಂತಿರುವ ಆರ್ಟಿಕಲ್ 371(ಜೆ)ಯಲ್ಲಿನ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಳಂಬ ಧೋರಣೆ ತೋರುವ ಅಧಿಕಾರಿಗಳ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವೇ ಇಲ್ಲ. ಕಲ್ಯಾಣ ಕರ್ನಾಟಕದ ಕಲ್ಯಾಣ ನಮ್ಮ ಆದ್ಯತೆಯಾಗಿದೆ ಎಂದಿದ್ದಾರೆ.
